ADVERTISEMENT

ಉಡುಪಿ: ನಾಡೊಳಗಿನ ಕೌತುಕ ಕಾನನ ಪಿಲಾರಕಾನ

ನವೀನ್ ಕುಮಾರ್ ಜಿ.
Published 28 ಫೆಬ್ರುವರಿ 2026, 1:56 IST
Last Updated 28 ಫೆಬ್ರುವರಿ 2026, 1:56 IST
<div class="paragraphs"><p>ಪಿಲಾರಕಾನದ ದಟ್ಟಾರಣ್ಯ</p></div>

ಪಿಲಾರಕಾನದ ದಟ್ಟಾರಣ್ಯ

   

ಉಡುಪಿ: ಸುತ್ತಲೂ ಪ್ರಕೃತಿ ರಮಣೀಯ ಪರಿಸರ, ಕಾಡಿನ ನಡುವಿನಲ್ಲೊಂದು ಪುರಾತನ ದೇಗುಲ. ಬಾನೆತ್ತರಕ್ಕೆ ಬೆಳೆದಿರುವ ಮರಗಳ ನಡುವೆ ಸಾಗಿದರೆ ಮನ, ಮಸ್ತಿಷ್ಕಕ್ಕೆ ಮುದ ನೀಡುವ ತಂಪಿನ ತಾಣ. ಅದುವೇ ಉಡುಪಿ ಜಿಲ್ಲೆಯ ಶಿರ್ವ ಸಮೀಪವಿರುವ ಪಿಲಾರಕಾನವೆಂಬ ಕೌತುಕಮಯ ಕಾನನ.

ಪ್ರಕೃತಿ ಸೌಂದರ್ಯ ಆಸ್ವಾದಿಸಲು ಬಯಸುವವವರು, ಪಕ್ಷಿ ವೀಕ್ಷಣೆ ಮಾಡಲು ಬರುವವರಿಗೆ ಇದು ಹೇಳಿ ಮಾಡಿಸಿರುವ ಸ್ಥಳದಂತಿದೆ. ಉಡುಪಿ ನಗರದಿಂದ 24 ಕಿ.ಮೀ ದೂರದಲ್ಲಿ ಉರೊಳಗಿದೆ ಈ ದಟ್ಟ ಕಾಡು. ಪಕ್ಷಿ ವೀಕ್ಷಣೆಗಾಗಿ ರಾಜ್ಯದ ವಿವಿಧೆಡೆಯಿಂದ ಪಕ್ಷಿ ಪ್ರೇಮಿಗಳು ಇಲ್ಲಿಗೆ ಭೇಟಿ ನೀಡುತ್ತಾರೆ.

ADVERTISEMENT

ಕಾಪು ತಾಲ್ಲೂಕಿನ ಶಿರ್ವ ಬಳಿಯ ಈ ಕಾನನವು ಸುತ್ತಲೂ ಜನವಸತಿ ಪ್ರದೇಶವನ್ನು ಹೊಂದಿದೆ. ಅಂದಾಜು 365 ಕಿ.ಮೀ. ವ್ಯಾಪ್ತಿಯ ಪಿಲಾರಕಾನವು ಅರಣ್ಯ ಇಲಾಖೆಯ ಅಧೀನದಲ್ಲಿದೆ. ಈ ದಟ್ಟ ಕಾಡಲ್ಲಿ ಕಾಡುಕೋಣ, ಜಿಂಕೆ, ನರಿ, ಬರಿಂಕ ಸೇರಿದಂತೆ ವಿವಿಧ ಪ್ರಭೇದದ ವನ್ಯಜೀವಿಗಳು ವಾಸವಾಗಿವೆ. ಜೊತೆಗೆ ಪಕ್ಷಿ ಸಂಕುಲವೂ ಸಾಕಷ್ಟು ಕಂಡು ಬರುತ್ತವೆ.

ಕಾಡಿನ ನಡುವೆ ಪುರಾತನ ಮಹಾಲಿಂಗೇಶ್ವರ, ಮಹಾಗಣಪತಿ ದೇವಾಲಯವಿದ್ದು, ಈ ದೇವಾಲಯಕ್ಕೆ ಸೀಮಿತ ಭಕ್ತರಷ್ಟೇ ಭೇಟಿ ನೀಡುತ್ತಾರೆ. ಪಿಲಾರಕಾನಕ್ಕೆ ಬರುವ ಪ್ರಕೃತಿ ಆಸ್ವಾದಕರು ದೇಗುಲಕ್ಕೂ ಭೇಟಿ ನೀಡುತ್ತಾರೆ.

