
ಅರ್ಜುನ್ ಜನ್ಯ
ಅರ್ಜುನ್ ಜನ್ಯ ನಿರ್ದೇಶಿಸಿ ಶಿವರಾಜ್‌ಕುಮಾರ್, ಉಪೇಂದ್ರ, ರಾಜ್ ಬಿ.ಶೆಟ್ಟಿ ಮುಖ್ಯಭೂಮಿಕೆಯಲ್ಲಿರುವ ‘45’ ಚಿತ್ರ ಡಿ.25ರಂದು ತೆರೆ ಕಾಣುತ್ತಿದೆ. ಸಂಗೀತ ನಿರ್ದೇಶನದಿಂದ ಸಿನಿಮಾ ನಿರ್ದೇಶನದತ್ತ ಹೊರಳಿರುವ ಅವರು ಸಿನಿಮಾ ಹಾಗೂ ನಿರ್ದೇಶಕರಾದ ಕುರಿತು ಮಾತನಾಡಿದ್ದಾರೆ.
ಚಿತ್ರದ ಟ್ರೇಲರ್ ಆಸಕ್ತಿದಾಯಕವಾಗಿದೆ. ಇದು ಯಾವ ಜಾನರ್‌ನ ಸಿನಿಮಾ?
ಇದೇ ಜಾನರ್ ಎಂದು ಹೇಳಲು ಸಾಧ್ಯವಿಲ್ಲ. ಮೂವರು ಸ್ಟಾರ್ ನಟರ ಅಭಿಮಾನಿಯಾಗಿ ಈ ಚಿತ್ರ ನಿರ್ದೇಶಿಸಿದ್ದೇನೆ. ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನನ್ನು ಇಲ್ಲಿ ತನಕ ನೋಡಿರದ ರೀತಿಯಲ್ಲಿ ತೋರಿಸುವ ಪ್ರಯತ್ನ ಮಾಡಿದ್ದೇನೆ. ಆದರೆ ಬರೀ ಅಭಿಮಾನಿಗಳಿಗೆ ಮಾಡಿದ್ದಲ್ಲ. ಗಟ್ಟಿಯಾದ ಕಥೆಯಿದೆ. ಕಥೆ ಕೂಡ ಹೊಸತು. ಎಲ್ಲಿಯೂ ನೋಡಿರದಂಥ ಕಥೆ. ಚಿತ್ರಕಥೆ ಕೂಡ ಭಿನ್ನವಾಗಿದೆ. ಇದನ್ನು ಒಂದು ಸಿನಿಮಾ, ಅಲ್ಲೊಂದು ಸಾಂಗ್ ಬರುತ್ತೆ, ಒಂದು ಫೈಟ್ ಬರುತ್ತೆ ಎನ್ನಲು ಸಾಧ್ಯವಿಲ್ಲ. ಇದರ ಒಳಹೊಕ್ಕರೆ ಒಂದು ಪ್ರತ್ಯೇಕ ಜಗತ್ತು. ಅದನ್ನು ನೋಡಲು ಬೇರೆಯದೇ ಮನಸ್ಥಿತಿ ಬೇಕು. ‘ಅವೇಂಜರ್ಸ್’, ‘ಅವತಾರ್’ ರೀತಿಯ ಪರಿಕಲ್ಪನೆ ಇದು. ಕನ್ನಡದಲ್ಲಿ ಖಂಡಿತವಾಗಿ ಭಿನ್ನ ಪ್ರಯತ್ನ.
ಇಬ್ಬರು ಸ್ಟಾರ್‌ಗಳಿರುವಾಗ ಅಭಿಮಾನಿಗಳಿಗೆ ಒಂದು ನಿರೀಕ್ಷೆ ಇರುತ್ತದೆ. ಅದರಂತೆ ಶಿವರಾಜ್‌ಕುಮಾರ್, ಉಪೇಂದ್ರ ಇಬ್ಬರಿಗೂ ಒಂದೇ ರೀತಿಯ ಸ್ಕ್ರೀನ್‌ಸ್ಪೇಸ್ ಇದೆಯಾ? ಇದನ್ನು ಯಾವ ರೀತಿ ಸರಿದೂಗಿಸಿದ್ದೀರಿ?
