ADVERTISEMENT

ಚಾರ್ಟೆಡ್‌ ಅಕೌಂಟೆಂಟ್‌ (ಸಿಎ) ಅಧ್ಯಯನ ಹೇಗೆ?

ವಿ.ಪ್ರದೀಪ್ ಕುಮಾರ್
Published 4 ಜುಲೈ 2022, 1:59 IST
Last Updated 4 ಜುಲೈ 2022, 1:59 IST
ವಿ. ಪ್ರದೀಪ್ ಕುಮಾರ್
ವಿ. ಪ್ರದೀಪ್ ಕುಮಾರ್   

1. ನಾನು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಿರ್ಣನಾಗಿದ್ದು, ಮುಂದೆ ಚಾರ್ಟೆಡ್ ಅಕೌಂಟೆಂಟ್ ಆಗಬೇಕೆಂದಿದ್ದೇನೆ. ನಾನು ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು?

ಹೆಸರು, ಊರು ತಿಳಿಸಿಲ್ಲ

ಚಾರ್ಟೆಡ್ ಅಕೌಂಟೆಂಟ್ (ಸಿಎ) ಕೋರ್ಸ್ ಮಾಡುವುದಕ್ಕೆ ಐದು ಪ್ರಮುಖ ಹಂತಗಳಿವೆ.

ADVERTISEMENT

ಎಸ್‌ಎಸ್‌ಎಲ್‌ಸಿ ನಂತರ, ಸಿಎ ಫೌಂಡೇಷನ್ ಕೋರ್ಸ್‌ಗೆ ನೋಂದಾಯಿಸಿಕೊಂಡು ಫೌಂಡೇಷನ್ ಕೋರ್ಸ್ ಪರೀಕ್ಷೆಗೆ ತಯಾರಿ ಮಾಡಿಕೊಳ್ಳಬಹುದು. ಈ ಪರೀಕ್ಷೆಗೆ ಪಿಯುಸಿ ನಂತರ ಅರ್ಹತೆ ಸಿಗುತ್ತದೆ. ಈಗಲೇ ನೋಂದಾಯಿಸುವುದರಿಂದ, ಪರೀಕ್ಷೆಯ ತಯಾರಿಗೆ ಹೆಚ್ಚಿನ ಸಮಯ ಸಿಗುತ್ತದೆ. ಫೌಂಡೇಷನ್ ಕೋರ್ಸ್ ಪರೀಕ್ಷೆಯಲ್ಲಿ ಕನಿಷ್ಠ ಶೇ 50 ಅಂಕಗಳಲ್ಲಿ ಉತ್ತೀರ್ಣರಾಗಬೇಕು ಮತ್ತು ಪ್ರತಿ ವಿಷಯದಲ್ಲಿ ಕನಿಷ್ಠ ಶೇ 40 ಅಂಕಗಳು ಇರಬೇಕು.

ಫೌಂಡೇಷನ್ ಕೋರ್ಸ್ ನಂತರ ಸಿಎ ಮಧ್ಯಂತರ (ಇಂಟರ್‌ಮೀಡಿಯೆಟ್) ಕೋರ್ಸ್‌ಗೆ ನೋಂದಾಯಿಸಬೇಕು.

ಮಧ್ಯಂತರ ಪರೀಕ್ಷೆಯ ನಂತರ ಮೂರು ವರ್ಷದ ಆರ್ಟಿಕಲ್‌ಶಿಪ್ ತರಬೇತಿಗಾಗಿ ಪ್ರಾಕ್ಟೀಸ್ ಮಾಡುತ್ತಿರುವ ಚಾರ್ಟೆಡ್ ಅಕೌಂಟೆಂಟ್ ಅವರಲ್ಲಿ ಸೇರಬೇಕು.

ಕನಿಷ್ಠ ಎರಡೂವರೆ ವರ್ಷದ ತರಬೇತಿಯ ನಂತರ, ನೀವು ಸಿಎ ಅಂತಿಮ ಪರೀಕ್ಷೆಗೆ ನೋಂದಾಯಿಸಿಕೊಳ್ಳಬಹುದು.

ಅಂತಿಮ ಪರೀಕ್ಷೆಗೆ ಮುಂಚೆ, ನಾಲ್ಕು ವಾರಗಳ ಐಟಿ ಮತ್ತು ಸಾಫ್ಟ್ ಸ್ಕಿಲ್ ಕೋರ್ಸ್ ಮಾಡಿರಬೇಕು. ಒಟ್ಟಾರೆ, ಎಸ್‌ಎಸ್‌ಎಲ್‌ಸಿ ನಂತರ ಸಿಎ ಕೋರ್ಸ್ ಮಾಡಲು, 6 ವರ್ಷ ಬೇಕಾಗಬಹುದು.