ಪ್ರತಿದಿನ ಬೆಳಿಗ್ಗೆ 7.30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ದರ್ಶನಕ್ಕೆ ಅವಕಾಶವಿರುತ್ತದೆ. ಶಿವರಾತ್ರಿಯಂದು ಈ ದೇವಾಲಯದಲ್ಲಿ ಜಾತ್ರೆ ಮತ್ತು ವಿಶೇಷ ಉತ್ಸವಗಳು ನಡೆಯುತ್ತವೆ. ಆ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ.

ಪಿಲಾರಕಾನದಲ್ಲಿರುವ ಮಹಾಲಿಂಗೇಶ್ವರ, ಮಹಾಗಣಪತಿ ದೇವಾಲಯವು ಸುಮಾರು 1,400 ವರ್ಷಗಳಷ್ಟು ಹಳೆಯ ದೇವಾಲಯವೆಂದು ನಂಬಲಾಗಿದೆ. ತುಳು ಭಾಷೆಯಲ್ಲಿ ‘ಕಾನ' ಎಂದರೆ ಕಾಡು ಎಂದರ್ಥ. ದಟ್ಟವಾದ ಕಾಡಿನ ಮಧ್ಯೆ ಈ ಪ್ರದೇಶವಿರುವುದರಿಂದ ಇದಕ್ಕೆ ‘ಪಿಲಾರ್‌ಕಾನ' ಎಂಬ ಹೆಸರು ಬಂದಿರಬಹುದು ಎನ್ನುತ್ತಾರೆ ಸ್ಥಳೀಯರು.

ದೇವಸ್ಥಾನದ ಗರ್ಭಗುಡಿಯಲ್ಲಿ ಯಾವುದೇ ಕೃತಕ ವಿದ್ಯುತ್ ದೀಪಗಳಿಲ್ಲ. ಕೇವಲ ನಂದಾದೀಪದ ಬೆಳಕಿನಲ್ಲಿ ದೇವರ ದರ್ಶನ ಪಡೆಯುವುದು ಇಲ್ಲಿನ ವಿಶೇಷವಾಗಿದೆ. ದೇವಸ್ಥಾನದ ಸುತ್ತಲೂ ಬೃಹದಾಕಾರದ ಮರಗಳು ಪ್ರವಾಸಿಗರಿಗೆ ಮುದ ನೀಡುತ್ತವೆ.

ಉಡುಪಿಯಿಂದ ಪಿಲಾರಕಾನಕ್ಕೆ ತೆರಳುವವರು ಕಟಪಾಡಿಗೆ ತೆರಳಿ, ಅಲ್ಲಿಂದ ಶಿರ್ವಕ್ಕೆ ಹೋಗಿ ಮುಂದೆ ಪಿಲಾರಕಾನಕ್ಕೆ ತೆರಳಬಹುದಾಗಿದೆ. ಕಾರ್ಕಳದಿಂದ ಶಿರ್ವ ಮಾರ್ಗವಾಗಿ ಉಡುಪಿಗೆ ಬರುವವರೂ ಇಲ್ಲಿಗೆ ಭೇಟಿ ನೀಡಬಹುದಾಗಿದೆ.

ಉಡುಪಿ ಜಿಲ್ಲೆಯಲ್ಲಿ ಹಿಂದಿನಿಂದಲೂ ದೇವರಕಾಡು ಪರಿಕಲ್ಪನೆಯಿದ್ದು, ನಾಗಬನ, ದೇವರ ಹೆಸರಿನಲ್ಲಿ ಮರಗಳನ್ನು ಉಳಿಸುವ, ಕಾಡನ್ನು ಸಂರಕ್ಷಿಸುವ ಕಾರ್ಯ ನಡೆದಿದೆ. ಅದೇ ಪರಿಕಲ್ಪನೆಯಲ್ಲಿ ಪಿಲಾರಕಾನವೂ ಉಳಿದುಕೊಂಡಿರಬಹುದು ಎನ್ನುತ್ತಾರೆ ಸ್ಥಳೀಯರು.

ಜಿಲ್ಲೆಯಲ್ಲಿ ಬಹುತೇಕ ದೇವರ ಕಾಡುಗಳು ಇಂದು ಅಭಿವೃದ್ಧಿಯ ಹೆಸರಿನಲ್ಲಿ ನಶಿಸಿಹೋದರೂ ಪಿಲಾರಕಾನವು ಅರಣ್ಯ ಇಲಾಖೆಯ ಸುಪರ್ದಿಯಲ್ಲಿರುವುದರಿಂದ ಇಂದಿಗೂ ದಟ್ಟ ಕಾಡಾಗಿ ಉಳಿದುಕೊಂಡಿದೆ.