ಕಥೆ ಆ ರೀತಿ ಇರೋದರಿಂದ ಈ ಸಮಸ್ಯೆ ತಾನಾಗಿಯೇ ಸರಿದೂಗಿದೆ. ಯಾರದ್ದೇ ಅಭಿಮಾನಿಗಳು ನೋಡಿದರೂ ಕೂಡ ಅವರ ಮನಸ್ಸಿಗೆ ತೃಪ್ತಿಯಾಗುತ್ತದೆ. ಯಾರನ್ನೂ ಕಡಿಮೆ ತೋರಿಸಿದಂತೆ ಭಾಸವಾಗುವುದಿಲ್ಲ.
ಸಂಪೂರ್ಣ ಕಮರ್ಷಿಯಲ್ ಸಿನಿಮಾವೇ?
ಖಂಡಿತ. ಅಲ್ಟ್ರಾ ಕಮರ್ಷಿಯಲ್ ಸಿನಿಮಾವಿದು. ಆದರೆ ಜತೆಗೆ ಉತ್ತಮ ಕಥೆಯಿದೆ. ತತ್ವ ಹೇಳಲು ಹೋದರೆ ಸಿನಿಮಾ ಬೋರ್ ಆಗುತ್ತದೆ. ಕಲಾತ್ಮಕ ಸಿನಿಮಾವಾಗುತ್ತದೆ. ಇಲ್ಲಿ ಒಂದು ಕಲಾತ್ಮಕ ಸಂದೇಶ ಸಂಪೂರ್ಣ ಕಮರ್ಷಿಯಲ್ ಮಾದರಿಯಲ್ಲಿದೆ. ಹೀಗಾಗಿ ಈ ಸಿನಿಮಾದ ಜಾನರ್ ಹೇಳುವುದು ಕಷ್ಟ. ಅಭಿಮಾನಿಗಳು, ಯುವಕರು, ಕುಟುಂಬ ಸಮೇತ ಬರುವ ಪ್ರೇಕ್ಷಕರು ಎಲ್ಲರಿಗೂ ಬೇಕಾದ ಅಂಶಗಳು ಸಿನಿಮಾದಲ್ಲಿದೆ.
ಸಂಗೀತದಿಂದ ನಿರ್ದೇಶನದತ್ತ ಹೊರಳಿದ್ದು ಹೇಗೆ?
ಯಾವತ್ತೂ ನಿರ್ದೇಶಕನಾಗಬೇಕು ಎಂದು ಅಂದುಕೊಂಡೇ ಇರಲಿಲ್ಲ. ಆ ನಿಟ್ಟಿನಲ್ಲಿ ಪ್ರಯತ್ನವನ್ನೂ ಮಾಡಿರಲಿಲ್ಲ. ಸಂಗೀತವೊಂದೇ ನನ್ನ ಗುರಿಯಾಗಿತ್ತು. ಕಥೆ ಬರೆಯಲು ಶುರು ಮಾಡಿದೆ. ಎರಡು ಮೂರು ಕಥೆ ಬರೆದು ಕೊಡಲು ಶುರು ಮಾಡೋಣ ಎಂದು ಹೊರಟೆ. ‘45’ ಕಥೆ ಬರೆದು ಶಿವರಾಜ್‌ಕುಮಾರ್‌ಗೆ ಕೊಡಲು ಹೋದೆ. ಕಥೆ ಓದಿದ ಅವರು ಇಲ್ಲಿನ ಪಾತ್ರಗಳು ನಿಮ್ಮ ತಲೆಯಲ್ಲಿ, ಪರಿಕಲ್ಪನೆಯಲ್ಲಿ ಚೆನ್ನಾಗಿ ಕುಳಿತಿವೆ. ನೀವೇ ಇದನ್ನು ನಿರ್ದೇಶನ ಮಾಡಿ, ಬೇರೆಯವರಿಗೆ ನೀಡಿದರೆ ಮೂಲ ಉದ್ದೇಶ ಹಾಳಾಗಿ ಬಿಡುತ್ತದೆ ಎಂದರು. ಅಲ್ಲಿಂದ ಈ ಪಯಣ ಶುರುವಾಗಿದ್ದು. ಸುಮಾರು ನಾಲ್ಕು ವರ್ಷಗಳ ಪಯಣವಿದು. ಕಥೆಯನ್ನು ಬರೆದು ಒಂದು ವರ್ಷ ಎಲ್ಲರಿಗೂ ಹೇಳಿಕೊಂಡು ಬಂದೆ. ನಂತರ ಒಂದು ವರ್ಷ ಇಡೀ ಚಿತ್ರವನ್ನು ತಂತ್ರಜ್ಞಾನ ಬಳಸಿಕೊಂಡು ಪ್ರೀವಿಷ್ಯುವಲೈಸ್ ಮಾಡಿದೆ. ಬಳಿಕ ಒಂದೂವರೆ ವರ್ಷ ಚಿತ್ರೀಕರಣ ಮಾಡಿದೆವು.