ಈ ವೃತ್ತಿಯಲ್ಲಿ ಯಶಸ್ವಿಯಾಗಲು ನಿಷ್ಠೆ, ಪ್ರಾಮಾಣಿಕತೆಯ ಜೊತೆಗೆ ಸಂಖ್ಯಾ ಕೌಶಲ, ವಿಶ್ಲೇಷಣಾತ್ಮಕ ಕೌಶಲ, ಆರ್ಥಿಕ ನಿರ್ವಹಣೆ ಮತ್ತು ವ್ಯಾಪಾರೋದ್ಯಮ ಕೌಶಲಗಳನ್ನು ಬೆಳೆಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ, ಈ ವಿಡಿಯೊ ವೀಕ್ಷಿಸಿ: https://www.youtube.com/c/EducationalExpertManagementCareerConsultant

2. ನನ್ನ ಮಗ 12ನೇ ತರಗತಿ (ಸಿಬಿಎಸ್‌ಇ) ಫಲಿತಾಂಶಕ್ಕಾಗಿ ಕಾಯುತ್ತಿದ್ದು, ಮರೀನ್ ಎಂಜಿನಿಯರಿಂಗ್ ಓದಲು ಉತ್ಸುಕನಾಗಿದ್ದಾನೆ. ಪೊಷಕರಿಗಿರುವ ಸಹಜ ಆತಂಕದಿಂದ ನಾವು ಹೊರತಾಗಿಲ್ಲ. ಇದರ ಬಗ್ಗೆ ಸ್ವಲ್ಪ ಮಾಹಿತಿ ದೊರೆಯಬಹುದೇ?

ಲೋಕೇಶ್, ಕನಕಪುರ

ಮಕ್ಕಳ ಭವಿಷ್ಯದ ಬಗ್ಗೆ ಪೋಷಕರ ಆಸಕ್ತಿ, ಆತಂಕ ಇವೆಲ್ಲವೂ ಸಾಮಾನ್ಯ. ಮರೀನ್ ಎಂಜಿನಿಯರಿಂಗ್‌ನಲ್ಲಿ ಇನ್ನಿತರ ಎಂಜಿನಿಯರಿಂಗ್ ವಿಜ್ಞಾನಗಳಾದ ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್, ಪೆಟ್ರೋಲಿಯಮ್ ಇತ್ಯಾದಿ ತಂತ್ರಜ್ಞಾನವನ್ನು ಹಡಗುಗಳು ಮತ್ತು ಜಲನೌಕೆಗಳ ಸಂಚಲನೆ, ಆನ್‌ಬೋರ್ಡ್ ಸಿಸ್ಟಮ್‌ಗಳು, ತೈಲದ ರಿಗ್‌ಗಳು ಮತ್ತು ಸಾಗರಶಾಸ್ತ್ರದ ಅಭಿವೃದ್ಧಿ, ವಿನ್ಯಾಸ, ಕಾರ್ಯಾಚರಣೆ ಮತ್ತು ನಿರ್ವಹಣೆಯಲ್ಲಿ ಉಪಯೋಗಿಸಲಾಗುತ್ತದೆ. ಇಂದು, ಜಾಗತಿಕ ವ್ಯಾಪಾರ, ವಾಣಿಜ್ಯ ಅತ್ಯುನ್ನತ ಮಟ್ಟಕ್ಕೆ ಅಭಿವೃದ್ಧಿಯಾಗಿರುವುದರ ಹಿಂದೆ ಮರೀನ್ ಎಂಜಿನಿಯರಿಂಗ್‌ನ ತಾಂತ್ರಿಕ ಅದ್ಭುತಗಳ ಕೊಡುಗೆ ಗಮನಾರ್ಹ.

