ADVERTISEMENT

ಲೋಕಸಭೆ ಚುನಾವಣೆ | 28 ಕ್ಷೇತ್ರಗಳಲ್ಲೂ ಎನ್‌ಡಿಎಗೆ ಗೆಲುವು: ಎಚ್‌ಡಿಕೆ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2024, 14:06 IST
Last Updated 4 ಏಪ್ರಿಲ್ 2024, 14:06 IST
<div class="paragraphs"><p>ಎಚ್.ಡಿ. ಕುಮಾರಸ್ವಾಮಿ</p></div>

ಎಚ್.ಡಿ. ಕುಮಾರಸ್ವಾಮಿ

   

ಮದ್ದೂರು: ‘ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲೂ ಎನ್‌ಡಿಎ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ’ ಎಂದು ಮಂಡ್ಯ ಅಭ್ಯರ್ಥಿ ಎಚ್.ಡಿ. ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದ ಬಿಜೆಪಿ ಕಚೇರಿಗೆ ಬುಧವಾರ ಭೇಟಿ ನೀಡಿದ್ದ ಅವರು, ಬಿಜೆಪಿ ಮುಖಂಡ ಹಾಗೂ ಮನ್‌ಮುಲ್ ನಿರ್ದೇಶಕ ಎಸ್.ಪಿ. ಸ್ವಾಮಿ ಅವರಿಂದ ಅಭಿನಂದನೆ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಷ್ಟ್ರದಲ್ಲಿ ಹಾಗೂ ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಪರ ಅಲೆಯಿದ್ದು ಅವರು ಮೂರನೇ ಬಾರಿಗೆ ಪ್ರಧಾನಿ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ’ ಎಂದು ತಿಳಿಸಿದರು.

ADVERTISEMENT

‘ಸುಮಲತಾ ಅಂಬರೀಷ್ ಅವರು ಬೆಂಬಲ ಘೋಷಣೆ ಮಾಡಿರುವುದು ಸ್ವಾಗತಾರ್ಹವಾಗಿದ್ದು, ಇಷ್ಟರಲ್ಲೇ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದ ಅವರು, ಬಳಿಕ ಮಂಡ್ಯ ಕ್ಷೇತ್ರದಲ್ಲಿ ಪ್ರಚಾರ ಕಾರ್ಯದಲ್ಲಿ ಭಾಗಿಯಾಗುವುದರ ಬಗ್ಗೆ ಅವರು ನಿರ್ಧರಿಸಲಿದ್ದಾರೆ’ ಎಂದರು.

ಗೃಹಸಚಿವ ಜಿ. ಪರಮೇಶ್ವರ್ ಅವರು ಮದ್ದೂರಿಗೆ ಬಂದಾಗ ಮಂಡ್ಯ ಜಿಲ್ಲೆಗೆ ಎಚ್.ಡಿ.ಕುಮಾರಸ್ವಾಮಿ ಅವರ ಕೊಡುಗೆ ಏನು ಎಂದು ಪ್ರಶ್ನಿಸಿರುವ ಬಗ್ಗೆ ಕೇಳಲಾದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಮಂಡ್ಯ ಜಿಲ್ಲೆಗೆ ನನ್ನ ಹಾಗೂ ಜೆಡಿಎಸ್‌ನ ಕೊಡುಗೆ ಏನು ಎಂದು ಜನತೆಗೆ ಗೊತ್ತಿದೆ, ಅಷ್ಟಕ್ಕೂ ಜಿಲ್ಲೆಗೆ ಅವರ ಹಾಗೂ ಅವರ ಪಕ್ಷದ ಕೊಡುಗೆ’ ಏನು ಎಂದು ಮರು ಪ್ರಶ್ನಿಸಿದರು.

ನಂತರ ಗ್ರಾಮದೇವತೆ ಮದ್ದೂರಮ್ಮ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ದೇವಸ್ಥಾನದ ಬಳಿಯಿರುವ ಮಾಜಿ ಶಾಸಕ ದಿ.ಎಂ.ಎಸ್. ಸಿದ್ದರಾಜು ಅವರ ಸಮಾಧಿಗೆ ಪೂಜೆ ಸಲ್ಲಿಸಿ ಹತ್ತಿರದಲ್ಲೇ ಇರುವ ಮಾಜಿ ಶಾಸಕಿ ಕಲ್ಪನಾ ಸಿದ್ದರಾಜು ಅವರ ನಿವಾಸಕ್ಕೆ ಭೇಟಿ ನೀಡಿ ಅವರೊಂದಿಗೆ ಕೆಲಕಾಲ ಮಾತುಕತೆ ನಡೆಸಿದರು.

ನಂತರ ಸೋಮನಹಳ್ಳಿಯಲ್ಲಿರುವ ದಿ.ಎಸ್.ಎಂ.ಶಂಕರ್ ಅವರ ಸಮಾಧಿಗೆ ಪೂಜೆ ಸಲ್ಲಿಸಿದ ಬಳಿಕ ಮುಖಂಡ ಎಸ್.ಗುರುಚರಣ್ ಅವರ ನಿವಾಸಕ್ಕೆ ಭೇಟಿ ನೀಡಿದರು.

ಈ ವೇಳೆ ಮಾಜಿ ಶಾಸಕ ಡಿ.ಸಿ ತಮ್ಮಣ್ಣ, ಮನ್‌ಮುಲ್ ನಿರ್ದೇಶಕ ಎಸ್.ಪಿ ಸ್ವಾಮಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಇಂದ್ರೇಶ್, ಬೋರಯ್ಯ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.