ತಂದೆ ಬಸವರಾಜ ಹಾಗೂ ತಾಯಿ ವಿನೋದ ಜೊತೆಗೆ ಡಾ.ಸಚಿನ್
ದಾವಣಗೆರೆ: ಕೇಂದ್ರೀಯ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸಿದ ನಾಗರಿಕ ಸೇವಾ ಪರೀಕ್ಷೆಯಲ್ಲಿ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಕೋಡಿಯಾಲ ಹೊಸಪೇಟೆ ಗ್ರಾಮದ ವೈದ್ಯ ಡಾ.ಸಚಿನ್ ಬಿ. ಗುತ್ತೂರು 41 ನೇ ರ‍್ಯಾಂಕ್ ಪಡೆದಿದ್ದಾರೆ. 4ನೇ ಪ್ರಯತ್ನದಲ್ಲಿ ಕನಸು ನನಸಾಗಿಸಿಕೊಂಡಿದ್ದಾರೆ.
ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ಸು ಪಡೆಯಬೇಕು ಎಂಬ ಸೆಳೆತದಿಂದ ವೈದ್ಯಕೀಯ ವೃತ್ತಿಯನ್ನು ಮೊಟಕುಗೊಳಿಸಿದ ಸಚಿನ್, ಕೊನೆಗೂ ಗುರಿ ಮುಟ್ಟಿದ್ದಾರೆ. ದಾವಣಗೆರೆಯ ಜೆಜೆಎಂ ವೈದ್ಯಕೀಯ ಕಾಲೇಜಿನಿಂದ 2019ರಲ್ಲಿ ಅವರು ವೈದ್ಯಕೀಯ ಪದವಿ ಪಡೆದಿದ್ದರು.
ಕೋಡಿಯಾಲ ಹೊಸಪೇಟೆ ಗ್ರಾಮದ ಬಸವರಾಜ ಗುತ್ತೂರು ಹಾಗೂ ವಿನೋದ ದಂಪತಿಯ ಇಬ್ಬರು ಪುತ್ರರಲ್ಲಿ ಡಾ.ಸಚಿನ್ ಹಿರಿಯವರು. ಗ್ರಾಮದ ಸಮೀಪದ ಮೈಸೂರು ಕಿರ್ಲೋಸ್ಕರ್ ಶಿಕ್ಷಣ ಸಂಸ್ಥೆಯಲ್ಲಿ (ಎಂಕೆಇಟಿ) 10ನೇ ತರಗತಿ ವರೆಗೆ ವ್ಯಾಸಂಗ ಮಾಡಿದ ಸಚಿನ್, ದಾವಣಗೆರೆಯ ವೈಷ್ಣವಿ ಚೇತನಾ ಪದವಿ ಪೂರ್ವ ಕಾಲೇಜಿನಲ್ಲಿ ಪಿಯು ಶಿಕ್ಷಣ ಪಡೆದರು.
‘ಹಳ್ಳಿಯಲ್ಲೇ ಹುಟ್ಟಿ ಬೆಳೆದ ನನಗೆ ಐಎಎಸ್ ಅಧಿಕಾರಿಯಾಗಬೇಕು ಎಂಬ ಹಂಬಲ ಚಿಕ್ಕಂದಿನಿಂದಲೂ ಇತ್ತು. ನಮ್ಮ ಕುಟುಂಬದಲ್ಲಿ ಪದವಿವರೆಗೆ ಶಿಕ್ಷಣ ಪಡೆದ ಮೊದಲಿಗ ನಾನು. ತಂದೆಯ ಅಪೇಕ್ಷೆಯಂತೆ ವೈದ್ಯಕೀಯ ಶಿಕ್ಷಣ ಪಡೆದ ಬಳಿಕ ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ಆರಂಭಿಸಿದೆ’ ಎಂದು ಸಂತಸ ಹಂಚಿಕೊಂಡರು ಡಾ.ಸಚಿನ್.
