
ಕಾರುಣ್ಯ ರಾಮ್
ಚಿತ್ರ: ಇನ್‌ಸ್ಟಾಗ್ರಾಂ
ಬೆಂಗಳೂರು: ನಟಿ ಕಾರುಣ್ಯ ರಾಮ್ ಅವರು ತಮ್ಮ ಸಹೋದರಿ ಸಮೃದ್ಧಿ ರಾಮ್ ಅವರ ವಿರುದ್ಧ ಕೆಲ ದಿನಗಳ ಹಿಂದೆ ವಂಚನೆಯ ದೂರು ನೀಡಿದ್ದರು. ಅದರ ಬೆನ್ನಲೇ ಇದೀಗ, ಹಣ ನೀಡುವಂತೆ ಬೆದರಿಕೆ ಹಾಕುವವರ ವಿರುದ್ಧ ಕಾನೂನಿನ ಮೊರೆ ಹೋಗಿದ್ದಾರೆ.
ಈ ಬಗ್ಗೆ ಕಾರುಣ್ಯ ರಾಮ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
‘ಕಾರುಣ್ಯರಾಮ್ ಆದ ನಾನು ಬದುಕು ಅನ್ನೋ ಚದುರಂಗದ ಆಟದಲ್ಲಿ ಕತ್ತಲು ಬೆಳಕು ಅನ್ನೋ ಒಂದೇ ನಾಣ್ಯದ ಎರಡು ಮುಖದಲ್ಲಿ ಸಿಲುಕಿಕೊಂಡಿದ್ದೇನೆ. ನನಗೆ ಸಂಬಂಧ ಪಡದ ಹಣದ ವಿಚಾರವಾಗಿ ವೈಯಕ್ತಿಕವಾಗಿ ಕರೆ ಮಾಡಿ ಪೀಡಿಸುತ್ತಿದ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟ ಕಮೆಂಟ್ ಮಾಡಿದ ವ್ಯಕ್ತಿಗಳ ವಿರುದ್ಧ ಮಾತ್ರ ಕಾನೂನಿಗೆ ಮೊರೆ ಹೋಗಿದ್ದೇನೆ’ ಎಂದಿದ್ದಾರೆ.
‘ಸಿಸಿಬಿಯವರಿಗೆ ಅವಶ್ಯಕವಾದ ಸಂಪೂರ್ಣ ದಾಖಲೆಗಳನ್ನು ಹಾಗೂ ಮಾಹಿತಿಗಳನ್ನ ನೀಡಿದ್ದೇನೆ, ಸದ್ಯದಲ್ಲೇ ಕಾನೂನಿನ ಮುಖಾಂತರ ಕ್ರಮ ಕೈಗೊಳ್ಳಲಿದ್ದಾರೆ. ನಾನು ಕಾನೂನಿಗೆ ಬದ್ಧಳಾಗಿದ್ದೇನೆ ಯಾರ ಬಳಿಯೂ ಹಣ ಪಡೆದಿರುವುದಿಲ್ಲ, ಹಾಗೆ ಯಾರಿಗೂ ವೈಯಕ್ತಿವಾಗಿ ಹಣ ಕೊಡುವ೦ತಿಲ್ಲ’ ಎಂದಿದ್ದಾರೆ.
‘ಈ ಸಂದರ್ಭದಲ್ಲಿ ನನ್ನ ಭಾವನೆಗಳಿಗೆ ಬೆಲೆ ಕೊಟ್ಟವರಿಗೂ ಹಾಗೂ ನನ್ನ ಪ್ರಾಮಾಣಿಕತೆಗೆ ನಿಂತು ಪ್ರೀತಿಯನ್ನು ನೀಡುತ್ತಿರುವ ಜನರಿಗೆ ಧನ್ಯವಾದಗಳು. ಕಾಲಾಯ ತಸ್ಮಿನಮಃ..ಸತ್ಯ ಮೇವ ಜಯತೆ’ ಎಂದು ಬರೆದುಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಮನೆಯಲ್ಲಿದ್ದ ಚಿನ್ನವನ್ನು ಕೊಂಡೊಯ್ದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಸಹೋದರಿ ಸಮೃದ್ಧಿ ರಾಮ್ ಅವರ ವಿರುದ್ಧ ನಟಿ, ‘ಬಿಗ್‌ಬಾಸ್’ ರಿಯಾಲಿಟಿ ಶೋ ಮಾಜಿ ಸ್ಪರ್ಧಿ ಕಾರುಣ್ಯ ರಾಮ್ ಅವರು ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ನಿಂದನೆ ಮಾಡಿದ್ದವರ ವಿರುದ್ಧವೂ ನಟಿ ದೂರು ದಾಖಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.