
ನೃತ್ಯ, ನಾಟಕ, ಸಂಗೀತದಲ್ಲಿ ಸ್ನಾತಕೋತ್ತರ ಪದವಿ ನೀಡುತ್ತಿರುವ ರಾಜ್ಯದ ಏಕೈಕ ಸರ್ಕಾರಿ ವಿಶ್ವವಿದ್ಯಾಲಯ
ಕಲಾ ಪ್ರಕಾರಗಳು ಪ್ರದರ್ಶನಕ್ಕೆ ಮಾತ್ರ ಸೀಮಿತವಾಗಿರದೆ, ಅಧ್ಯಯನ, ಸಂಶೋಧನೆ ಮತ್ತು ಶೈಕ್ಷಣಿಕವಾಗಿಯೂ ತೊಡಗಿಕೊಳ್ಳುವಂತೆ ಮಾಡುವ ದಿಸೆಯಲ್ಲಿ ಕಾರ್ಯನಿರ್ವಹಿಸುತ್ತಿದೆ ಬೆಂಗಳೂರು
ವಿಶ್ವವಿದ್ಯಾಲಯದ ಪ್ರದರ್ಶನ ಕಲಾ ವಿಭಾಗ.
ಈ ವಿಭಾಗವನ್ನು 1973ರಲ್ಲಿ ಪ್ರಾರಂಭಿಸಲಾಗಿದೆ. ಸಂಗೀತ, ನೃತ್ಯ, ನಾಟಕ ಪ್ರಕಾರಗಳಲ್ಲಿ ಸ್ನಾತಕೋತ್ತರ ಪದವಿ ಮತ್ತು ಪಿಎಚ್.ಡಿ ಶಿಕ್ಷಣವನ್ನು ಇಲ್ಲಿ ನೀಡಲಾಗುತ್ತಿದೆ. ಸಾಂಪ್ರದಾಯಿಕ ಶಿಕ್ಷಣದ ರೀತಿಯಲ್ಲೇ ವಿದ್ಯಾರ್ಥಿಗಳು ಎರಡು ವರ್ಷದ ನಾಲ್ಕು ಸೆಮಿಸ್ಟರ್‌ಗಳಲ್ಲಿ 26 ವಿಷಯಗಳ ಕುರಿತು ಅಧ್ಯಯನ ನಡೆಸಿ ಸ್ನಾತಕೋತ್ತರ ಪದವಿ ಪಡೆದುಕೊಳ್ಳಬಹುದು.
ಸಂಗೀತ ಮತ್ತು ನೃತ್ಯ ವಿಷಯಗಳಲ್ಲಿ ಕರ್ನಾಟಕ ಸಂಗೀತ ಹಾಗೂ ಭರತನಾಟ್ಯದ ವಿಸ್ತೃತ ಅಧ್ಯಯನಕ್ಕೆ ಅವಕಾಶವಿದೆ. ಇತಿಹಾಸ, ಸ್ವರ, ರಾಗ, ತಾಳ, ಗಮಕಗಳು, ವರ್ಣ, ಕೃತಿ, ಜಾವಳಿ, ತಿಲ್ಲಾನ, ಪದಗಳು, ಮನೋಧರ್ಮ, ರಾಗ ಪ್ರಕಾರಗಳು, ನೃತ್ಯ, ಅಭಿನಯ, ಅಷ್ಟಪದಿ, ತರಂಗದ ಕುರಿತು ವಿದ್ಯಾರ್ಥಿಗಳು ಅಧ್ಯಯನ ಮಾಡಬಹುದು.
ನಾಟಕ ವಿಷಯದಲ್ಲಿ ಕನ್ನಡ ರಂಗಭೂಮಿಯ ಇತಿಹಾಸ, ಜನಪದ ರಂಗಭೂಮಿ, ಪಾಶ್ಚಿಮಾತ್ಯ ರಂಗಭೂಮಿ, ರಂಗಭೂಮಿಯ ಪ್ರಕಾರಗಳು, ಅಭಿನಯ, ಧ್ವನಿ, ವಸ್ತ್ರವಿನ್ಯಾಸ, ಪ್ರಸರಣ, ಹಿನ್ನೆಲೆ ಸಂಗೀತ, ರಂಗಸಜ್ಜಿಕೆ, ನಾಟಕ ಕೃತಿಗಳ ಅಧ್ಯಯನವು ಪಠ್ಯದ ಭಾಗವಾಗಿವೆ.