ಯುಪಿಎಸ್‌ಸಿ ಪರೀಕ್ಷೆಗೆ ತರಬೇತಿ ಪಡೆಯಲು ಸಚಿನ್ 2019ರಲ್ಲಿ ದೆಹಲಿಗೆ ತೆರಳಿದರು. ಕೋವಿಡ್ ಕಾರಣಕ್ಕೆ ಕೆಲವೇ ತಿಂಗಳಲ್ಲಿ ಅವರು ಊರಿಗೆ ಮರಳಬೇಕಾಯಿತು. ಪರೀಕ್ಷೆಯ ಮೊದಲ ಯತ್ನವನ್ನು ಬೆಂಗಳೂರಿನಲ್ಲಿ ನಡೆಸಿದ ಅವರು ಮತ್ತೆ ದೆಹಲಿಗೆ ತೆರಳಿದರು. ಮಾನವಶಾಸ್ತ್ರವನ್ನು ಐಚ್ಛಿಕ ವಿಷಯವಾಗಿ ಆಯ್ಕೆ ಮಾಡಿಕೊಂಡು ಪರೀಕ್ಷೆ ಎದುರಿಸಿದರು.
‘ಮೂರು ಪ್ರಯತ್ನದಲ್ಲಿ ಯಶಸ್ಸು ಸಿಗದೇ ಇದ್ದಾಗ ಬೇಸರವಾಗಿತ್ತು. ಮುಖ್ಯ ಪರೀಕ್ಷೆ ಬರೆದರೂ ಸಂದರ್ಶನದವರಗೆ ತಲುಪಲು ಸಾಧ್ಯವಾಗಿರಲಿಲ್ಲ. ಮಾನಸಿಕವಾಗಿ ಕುಗ್ಗದೇ ತಪ್ಪುಗಳನ್ನು ಸರಿಪಡಿಸಿಕೊಂಡು ಮರಳಿ ಪ್ರಯತ್ನಿಸಿದೆ. ಪಾಲಕರ ಬೆಂಬಲದಿಂದ ಯಶಸ್ಸು ಸಾಧ್ಯವಾಯಿತು’ ಎಂದು ಡಾ.ಸಚಿನ್ ತಿಳಿಸಿದರು.
ಸಚಿನ್ ತಂದೆ ಬಸವರಾಜ ಅವರು ಇಟ್ಟಿಗೆ ಉದ್ಯಮಿ. ಕೃಷಿ ಜೊತೆಗೆ ಇಟ್ಟಿಗೆ ಭಟ್ಟಿಯನ್ನು ನಡೆಸುತ್ತಿದ್ದಾರೆ. ಪುತ್ರರು ಉನ್ನತ ಹುದ್ದೆಗೆ ಏರಬೇಕು ಎಂಬ ನಿಟ್ಟಿನಲ್ಲಿ ಸದಾ ಪ್ರೋತ್ಸಾಹ ನೀಡಿದ್ದಾರೆ. ದಾವಣಗೆರೆ ಜಿಲ್ಲೆಯ ಗಡಿಗೆ ಹೊಂದಿಕೊಂಡ ಕೋಡಿಯಾಲ ಹೊಸಪೇಟೆ ಗ್ರಾಮದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ.
‘ಪುತ್ರ ವೈದ್ಯನಾಗಬೇಕು ಎಂಬುದು ನನ್ನ ಅಪೇಕ್ಷೆಯಾಗಿತ್ತು. ವೈದ್ಯಕೀಯ ಶಿಕ್ಷಣದ ಬಳಿಕ ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸುವ ನಿರ್ಧಾರವನ್ನು ಪುತ್ರ ಕೈಗೊಂಡನು. ಐದು ವರ್ಷಗಳಿಂದ ಹಗಲು–ಇರುಳು ಕಷ್ಟಪಟ್ಟಿದ್ದಾನೆ. ಇದರ ಪ್ರತಿಫಲ ಈಗ ದೊರಕಿದೆ’ ಎಂದು ಸಚಿನ್ ತಂದೆ ಬಸವರಾಜ ಅವರು ಹರ್ಷ ವ್ಯಕ್ತಪಡಿಸಿದರು.
ಯುಪಿಎಸ್‌ಸಿ ಪರೀಕ್ಷೆ ಬಗ್ಗೆ ಭಯ ಬೇಡ. ಇದು ಭಯ ಹುಟ್ಟಿಸುವ ಪರೀಕ್ಷೆ ಖಂಡಿತ ಅಲ್ಲ. ಸರಿಯಾದ ಮಾರ್ಗದಲ್ಲಿ ಸಿದ್ಧತೆ ನಡೆಸಬೇಕುಡಾ.ಸಚಿನ್ ಗುತ್ತೂರು, ಯುಪಿಎಸ್‌ಸಿ ಪರೀಕ್ಷೆಯ 41ನೇ ರ‍್ಯಾಂಕ್
ಡಾ.ಸಚಿನ್ ಬಿ. ಗುತ್ತೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.