
ನವದೆಹಲಿ: ಮಲಯಾಳಂ ಖ್ಯಾತ ನಟ ಮೋಹನ್‌ಲಾಲ್ ಅವರ ಬಹು ನಿರೀಕ್ಷಿತ ಸಿನಿಮಾ ದೃಶ್ಯಂ–3 ಚಿತ್ರದ ಚಿತ್ರಮಂದಿರ ಮತ್ತು ಡಿಜಿಟಲ್ ಪ್ರಸಾರದ ಜಾಗತಿಕ ಹಕ್ಕುಗಳನ್ನು ಪನೋರಮಾ ಸ್ಟುಡಿಯೊ ಮತ್ತು ಪೆನ್ ಸ್ಟುಡಿಯೊ ಖರೀದಿಸಿದೆ.
ಜೀತು ಜೋಸೆಫ್ ಅವರು ನಿರ್ದೇಶಿಸುತ್ತಿರುವ ಮಲಯಾಳಂನ ಪ್ರಸಿದ್ಧ ಚಿತ್ರವಾಗಿರುವ ದೃಶ್ಯಂ ಸಿನಿಮಾ ಸರಣಿಯ ದೃಶ್ಯಂ–3 ಸಿನಿಮಾದ ಚಿತ್ರೀಕರಣವು ಇತ್ತೀಚೆಗೆ ಮುಕ್ತಾಯಗೊಂಡಿದೆ. ಸಿನಿಮಾವನ್ನು ಆಶಿರ್ವಾದ್ ಸಿನಿಮಾವು ನಿರ್ಮಾಣ ಮಾಡುತ್ತಿದೆ.
ದೃಶ್ಯಂ ಸಾಮಾನ್ಯ ಸಿನಿಮಾಗಿಂತ ವಿಭಿನ್ನ, ಇದು ಭಾರತೀಯ ಚಿತ್ರರಂಗದಲ್ಲೇ ವಿಶಿಷ್ಠ ಚಲನಚಿತ್ರವಾಗಿದೆ. ಇದೀಗ ದೃಶ್ಯಂ–3 ಸಿನಿಮಾಗೆ ಜಾಗತಿಕ ಹಕ್ಕುಗಳು ದೊರಕಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಪನೋರಮಾ ಸ್ಟುಡಿಯೊದ ಮುಖ್ಯಸ್ಥ ಕುಮಾರ್ ಮಂಗತ್ ಪಾಠಕ್ ತಿಳಿಸಿದ್ದಾರೆ.
ದೃಶ್ಯಂ–3 ಸಿನಿಮಾವು ಜಾಗತಿಕ ವೇದಿಕೆಗೆ ನಿಜವಾಗಿಯೂ ಅರ್ಹವಾಗಿದೆ. ಈ ಸಿನಿಮಾದ ಮೂಲಕ ಭಾರತದ ಕತೆಗಳನ್ನು ನಾವು ಜಗತ್ತಿಗೆ ತಿಳಿಸಲು ಉತ್ಸಾಹಕವಾಗಿದ್ದೇವೆ ಎಂದು ಪೆನ್ ಸ್ಟುಡಿಯೊದ ನಿರ್ದೇಶಕ ಡಾ. ಜಯಂತಿಲಾಲ್ ಹೇಳಿದ್ದಾರೆ.
ದೃಶ್ಯಂ ಸರಣಿಯ ಮೊದಲ ಸಿನಿಮಾವು 2013ರಲ್ಲಿ ಬಿಡುಗಡೆಯಾಗಿತ್ತು. ಅದರ ಸೀಕ್ವೆಲ್ ದೃಶ್ಯಂ–2 2022ರಲ್ಲಿ ತೆರೆಕಂಡಿತ್ತು. ಎರಡೂ ಸಿನಿಮಾಗಳು ಕೂಡ ಬಾಕ್ಸ್ ಆಫೀಸ್‌ನಲ್ಲಿ ಒಳ್ಳೆಯ ಗಳಿಕೆ ಮಾಡಿಕೊಂಡಿದ್ದವು. ಈ ಸಿನಿಮಾವು ಹಿಂದಿ, ತಮಿಳು, ತೆಲುಗು, ಕನ್ನಡ, ಚೈನೀಸ್ ಸೇರಿದಂತೆ ಹಲವು ಭಾಷೆಗಳಲ್ಲಿ ರೀಮೇಕ್ ಕೂಡ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.