ADVERTISEMENT

ಹಿಂದಿ ರಾಷ್ಟ್ರ ಭಾಷೆ ಎಂದ ಅಜಯ್ ದೇವಗನ್ ಹೇಳಿಕೆಗೆ ನಟಿ ರಮ್ಯಾ ಕಿಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಏಪ್ರಿಲ್ 2022, 16:15 IST
Last Updated 27 ಏಪ್ರಿಲ್ 2022, 16:15 IST
   

ಬೆಂಗಳೂರು: ಹಿಂದಿ ನಮ್ಮ ರಾಷ್ಟ್ರಭಾಷೆ ಅಲ್ಲ ಎಂಬ ಕಿಚ್ಚ ಸುದೀಪ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಬಾಲಿವುಡ್ ನಟ ಅಜಯ್ ದೇವಗನ್ ಅವರು, ಹಿಂದಿ ರಾಷ್ಟ್ರ ಭಾಷೆ ಎಂದು ಪ್ರತಿಪಾದಿಸಿದ್ದರು. ಇದೇ ವಿಚಾರವಾಗಿ ಕನ್ನಡಿಗರು ಇದೀಗ ಅಜಯ್ ದೇವಗನ್ ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದು, ನಟಿ ರಮ್ಯಾ ಕೂಡ ಈ ಸಾಲಿಗೆ ಸೇರಿದ್ದಾರೆ.

'ಇಲ್ಲ, ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ. ಅಜಯ್ ದೇವಗನ್ ಅವರೇ, ನಿಮ್ಮ ಅಜ್ಞಾನವು ದಿಗ್ಭ್ರಮೆಗೊಳಿಸುವಂತಿದೆ. ಮತ್ತು ಕೆಜಿಎಫ್, ಪುಷ್ಪ ಮತ್ತು ಆರ್‌ಆರ್‌ಆರ್‌ನಂತಹ ಸಿನಿಮಾಗಳು ಹಿಂದಿ ಭಾಷಿಕ ನೆಲದಲ್ಲಿ ಉತ್ತಮವಾಗಿ ಪ್ರದರ್ಶನ ಕಾಣುತ್ತಿರುವುದು ಒಳ್ಳೆಯ ವಿಷಯ. ಕಲೆಗೆ ಯಾವುದೇ ಭಾಷೆಯ ತಡೆ ಇಲ್ಲ. ದಯವಿಟ್ಟು ನಿಮ್ಮ ಸಿನಿಮಾಗಳನ್ನು ನಾವು ಆನಂದಿಸುವಷ್ಟೇ ನಮ್ಮ ಸಿನಿಮಾಗಳನ್ನು ನೋಡಿ ಆನಂದಿಸಿ' ಎಂದು ರಮ್ಯಾ ತಿಳಿಹೇಳಿದ್ದಾರೆ.

ನಟ ಕಿಚ್ಚ ಸುದೀಪ್‌ ಸಿನಿಮಾ ಕಾರ್ಯಕ್ರಮವೊಂದರಲ್ಲಿ ಪ್ಯಾನ್‌ ಇಂಡಿಯಾ ಚಿತ್ರಗಳ ಕುರಿತು ಮಾತನಾಡುತ್ತ, 'ಹಿಂದಿಯಿಂದ ಪ್ಯಾನ್‌ ಇಂಡಿಯಾ ಸಿನಿಮಾಗಳು ಬರುತ್ತಿವೆ. ಅವರು ತೆಲುಗು, ತಮಿಳು ಭಾಷೆ ಡಬ್‌ ಮಾಡಿ ಒದ್ದಾಡುತ್ತಿದ್ದಾರೆ. ಈಗ ಹಿಂದಿ ರಾಷ್ಟ್ರಭಾಷೆ ಅಲ್ಲ,...' ಎಂದು ಹೇಳಿದ್ದರು.

ಆ ಹೇಳಿಕೆ ಸಂಬಂಧ ಬುಧವಾರ ಅಜಯ್‌ ದೇವಗನ್‌ ಟ್ವೀಟ್‌ ಮಾಡಿ, 'ನಿಮ್ಮ ಪ್ರಕಾರ, ಹಿಂದಿ ನಮ್ಮ ರಾಷ್ಟ್ರ ಭಾಷೆ ಅಲ್ಲವಾದರೆ, ನೀವೇಕೆ ನಿಮ್ಮ ಪ್ರಾದೇಶಿಕ ಭಾಷೆಯ ಸಿನಿಮಾಗಳನ್ನು ಹಿಂದಿಯಲ್ಲಿ ಡಬ್‌ ಮಾಡಿ ಬಿಡುಗಡೆ ಮಾಡುತ್ತಿರುವಿರಿ? ಹಿಂದಿ ಭಾಷೆಯು ಈ ಹಿಂದೆ, ಈಗ ಮತ್ತು ಯಾವಾಗಲೂ ನಮ್ಮ ಮಾತೃ ಭಾಷೆ ಮತ್ತು ರಾಷ್ಟ್ರ ಭಾಷೆಯಾಗಿದೆ. ಜನ ಗಣ ಮನ' ಎಂದಿದ್ದರು.

ಇವುಗಳನ್ನು ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.