ADVERTISEMENT

PV WEB EXCLUSIVE | ಶಿವರಾತ್ರಿ ಜಾತ್ರೆ: ಮಾದಪ್ಪನ ಭಕ್ತರಿಗೆ ಬೇಕು ಸುರಕ್ಷತೆ

ಮಲೆ ಮಹದೇಶ್ವರನ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ಜಾತ್ರಾ ಮಹೋತ್ಸವ: ಪಾದಯಾತ್ರೆ ಮೂಲಕ ಹರಿದು ಬರುತ್ತಿರುವ ಭಕ್ತಸಾಗರ

ಬಾಲಚಂದ್ರ ಎಚ್.
Published 7 ಫೆಬ್ರುವರಿ 2026, 0:30 IST
Last Updated 7 ಫೆಬ್ರುವರಿ 2026, 0:30 IST
<div class="paragraphs"><p>ಕಾಡಿನ ಹಾದಿಯಲ್ಲಿ ಮಲೆ ಮಹದೇಶ್ವರನ ಬೆಟ್ಟಕ್ಕೆ ಪಾದಯಾತ್ರೆ ಹೊರಟಿರುವ ಭಕ್ತರು</p></div>

ಕಾಡಿನ ಹಾದಿಯಲ್ಲಿ ಮಲೆ ಮಹದೇಶ್ವರನ ಬೆಟ್ಟಕ್ಕೆ ಪಾದಯಾತ್ರೆ ಹೊರಟಿರುವ ಭಕ್ತರು

   

ಚಾಮರಾಜನಗರ: ಪ್ರಸಿದ್ಧ ಧಾರ್ಮಿಕ ಯಾತ್ರಾ ಕ್ಷೇತ್ರವಾದ ಮಲೆ ಮಹದೇಶ್ವನರ ದೇವಸ್ಥಾನದಲ್ಲಿ ಫೆ.14 ರಿಂದ 18ರವರೆಗೆ ಅದ್ಧೂರಿಯಾಗಿ ಮಹಾ ಶಿವರಾತ್ರಿ ಜಾತ್ರಾ ಮಹೋತ್ಸವ ನಡೆಯಲಿದೆ. ಮಾದಪ್ಪನ ದರ್ಶನ ಪಡೆಯಲು ರಾಜ್ಯ, ಹೊರ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಭಾಗವಹಿಸುತ್ತಾರೆ. ಐದು ದಿನಗಳ ಕಾಲ ಮಾದಪ್ಪನ ಸನ್ನಿಧಿ ಭಕ್ತರಿಂದ ತುಂಬಿ ತುಳುಕುತ್ತದೆ.

ಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ಕಾರು, ಬಸ್‌, ದ್ವಿಚಕ್ರ ವಾಹನಗಳಲ್ಲಿ ಬರುವುದರ ಜೊತೆಗೆ ಪಾದಯಾತ್ರೆಯಲ್ಲಿ ಬಂದು ಮಾದಪ್ಪನ ದರ್ಶನ ಪಡೆಯುವ ಅಸಂಖ್ಯಾತ ಭಕ್ತರು ಇದ್ದಾರೆ. ಬೆಂಗಳೂರು, ಬೆಂಗಳೂರು ದಕ್ಷಿಣ, ಮೈಸೂರು, ಮಂಡ್ಯ ಸೇರಿದಂತೆ ಹಲವು ಜಿಲ್ಲೆಗಳಿಂದ ಭಕ್ತರು ಕಾಲ್ನಡಿಗೆಯಲ್ಲಿ ಕ್ಷೇತ್ರಕ್ಕೆ ಬಂದು ಹರಕೆ ಸಲ್ಲಿಸುವುದು ಸಂಪ್ರದಾಯ.

