ADVERTISEMENT

ದುಬೈನಲ್ಲಿ IIM ಅಹಮದಾಬಾದ್ ಕ್ಯಾಂಪಸ್‌; ಜಾಗತಿಕ ಮಾರುಕಟ್ಟೆಗೆ ಒಂದು ವರ್ಷದ MBA

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2025, 10:10 IST
Last Updated 9 ಏಪ್ರಿಲ್ 2025, 10:10 IST
<div class="paragraphs"><p>ದುಬೈನ ಅಂತರರಾಷ್ಟ್ರೀಯ ಶಿಕ್ಷಣ ನಗರಿಯಲ್ಲಿ ನಡೆದ ಸಮಾರಂಭದಲ್ಲಿ ಐಐಎಂ ಅಹಮದಾಬಾದ್ ಮತ್ತು ಸಂಯುಕ್ತ ಅರಬ್ ಎಮಿರೇಟ್ಸ್‌ ಒಡಂಬಡಿಕೆಗೆ ಸಹಿ ಹಾಕಿದ ಸಂದರ್ಭ</p></div>

ದುಬೈನ ಅಂತರರಾಷ್ಟ್ರೀಯ ಶಿಕ್ಷಣ ನಗರಿಯಲ್ಲಿ ನಡೆದ ಸಮಾರಂಭದಲ್ಲಿ ಐಐಎಂ ಅಹಮದಾಬಾದ್ ಮತ್ತು ಸಂಯುಕ್ತ ಅರಬ್ ಎಮಿರೇಟ್ಸ್‌ ಒಡಂಬಡಿಕೆಗೆ ಸಹಿ ಹಾಕಿದ ಸಂದರ್ಭ

   

ಎಕ್ಸ್ ಚಿತ್ರ

ನವದೆಹಲಿ: ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಮ್ಯಾನೇಜ್ಮೆಂಟ್‌ (IIM) ಅಹಮದಾಬಾದ್‌ ತನ್ನ ಅಂತರರಾಷ್ಟ್ರೀಯ ಕ್ಯಾಂಪಸ್‌ ಅನ್ನು ದುಬೈನಲ್ಲಿ ಆರಂಭಿಸುತ್ತಿದ್ದು, ಇದಕ್ಕಾಗಿ ಸಂಯುಕ್ತ ಅರಬ್ ಎಮಿರೇಟ್ಸ್‌ (UAE) ಜತೆ ಒಡಂಬಡಿಕೆಗೆ ಸಹಿ ಹಾಕಿರುವುದಾಗಿ ಬುಧವಾರ ಹೇಳಿದೆ.

ADVERTISEMENT

ಈ ಕ್ಯಾಂಪಸ್ ದುಬೈನ ಅಂತರರಾಷ್ಟ್ರೀಯ ಶಿಕ್ಷಣ ನಗರಿಯಲ್ಲಿ ಸ್ಥಾಪಿಸಲಾಗುತ್ತಿದ್ದು, 2026ರಿಂದ ಇದು ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ.

ದುಬೈ ದೊರೆ ಶೇಖ್ ಹಮ್ದಾನ್ ಬಿನ್‌ ಮೊಹಮ್ಮದ್‌ ರಶೀದ್ ಅಲ್‌ ಮುಕ್ತಮ್‌ ಸಮ್ಮುಖದಲ್ಲಿ ಐಐಎಂ ಅಹಮದಾಬಾದ್ ನಿರ್ದೇಶಕ ಭರತ್ ಭಾಸ್ಕರ್‌ ಮತ್ತು ದುಬೈನ ಆರ್ಥಿಕ ಮತ್ತು ಪ್ರವಾಸೋದ್ಯಮ ವಿಭಾಗದ ಮಹಾನಿರ್ದೇಶಕ ಹೆಲಾಲ್‌ ಸಯೀದ್‌ ಅಲ್ಮಾರಿ ಒಡಂಬಡಿಕೆಗೆ ಸಹಿ ಹಾಕಿದರು. 

‘ಭಾರತದ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಇದೊಂದು ಹೆಮ್ಮೆಯ ಕ್ಷಣವಾಗಿದೆ. ದುಬೈನಲ್ಲಿ ಅಂತರರಾಷ್ಟ್ರೀಯ ಕ್ಯಾಂಪಸ್‌ ಸ್ಥಾಪಿಸುವ ಉದ್ದೇಶದೊಂದಿಗೆ ಯುಎಇ ಮತ್ತು ಐಐಎಂ ಅಹಮದಾಬಾದ್‌ ಒಡಂಬಡಿಕೆಗೆ ಸಹಿ ಹಾಕಿವೆ. ಈಮೂಲಕ ಹೊಸ ಶಿಕ್ಷಣ ನೀತಿಯಡಿ ಭಾರತದ ವಿಶ್ವದರ್ಜೆಯ ಶಿಕ್ಷಣ ಸಂಸ್ಥೆಯೊಂದು ಜಾಗತೀಕರಣದಲ್ಲಿ ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸಿದೆ’ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

‘ಈ ಒಡಂಬಡಿಕೆಯಿಂದ ಜಾಗತಿಕ ಒಳಿತಿಗಾಗಿ ಕಲಿಕೆ, ನಾವೀನ್ಯತೆ ಮತ್ತು ಭವಿಷ್ಯದ ನಾಯಕರನ್ನು ಸಜ್ಜುಗೊಳಿಸಲು ಹೊಸ ಅವಕಾಶವೊಂದು ತೆರದುಕೊಂಡಿದೆ. ಐಐಎಂ ಅಹಮದಾಬಾದ್‌ ತನ್ನ ದುಬೈ ಕ್ಯಾಂಪಸ್ ಮೂಲಕ ಈ ಭಾಗದ ಆರ್ಥಿಕ ಅಭಿವೃದ್ಧಿ ಮತ್ತು ಬೆಳವಣಿಗೆಗೂ ನೆರವಾಗಲಿದೆ’ ಎಂದಿದ್ದಾರೆ.

