ADVERTISEMENT

ಪಕ್ಷೇತರ ಅಭ್ಯರ್ಥಿಗೆ ಹಿರಿ ಮಗನೋ, ಕಿರಿ ಮಗನೋ: ಯಶ್‌ ವಿರುದ್ಧ ನಿಖಿಲ್‌ ವಾಗ್ದಾಳಿ

ನಾಗಮಂಗಲ ತಾಲ್ಲೂಕಿನಲ್ಲಿ ಅಬ್ಬರದ ಪ್ರಚಾರ

​ಪ್ರಜಾವಾಣಿ ವಾರ್ತೆ
Published 2 ಮೇ 2019, 11:53 IST
Last Updated 2 ಮೇ 2019, 11:53 IST
   

ಮಂಡ್ಯ: ಯುಗಾದಿ ಹಬ್ಬದ ನಂತರ ಜೆಡಿಎಸ್‌– ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿ ಕೆ.ನಿಖಿಲ್‌ ಕ್ಷೇತ್ರದಾದ್ಯಂತ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಸೋಮವಾರ ನಾಗಮಂಗಲ ತಾಲ್ಲೂಕಿನ ಬೆಳ್ಳೂರಿನಲ್ಲಿ ಪ್ರಚಾರ ನಡೆಸಿದ ಅವರು ಚಿತ್ರನಟರಾದ ಯಶ್‌ ವಿರುದ್ಧ ವಾಗ್ದಾಳಿ ನಡೆಸಿದರು.

‘ಎ.ಸಿಯಲ್ಲಿ ಕುಳಿತು ಛತ್ರಿ ಹಿಡಿದು ಓಡಾಡುವವರಿಗೆ ಬಿಸಿಲಲ್ಲಿ ಕಷ್ಟವಾಗುತ್ತಿರಬಹುದು ಎಂದು ಹೇಳಿಕೆ ನೀಡಿದ್ದಾರೆ. ಕುಮಾರಣ್ಣನ ಹೇಳಿಕೆಗೆ ಪ್ರತಿಕ್ರಿಯೆ ಕೊಟ್ಟಿದ್ದಾರಂತೆ. ಅವರು ಬಿಜೆಪಿ ಬೆಂಬಲಿತ ಅಭ್ಯರ್ಥಿಯ ಹಿರಿ ಮಗನೋ, ಕಿರಿ ಮಗನೋ ಮಗನೋ ಎಂಬುದನ್ನು ಸ್ಪಷ್ಟಪಡಿಸಬೇಕು. ನನ್ನ ಯೋಗ್ಯತೆ ಬಗ್ಗೆ ಪ್ರಶ್ನೆ ಮಾಡಲು ಅವರಾರು’ ಎಂದು ಪ್ರಶ್ನಿಸಿದರು.

‘ನಮ್ಮ ತಾತ ದೇಶದ ಪ್ರಧಾನಮಂತ್ರಿಯಾಗಿದ್ದಾಗ ನಾವು ಬಾಡಿಗೆ ಮನೆಯಲ್ಲಿ ಇದ್ದೆವು. ಪ್ರತಿ ತಿಂಗಳು ₹ 5 ಸಾವಿರ ಬಾಡಿಗೆ ಕಟ್ಟುತ್ತಿದ್ದೆವು. ಆದರೆ ಕತ್ರಿಗುಪ್ಪೆಯಕಲ್ಲಿ ಬಾಡಿಗೆ ಮನೆಯಲ್ಲಿದ್ದ ಈ ಮನೋಭಾವ (ಯಶ್‌) ಮನೆ ಬಾಡಿಗೆ ಕಟ್ಟಲು ಸಾಧ್ಯವಾಗಿಲ್ಲ. ಆದರೆ ಈಗ ಇಷ್ಟೆಲ್ಲಾ ಮಾತನಾಡುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.