ಈ ಕೋರ್ಸ್ ಮುಗಿದ ನಂತರ, ಖಾಸಗಿ ಮತ್ತು ಸರ್ಕಾರಿ ಹಡಗು ಕಂಪನಿಗಳು, ಜಲನೌಕೆಗಳ ವಿನ್ಯಾಸ, ನಿರ್ಮಾಣ ಮತ್ತು ಎಂಜಿನ್ ಉತ್ಪಾದನಾ ಸಂಸ್ಥೆಗಳಲ್ಲಿ ವೃತ್ತಿಯ ಆಯ್ಕೆಗಳನ್ನು ಮಾಡಿಕೊಳ್ಳಬಹುದು. ಈ ಕ್ಷೇತ್ರದಲ್ಲಿ ಕೆಲಸದ ಶೈಲಿ, ನಿಯಮಗಳು ಸಂಪೂರ್ಣವಾಗಿ ವಿಭಿನ್ನ ಮತ್ತು ಕೆಲಸ ಸಾಮಾನ್ಯವಾಗಿ ಹಡಗುಗಳಲ್ಲಿಯೇ; ಇದರ ಪರಿಣಾಮವಾಗಿ, ವೃತ್ತಿ ಮತ್ತು ವೈಯಕ್ತಿಕ ಜೀವನದ ಸಮತೋಲನವನ್ನು ಸಾಧಿಸುವುದು ಸವಾಲಾಗಬಹುದು. ಹಾಗಾಗಿ, ಉದ್ಯೋಗಿಗಳಿಗೆ ಅಕರ್ಷಕ ಸಂಬಳ, ಭತ್ಯೆ, ನಿವೃತ್ತಿ ವೇತನ ಮತ್ತು ಇನ್ನಿತರ ಸವಲತ್ತುಗಳು ಇರುವುದು ಸಾಮಾನ್ಯ.

ಇವೆಲ್ಲಾ ಅಂಶಗಳನ್ನು ಪರಿಗಣಿಸಿ, ವೃತ್ತಿಯೋಜನೆಯನ್ನು ಮಾಡಿ ಅದರಂತೆ ಕೋರ್ಸ್ ಆಯ್ಕೆ ಮಾಡುವುದು ಸೂಕ್ತ. ಹೆಚ್ಚಿನ ಮಾರ್ಗದರ್ಶನಕ್ಕಾಗಿ, ಈ ವಿಡಿಯೊ ವೀಕ್ಷಿಸಿ:https://www.youtube.com/watch?v=oyUMPrEKPPU

3. ಸ್ವಲ್ಪ ದಿನಗಳ ಹಿಂದೆ, ಪ್ರಧಾನಮಂತ್ರಿಯವರು ಕೇಂದ್ರ ಸರ್ಕಾರದಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ವಿವಿಧ ಇಲಾಖೆಯಲ್ಲಿನ 10 ಲಕ್ಷ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದಿದ್ದಾರೆ. ಈ ಕುರಿತು ಈ ವರ್ಷವಾದರೂ, ಎನ್‌ಆರ್‌ಎ ಅಡಿಯಲ್ಲಿ ಪರೀಕ್ಷೆಯನ್ನು ನಡೆಸುವ ಸಾಧ್ಯತೆ ಇದೆಯೇ? ಕಳೆದ ಒಂದೆರೆಡು ವರ್ಷಗಳಿಂದ ಎನ್‌ಆರ್‌ಎ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಆದರೆ, ಇದರ ಬಗ್ಗೆ ಅಧಿಕೃತವಾಗಿ ಏನೂ ತಿಳಿಯದ ಕಾರಣ, ಹೆಚ್ಚಿನ ಮಾಹಿತಿ ಇದ್ದರೆ ತಿಳಿಸಿ.

ರಾಜೇಶ್ ದಳವಾಯಿ, ಸಿದ್ದಾಪುರ.