ADVERTISEMENT

ನೂರಾರು ಕಿ.ಮೀ ದೂರದಿಂದ ಕಾಲ್ನಡಿಗೆಯಲ್ಲಿ ಬರುವ ಭಕ್ತರು ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ವನ್ಯಧಾಮದೊಳಗೆ ಸುಮಾರು 25 ರಿಂದ 30 ಕಿ.ಮೀ ಸಂಚರಿಸಬೇಕಾಗಿದೆ. ಜಿಲ್ಲೆಯಲ್ಲಿ ಮಾನವ–ಪ್ರಾಣಿ ಸಂಘರ್ಷ ತೀವ್ರವಾಗಿರುವ ಸಂದಿಗ್ಧ ಪರಿಸ್ಥಿತಿಯಲ್ಲಿ ಪಾದಯಾತ್ರಿಗಳಿಗೆ ವನ್ಯಜೀವಿಗಳ ದಾಳಿ ಭೀತಿ ಎದುರಾಗಿದ್ದು ಸುರಕ್ಷತೆ ಇಲ್ಲದಂತಾಗಿದೆ.

ಚಿರತೆ ದಾಳಿಗೆ ಭಕ್ತ ಬಲಿ

ಜ.21ರಂದು ಮಂಡ್ಯ ಜಿಲ್ಲೆಯ ಚೀರನಹಳ್ಳಿ ಗ್ರಾಮದಿಂದ ಮಹದೇಶ್ವರನ ಬೆಟ್ಟಕ್ಕೆ ಪಾದಯಾತ್ರೆಯಲ್ಲಿ ಬರುತ್ತಿದ್ದ ಭಕ್ತರ ಗುಂಪಿನ ಮೇಲೆ ಚಿರತೆ ದಾಳಿ ನಡೆಸಿ ಪ್ರವೀಣ್ ಎಂಬುವರು ಕೊಂದು ಹಾಕಿರುವುದು ಪಾದಯಾತ್ರಿಗಳಲ್ಲಿ ಆತಂಕ ಸೃಷ್ಟಿಸಿದೆ. ಮತ್ತೊಮ್ಮೆ ಅಹಿತಕರ ಘಟನೆಗಳು ನಡೆಯದಂತೆ ಅರಣ್ಯ ಇಲಾಖೆ, ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ.

ವರ್ಷಪೂರ್ತಿ ಭಕ್ತರು ಮಾದಪ್ಪನ ಸನ್ನಿಧಿಗೆ ಪಾದಯಾತ್ರೆಯಲ್ಲಿ ಬರುವುದು ರೂಢಿಯಲ್ಲಿದ್ದರೂ ಶಿವರಾತ್ರಿಯ ವೇಳೆ ಕಾಲ್ನಡಿಗೆಯಲ್ಲಿ ಬರುವವರ ಸಂಖ್ಯೆ ಲಕ್ಷದ ಗಡಿ ದಾಟುತ್ತದೆ. ಇವರಲ್ಲಿ ಇಷ್ಟಾರ್ಥ ಸಿದ್ಧಿಗೆ ಹರಕೆ ಕಟ್ಟಿಕೊಂಡವರು, ಹರಕೆ ತೀರಿಸಲು ಬರುವ ಭಕ್ತರು ಇರುತ್ತಾರೆ.

ಕನಕಪುರದ ಮೂಲಕ ಕಾವೇರಿ ನದಿ ದಾಟಿ ಹನೂರು ತಾಲ್ಲೂಕಿನ ಬಸವನಕಣ ತಲುಪಿ ಅಲ್ಲಿಂದ ಕಾಡಿನ ಹಾದಿಯೊಳಗೆ ಶಾಗ್ಯ, ಡಿ.ಎಂ.ಸಮುದ್ರ, ಎಲ್ಲೆಮಾಳ, ಮಲ್ಲಯ್ಯನಪುರ, ಕೌದಳ್ಳಿ, ವಡಕೆಹಳ್ಳ, ಕೋಣನಕೆರೆ, ತಾಳುಬೆಟ್ಟ ಮಾರ್ಗವಾಗಿ ಮಹದೇಶ್ವರನ ಕ್ಷೇತ್ರ ತಲುಪುತ್ತಾರೆ. ಈ ದುರ್ಗಮ ಹಾದಿಯಲ್ಲಿ ಕಾಡುಪ್ರಾಣಿಗಳ ದಾಳಿ ಭೀತಿ ಇದ್ದು ಯಾವುದೇ ಸುರಕ್ಷತೆ ಇಲ್ಲದಂತಾಗಿದೆ.

