ADVERTISEMENT

ಸಲ್ಮಾನ್ ಯಶಸ್ಸಿಗೆ ಈದ್ ಬಿಡುಗಡೆ ಕಾರಣವೇ?

​ಪ್ರಜಾವಾಣಿ ವಾರ್ತೆ
Published 4 ಜೂನ್ 2019, 19:30 IST
Last Updated 4 ಜೂನ್ 2019, 19:30 IST
ಭಾರತ್ ಚಿತ್ರದಲ್ಲಿ ಸಲ್ಮಾನ್‌ ಖಾನ್ ಹಾಗೂ ಕತ್ರೀನಾ
ಭಾರತ್ ಚಿತ್ರದಲ್ಲಿ ಸಲ್ಮಾನ್‌ ಖಾನ್ ಹಾಗೂ ಕತ್ರೀನಾ   

ಈದ್ ಹಬ್ಬದ ಸಂಭ್ರಮದಲ್ಲಿರುವ ಅಭಿಮಾನಿಗಳನ್ನು ರಂಜಿಸಲು ಸಲ್ಮಾನ್ ಖಾನ್ ಬರುತ್ತಿದ್ದಾರೆ. ಅವರ ಭಾರತ್ ಚಿತ್ರ ಬುಧವಾರ (ಜೂನ್ 5) ತೆರೆಕಾಣುತ್ತಿದೆ. ಇದು ಪ್ರತಿ ವರ್ಷದ ಸಂಪ್ರದಾಯವೇ ಆಗಿಹೋಗಿದೆ. ಈದ್ ಹಬ್ಬಕ್ಕೆ ಹೊಸ ಚಿತ್ರದ ಮೂಲಕ ಅಭಿಮಾನಿಗಳಿಗೆ ನಿಜವಾದ ಹಬ್ಬವನ್ನೇ ಸಲ್ಮಾನ್ ತರುತ್ತಾರೆ.

ಈ ಪರಿಪಾಠ ಆರಂಭವಾಗಿದ್ದು 2009ರಲ್ಲಿ. ವಾಂಟೆಡ್ ಸಿನಿಮಾದ ಬಳಿಕ ಈದ್ ಹಬ್ಬಕ್ಕೆ ತೆರೆಕಂಡ ಬಹುತೇಕ ಚಿತ್ರಗಳು ₹100 ಕೋಟಿ ಕ್ಲಬ್‌ ಸೇರಿವೆ. ಈದ್ ಬಂದರೆ ಸಾಕು ಚಿತ್ರರಂಗದಲ್ಲೂ ಒಂದು ಸಂಚಲನ ಆರಂಭವಾಗುತ್ತದೆ.

ಈದ್ ಅವಧಿಯಲ್ಲಿ ಬಿಡುಗಡೆಯಾದ ಸಲ್ಮಾನ್ ಅವರ ವಾಂಟೆಡ್ (2009; ₹135 ಕೋಟಿ), ದಬಾಂಗ್ (2010; ₹145 ಕೋಟಿ), ಬಾಡಿಗಾರ್ಡ್ (2011; ₹142 ಕೋಟಿ), ಏಕ್ ಥಾ ಟೈಗರ್ (2012; ₹198 ಕೋಟಿ), ಕಿಕ್ (2014; ₹ 233 ಕೋಟಿ), ಭಜರಂಗಿ ಭಾಯಿಜಾನ್ (2015; ₹970 ಕೋಟಿ), ಸುಲ್ತಾನ್ (2016; ₹589 ಕೋಟಿ), ಟ್ಯೂಬ್‌ಲೈಟ್ (2017; ₹211 ಕೋಟಿ) ಭಾರಿ ಲಾಭ ಗಳಿಸಿದವು.ಮೊದಲ ವಾರದಲ್ಲೇ ಗಲ್ಲಾಪೆಟ್ಟಿಗೆಯನ್ನು ಲೂಟಿ ಹೊಡೆದವು.ಯುವರಾಜ ಹಾಗೂ ಗಾಡ್ ತುಸ್ಸಿ ಗ್ರೇಟ್ ಹೋ ಚಿತ್ರಗಳ ನಿರಾಸೆ ಮರೆಯಾಯಿತು.

ADVERTISEMENT

ಭಾರತ್ ಸಿನಿಮಾ ಕೂಡಾ ಅಭಿಮಾನಿಗಳನ್ನು ರಂಜಿಸಲು ಬೇಕಾದ ಎಲ್ಲ ರಂಜನೆಯನ್ನೂ ಹೊಂದಿದೆ. ಐದು ಗೆಟಪ್‌ಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ.ಭಾರತ್ ಸಿನಿಮಾ ₹100 ಕೋಟಿ ಬಜೆಟ್‌ನ ಚಿತ್ರ ಎಂಬ ಮಾತುಗಳಿವೆ.

ಸಲ್ಮಾನ್‌ ಈದ್ ಹಬ್ಬಕ್ಕೆ, ಶಾರುಖ್ ದೀಪಾವಳಿಗೆ, ಅಮೀರ್ ಖಾನ್ ಕ್ರಿಸ್‌ಮಸ್‌ಗೆ ಹೊಸ ಸಿನಿಮಾಗಳನ್ನು ನೀಡುತ್ತಾ ಬಂದಿದ್ದಾರೆ.

ಸಿನಿಮಾ ಬಿಡುಗಡೆಗೂ ಮುನ್ನ ತಾವು ನಿದ್ದೆ ಇಲ್ಲದ ರಾತ್ರಿಗಳನ್ನು ಕಳೆದಿದ್ದೇನೆ ಎಂದು ನಟಿ ಕತ್ರೀನಾ ಹೇಳಿಕೊಂಡಿದ್ದಾರೆ.

‘ನಿದ್ದೆಗೆಟ್ಟು ಚಿತ್ರದ ಬಿಡುಗಡೆಗೆ ಕಾತುರದಿಂದ ಕಾಯುತ್ತಿದ್ದೇನೆ. ಪ್ರೇಕ್ಷಕರ ಪ್ರತಿಕ್ರಿಯೆ ಕೇಳಿಸಿಕೊಳ್ಳಲು ತುದಿಗಾಲ ಮೇಲೆ ನಿಂತಿದ್ದೇನೆ. ಚಿತ್ರದ ಮೇಲೆ ಭಾರಿ ನಿರೀಕ್ಷೆಯಿದೆ’ ಎಂದು ಕತ್ರೀನಾ ಮನದಾಳ ಹಂಚಿಕೊಂಡಿದ್ದಾರೆ.

ಭಾರತ್ಚಿತ್ರದತಾರಾಗಣದಲ್ಲಿ ಟಬು, ದಿಶಾ ಪಟಾನಿ, ಜಾಕಿಶ್ರಾಫ್ ಇದ್ದಾರೆ. ಅಲಿ ಅಬ್ಬಾಸ್ ಜಾಫರ್ ಅವರು ಭಾರತ್ ಚಿತ್ರಕ್ಕೆ ಕತೆ ಬರೆದು ನಿರ್ದೇಶಿಸಿದ್ದಾರೆ. ಸಲ್ಮಾನ್ ಅವರ ರೀಲ್ ಲೈಫ್ ಪ್ರೊಡಕ್ಷನ್ಸ್, ಸಲ್ಮಾನ್ ಖಾನ್ ಫಿಲ್ಮ್ಸ್ ಮತ್ತು ಟಿ–ಸಿರೀಸ್ ಬ್ಯಾನರ್‌ನಡಿ ಜಂಟಿಯಾಗಿ ಚಿತ್ರ ನಿರ್ಮಾಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.