ಎರಡು ಹಂತಗಳಲ್ಲಿ ಐಐಎಂ ದುಬೈ ಕ್ಯಾಂಪಸ್‌ ಸ್ಥಾಪನೆ

‘ಎರಡು ಹಂತಗಳಲ್ಲಿ ಐಐಎಂ ದುಬೈ ಕ್ಯಾಂಪಸ್‌ ನಿರ್ಮಾಣವಾಗಲಿದೆ. ಮೊದಲ ಹಂತದಲ್ಲಿ ದುಬೈ ಅಂತರರಾಷ್ಟ್ರೀಯ ಶಿಕ್ಷಣ ನಗರಿಯಲ್ಲಿ (DIAC) ಸ್ಥಳವನ್ನು ಪಡೆಯಲಿದೆ. ಇದು ಬಹು ಸಂಸ್ಕೃತಿಯ ಪ್ರದೇಶವಾಗಿದ್ದು, ಉನ್ನತ ಶಿಕ್ಷಣದ ಪ್ರಮುಖ ತಾಣವಾಗಿದೆ. ಎರಡನೇ ಹಂತದಲ್ಲಿ ಐಐಎಂ ಕ್ಯಾಂಪಸ್ ಅಭಿವೃದ್ಧಿ ಕಾರ್ಯ ನಡೆಯಲಿದೆ. ಸ್ಥಳ ನಿಗದಿಯಾದಲ್ಲಿ ಹೊಸ ಕ್ಯಾಂಪಸ್‌ 2029ರಿಂದ ಕಾರ್ಯಾಚರಣೆ ನಡೆಸಲಿದೆ’ ಎಂದಿದ್ದಾರೆ.

‘ಮುಂದಿನ ಒಂದು ದಶಕದಲ್ಲಿ ನಾಳಿನ ನಾಯಕರು ತಮ್ಮ ಕೌಶಲವನ್ನು ಪ್ರದರ್ಶಿಸುವ, ನಾವೀನ್ಯತೆ ಮತ್ತು ಹೊಸ ಮಾರ್ಗಗಳನ್ನು ಕಂಡುಕೊಳ್ಳಲು ನೆರವಾಗುವಂತೆ ಈ ಕೇಂದ್ರವನ್ನು ಅಭಿವೃದ್ಧಿಪಡಿಸಲಾಗುವುದು. ಜಾಗತಿಕವಾಗಿ ನಾವು ಹೊಸ ಕಲಿಕಾ ಅನುಭವವನ್ನು ಇಲ್ಲಿ ಸೃಷ್ಟಿಸಲಾಗುವುದು. ಪರಿವರ್ತನೆ ತರುವ ಕಲಿಕೆ, ನಾಯಕತ್ವ ಮತ್ತು ಸಮುದಾಯದ ಮೇಲೆ ನಿರಂತರ ಪ್ರಭಾವ ಬೀರುವ ನಾಯಕರನ್ನು ಸೃಷ್ಟಿಸುವಲ್ಲಿ ಬದ್ಧರಾಗಿದ್ದೇವೆ’ ಎಂದು ಐಐಎಂ ಅಹಮದಾಬಾದ್‌ನ ಆಡಳಿತ ಮಂಡಳಿ ಅಧ್ಯಕ್ಷ ಪಂಕಜ್ ಪಟೇಲ್ ತಿಳಿಸಿದ್ದಾರೆ.

ದುಬೈ ಕ್ಯಾಂಪಸ್‌ನಲ್ಲಿ ಒಂದು ವರ್ಷದ ಎಂಬಿಎಗೆ ಪ್ರವೇಶ ಪಡೆಯಲು ಎರಡು ಹಂತಗಳ ಕಠಿಣ ಪರೀಕ್ಷೆ ನಡೆಯಲಿದೆ. ಕಳೆದ ಐದು ವರ್ಷಗಳಲ್ಲಿ ದಾಖಲಾದ ಜಿಎಂಎಟಿ ಅಥವಾ ಜಿಆರ್‌ಇ ಅಂಕಗಳನ್ನು ಪರಿಗಣಿಸಲಾಗುತ್ತದೆ. ಐದು ಹಂತಗಳ ಈ ಎಂಬಿಎ ಪದವಿಯಲ್ಲಿ ಕಠಿಣ ಪಠ್ಯಕ್ರಮದ ಜತೆಗೆ ಅಂತರರಾಷ್ಟ್ರೀಯ ಮಾನ್ಯತೆ ಒದಗಿಸಲಾಗುತ್ತದೆ. ಆ ಮೂಲಕ ಐಐಎಂ ಅಹಮದಾಬಾದ್‌ ಜಾಗತಿಕ ಎಂಬಿಎಯ ಶ್ರೇಷ್ಠತೆಗೆ ಕನ್ನಡಿ ಹಿಡಿದಂತಿರಲಿದೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.