ಪಾದಯಾತ್ರೆಯಲ್ಲಿ ಬರುವ ಭಕ್ತರು ವಿರಮಿಸಲು ವಿಶ್ರಾಂತಿ ಕೊಠಡಿಗಳು ಇಲ್ಲ. ರಾತ್ರಿ ಉಳಿಯಲು ತಂಗುದಾಣಗಳು ಇಲ್ಲ. ಕೆಲವು ದಾನಿಗಳು ಅಲ್ಲಲ್ಲಿ ಕುಡಿಯುವ ನೀರು ಹಾಗೂ ಆಹಾರ ವ್ಯವಸ್ಥೆ ಮಾಡುವುದು ಹೊರತಾಗಿ ಇತರೆ ಸೌಲಭ್ಯಗಳು ಇಲ್ಲ ಎಂದು ಭಕ್ತರು ಬೇಸರ ವ್ಯಕ್ತಪಡಿಸುತ್ತಾರೆ.

ಕಾಡಿನ ಹಾದಿಯಲ್ಲಿ ಮಲೆ ಮಹದೇಶ್ವರನ ಬೆಟ್ಟಕ್ಕೆ ಪಾದಯಾತ್ರೆ ಹೊರಟಿರುವ ಭಕ್ತರು

ಸಾಮಾನ್ಯವಾಗಿ ಈ ಅವಧಿಯಲ್ಲಿ ವಾತಾವರಣದಲ್ಲಿ ಉಷ್ಟತೆ ಹೆಚ್ಚಾಗಿರುವುದರಿಂದ ಭಕ್ತರು ಬೆಳಗಿನ ಜಾವ ಹಾಗೂ ಸಂಜೆಯ ಹೊತ್ತು ಕಾಲ್ನಡಿಗೆಯಲ್ಲಿ ಸಂಚರಿಸುತ್ತಾರೆ. ಅಲ್ಲಲ್ಲಿ ಸಿಗುವ ಗ್ರಾಮಗಳ ದೇವಸ್ಥಾನ, ಸಾರ್ವಜನಿಕ ಸ್ಥಳಗಳಲ್ಲಿ ವಿಶ್ರಾಂತಿ ಪಡೆಯುತ್ತಾರೆ. ರಾತ್ರಿ ಹೊತ್ತು ಜಾಗ ಸಿಕ್ಕ ಕಡೆ ಮಲಗಬೇಕಾಗುತ್ತದೆ.

ಹನೂರು ತಾಲ್ಲೂಕಿನ ಶಾಗ್ಯದಿಂದ ತಾಳುಬೆಟ್ಟದವರೆಗಿನ ಹಾದಿ ಸಂಪೂರ್ಣ ಅರಣ್ಯವಾಗಿದ್ದು ಈ ಭಾಗದಲ್ಲಿ ಪಾದಯಾತ್ರಿಗಳ ಸುರಕ್ಷತೆ ಸವಾಲಾಗಿದೆ. ಸುಮಾರು 25 ಕಿ.ಮೀ ಅರಣ್ಯದೊಳಗೆ ಸಂಚರಿಸುವ ಭಕ್ತರು ತಾಳುಬೆಟ್ಟದ ಬಳಿ ಬಂದು ರಾತ್ರಿ ವಾಸ್ತವ್ಯ ಹೂಡುತ್ತಾರೆ. ವನ್ಯಜೀವಿಗಳ ಸಂಚಾರ ಹೆಚ್ಚಾಗಿರುವ ಈ ಜಾಗದಲ್ಲಿ ರಾತ್ರಿ ವಾಸ್ತವ್ಯಕ್ಕೆ ಯಾವುದೇ ವ್ಯವಸ್ಥೆ ಇಲ್ಲ.

