ADVERTISEMENT

ಮಹಿಳೆ ಸತ್ತಿರುವ ವಿಷಯ ಗೊತ್ತಿದ್ದರೂ ಚಿತ್ರಮಂದಿರ ಬಿಡದ ಅಲ್ಲು ಅರ್ಜುನ್: ಪೊಲೀಸ್

ಪಿಟಿಐ
Published 23 ಡಿಸೆಂಬರ್ 2024, 2:47 IST
Last Updated 23 ಡಿಸೆಂಬರ್ 2024, 2:47 IST
ಅಲ್ಲು ಅರ್ಜುನ್
ಅಲ್ಲು ಅರ್ಜುನ್   

ಹೈದರಾಬಾದ್‌: ‘ಪುಷ್ಟ–2’ ಸಿನಿಮಾದ ಪ್ರದರ್ಶನದ ವೇಳೆ ಉಂಟಾದ ಕಾಲ್ತುಳಿತದಿಂದ ಮಹಿಳೆಯೊಬ್ಬರು ಮೃತಪಟ್ಟಿರುವ ವಿಷಯವನ್ನು ನಟ ಅಲ್ಲು ಅರ್ಜುನ್ ಅವರಿಗೆ ಹೇಳಿದ್ದರೂ ಚಿತ್ರಮಂದಿರ ಬಿಟ್ಟು ಅವರು ತೆರಳಿರಲಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಭಾನುವಾರ ಹೇಳಿದ್ದಾರೆ.

2024ರ ವಾರ್ಷಿಕ ಸಮಗ್ರ ವರದಿ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಸಿ.ವಿ.ಆನಂದ್, ಕಾಲ್ತುಳಿತ ಸಂಭವಿಸಿದಾಗ ಉಂಟಾದ ಪರಿಸ್ಥಿತಿಯ ಕುರಿತು ಪೊಲೀಸರು ಮಾಡಿದ ವಿಡಿಯೊವನ್ನು ತೋರಿಸಿದ್ದಾರೆ.

ಸುದ್ದಿ ವಾಹಿನಿ ಮತ್ತು ಮೊಬೈಲ್‌ ಫೋನ್‌ಗಳ ‌ದೃಶ್ಯಗಳನ್ನು ಒಟ್ಟುಗೂಡಿಸಿ ಮಾಡಿದ ವಿಡಿಯೊ ಇದಾಗಿದ್ದು, ಅಲ್ಲು ಅರ್ಜುನ್ ಅವರು ಮಧ್ಯರಾತ್ರಿಯವರೆಗೂ ಚಿತ್ರಮಂದಿರದಲ್ಲಿಯೇ ಇರುವುದು ವಿಡಿಯೊದಲ್ಲಿ ಕಾಣಬಹುದು.

ADVERTISEMENT

ವಿಡಿಯೊ ಕುರಿತು ಯಾವುದೇ ಪ್ರತಿಕ್ರಿಯೆ ನೀಡದ ಆಯುಕ್ತರು, ‘ಈ ಬಗ್ಗೆ ನೀವೇ(ಮಾಧ್ಯಮದವರು) ನಿರ್ಧಾರ ತೆಗೆದುಕೊಳ್ಳಬಹುದು’ ಎಂದಿದ್ದಾರೆ.

ಮುಂದುವರಿದು, ‘ಮಹಿಳೆಯ ಸಾವಿನ ಬಗ್ಗೆ ನಾನು ಮತ್ತು ಇತರ ಪೊಲೀಸ್ ಅಧಿಕಾರಿಗಳು ಅಲ್ಲು ಅರ್ಜುನ್ ಅವರ ಮ್ಯಾನೇಜರ್‌ಗೆ ಮಾಹಿತಿ ನೀಡಿ ನೀಡಿದ್ದೆವು. ನಟನನ್ನು ನೇರವಾಗಿ ಭೇಟಿಯಾಗಲು ಆಗ ನಮಗೆ ಅವಕಾಶವಿರಲಿಲ್ಲ’ ಎಂದು ಹೇಳಿದ್ದಾರೆ.

‘ಈ ವಿಚಾರವನ್ನು ಅಲ್ಲು ಅರ್ಜುನ್‌ ಅವರಿಗೆ ತಿಳಿಸುವುದಾಗಿ ಅವರ ಸಿಬ್ಬಂದಿ ಹೇಳಿದ್ದರೂ ಹಾಗೆ ಮಾಡಲಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಕೊನೆಗೂ ನಟನನ್ನು ಭೇಟಿಯಾದ ನಾವು ಮಹಿಳೆಯ ಸಾವಿನ ಬಗ್ಗೆ ತಿಳಿಸಿ ತಕ್ಷಣ ಚಿತ್ರಮಂದಿರದಿಂದ ತೆರಳುವಂತೆ ತಿಳಿಸಿದ್ದೆವು. ಅಲ್ಲದೇ ಅವರ ನಿರ್ಗಮಕ್ಕೆ ಭದ್ರತಾ ವ್ಯವಸ್ಥೆ ಮಾಡುವುದಾಗಿಯೂ ಹೇಳಿದ್ದೆವು. ಆದರೆ, ಚಿತ್ರವನ್ನು ನೋಡಿದ ನಂತರವೇ ತೆರಳುವುದಾಗಿ ಅಲ್ಲು ಅರ್ಜುನ್ ಹೇಳಿದ್ದರು’ ಎಂದು ತಿಳಿಸಿದ್ದಾರೆ.

ನಂತರ, ‘ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಒಳಗೆ ಹೋಗಿ ನಟನನ್ನು ಹೊರಗೆ ಕರೆತರಲಾಯಿತು’ ಎಂದು ತಿಳಿಸಿದ್ದಾರೆ.

ಅಲ್ಲು ಅರ್ಜುನ್‌ಗೆ ನೀಡಿರುವ ಮಧ್ಯಂತರ ಜಾಮೀನಿನ ವಿರುದ್ಧ ಪೊಲೀಸರು ಮೇಲ್ಮನವಿ ಸಲ್ಲಿಸುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಆಯುಕ್ತರು, ‘ಇದು ತನಿಖೆಯ ಭಾಗವಾಗಿದ್ದು, ಮುಂದಿನ ದಿನಗಳಲ್ಲಿ ಯಾವ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದು ತಿಳಿಯಲಿದೆ’ ಎಂದಷ್ಟೆ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.