
45 ಸಿನಿಮಾ ಪೋಸ್ಟರ್
ಬೆಂಗಳೂರು: ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನಿರ್ದೇಶನದ ಮೊದಲ ಸಿನಿಮಾ ಹಾಗೂ ಸೂರಜ್ ಪ್ರೊಡಕ್ಷನ್ ಲಾಂಛನದಲ್ಲಿ ರಮೇಶ್ ರೆಡ್ಡಿ ಅವರು ನಿರ್ಮಿಸಿರುವ ಕನ್ನಡದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ ಅನೇಕ ತಾರೆಯರ ‘45‘ ಚಿತ್ರ ಡಿಸೆಂಬರ್ 25ರ ಕ್ರಿಸ್‌ಮಸ್ ದಿನದಂದು ಬಿಡುಗಡೆಯಾಗಲಿದೆ.
ಬೆಂಗಳೂರು ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್
ಅದಕ್ಕೂ ಮುನ್ನ ಇಂದು (ಡಿಸೆಂಬರ್ 15) ಸಂಜೆ 6.45ಕ್ಕೆ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಏಕಕಾಲಕ್ಕೆ ಏಳು ಜಿಲ್ಲೆಯಲ್ಲಿ 45 ಸಿನಿಮಾದ ಟ್ರೇಲರ್ ಬಿಡುಗಡೆಯಾಗಲಿದೆ. ವಿಶೇಷವೆಂದರೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬೆಂಗಳೂರು ನಗರ ಕಮಿಷನರ್ ಸೀಮಂತ್ ಕುಮಾರ್ ಭಾಗಿಯಾಗಲಿದ್ದು, ತ್ರಿಮೂರ್ತಿಗಳ ಸಮಾಗಮಕ್ಕೆ ಕಮಿಷನರ್ ಸಾಕ್ಷಿಯಾಗಲಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಚಿತ್ರತಂಡ, ನಮ್ಮ ‘45’ ಚಿತ್ರದ ಟ್ರೇಲರ್ ರಿಲೀಸ್ ಇವೆಂಟ್ ಡಿಸೆಂಬರ್ 15ರಂದು ಬೆಂಗಳೂರಿನ ವಿದ್ಯಾಪೀಠದ ಬಳಿಯಿರುವ ಕೆಂಪೇಗೌಡ ಮೈದಾನ(ಡೊಂಕಳ), ಶಂಕರ್ ನಾಗ್ ಸರ್ಕಲ್, ಶ್ರೀನಿವಾಸನಗರದಲ್ಲಿ ಅದ್ಧೂರಿಯಾಗಿ ನಡೆಯಲಿದೆ.
45 ಸಿನಿಮಾದ ಟ್ರೇಲರ್ ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಭಾಗಿಯಾಗಲಿದ್ದಾರೆ.
ಇದೇ ಸಂದರ್ಭದಲ್ಲಿ ಈವರೆಗೂ ಯಾರು ಮಾಡಿರದ ವಿಭಿನ್ನ ಪ್ರಯತ್ನ ಮಾಡುತ್ತಿದ್ದೇವೆ. ಬೆಂಗಳೂರಿನಲ್ಲಿ ನಡೆಯುವ ಈವೆಂಟ್ ಅನ್ನು ಕರ್ನಾಟಕದ 7 ಪ್ರಮುಖ ಜಿಲ್ಲೆಗಳ ಚಿತ್ರಮಂದಿರದಲ್ಲಿ ಕ್ಯೂಬ್ ಮೂಲಕ ನೇರ ಪ್ರಸಾರ ಮಾಡಲಾಗುವುದು. ಮೈಸೂರು, ಮಂಗಳೂರು, ತುಮಕೂರು, ದಾವಣಗೆರೆ, ಶಿವಮೊಗ್ಗ, ಹೊಸಪೇಟೆ, ಹುಬ್ಬಳ್ಳಿ ಈ ಏಳು ಜಿಲ್ಲೆಗಳ ಚಿತ್ರಮಂದಿರಗಳಲ್ಲಿ ಈ ವ್ಯವಸ್ಥೆ ಮಾಡಲಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.