ಬಹುತೇಕರು ವನ್ಯಜೀವಿಗಳ ದಾಳಿ ಭಯದಲ್ಲಿ ಬಯಲಿನಲ್ಲೇ ರಾತ್ರಿ ಕಳೆಯಬೇಕು. 7 ಕಿ.ಮೀ ದೂರದಲ್ಲಿರುವ ಮಲೆ ಮಹದೇಶ್ವರನ ಬೆಟ್ಟಕ್ಕೆ ಬೆಳಗಿನ ಜಾವ ಕಾಲ್ನಡಿಗೆ ಆರಂಭಿಸಿ ಕ್ಷೇತ್ರ ತಲುಪಬೇಕು. ಪ್ರತಿವರ್ಷ ನೂರಾರು ಕೋಟಿ ಆದಾಯ ಸಂಗ್ರಹಿಸುವ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಸಮರ್ಪಕ ಸೌಲಭ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿದೆ ಎಂದು ದೂರುತ್ತಾರೆ ಭಕ್ತರು.

ಏನೇನು ಬೇಕು: ತಿರುಪತಿ ಮಾದರಿಯಲ್ಲಿ ಕಾಲ್ನಡಿಗೆ ಮಾರ್ಗ ನಿರ್ಮಾಣ ಮಾಡುವುದಾಗಿ ಪ್ರಾಧಿಕಾರ ಹೇಳಿತ್ತು. ಕಾಮಗಾರಿಗೆ ಅರಣ್ಯ ಇಲಾಖೆಯ ಕಾನೂನುಗಳು ಅಡ್ಡಿಯಾಗಿದ್ದರಿಂದ ತಾಳುಬೆಟ್ಟದಿಂದ ದೇವಸ್ಥಾನದವರೆಗೂ ಮೆಟ್ಟಿಲುಗಳನ್ನು ನಿರ್ಮಾಣ ಮಾಡುತ್ತಿದೆ. 5 ವರ್ಷಗಳಿಂದ ಕಾಮಗಾರಿ ನಡೆಯುತ್ತಿದ್ದು ಕೆಲವೆಡೆ ಇನ್ನೂ ಪೂರ್ಣಗೊಂಡಿಲ್ಲ.

ಶೌಚಾಲಯಗಳ ಕೊರತೆ: ಸಂಕ್ರಾಂತಿ, ಶಿವರಾತ್ರಿ, ಯುಗಾದಿ, ದೀಪಾವಳಿ ಜಾತ್ರೆ, ಅಮಾವಾಸ್ಯೆಯ ದಿನಗಳಲ್ಲಿ ದೇವಸ್ಥಾನಕ್ಕೆ ಲಕ್ಷಾಂತರ ಭಕ್ತರು ಭೇಟಿನೀಡುತ್ತಾರೆ. ಆದರೆ ಭಕ್ತರ ಸಂಖ್ಯೆಗೆ ಅನುಗುಣವಾಗಿ ಕ್ಷೇತ್ರದಲ್ಲಿ ಶೌಚಾಲಯಗಳು, ಸ್ನಾನಗೃಹಗಳು, ವಿಶ್ರಾಂತಿ ಗೃಹಗಳು ಇಲ್ಲ. ಇರುವ ಬೆರಳೆಣಿಕೆ ಸಾರ್ವಜನಿಕ ಶೌಚಾಲಯಗಳಲ್ಲಿ ನಿತ್ಯ ಕರ್ಮ ಮುಗಿಸಲು ಭಕ್ತರು ಗಂಟೆಗಟ್ಟಲೆ ಕಾಯಬೇಕಾಗಿದೆ.