ಮಳೆಗಾಲದಲ್ಲಿ ಪಿಲಾರಕಾನಕ್ಕೆ ಭೇಟಿ ನೀಡಿದರೆ ತಂಪಗಿನ ವಾತಾವರಣದೊಂದಿಗೆ ಜೀರುಂಡೆಗಳ ಝೇಂಕಾರವು ವಿಶೇಷ ಅನುಭೂತಿ ನೀಡುತ್ತದೆ. ಬಾನೆತ್ತರಕ್ಕೆ ಬೆಳೆದು ನಿಂತಿರುವ ಮರಗಳಿಂದಾಗಿ ಬೇಸಿಗೆಯಲ್ಲೂ ಈ ಪ್ರದೇಶವು ಸದಾ ನೆರಳಿನಿಂದ ಕೂಡಿರುತ್ತದೆ.

ಪಿಲಾರಕಾನದಲ್ಲಿ 27ಕ್ಕೂ ಹೆಚ್ಚು ಪ್ರಭೇದದ ಮರಗಳಿವೆ. ಪಶ್ಚಿಮ ಘಟ್ಟದಲ್ಲಿ ಕಾಣಸಿಗುವ ಕೆಲವು ಅಪರೂಪದ ಮರಗಳನ್ನೂ ಇಲ್ಲಿ ಕಾಣಬಹುದಾಗಿದೆ. ಕಾಡಿನ ಮಧ್ಯದಲ್ಲಿ ಸಣ್ಣ ತೊರೆಯೂ ಹರಿಯುತ್ತದೆ.

ಉಡುಪಿಯಿಂದ ಅಥವಾ ಶಿರ್ವದಿಂದ ಖಾಸಗಿ ವಾಹನ ಅಥವಾ ಆಟೋಗಳ ಮೂಲಕ ಪಿಲಾರಕಾನಕ್ಕೆ ತೆರಳಬಹುದಾಗಿದೆ. ಬಸ್‌ಗಳು ಮುಖ್ಯ ರಸ್ತೆಯವರೆಗೆ (ಶಿರ್ವ-ಬೆಳ್ಮಣ್ ರಸ್ತೆ) ಬರುತ್ತಿದ್ದು, ಬಸ್‌ ಇಳಿದು ಸುಮಾರು ಎರಡು ಕಿ.ಮೀ. ಒಳಗೆ ತೆರಳಬೇಕಾಗುತ್ತದೆ.

ಪಿಲಾರಕಾನವು ಪಕ್ಷಿ ವೀಕ್ಷಕರ ಅಚ್ಚುಮೆಚ್ಚಿನ ಸ್ಥಳವಾಗಿದ್ದು, ಅಲ್ಲಿ ಮಲಬಾರ್‌ ಗ್ರೇ ಹಾರ್ನ್‌ಬಿಲ್‌, ಎಮ್ರಾಲ್ಡ್ ಡವ್‌, ಕ್ರೆಸ್ಟೆಡ್‌ ಸರ್ಪೆಂಟ್‌ ಈಗಲ್‌, ಸೈಬೀರಿಯನ್‌ ಸ್ಟೋನ್‌ಚಾಟ್‌, ಬ್ಲ್ಯಾಕ್‌ ಬಾಝಾ, ರುಫೋಸ್‌ ವುಡ್‌ಪೆಕರ್‌, ಶಿಕ್ರಾ, ಆರೆಂಜ್‌ ಹೆಡೆಡ್‌ ತ್ರಶ್‌, ಮಲಬರ್‌ ಟ್ರೋಗನ್‌ ಸೇರಿದಂತೆ 80ಕ್ಕೂ ಹೆಚ್ಚು ಪ್ರಭೇದದ ಪಕ್ಷಿಗಳು ಕಂಡು ಬಂದಿವೆ.

ನಗರದ ಸದ್ದು ಗದ್ದಲವಿಲ್ಲದ ಪ್ರಶಾಂತ ವಾತಾವರಣವಿರುವ ಈ ಕಾನನವು ಪ್ರವಾಸದ ಜೊತೆಗೆ, ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಲು ಬಯಸುವವರನ್ನು ಕೈಬೀಸಿ ಕರೆಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.