
ದೇಶವನ್ನು ‘ಬಹಿರ್ದೆಸೆ ಮುಕ್ತ’ ಮಾಡುವ ಉದ್ದೇಶದೊಂದಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 2014ರ ಅಕ್ಟೋಬರ್ 2ರಂದು ‘ಸ್ವಚ್ಛ ಭಾರತ ಮಿಷನ್’ (ಗ್ರಾಮೀಣ) ಯೋಜನೆಯನ್ನು ಜಾರಿಗೆ ತಂದಿತು. ಈ ಯೋಜನೆಯಡಿ ಗ್ರಾಮೀಣ ಪ್ರದೇಶದಲ್ಲಿ ಆರಂಭಿಕ ಹಂತದಲ್ಲಿ ಹತ್ತು ಕೋಟಿ ಗ್ರಾಮೀಣ ಶೌಚಾಲಯ ನಿರ್ಮಾಣದ ಗುರಿ ಹೊಂದಲಾಗಿತ್ತು. ಐದು ವರ್ಷಗಳ ನಂತರ ರಾಷ್ಟ್ರಪತಿ ಮಹಾತ್ಮ ಗಾಂಧೀಜಿಯ 150ನೇ ಜನ್ಮದಿನದಂದು (2019ರ ಅಕ್ಟೋಬರ್ 2ರಂದು) ‘ಬಹಿರ್ದೆಸೆ ಮುಕ್ತ’ ಎಂದು ಘೋಷಿಸಲಾಯಿತು. ಬಾಕಿ ಇರುವ ಕೆಲಸ ಮುಗಿಸಲು ಎರಡನೇ ಹಂತದ ಯೋಜನೆ ಕೈಗೆತ್ತಿಕೊಳ್ಳಲಾಗಿದೆ.
ಗ್ರಾಮೀಣ ಪ್ರದೇಶಗಳ ಎಲ್ಲಾ ಕುಟುಂಬಗಳಲ್ಲಿ, ಶಾಲೆಗಳಲ್ಲಿ, ಅಂಗನವಾಡಿಗಳಲ್ಲಿ ಶೌಚಾಲಯಗಳಿರಬೇಕು. ಮಲ-ಮೂತ್ರ ವಿಸರ್ಜನೆಗಳಿಗೆ ಶೌಚಾಲಯಗಳನ್ನೇ ಬಳಸಬೇಕು. ಉತ್ತಮ ನಿರ್ವಹಣೆ ಇರಬೇಕು. ಗ್ರಾಮದ ಬೀದಿಗಳು ಶುಚಿಯಾಗಿರಬೇಕು. ಜತೆಗೆ, ಮನೆ ಹಾಗೂ ಗ್ರಾಮದ ಕಸ, ಬಳಸಿದ ನೀರು ಮುಂತಾದವುಗಳನ್ನು ಉತ್ತಮವಾಗಿ ನಿರ್ವಹಿಸಬೇಕು. ಒಟ್ಟಾರೆ ರಾಜ್ಯದ ಎಲ್ಲಾ ಗ್ರಾಮಗಳ ಸಂಪೂರ್ಣ ಸ್ವಚ್ಛತೆಗೆ ಪೂರಕವಾದ ಚಟುವಟಿಕೆಗಳನ್ನು ಸ್ವಚ್ಛ ಭಾರತ ಮಿಷನ್ (ಗ್ರಾಮೀಣ) ಯೋಜನೆಯಡಿ ಹಮ್ಮಿಕೊಳ್ಳಲಾಗಿದೆ.
ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಮನೆಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ಸಹಾಯಧನ ನೀಡಲಾಗುತ್ತದೆ. ಈ ಹಿನ್ನೆಯೆಯಲ್ಲಿ ಏನಿದು ಗ್ರಾಮೀಣ ಯೋಜನೆ?, ಸಹಾಯಧನ ಪಡೆಯುವುದು ಹೇಗೆ? ಯಾರೆಲ್ಲ ಅರ್ಹರು ಎಂಬಿತ್ಯಾದಿ ಮಾಹಿತಿಯನ್ನು ತಿಳಿಯೋಣ.
ದೇಶವನ್ನು ಬಯಲು ಬಹಿರ್ದೆಸೆ ಮುಕ್ತ ಮಾಡುವ ಉದ್ದೇಶದಿಂದ ಸ್ವಚ್ಛ ಭಾರತ ಮಿಷನ್ (ಗ್ರಾಮೀಣ) ಯೋಜನೆಯಡಿ ಹಳ್ಳಿಯಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಹಾಯಧನ ನೀಡುತ್ತವೆ. ಅರ್ಜಿ ಸಲ್ಲಿಸಲು ಹತ್ತಿರದ ಗ್ರಾಮ ಪಂಚಾಯಿತಿ ಅಥವಾ ಸ್ವಚ್ಛಗ್ರಾಹಿಯನ್ನು ಸಂಪರ್ಕಿಸಬೇಕು. ಆನ್‌ಲೈನ್‌ನಲ್ಲಿಯೂ ಅರ್ಜಿ ಸಲ್ಲಿಸಬಹುದು.