ಮಲೆ ಮಹದೇಶ್ವರ ದೇವಸ್ಥಾನದ ರಾಜಗೋಪುರದ ಮುಂಭಾಗ, ಅಂತರಗಂಗೆ ಬಳಿ, ಬಸ್ ನಿಲ್ದಾಣ, ದೇವಸ್ಥಾನಕ್ಕೆ ತೆರಳುವ ಮಾರ್ಗ ಸೇರಿದಂತೆ ಐದಾರು ಸಮುದಾಯ ಶೌಚಾಲಯ ಮಾತ್ರ ಇದ್ದು ಜಾತ್ರೆ ಉತ್ಸವಗಳ ಸಂದರ್ಭ ಸಮಸ್ಯೆ ಗಂಭೀರವಾಗುತ್ತದೆ.

ದರ್ಶನಕ್ಕೆ ನಿಂತವರ ಪಾಡು: ಭಕ್ತರ ದಟ್ಟಣೆ ಹೆಚ್ಚಿದ್ದಾಗ ದೇವರ ದರ್ಶನಕ್ಕೆ ಐದಾರು ತಾಸು ಸರತಿ ಸಾಲಿನಲ್ಲಿ ನಿಲ್ಲಬೇಕಾಗುತ್ತದೆ. ಇದರಿಂದ ವೃದ್ಧರು, ಮಹಿಳೆಯರು, ಮಕ್ಕಳು ಸಮಸ್ಯೆ ಅನುಭವಿಸುತ್ತಿದ್ದಾರೆ. ಸಕ್ಕರೆ ಕಾಯಿಲೆ ಸೇರಿದಂತೆ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಸರತಿ ಸಾಲು ಬಿಡುವ ಹಾಗಿಲ್ಲ, ಶೌಚದ ಬಾಧೆ ತಡೆಯಲೂ ಸಾಧ್ಯವಾಗುತ್ತಿಲ್ಲ. ಜಾತ್ರೆ ಉತ್ಸವದಂತಹ ವಿಶೇಷ ಸಂದರ್ಭಗಳಲ್ಲಿ ಮೊಬೈಲ್ ಶೌಚಾಲಯಗಳನ್ನು ಅಳವಡಿಸಬೇಕು. ತಿರುಪತಿ ಮಾದರಿಯಲ್ಲಿ ದರ್ಶನಕ್ಕೆ ವ್ಯವಸ್ಥೆ ಮಾಡುವ ಕಾಮಗಾರಿ ಶೀಘ್ರ ಪೂರ್ಣಗೊಳ್ಳಬೇಕು ಎಂದು ಭಕ್ತರು ಒತ್ತಾಯಿಸುತ್ತಾರೆ.

ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಶಿವರಾತ್ರಿ ಜಾತ್ರಾ ಮಹೋತ್ಸವ ಅಂಗವಾಗಿ ನಡೆಯುವ ರಥೋತ್ಸವ (ಸಂಗ್ರಹ ಚಿತ್ರ)

ಕಹಿ ಘಟನೆ

ಎರಡು ವರ್ಷಗಳ ಹಿಂದೆ ಮಲೆ ಮಹದೇಶ್ವರ ಬೆಟ್ಟದ ಸಮೀಪದ ಶನಿ ಮಹಾತ್ಮನ ದೇವಾಲಯದ ಬಳಿ ಮಹಿಳೆಯೊಬ್ಬರು ಆನೆ ತುಳಿತಕ್ಕೆ ಬಲಿಯಾಗಿದ್ದರು. ಜ.21ರಂದು ಮಂಡ್ಯ ಜಿಲ್ಲೆಯ ಚೀರನಹಳ್ಳಿ ಗ್ರಾಮದ ಪ್ರವೀಣ್ ಚಿರತೆ ದಾಳಿಗೆ ಬಲಿಯಾಗಿದ್ದರು. ಪಾದಯಾತ್ರೆಯಲ್ಲಿ ಸಾಗುವ ಭಕ್ತರಿಗೆ ಅಲ್ಲಲ್ಲಿ ಕಾಡುಪ್ರಾಣಿಗಳು ಕಾಣಿಸಿಕೊಳ್ಳುತ್ತಿದ್ದು ಆತಂಕಗೊಂಡಿದ್ದಾರೆ.

