ಬಾಲಿವುಡ್ ನಟಿ ದೀಪಿಕಾ ಪಡುಕೋಣೆ
ನವದೆಹಲಿ: ‘ಮಾನಸಿಕ ಒತ್ತಡಕ್ಕೆ ಕಾರಣ ಕಂಡುಕೊಳ್ಳಿ, ಅದನ್ನು ನೀವು ನಂಬುವವರ ಜತೆ ಹಂಚಿಕೊಳ್ಳಿ, ಪರೀಕ್ಷೆಯ ಹಿಂದಿನ ದಿನ ರಾತ್ರಿ ನಿಮ್ಮ ಪೋಷಕರೊಂದಿಗೆ ಮಾತನಾಡಿ’ ಎಂದು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮಕ್ಕಳಿಗೆ ಸಲಹೆ ನೀಡಿದರು.
ಪ್ರಧಾನ ಮಂತ್ರಿ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಪರೀಕ್ಷೆಯನ್ನು ಎದುರಿಸಲಿರುವ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ನಟಿ, ಪರೀಕ್ಷೆಯ ಸಮಯದಲ್ಲಿ ಒತ್ತಡವನ್ನು ಹೇಗೆ ನಿಭಾಯಿಸಬೇಕು, ಮಾನಸಿಕ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಎನ್ನುವ ಕುರಿತು ತಿಳಿ ಹೇಳಿದರು.
‘ಇತರರೊಂದಿಗೆ ಸ್ಪರ್ಧೆ ಮತ್ತು ಹೋಲಿಕೆ ಜೀವನದಲ್ಲಿ ಸಹಜ. ನಮ್ಮ ಬಲ ಮತ್ತು ದೌರ್ಬಲ್ಯವನ್ನು ಕಂಡುಕೊಳ್ಳಬೇಕು. ನಮ್ಮ ಬಲವನ್ನು ಇನ್ನಷ್ಟು ಉತ್ತಮಗೊಳಿಸಿಕೊಂಡು, ದೌರ್ಬಲ್ಯದಿಂದ ಹೊರಬರಲು ಅಗತ್ಯವಾದ ಕ್ರಮಗಳನ್ನು ತೆಗೆದುಕೊಂಡರೆ ಸ್ಪರ್ಧೆಯನ್ನು ಎದುರಿಸಬಹುದು’ ಎಂದರು.
ಸಂವಾದದ ವೇಳೆ ತಾವು ಮಾನಸಿಕ ಖಿನ್ನತೆಗೆ ಒಳಗಾದ ಸಮಯದಲ್ಲಿ ಅನುಭವಿಸಿದ ಕಷ್ಟವನ್ನು ಹಂಚಿಕೊಂಡ ದೀಪಿಕಾ, ನಮ್ಮದೇ ಶಕ್ತಿಯಿಂದ ಖುಷಿಯನ್ನು ಹುಡುಕಿಕೊಳ್ಳಬೇಕು ಎಂದರು.
‘ಭಾರತದಲ್ಲಿ ಮಾನಸಿಕ ಆರೋಗ್ಯಕ್ಕೆ ಪ್ರಾಮುಖ್ಯತೆ ಕೊಡದ ಕಾಲವೊಂದಿತ್ತು. ಮಾನಸಿಕ ಆರೋಗ್ಯವನ್ನು ಕಳಂಕದ ರೀತಿ ನೋಡುತ್ತಿದ್ದರು. ನನ್ನ ಮಾನಸಿಕ ಸಮಸ್ಯೆಯ ಬಗ್ಗೆ ನನ್ನವರೊಂದಿಗೆ ಮಾತನಾಡಿದಾಗ ಮನಸ್ಸು ಹಗುರವಾದ ಅನುಭವಾಗುತ್ತಿತ್ತು. ಹೀಗಾಗಿ ಅಲ್ಲಿಂದ ಮಾನಸಿಕ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಅಭಿಯಾನ ಆರಂಭಿಸಿದೆ. ಖಿನ್ನತೆ, ಆತಂಕ, ಒತ್ತಡ ಯಾರಿಗೆ ಬೇಕಾದರೂ, ಯಾವಾಗ ಬೇಕಾದರೂ ಆಗಬಹುದು. ಮಾನಸಿಕ ಖಿನ್ನತೆ ಎನ್ನುವುದು ಅಗೋಚರ ಕಾಯಿಲೆ’ ಎಂದು ವಿವರಿಸಿದರು.
ಇದೇ ವೇಳೆ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ‘ಚೆನ್ನಾಗಿ ನಿದ್ದೆ ಮಾಡಿ, ವ್ಯಾಯಾಮದ ಅಭ್ಯಾಸವಿರಲಿ, ಚೆನ್ನಾಗಿ ನೀರು ಕುಡಿಯಿರಿ, ಹಿತವಾದ ಗಾಳಿಯಲ್ಲಿ ನಡೆದಾಡಿ ಮತ್ತು ಧ್ಯಾನವನ್ನು ಮಾಡಿ’ ಎಂದು ಸಲಹೆಗಳನ್ನು ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.