ಸ್ವಚ್ಛ ಭಾರತ ಮಿಷನ್ (ನಗರ) ಯೋಜನೆಯಡಿ ನಗರ ಪ್ರದೇಶಗಳನ್ನು ಬಯಲು ಬಹಿರ್ದೆಸೆ ಮುಕ್ತ ಮಾಡುವುದು ಮತ್ತು ವೈಜ್ಞಾನಿಕ ತ್ಯಾಜ್ಯ ಸಂಸ್ಕರಣೆ ಮಾಡುವ ಮೂಲಕ ಸ್ವಚ್ಛತೆಗೆ ಆದ್ಯತೆ ನೀಡುತ್ತಿದ್ದು, ನಗರ ಪ್ರದೇಶದ ಜನರು ಈ ಯೋಜನೆಯ ಪ್ರಯೋಜನ ಪಡೆಯಬಹುದು.
ಸ್ವಚ್ಛ ಭಾರತ ಮಿಷನ್ (ಗ್ರಾಮೀಣ) ಯೋಜನೆಯಡಿ ನಿರ್ಮಿಸಿರುವ ಶೌಚಾಲಯ
ಸ್ವಚ್ಛ ಭಾರತ ಮಿಷನ್ (ಗ್ರಾಮೀಣ) ಯೋಜನೆಯ ಎರಡನೇ ಹಂತವು 2020-21ರಿಂದ 2025-26ರವರೆಗೆ ಚಾಲ್ತಿಯಲ್ಲಿರುತ್ತದೆ. ಗ್ರಾಮೀಣ ಭಾಗದ ಹಳ್ಳಿಗಳಲ್ಲಿ ‘ಬಹಿರ್ದೆಸೆ ಮುಕ್ತ’ ಸ್ಥಿತಿಯನ್ನು ಖಚಿತಪಡಿಸಿಕೊಳ್ಳುವುದು, ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ ಚಟುವಟಿಕೆಗಳ ಮೂಲಕ ಸ್ವಚ್ಛತೆಯ ಮಟ್ಟವನ್ನು ಸುಧಾರಿಸುವುದು ಹಾಗೂ ಪ್ರತಿಯೊಬ್ಬರೂ ಶೌಚಾಲಯ ಬಳಸುವುದನ್ನು ಖಚಿತಪಡಿಸುವ ಗುರಿಯನ್ನು ಹೊಂದಲಾಗಿದೆ.
ಸ್ವಚ್ಛ ಭಾರತ ಮಿಷನ್ (ಗ್ರಾಮೀಣ) ಯೋಜನೆಯಡಿ ಶೌಚಾಲಯ ನಿರ್ಮಾಣಕ್ಕಾಗಿ ಅರ್ಜಿ ಸಲ್ಲಿಸುವವರಿಗೆ ಸಹಾಯಧನ ಮತ್ತು ಅರ್ಹತಾ ಮಾನದಂಡಗಳನ್ನು ನಿಗದಿಪಡಿಸಲಾಗಿದೆ. ಸಾಮಾನ್ಯ ವರ್ಗದವರಿಗೆ ₹12 ಸಾವಿರ ಮತ್ತು ಪರಿಶಿಷ್ಟ ಜಾತಿ–ಪಂಗಡದವರಿಗೆ ₹20 ಸಾವಿರ ಸಹಾಯಧನ ನೀಡಲಾಗುತ್ತದೆ. ಈ ಮೊತ್ತವನ್ನು ಎರಡು ಕಂತುಗಳಲ್ಲಿ ಫಲಾನುಭವಿಯ ಖಾತೆಗೆ ನೇರವಾಗಿ ಜಮೆ ಮಾಡಲಾಗುತ್ತದೆ.
ಸ್ವಚ್ಛ ಭಾರತ ಮಿಷನ್-ಗ್ರಾಮೀಣ ಯೋಜನೆಯಡಿ ಶೌಚಾಲಯ ನಿರ್ಮಾಣಕ್ಕಾಗಿ ಅರ್ಜಿ ಸಲ್ಲಿಸುವವರಿಗೆ ಕೆಲವೊಂದು ಮಾನದಂಡಗಳನ್ನು ಹೊಂದಿರಬೇಕು...
