ಸಾಯಿ ಪಲ್ಲವಿ
ಚೆನ್ನೈ: ರಾಮಾಯಣ ಚಿತ್ರದಲ್ಲಿನ ಸೀತೆಯ ಪಾತ್ರಕ್ಕಾಗಿಯೇ ಸಾಯಿ ಪಲ್ಲವಿ ಅವರು ಸಸ್ಯಾಹಾರವನ್ನು ಸೇವಿಸುತ್ತಿದ್ದಾರೆ ಎನ್ನುವ ವದಂತಿ ವಿರುದ್ಧ ಕಿಡಿಕಾರಿರುವ ನಟಿ ಸಾಯಿ ಪಲ್ಲವಿ, ‘ಅನಗತ್ಯವಾಗಿ ಸುಳ್ಳು ಸುದ್ದಿ ಹಬ್ಬಿಸಿದರೆ ಕಾನೂನಿನ ಮೂಲಕ ಉತ್ತರಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದ್ದಾರೆ.
ಸಾಯಿ ಪಲ್ಲವಿ ಈ ಹಿಂದೆ ಸಂದರ್ಶನವೊಂದರಲ್ಲಿ ‘ನಾನೆಂದಿಗೂ ಸಸ್ಯಹಾರಿಯೇ, ಯಾವ ಪ್ರಾಣಿಗಳನ್ನು ಹತ್ಯೆ ಮಾಡಲು ಇಚ್ಚಿಸುವುದಿಲ್ಲ’ ಎಂದು ತಮ್ಮ ಆಹಾರ ಕ್ರಮದ ಬಗ್ಗೆ ಹೇಳಿದ್ದರು. ಅದು ದೊಡ್ಡ ಪ್ರಮಾಣದಲ್ಲಿ ಸುದ್ದಿಯೂ ಆಗಿತ್ತು. ಹೀಗಿದ್ದಾಗ ಸುದ್ದಿಸಂಸ್ಥೆಯೊಂದು ಸಾಯಿ ಪಲ್ಲವಿ ಅವರು ರಾಮಾಯಣದ ಚಿತ್ರೀಕರಣಕ್ಕಾಗಿ ಮಾಂಸಾಹಾರ ತ್ಯಜಿಸಿ ಸಸ್ಯಾಹಾರ ಸೇವನೆ ಮಾಡುತ್ತಿದ್ದಾರೆ, ಚಿತ್ರೀಕರಣಕ್ಕೆ ತೆರಳುವ ವೇಳೆ ಅಡುಗೆಯವರನ್ನೂ ಕರೆದುಕೊಂಡು ಹೋಗುತ್ತಾರೆ ಎಂದು ವರದಿ ಮಾಡಿತ್ತು ಎನ್ನಲಾಗಿದೆ.
ಈ ವರದಿಯ ವಿರುದ್ಧ ಕಿಡಿಕಾರಿರುವ ನಟಿ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡು ಸ್ಪಷ್ಟನೆ ನೀಡಿದ್ದು, ಸುಳ್ಳು ಸುದ್ದಿ ಹರಡದಂತೆ ಎಚ್ಚರಿಕೆ ನೀಡಿದ್ದಾರೆ.
ಸಾಯಿ ಪಲ್ಲವಿ ಪೋಸ್ಟ್‌ನಲ್ಲೇನಿದೆ?
‘ಬಹಳಷ್ಟು ಬಾರಿ ನನ್ನ ವಿರುದ್ಧ ಹಬ್ಬಿರುವ ವದಂತಿಗಳಿಗೆ ನಾನು ಪ್ರತಿಕ್ರಿಯಿಸದೆ ಮೌನವಾಗಿರುತ್ತೇನೆ. ಆದರೆ ಈ ಬಾರಿ ಪ್ರತಿಕ್ರಿಯೆ ನೀಡುವ ಸಮಯ ಬಂದಿದೆ. ನನ್ನ ಚಲನಚಿತ್ರ ಬಿಡುಗಡೆ, ಜಾಹೀರಾತುಗಳು, ವೃತ್ತಿಗೆ ಸೇರಿದ ವಿಚಾರದಲ್ಲಿ ಯಾವುದೇ ಆಧಾರರಹಿತ ಸುದ್ದಿಗಳನ್ನು ಹಬ್ಬಿಸಿದರೆ, ಜನಪ್ರಿಯ ಮಾಧ್ಯಮ ಕಂಪನಿ ಅಥವಾ ವ್ಯಕ್ತಿ ಯಾರೇ ಆದರೂ ಕಾನೂನು ಕ್ರಮ ಎದುರಿಸಬೇಕಾಗುತ್ತದೆ’ ಎಂದು ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.