ADVERTISEMENT

ಅಡ್ರೆಸ್‌ಗೆ ಇರಲ್ಲ: ಸಂಸದ ಎಲ್‌.ಆರ್‌.ಶಿವರಾಮೇಗೌಡ ಮಾತನಾಡಿ ‘ಏ.18ರ ನಂತರ ಸಿನಿಮಾ ಟೂರಿಂಗ್‌ ಟಾಕೀಸ್‌ ಜನರು ಜಾಗ ಖಾಲಿ ಮಾಡುತ್ತಾರೆ. ಪಕ್ಷೇತರ ಅಭ್ಯರ್ಥಿ ಅಡ್ರೆಸ್‌ಗೆ ಸಿಗುವುದಿಲ್ಲ. ಆಮೇಲೆ ಜನರು ಹುಡುಕಬೇಕಾಗುತ್ತದೆ. ಇಲ್ಲಿ ಸೇರಿರುವ ಸಾವಿರಾರು ಜನರು ಸಂತೆಗೆ ಬಂದವರಲ್ಲ, ಸ್ವಂತಕ್ಕೆ ಬಂದವರು. ನೀವು ಸತ್ತರೆ ನಾವು ಬರಬೇಕು, ನಾವು ಸತ್ತರೆ ನೀವು ಬರಬೇಕು. ಸಿನಿಮಾದವರು ಚುನಾವಣೆ ಮುಗಿದ ನಂತರ ಮಂಡ್ಯ ಕಡೆ ತಲೆ ಹಾಕಿಯೂ ನೋಡುವುದಿಲ್ಲ’ ಎಂದರು.

ಶಾಸಕ ಸುರೇಶ್‌ಗೌಡ ಮಾತನಾಡಿ ‘ಸಿನಿಮಾದವರು ಪುಕ್ಕಟೆ ಸಿನಿಮಾ ತೋರಿಸುವುದಿಲ್ಲ. ಜನರು ಹಣಕೊಟ್ಟು ಸಿನಿಮಾ ನೋಡಿದರೆ ಅವರ ಜೀವನ ನಡೆಯುತ್ತದೆ. ಅವರ ಬಣ್ಣದ ಮಾತುಗಳಿಗೆ ಜನರು ಮರುಳಾಗಬೇಡಿ’ ಎಂದರು. ನಿಖಿಲ್‌ ಹದ್ದಿನಕಣ್ಣು ಆಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪ್ರಚಾರ ಆರಂಭಿಸಿದರು. ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಾವಿರಾರು ಜನರ ಬೈಕ್‌ ರ‍್ಯಾಲಿ ಮೂಲಕ ರೋಡ್‌ ಶೋ ನಡೆಸಿದರು.

ಮಳವಳ್ಳಿಯಲ್ಲಿ ನಿಖಿಲ್‌ ಪರ ಸಚಿವರಾದ ವೆಂಕಟರಾವ್‌ ನಾಡಗೌಡ, ಬಂಡೆಪ್ಪ ಕಾಶೆಂಪೂರ್‌ ಪ್ರಚಾರ ನಡೆಸಿದರು.

ಒಂದೇಕಡೆ ನಿಖಿಲ್‌–ಸುಮಲತಾ

ನಾಗಮಂಗಲ ತಾಲ್ಲೂಕಿನ ಕನ್ನಘಟ್ಟದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಹಾಗೂ ನಿಖಿಲ್‌ ಒಂದೇ ಕಡೆ ಪ್ರಚಾರ ನಡೆಸಿದರು. ನಿಖಿಲ್‌ ಮುಖಂಡರೊಬ್ಬರ ಮನೆಗೆ ಊಟಕ್ಕೆ ತೆರಳಿದ್ದರು. ಆ ಮನೆಯ ಮುಂಭಾಗದ ರಸ್ತೆ ಮೂಲಕ ಸುಮಲತಾ ತೆರಳಬೇಕಾಗಿತ್ತು. ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಕಟ್ಟೆಚ್ಚರ ವಹಿಸಿದ್ದರು. ಜನರನ್ನು ನಿಯಂತ್ರಿಸಲು ಹರಸಾಹಸಪಟ್ಟರು. ನಿಖಿಲ್‌ ಊಟ ಮುಗಿಸಿ ತೆರಳಿದ ನಂತರ ಸುಮಲತಾ ಬಂದರು.