• ಅರ್ಜಿ ಸಲ್ಲಿಸುವವರು ಶೌಚಾಲಯವನ್ನು ಹೊಂದಿರಬಾರದು.
• ಬಡ, ಹಿಂದುಳಿದ, ಅಥವಾ ಬಡತನ ರೇಖೆಗಿಂತ ಕೆಳಗಿನ ವರ್ಗಗಳಿಗೆ ಸೇರಿರಬೇಕು (ವೃದ್ಧರು ಅಥವಾ ವಿಕಲಚೇತನರು ಇರುವ ಕುಟುಂಬಗಳಿಗೆ ಆದ್ಯತೆ ನೀಡಲಾಗುತ್ತದೆ)
• ಎಪಿಎಲ್ ಕಾರ್ಡ್ ಹೊಂದಿರುವವರಾಗಿದ್ದರೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಸಣ್ಣ ಮತ್ತು ಅತಿ ಸಣ್ಣ ರೈತರು, ಭೂ ರಹಿತ ಕಾರ್ಮಿಕರು ಆಗಿರಬೇಕು.
• ಆಧಾರ್ ಕಾರ್ಡ್ ಮತ್ತು ಅದಕ್ಕೆ ಲಿಂಕ್ ಮಾಡಿರುವ ಬ್ಯಾಂಕ್ ಪಾಸ್‌ಬುಕ್ ಹೊಂದಿರಬೇಕು.
ನೀವು ಶೌಚಾಲಯ ನಿರ್ಮಾಣಕ್ಕಾಗಿ ಅರ್ಜಿ ಸಲ್ಲಿಸಲು ಇಚ್ಚಿಸಿದ್ದಲ್ಲಿ ಸ್ಥಳೀಯ ಗ್ರಾಮ ಪಂಚಾಯತಿ ಅಥವಾ ‘ಸ್ವಚ್ಛಾಗ್ರಹಿ’ (ಸ್ಥಳೀಯ ನೈರ್ಮಲ್ಯ ಸ್ವಯಂಸೇವಕರು) ಅವರನ್ನು ಸಂಪರ್ಕಿಸಿ. ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಸೇರಿದಂತೆ ಅಗತ್ಯ ದಾಖಲೆಗಳನ್ನು ಒದಗಿಸಿ.
ಶೌಚಾಲಯವನ್ನು ನಿರ್ಮಿಸಿದ ನಂತರ ಜಿಯೊ-ಟ್ಯಾಗಿಂಗ್ ಮತ್ತು ಸ್ವಚ್ಛ ಭಾರತ ಮಿಷನ್ ಇಂಟಿಗ್ರೇಟೆಡ್ ಮ್ಯಾನೇಜ್‌ಮೆಂಟ್ ಇನ್ಫರ್ಮೇಷನ್ ಸಿಸ್ಟಮ್ ಪೋರ್ಟಲ್ ಮೂಲಕ ಪ್ರಗತಿಯನ್ನು ಪರಿಶೀಲಿಸಲಾಗುತ್ತದೆ. ಪರಿಶೀಲನೆ ಬಳಿಕ ಸಹಾಯಧನವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ.
ಗ್ರಾಮೀಣ ಭಾಗದವರು ಸ್ವಚ್ಛ ಭಾರತ ಮಿಷನ್ (ಗ್ರಾಮೀಣ) ಪೋರ್ಟಲ್‌ನಲ್ಲಿ ನೋಂದಾಯಿಸುವ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿದಾರರ ಲಾಗಿನ್ ಐಡಿಯನ್ನು ರಚಿಸಲು ನಿಮ್ಮ ಹೆಸರು, ಮೊಬೈಲ್ ಸಂಖ್ಯೆ, ಆಧಾರ್ ಕಾರ್ಡ್ ವಿವರಗಳನ್ನು ಸಲ್ಲಿಸುವ ಮೂಲಕ ನೋಂದಣಿ ಮಾಡಿಕೊಳ್ಳಬೇಕು. ಲಾಗಿನ್ ಆದ ಮೇಲೆ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡುವ ಮೂಲಕ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು.
ನಗರ ಪ್ರದೇಶದವರು ‘ಸ್ವಚ್ಛ ಭಾರತ ಮಿಷನ್ (ನಗರ) ಪೋರ್ಟಲ್’ನಲ್ಲಿ ಅರ್ಜಿ ಸಲ್ಲಿಸಬಹುದು.