‘ಎಲ್ಲಾ ವಿದ್ಯಾರ್ಥಿಗಳಿಗೆ ತರಗತಿ ಶಿಕ್ಷಣದ ಜೊತೆಗೆ ಪ್ರಾಯೋಗಿಕವಾಗಿಯೂ ತರಬೇತಿ ನೀಡಲಾಗುತ್ತದೆ. ಉಪನ್ಯಾಸ ಮಾಲಿಕೆ, ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಕೋರ್ಸ್ ಮುಗಿದ ಬಳಿಕ ರಂಗಪ್ರವೇಶ ಕಾರ್ಯಕ್ರಮವನ್ನು ವಿಭಾಗದ ವತಿಯಿಂದಲೇ ನಡೆಸಲಾಗುತ್ತದೆ. ಈ ಮೂಲಕ ವಿದ್ಯಾರ್ಥಿಗಳು ಸ್ವಾವಲಂಬಿಗಳಾಗಿ ಮುಂದುವರಿಯಬಹುದು’ ಎನ್ನುತ್ತಾರೆ ವಿಭಾಗದ ಮುಖ್ಯಸ್ಥೆ ಹಂಸಿಣಿ ನಾಗೇಂದ್ರ.
10 ವರ್ಷಗಳಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕಲಿಯುವ ವಿಷಯಗಳನ್ನು ಪಠ್ಯಕ್ರಮದ ಭಾಗವಾಗಿ, ಬರೀ ಎರಡು ವರ್ಷಗಳಲ್ಲಿ, ಕೈಗೆಟಕುವ ಶುಲ್ಕದಲ್ಲಿ ಅಧ್ಯಯನ ಮಾಡಲು ಅವಕಾಶ ಕಲ್ಪಿಸಲಾಗಿದೆ.ಹಂಸಿನಿ ನಾಗೇಂದ್ರ, ಮುಖ್ಯಸ್ಥೆ, ಪ್ರದರ್ಶನ ಕಲಾ ವಿಭಾಗ, ಬೆಂಗಳೂರು ವಿ.ವಿ.
ಪ್ರಸ್ತುತ ಕಾಲಘಟ್ಟಕ್ಕೆ ತಕ್ಕಂತೆ ಹೊಸ ತಂತ್ರಜ್ಞಾನದ ಮೂಲಕ ಪ್ರದರ್ಶನ ಕಲಾ ವಿಭಾಗವನ್ನು ಅಭಿವೃದ್ಧಿಪಡಿಸಲಾಗಿದೆ. ಸ್ಮಾರ್ಟ್ ತರಗತಿಗಳು, ಬಯಲು ರಂಗಮಂದಿರ, ಸಭಾಂಗಣ, ನುರಿತ ಶಿಕ್ಷಕ ವರ್ಗವನ್ನು ನಾವು ಹೊಂದಿದ್ದೇವೆ. ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು.
ಕಥಕ್ ಮತ್ತು ಕೂಚಿಪುಡಿ ನೃತ್ಯಗಳಿಗೆ ಸಂಬಂಧಿಸಿದಂತೆ ಡಿಪ್ಲೊಮಾ ಕೋರ್ಸ್‌ಗಳನ್ನು ಪ್ರಾರಂಭಿಸಲು ಯೋಜನೆಯನ್ನು ರೂಪಿಸಲಾಗಿದೆ. ಶೀಘ್ರದಲ್ಲಿ ಇದಕ್ಕೆ ಸಂಬಂಧಿಸಿದ ಪಠ್ಯಕ್ರಮ
ವನ್ನು ರಚಿಸಿ ಕೋರ್ಸ್‌ಗಳನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುತ್ತದೆ.
ಎಸ್.ಎಂ.ಜಯಕರ ಕುಲಪತಿ, ಬೆಂಗಳೂರು ವಿಶ್ವವಿದ್ಯಾಲಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.