ರವಿ ಶಂಕರ್ ಪ್ರಸಾದ್
(ಪಿಟಿಐ ಚಿತ್ರ)
ಪಟ್ನಾ: ಉತ್ತರ ಪ್ರದೇಶದ ಅಮೇಥಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪಲಾಯನಗೈದಿದ್ದಾರೆ ಎಂದು ಬಿಜೆಪಿ ನಾಯಕ ರವಿ ಶಂಕರ್ ಪ್ರಸಾದ್ ಬುಧವಾರ ಲೇವಡಿ ಮಾಡಿದ್ದಾರೆ.
ಅಲ್ಲದೆ ಈ ಸಲ ಕೇರಳದ ವಯನಾಡು ಲೋಕಸಭಾ ಕ್ಷೇತ್ರದಲ್ಲೂ ರಾಹುಲ್ ಗಾಂಧಿಗೆ ಕಠಿಣ ಸ್ಪರ್ಧೆ ಎದುರಾಗಲಿದೆ ಎಂದು ಅವರು ಹೇಳಿದರು.
ವಯನಾಡು ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರು ಹಾಗೂ ಕ್ರಿಶ್ಚಿಯನ್ನರು ಇರುವುದರಿಂದ ರಾಹುಲ್ ಗಾಂಧಿ ತಮ್ಮ ನೆಲೆಯನ್ನು ಬದಲಾಯಿಸಿದ್ದಾರೆ ಎಂದು ಅವರು ದೂರಿದ್ದಾರೆ.
'ಅಮೇಥಿಯಿಂದ ರಾಹುಲ್ ಏಕೆ ಓಡಿ ಹೋಗಿದ್ದಾರೆ ? ಅವರ ಅಪ್ಪ ರಾಜೀವ್ ಗಾಂಧಿ ಮತ್ತು ಸಂಜಯ್ ಗಾಂಧಿ ಪ್ರತಿನಿಧಿಸಿದ್ದ ಕ್ಷೇತ್ರದಲ್ಲಿ ಕಣಕ್ಕಿಳಿಯುವ ಧೈರ್ಯವನ್ನಾದರೂ ತೋರಬೇಕಿತ್ತು' ಎಂದು ಅವರು ಸವಾಲು ಹಾಕಿದರು.
ರಾಹುಲ್ ವಿರುದ್ಧ ಕೇರಳ ಬಿಜೆಪಿ ಘಟಕದ ಅಧ್ಯಕ್ಷ ಕೆ.ಸುರೇಂದ್ರನ್ ಸ್ಪರ್ಧಿಸುತ್ತಿದ್ದಾರೆ. ಸಿಪಿಐನ ಆನಿ ರಾಜಾ ಕೂಡ ಕಣದಲ್ಲಿದ್ದಾರೆ. ಅಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವ ನಿರೀಕ್ಷೆಯಿದೆ.
2019ರ ಲೋಕಸಭೆ ಚುನಾವಣೆಯಲ್ಲಿ ಸ್ಮೃತಿ ಇರಾನಿ ವಿರುದ್ಧ ರಾಹುಲ್ ಗಾಂಧಿ ಪರಾಭವಗೊಂಡಿದ್ದರು. ಆದರೆ ವಯನಾಡು ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.