‘ಪಾದಯಾತ್ರೆಗೆ ಸಮಯ ನಿಗದಿ’

ಮಲೆ ಮಹದೇಶ್ವರ ಬೆಟ್ಟಕ್ಕೆ ಭಕ್ತರು ಪಾದಯಾತ್ರೆ ಮೂಲಕ ತೆರಳಲು ಹಾಗೂ ದ್ವಿಚಕ್ರ ವಾಹನಗಳಲ್ಲಿ ಸಂಚರಿಸಲು ಬೆಳಿಗ್ಗೆ 7 ರಿಂದ ಸಂಜೆ 4 ಗಂಟೆಯವರೆಗೆ ಮಾತ್ರ ಅವಕಾಶ ನೀಡಲಾಗಿದೆ. ಬೆಳಿಗ್ಗೆ 7 ಗಂಟೆಯ ಮುಂಚಿತವಾಗಿ ಹಾಗೂ ಸಂಜೆ 7 ಗಂಟೆಯ ನಂತರ ಭಕ್ತರು ಪಾದಯಾತ್ರೆಯಲ್ಲಾಗಲಿ, ದ್ವಿಚಕ್ರ ವಾಹನಗಳಲ್ಲಾಗಲಿ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುವುದನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಶ್ರೀರೂಪಾ ಆದೇಶ ಹೊರಡಿಸಿದ್ದಾರೆ.

‘ಭಕ್ತರಿಗೆ ಭದ್ರತೆ ನೀಡಲು 8 ತಂಡ’

ಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ಪಾದಯಾತ್ರೆಯಲ್ಲಿ ಬರುವ ಭಕ್ತರ ಸುರಕ್ಷತೆಗೆ ಹಗಲು ರಾತ್ರಿ ಬಂದೋಬಸ್ತ್ ಮಾಡಲಾಗಿದ್ದು 8 ತಂಡಗಳನ್ನು ರಚಿಸಲಾಗಿದೆ. ತಾಳಬೆಟ್ಟದಲ್ಲಿ 1 ಹಾಗೂ ಅಲ್ಲಿಂದ ದೇವಸ್ತಾನದವರೆಗೆ ಪ್ರತಿ ಕಿ.ಮೀಗೆ ಒಂದರಂತೆ 7 ತಂಡಗಳನ್ನು ನಿಯೋಜಿಸಲಾಗಿದೆ. ಉಪ ವಲಯ ಅರಣ್ಯಾಧಿಕಾರಿ, ಗಸ್ತು ವನಪಾಲಕು, ಕಳ್ಳಬೇಟೆ ತಡೆ ಶಿಬಿರದ ಸಿಬ್ಬಂದಿ, ಪೊಲೀಸ್ ಅಥವಾ ಗೃಹ ರಕ್ಷಕ ದಳದ ಸಿಬ್ಬಂದಿ ಹಾಗೂ ಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಸಿಬ್ಬಂದಿ ತಂಡದಲ್ಲಿ ಇರಲಿದ್ದಾರೆ. ಪ್ರತಿ ತಂಡಕ್ಕೆ ಬಂದೂಕು, ವಾಕಿಟಾಕಿ, ಟಾರ್ಚ್‌ ನೀಡಲಾಗಿದೆ. ಗಸ್ತು ತಿರುಗಲು 2 ಕ್ಯಾಂಪರ್ ವಾಹನ ನಿಯೋಜಿಸಲಾಗಿದೆ. ಚಿರತೆ ಕಾರ್ಯಪಡೆ ಹಾಗೂ ಡ್ರೋನ್ ತಂಡ ನಿಯೋಜನೆಗೆ ಕೋರಲಾಗಿದೆ. ಅಲ್ಲಲ್ಲಿ ಎಚ್ಚರಿಕೆ ಫಲಕ ಅಳವಡಿಸಲಾಗಿದೆ ಎಂದು ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್ ತಿಳಿಸಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.