ಎನ್‌ಆರ್‌ಎ (ನ್ಯಾಷನಲ್ ರೆಕ್ರೂಟ್‌ಮೆಂಟ್ ಏಜೆನ್ಸಿ) ಸ್ಥಾಪಿಸುವ ಮೊದಲು, ಭಾರತೀಯ ರೈಲ್ವೆ, ಇತರ ಇಲಾಖೆಗಳು, ಸಚಿವಾಲಯಗಳು, ಸಂಸ್ಥೆಗಳು ಮತ್ತು ಕೇಂದ್ರ ಸರ್ಕಾರದ ಸರ್ಕಾರಿ ಸೇವೆಗಳ ಅಡಿಯಲ್ಲಿ ಗ್ರೂಪ್ ಬಿ, ಗ್ರೂಪ್ ಸಿ ಮತ್ತು ಗ್ರೂಪ್ ಡಿ (ನಾನ್-ಗೆಜೆಟೆಡ್) ಹುದ್ದೆಗಳಿಗೆ ನೇಮಕಾತಿ ಪರೀಕ್ಷೆಗಳನ್ನು ಪ್ರತ್ಯೇಕವಾಗಿ ಮಾಡಲಾಗುತ್ತಿತ್ತು. ಹೆಚ್ಚಿನ ಹುದ್ದೆಗಳಿಗೆ ಒಂದೇ ರೀತಿಯ ಅರ್ಹತೆಯ ಅಗತ್ಯವನ್ನು ಮನಗಂಡು ಎನ್‌ಆರ್‌ಎ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಇದರಿಂದ ಸರ್ಕಾರಿ ಸಂಸ್ಥೆಗಳ ಬಹುತೇಕ ಹುದ್ದೆಗಳನ್ನು ಅರಸುವ ಅಭ್ಯರ್ಥಿಗಳಿಗೆ ಒಂದೇ ಪರೀಕ್ಷೆಯ ಸೌಲಭ್ಯ ದೊರಕ ಲಿದೆ. ಎನ್‌ಆರ್‌ಎ ನಿರ್ವಹಿಸುವ ಮೊದಲ ಸಿಇಟಿ ಪರೀಕ್ಷೆ, ಈ ವರ್ಷದ ಅಕ್ಟೋಬರ್-ಡಿಸೆಂಬರ್‌ನಲ್ಲಿ ನಡೆಯುವ ನಿರೀಕ್ಷೆಯಿದೆ.

4. ಎರಡನೇ ವರ್ಷದ ಪದವಿ ಓದುತ್ತಿದ್ದೇನೆ. ಸರ್ಕಾರಿ ನೌಕರಿಗೆ ಆಯ್ಕೆಯಾಗಿದ್ದೇನೆ ಮತ್ತು ನೌಕರಿ ಮಾಡಬೇಕೆಂದಿದ್ದೇನೆ. ಹಾಗಾಗಿ, ನಾನು ಪದವಿಯನ್ನು ಹೇಗೆ ಪೂರ್ಣಗೊಳಿಸಬಹುದು? ನಾನು ಎನ್‌ಇಪಿ ವಿದ್ಯಾರ್ಥಿಯಲ್ಲ; ದೂರಶಿಕ್ಷಣ ಅಥವಾ ರೆಗ್ಯುಲರ್ ಶಿಕ್ಷಣದ ಮೂಲಕ ಮುಗಿಸಬೇಕೇ?

ಹೆಸರು, ಊರು ತಿಳಿಸಿಲ್ಲ.

ನೀವು ಈಗ ಮಾಡುತ್ತಿರುವ ಪದವಿಯ ಕುರಿತು ನೀಡಿರುವ ಇಷ್ಟೇ ಮಾಹಿತಿಯಿಂದ, ನಿಮ್ಮ ಪ್ರಶ್ನೆಗೆ ನಿರ್ದಿಷ್ಟವಾಗಿ ಉತ್ತರಿಸಲಾಗದು. ಆದ್ದರಿಂದ, ನೀವು ಪದವಿ ಕೋರ್ಸ್ ಮಾಡುತ್ತಿರುವ ವಿಶ್ವವಿದ್ಯಾಲಯದಿಂದ ದೂರ ಶಿಕ್ಷಣ ಬ್ಯೂರೊ, ಯುಜಿಸಿ ಮಾನ್ಯತೆ ಪಡೆದಿರುವ, ನೀವು ಬಯಸುವ ದೂರ ಶಿಕ್ಷಣ ವಿಶ್ವವಿದ್ಯಾಲಯಕ್ಕೆ, ನೀವು ಈವರೆಗೆ ಪಡೆದಿರುವ ಕ್ರೆಡಿಟ್ ವರ್ಗಾವಣೆ ಆಗುತ್ತದೆಯೇ ಎಂದು ಪರಿಶೀಲಿಸಿ. ಈ ಸಾಧ್ಯತೆಯಿದ್ದಲ್ಲಿ, ಪದವಿಯನ್ನು ದೂರ ಶಿಕ್ಷಣದ ಮೂಲಕ ಪೂರ್ಣಗೊಳಿಸಬಹುದು.

