ADVERTISEMENT

ಕೋವಿಡ್–19 ಆತಂಕ: ಮಕ್ಕಳಲ್ಲಿ ಚೈತನ್ಯ ತುಂಬುವುದು ಹೇಗೆ?

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2020, 19:45 IST
Last Updated 3 ಆಗಸ್ಟ್ 2020, 19:45 IST
ಸಾಂದರ್ಭಿಕ ಚಿತ್ರ 
ಸಾಂದರ್ಭಿಕ ಚಿತ್ರ    

ಗಾಳಿ ಬೀಸುವ ದಿಕ್ಕೇ ಬದಲಾದಂತಿದೆ– ಈ ಕೊರೊನಾ ಸೋಂಕು ಹರಡುವ ಬಗೆ ನೋಡಿದರೆ. ಅಂದರೆ ನಮ್ಮೆಲ್ಲರ ಬದುಕಿನಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಹೊಸದಕ್ಕೆ ಹೊಂದಿಕೊಳ್ಳಲು ನಾವು ದೊಡ್ಡವರೇ ಹೆಣಗಾಡುತ್ತಿರುವಾಗ ಇನ್ನು ಮಕ್ಕಳ ಪಾಡೇನು?

ನಾವು ಒತ್ತಡ ಹಾಗೂ ಆತಂಕ ಅನುಭವಿಸುವಂತೇ ಮಕ್ಕಳೂ ಕೂಡ ಆತಂಕ, ಗಾಬರಿಯಲ್ಲಿದ್ದಾರೆ. ಆನ್‌ಲೈನ್‌ ತರಗತಿಗಳಿಗೆ ಹೊಂದಿಕೊಳ್ಳುವ ಸವಾಲು ಬೇರೆ. ಇದಕ್ಕಾಗಿ ಪೋಷಕರು ತಮ್ಮ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವ ಜರೂರಿದೆ. ಯಾವುದೇ ಹಿನ್ನಡೆ, ವೈಫಲ್ಯ, ಆಘಾತ, ಬಿಕ್ಕಟ್ಟು, ಸವಾಲುಗಳನ್ನು ಮೆಟ್ಟಿ ನಿಲ್ಲಲು ಮಕ್ಕಳಲ್ಲಿ ಚೈತನ್ಯ ತುಂಬಬೇಕಾಗಿದೆ.

ಹಾಗಂತ ಎಲ್ಲಾ ಮಕ್ಕಳಲ್ಲೂ ಈ ಒತ್ತಡವಿದ್ದರೂ ಅವರು ಪ್ರತಿಕ್ರಿಯಿಸುವ ವಿಧಾನ ಬೇರೆ ಇರುತ್ತದೆ. ಮಕ್ಕಳಲ್ಲಿ ಕಷ್ಟಕರ ಪರಿಸ್ಥಿತಿಯಲ್ಲೂ ಪುಟಿದೇಳುವ ಮನೋಭಾವ ಇರಬಹುದು. ಅವರು ಬೆಳೆದಿರುವಂತಹ ವಾತಾವರಣವೂ ಇದಕ್ಕೆ ಕಾರಣ.

ADVERTISEMENT

ಭದ್ರತೆ ಮತ್ತು ಆತ್ಮೀಯತೆ
ಪೋಷಕರು ಮಕ್ಕಳಿಗೆ ಸುರಕ್ಷತೆಯ ವಾತಾವರಣ ಕಲ್ಪಿಸಿದರೆ ಮತ್ತು ಆತ್ಮೀಯತೆ ತೋರಿಸಿದರೆ ಅವರಲ್ಲಿ ಯಾವುದೇ ರೀತಿಯ ಸವಾಲು ಎದುರಿಸುವಂತಹ ಗುಣ ಬೆಳೆಯುತ್ತದೆ. ಅವರಲ್ಲಿ ಭದ್ರತೆಯ ಭಾವ ಮೂಡಿದರೆ ಯಾವುದೇ ಕ್ಷಣದಲ್ಲೂ ನಿಮ್ಮ ಬೆಂಬಲವಿದೆ ಎಂಬ ಆತ್ಮವಿಶ್ವಾಸವಿದ್ದರೆ ಎಂತಹ ಸಮಸ್ಯೆಗಳನ್ನಾದರೂ ಎದುರಿಸುವ ಗಟ್ಟಿ ಮನಸ್ಸು ಬೆಳೆಸಿಕೊಳ್ಳುತ್ತಾರೆ.

