ಮುಂಬೈ: ಲೋಕಸಭೆ ಚುನಾವಣೆಯ ಐದನೇ ಹಂತದ ಮತದಾನ ನಡೆಯುತ್ತಿದ್ದರೂ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ, ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಪತ್ರಿಕಾಗೋಷ್ಠಿ ನಡೆಸುವ ಮೂಲಕ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ, ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಸೋಮವಾರ ಸಂಜೆ 5 ಗಂಟೆ ಸುಮಾರಿಗೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ಠಾಕ್ರೆ, ‘ಮುಂಬೈನ ಹಲವು ಸ್ಥಳಗಳಲ್ಲಿ ಮತದಾನ ಪ್ರಕ್ರಿಯೆ ವಿಳಂಬವಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಆದೇಶದ ಮೇರೆಗೆ ಚುನಾವಣಾ ಆಯೋಗವು ಉದ್ದೇಶಪೂರ್ವಕವಾಗಿ ಹೀಗೆ ಮಾಡುತ್ತಿದೆ ಎಂದು ಆರೋಪಿಸಿದ್ದರು. ಅದರಲ್ಲೂ ಪ್ರತಿಪಕ್ಷಗಳು ಪ್ರಬಲವಾಗಿರುವ ಪ್ರದೇಶಗಳಲ್ಲಿ ಮತದಾನ ನಿಧಾನಗತಿಯಲ್ಲಿ ನಡೆದಿದೆ’ ಎಂದೂ ದೂರಿದ್ದರು.
‘ಮತದಾನ ನಡೆಯುತ್ತಿರುವಾಗಲೇ ಪತ್ರಿಕಾಗೋಷ್ಠಿ ನಡೆಸುವ ಮೂಲಕ ಉದ್ಧವ್ ಠಾಕ್ರೆ ಅವರು ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಘಟನೆ ಸಂಬಂಧ ಅವರ ವಿರುದ್ಧ ಕ್ರಮ ಜರುಗಿಸುವಂತೆ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ’ ಎಂದು ಮುಂಬೈ ಬಿಜೆಪಿ ಘಟಕದ ಅಧ್ಯಕ್ಷ ಆಶಿಶ್ ಶೇಲಾರ್ ಹೇಳಿದ್ದಾರೆ.
‘ಠಾಕ್ರೆ ಅವರು ಮೋದಿ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡಿದ್ದಾರೆ. ಜತೆಗೆ, ಮಹಾರಾಷ್ಟ್ರ ಸರ್ಕಾರವು ಚುನಾವಣಾ ಆಯೋಗದ ಮೇಲೆ ಪ್ರಭಾವ ಬೀರುತ್ತಿದೆ ಎಂದು ಹೇಳುವ ಮತದಾರರನ್ನು ತಪ್ಪುದಾರಿಗೆ ಎಳೆಯಲು ಪ್ರಯತ್ನಿಸಿದ್ದಾರೆ. ಅವರು (ಠಾಕ್ರೆ) ಹೇಳಿಕೆಗಳು ಸುಳ್ಳು ಮತ್ತು ಮಾನಹಾನಿಕರ ಸ್ವರೂಪದಲ್ಲಿವೆ’ ಎಂದು ಶೆಲಾರ್ ವಾಗ್ದಾಳಿ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.