5. ನಾನು ಪ್ರಥಮ ವರ್ಷದ ಬಿ.ಎಸ್ಸಿ ( ಸಿಬಿಝೆಡ್) ಓದುತ್ತಿದ್ದೇನೆ, ಅದರೊಳಗೆ, ಹೊಸ ಎನ್‌ಇಪಿ ಪ್ರಕಾರ ( ಬಿ, ಝೆಡ್) ಆಯ್ಕೆ ಮಾಡಿಕೊಂಡಿದ್ದು, ಮುಂದೆ ಜೆಎಎಮ್ ಮೂಲಕ ಓದಬೇಕೆಂಬ ಆಸೆಯಿದೆ, ಆದರೆ, ಕೆಲವರು ನೀನು ತೆಗೆದುಕೊಂಡ ವಿಷಯಗಳಲ್ಲಿ ಅವಕಾಶಗಳು ಕಡಿಮೆ ಎಂದು ಹೇಳುತ್ತಾರೆ. ಈ ಕೋರ್ಸ್ ನಂತರ, ಮುಂದಿನ ಉದ್ಯೋಗಾವಕಾಶಗಳ ಬಗ್ಗೆ ತಿಳಿಸಿಕೊಡಿ.

ಹೆಸರು, ಊರು ತಿಳಿಸಿಲ್ಲ.

ಪ್ರಸ್ತುತ ವಿದ್ಯಾರ್ಥಿಗಳು, ‘ಮೊದಲು ಕೋರ್ಸ್, ನಂತರ ವೃತ್ತಿ‘ ಎಂಬ ಪದ್ಧತಿ ಅನುಸರಿಸುತ್ತಿದ್ದಾರೆ. ಆದರೆ, ಇನ್ನು ಮುಂದೆ ‘ಮೊದಲು ವೃತ್ತಿಯ ಆಯ್ಕೆ, ನಂತರ ಕೋರ್ಸ್ ಆಯ್ಕೆ‘ ಎಂದು ಬದಲಾಯಿಸಿಕೊಳ್ಳಬೇಕಿದೆ. ಕೋರ್ಸ್ ಆಯ್ಕೆಗೆ ಮುನ್ನ ಯಾವ ವೃತ್ತಿಗೆ ಸೇರಬೇಕೆಂದು ನಿಶ್ಚಯಿಸಿ, ವೃತ್ತಿ ಯೋಜನೆಯನ್ನು ಮಾಡಬೇಕು.

ನಿಮ್ಮ ವೈಯಕ್ತಿಕ ಸಾಮರ್ಥ್ಯ ಮತ್ತು ಅಭಿರುಚಿಯನ್ನು ಅರಿತು, ಯಾವ ವೃತ್ತಿ ಸರಿಹೊಂದಬಹುದೆಂದು ಅಂದಾಜಿಸಿ.
ಅಂತಹ ವೃತ್ತಿಜೀವನದ ಬಗ್ಗೆ ಸಂಶೋಧನೆ ನಡೆಸಿ, ದೀರ್ಘಾವಧಿಯಲ್ಲೂ ಆ ವೃತ್ತಿಗೆ ಬೇಡಿಕೆ ಇರುತ್ತದೆಯೇ ಎಂದು ಖಚಿತಮಾಡಿಕೊಳ್ಳಿ. ವೃತ್ತಿಯ ಮತ್ತು ವೈಯಕ್ತಿಕ ಬದುಕಿನ ಧ್ಯೇಯಗಳನ್ನು ನಿಶ್ಚಯಿಸಿ, ಶಿಕ್ಷಣದ ಅವಶ್ಯಕತೆಗಳನ್ನು ತೀರ್ಮಾನಿಸಿ. ಅದರಂತೆ, ಆಯ್ಕೆ ಮಾಡಿದ ಕೋರ್ಸಿಗೆ ಬೇಕಾದ ಪ್ರವೇಶ ಪರೀಕ್ಷೆಗೆ ತಯಾರಾಗಿ.

ದೇಶದ ಪ್ರತಿಷ್ಟಿತ ವಿದ್ಯಾ ಸಂಸ್ಥೆಗಳಾದ ಐಐಟಿ ಗಳಲ್ಲಿ ಎಂ.ಎಸ್ಸಿ ಪ್ರವೇಶಕ್ಕೆ ಜೆಎಎಮ್ (ಜಾಯಿಂಟ್ ಅಡ್ಮಿಷನ್ ಟೆಸ್ಟ್ ಮಾಸ್ಟರ್ಸ್) ಪರೀಕ್ಷೆಯನ್ನು ನಡೆಸಲಾಗುತ್ತದೆ. ಐಐಟಿ ಗಳಂತಹ ಸಂಸ್ಥೆಗಳಲ್ಲಿ ಎಂ.ಎಸ್ಸಿ ಪದವಿಯನ್ನು ಮಾಡಿದ ನಂತರ ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಆಕರ್ಷಕ ಉದ್ಯೋಗಾವಕಾಶಗಳಿರುತ್ತವೆ.

ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://jam.iitr.ac.in/available-courses.html

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.