ಮಕ್ಕಳು ಏನಾದರೂ ಹೇಳಿದರೆ ತಾಳ್ಮೆಯಿಂದ ಕೇಳಿಸಿಕೊಳ್ಳಿ. ಆತುರದ ತೀರ್ಮಾನಕ್ಕೆ ಬರದೆ ಲಕ್ಷ್ಯ ಕೊಡಿ. ಮಕ್ಕಳ ಮುಖಭಾವ, ಅವರ ಆಂಗಿಕ ನಡವಳಿಕೆ, ಧ್ವನಿಯ ಏರಿಳಿತ ಗಮನಿಸಿ. ಮಕ್ಕಳು ದುಃಖ, ಸಿಟ್ಟು, ಕಿರಿಕಿರಿ ಅಥವಾ ಖುಷಿ ಅನುಭವಿಸುತ್ತಿದ್ದಾರಾ ಎಂದು ನಿಮಗೆ ಗೊತ್ತಾಗಿಬಿಡುತ್ತದೆ.

ಸ್ನೇಹಿತರ ಒಡನಾಟವಿಲ್ಲದೇ, ಆಟಪಾಟವಿಲ್ಲದೇ ಕಂಗೆಟ್ಟಿದ್ದರೆ ಅಪ್ಪಿಕೊಂಡು ಸಹಾನುಭೂತಿ ತೋರಿಸಿ. ಅಷ್ಟೇ ತಾನೆ, ನಾವೇ ಬೇರೆ ಆಟ ಆಡೋಣ ಎಂಬ ಸಮಾಧಾನದ ಮಾತು ನಿಮ್ಮಿಂದ ಬರಲಿ. ಕೊರೊನಾ ಸೋಂಕಿನ ಬಗ್ಗೆ ಹೆದರಿಕೊಂಡರೆ ನಿಜ ಸ್ಥಿತಿ ತಿಳಿಸಿ, ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಹೇಳಿ. ಕ್ರಮೇಣ ಮಕ್ಕಳೂ ಅರ್ಥ ಮಾಡಿಕೊಳ್ಳುತ್ತಾರೆ.

ಸಮುದಾಯದ ಬೆಂಬಲ
ಮಕ್ಕಳು ಈ ಸಂದರ್ಭದಲ್ಲಿ ದೈಹಿಕವಾಗಿ ತಮ್ಮ ಸ್ನೇಹಿತರು, ಅಜ್ಜ/ ಅಜ್ಜಿಯಿಂದ ದೂರವಾಗಿದ್ದರೂ ವರ್ಚುವಲ್‌ ಆಗಿ ಮಾತುಕತೆ ನಡೆಸಲು ಅನುವು ಮಾಡಿಕೊಡಿ.

ಸಾಮೂಹಿಕ ಒಳಾಂಗಣ ಆಟ, ನಾಟಕ, ಹಾಡು ಮೊದಲಾದ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಿ. ಅಧ್ಯಾತ್ಮದ ಕುರಿತೂ ಪರಿಚಯ ಮಾಡಿಕೊಡಬಹುದು.

ನಿಮ್ಮ ಮಗು ಕೋವಿಡ್‌–19 ಪಿಡುಗಿನ ಕುರಿತ ಸುದ್ದಿಯಿಂದ ಕಂಗೆಟ್ಟಿದ್ದರೆ, ಶಾಲೆ, ಸ್ನೇಹಿತರು, ಆಟ, ಹೊರಗಡೆ ಸುತ್ತಾಟವಿಲ್ಲದೇ ಆತಂಕಗೊಂಡಿದ್ದರೆ ಭಾವನಾತ್ಮಕವಾಗಿ ಗಟ್ಟಿಗೊಳಿಸಿ.

ಮಕ್ಕಳು ಸಿಟ್ಟು ಮಾಡಿದರೆ ಬಯ್ಯುವ ಬದಲು ಸಮಾಧಾನ ಮಾಡಿ. ಅತ್ತರೆ ಅಳಲು ಬಿಡಿ. ಮನೆಯಲ್ಲೇ ಓಡಲು, ಬೇಕಿದ್ದರೆ ದಿಂಬಿಗೆ ಗುದ್ದಲು, ಜೋರಾಗಿ ಕಿರುಚಲು, ನೆಚ್ಚಿನ ಬೊಂಬೆ ಹಿಡಿದುಕೊಂಡು ಕೂರಲು ಅವಕಾಶ ಕೊಡಿ.

ಪೌಷ್ಟಿಕ ಆಹಾರ, ನಿದ್ದೆ, ವಿರಾಮ, ಆರೋಗ್ಯಕ ಮನಸ್ಸು ಮುಖ್ಯ. ಹೆಚ್ಚು ಮಾತನಾಡುವಂತೆ ಪ್ರೇರೇಪಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.