ಚಿತ್ರ ಯಶಸ್ಸಾದರೆ ಸಂಗೀತದಿಂದ ನಿರ್ದೇಶನದತ್ತ ಮುಖ ಮಾಡುವಿರಾ?
150ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಗೀತ ನೀಡಿರುವೆ. ಅದಕ್ಕೆ ಮೊದಲ ಆದ್ಯತೆ. ತಿರುಗಿ ನೋಡಿದರೆ ಮ್ಯಾಜಿಕ್ ರೀತಿ ಆಗಿದೆ. ಸಿನಿಮಾ ಹಿನ್ನೆಲೆಯಿಲ್ಲದೆ, ಸಂಗೀತದ ಹಿನ್ನೆಲೆಯಿಲ್ಲದೆ ಇಲ್ಲಿವರೆಗೆ ಬಂದಿರುವೆ.
ನಿಮ್ಮ ದೃಷ್ಟಿಯಲ್ಲಿ ಚಿತ್ರಮಂದಿರಗಳತ್ತ ಜನರನ್ನು ಸೆಳೆಯಲು ಯಾವ ರೀತಿ ಸಿನಿಮಾಗಳು ಬರಬೇಕು?
ಯಾವುದೇ ಉದ್ಯಮವಾಗಿರಲಿ ಉತ್ಪನ್ನ ಚೆನ್ನಾಗಿ ಮಾಡಬೇಕು. ಉತ್ಪನ್ನ ಚೆನ್ನಾಗಿಲ್ಲದೆ ಜನರನ್ನು ದೂಷಿಸುವುದರಲ್ಲಿ ಅರ್ಥವಿಲ್ಲ. ಎಲ್ಲ ಚಿತ್ರೋದ್ಯಮದಲ್ಲಿಯೂ ಗೆದ್ದ ಮತ್ತು ಸೋತ ಸಿನಿಮಾಗಳಿವೆ. ನಮ್ಮ ಚಿತ್ರೋದ್ಯಮದಲ್ಲಿಯೂ ಒಳ್ಳೆಯ ಕಥೆಗಳು ಬಂದರೆ ಜನ ಕೈಬಿಡುವುದಿಲ್ಲ ಎಂಬುದು ಸಾಕಷ್ಟು ಸಲ ಸಾಬೀತಾಗಿದೆ. ಕಥೆಯಷ್ಟೇ ಇದ್ದರೆ ಸಾಲದು, ಅದಕ್ಕೆ ತಕ್ಕ ಪ್ರಚಾರ ಬೇಕು. ಎಲ್ಲ ದಿಕ್ಕುಗಳಲ್ಲಿಯೂ, ಎಲ್ಲರೂ ಕೆಲಸ ಮಾಡಬೇಕು. ಸಿನಿಮಾ ಎಂಬುದು ಒಬ್ಬರಿಂದ ಆಗುವುದಿಲ್ಲ, ತಂಡದ ಕೆಲಸ. ಇಡೀ ತಂಡ ಒಟ್ಟಾಗಿ ಕೆಲಸ ಮಾಡಬೇಕು.
ನಿಮ್ಮ ಹೆಸರು ಲೋಕೇಶ್‌ಯಿಂದ ಅರ್ಜುನ್ ಜನ್ಯ ಎಂದು ಬದಲಾಗಿದ್ದು ಹೇಗೆ?
ಕೆ.ಕಲ್ಯಾಣ್ ನನಗೆ ಅರ್ಜುನ್ ಎಂದು ನಾಮಕರಣ ಮಾಡಿದರು. ‘ಕೆಂಪೇಗೌಡ’ ಚಿತ್ರದ ವೇಳೆ ಸುದೀಪ್ ಅವರು ಅದಕ್ಕೆ ಜನ್ಯ ಎಂದು ಸೇರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.