ನಂತರ ಸುಮಲತಾ ಚಿಣ್ಯ, ಬ್ರಹ್ಮದೇವರಹಳ್ಳಿ, ದೇವಲಾಪುರ ಮುಂತಾದ ಹಳ್ಳಿಗಳಲ್ಲಿ ಪ್ರಚಾರ ನಡೆಸಿದರು. ನಟ ಯಶ್‌ ಮಳವಳ್ಳಿ ತಾಲ್ಲೂಕಿನ ಹಲಗೂರು ಹೋಬಳಿ ಭಾಗದಲ್ಲಿ ಮತಯಾಚನೆ ನಡೆಸಿದರೆ, ಅಭಿಷೇಕ್‌ ಮಂಡ್ಯ ತಾಲ್ಲೂಕಿನ ಸಂತೆಕಸಲಗೆರೆಯಲ್ಲಿ ಪ್ರಚಾರ ಮಾಡಿದರು.

‘ಹಲ್ಲೆ ಮಾಡಿದರೆ ಇನ್ನು ಮುಂದೆ ಸುಮ್ಮನಿರಲ್ಲ’
ಮಂಡ್ಯ:
‘ಜೆಡಿಎಸ್‌ ಕಾರ್ಯಕರ್ತರ ಮೇಲೆ ಹಲ್ಲೆಯಾಗಿದೆ. ಇನ್ನು ಮುಂದೆ ಸುಮ್ಮನೆ ಕೂರಲು ಸಾಧ್ಯವಿಲ್ಲ’ ಎಂದು ಮೈತ್ರಿ ಅಭ್ಯರ್ಥಿ ನಿಖಿಲ್‌ ಸೋಮವಾರ ಗುಡುಗಿದರು.

ಭಾರತೀನಗರ ಸಮೀಪದ ಗುರುದೇವರಹಳ್ಳಿ ಗ್ರಾಮದಲ್ಲಿ ಭಾನುವಾರ ರಾತ್ರಿ ಸುಮಲತಾ ಹಾಗೂ ಜೆಡಿಎಸ್‌ ಕಾರ್ಯಕರ್ತರ ನಡುವೆ ನಡೆದ ಘರ್ಷಣೆಯಲ್ಲಿ ಗಾಯಗೊಂಡಿರುವ ಗಾಯಾಳುಗಳ ಆರೋಗ್ಯ ವಿಚಾರಿಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದರು.

‘ಇಲ್ಲಿಯವರೆಗೂ ನಾನು ಸ್ಪರ್ಧೆಯನ್ನು ಸ್ಪರ್ಧೆಯಂತೆಯೇ ಎದುರಿಸುತ್ತಿದ್ದೆ. ಆದರೆ ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ನಂತರ ಸುಮ್ಮನೆ ಇರಲು ಸಾಧ್ಯವಿಲ್ಲ’ ಎಂದರು.

ಘಟನೆಯ ವಿವರ: ಭಾನುವಾರ ರಾತ್ರಿ ಗುರುದೇವರಹಳ್ಳಿಯಲ್ಲಿ ಸುಮಲತಾ ಹಾಗೂ ನಿಖಿಲ್‌ ಬೆಂಬಲಿಗರ ನಡುವೆ ನಡೆದ ಘರ್ಷಣೆಯಲ್ಲಿ ಮೂವರು ಜೆಡಿಎಸ್‌ ಕಾರ್ಯಕರ್ತರು ಗಾಯಗೊಂಡಿದ್ದಾರೆ. ಅನಿಲ್‌, ಕಾರ್ತಿಕ್, ಪಾಪಣ್ಣ ಭಾರತೀನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗುರುದೇವರಹಳ್ಳಿ ಗ್ರಾಮಸ್ಥರು ರಾತ್ರಿ 9.30ರಲ್ಲಿ ಸುಮಲತಾ ಬರುವಿಕೆಗಾಗಿ ಕಾಯುತ್ತಿದ್ದರು. ಆ ಸಂದರ್ಭದಲ್ಲಿ ಜೆಡಿಎಸ್ ಕಾರ್ಯಕರ್ತ ಕಾರ್ತಿಕ್‌ ಜೋರಾಗಿ ಹಾರ್ನ್‌ ಮಾಡುತ್ತಾ ಬೈಕ್‌ನಲ್ಲಿ ವೇಗವಾಗಿ ತೆರಳಿದ್ದಾರೆ. ಗ್ರಾಮಸ್ಥರು, ನಿಧಾನವಾಗಿ ತೆರಳುವಂತೆ ಸೂಚಿಸಿದ್ದಾರೆ. ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಘರ್ಷಣೆ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.