ಸ್ವಚ್ಛ ಭಾರತ ಮಿಷನ್–ನಗರ ಪೋರ್ಟಲ್‌ನಲ್ಲಿ ಅರ್ಜಿದಾರರರು ಹೆಸರು, ಮೊಬೈಲ್ ಸಂಖ್ಯೆ, ಇ–ಮೇಲ್, ವಿಳಾಸ ಸೇರಿದಂತೆ ಇತರೆ ವಿವರಗಳನ್ನು ಸಲ್ಲಿಸುವ ಮೂಲಕ ಲಾಗಿನ್ ಐಡಿಯನ್ನು ಕ್ರಿಯೆಟ್ ಮಾಡಬೇಕು. ಲಾಗಿನ್ ಆದ ಮೇಲೆ ವೈಯಕ್ತಿಕ ಮನೆ ಶೌಚಾಲಯ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು. ಅದರಲ್ಲಿ ಭೌಗೋಳಿಕ ವಿವರಗಳು, ಫೋಟೊ, ಬ್ಯಾಂಕ್ ಪಾಸ್‌ಬುಕ್‌ನ ಮೊದಲ ಪುಟದ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್‌ಲೋಡ್ ಮಾಡಬೇಕು.
ಅರ್ಜಿಯನ್ನು ನಗರ ಸ್ಥಳೀಯ ಸಂಸ್ಥೆಯಿಂದ ಪರಿಶೀಲಿಸಲಾಗುತ್ತದೆ. ಅನುಮೋದನೆ ಮತ್ತು ನಿರ್ಮಾಣ ಪ್ರಗತಿಯ ಪರಿಶೀಲನೆ ಪೂರ್ಣಗೊಂಡ ಬಳಿಕ ಸಹಾಯಧನವನ್ನು ನಿಮ್ಮ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ.
• ಆಧಾರ್ ಕಾರ್ಡ್
• ಫೋಟೊ
• ಬ್ಯಾಂಕ್ ಪಾಸ್‌ಬುಕ್
• ನಿರ್ಮಾಣ ಹಂತದಲ್ಲಿರುವ ಶೌಚಾಲಯದ ಚಿತ್ರ
ಆರೋಗ್ಯ ಸುಧಾರಣೆ: ಸುಧಾರಿತ ನೈರ್ಮಲ್ಯವೇ ಕಾರಣದಿಂದಾಗಿ 2014ಕ್ಕೆ ಹೋಲಿಸಿದರೆ 2019ರಲ್ಲಿ ಅತಿಸಾರದಿಂದ ಉಂಟಾಗುವ ಸಾವಿನ ಪ್ರಮಾಣ ಕಡಿಮೆಯಾಗಿದೆ.
ಆರ್ಥಿಕ ಪ್ರಯೋಜನ: ಬಯಲು ಶೌಚ ಮುಕ್ತ (ಓಡಿಎಫ್) ಗ್ರಾಮಗಳ ಕುಟುಂಬಗಳು ವಾರ್ಷಿಕವಾಗಿ ಸರಾಸರಿ ₹50,000 ಆರೋಗ್ಯ ವೆಚ್ಚದಲ್ಲಿ ಉಳಿತಾಯ ಮಾಡುತ್ತಿವೆ.
ಪರಿಸರ ಸಂರಕ್ಷಣೆ: ಬಯಲು ಮುಕ್ತ ನೀರಿನ ಪ್ರದೇಶಗಳಲ್ಲಿ ಅಂತರ್ಜಲ ಕಲುಷಿತವಾಗುವುದು ಗಮನಾರ್ಹವಾಗಿ ಇಳಿಕೆಯಾಗಿದೆ.
ಮಹಿಳೆಯರಿಗೆ ಸುರಕ್ಷತೆ: ಉತ್ತಮ ನೈರ್ಮಲ್ಯ ಸೌಲಭ್ಯಗಳೊಂದಿಗೆ ಶೇಕಡ 93ರಷ್ಟು ಮಹಿಳೆಯರು ಮನೆಯಲ್ಲಿ ಸುರಕ್ಷಿತ ಭಾವನೆ ಹೊಂದಿದ್ದಾರೆಂದು ವರದಿಯಾಗಿದೆ.
ಸ್ವಚ್ಛ ಭಾರತ ಮಿಷನ್-ಗ್ರಾಮೀಣ ಯೋಜನೆಯು ಸಾರ್ವಜನಿಕ ಆರೋಗ್ಯ ಮತ್ತು ನೈರ್ಮಲ್ಯವನ್ನು ಸುಧಾರಿಸುವುದು ಮಾತ್ರವಲ್ಲದೆ, ಸಮುದಾಯದ ಬದಲಾವಣೆಯ ದಾರಿದೀಪವಾಗಿಯೂ ಕಾರ್ಯನಿರ್ವಹಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.