ಅಜಯ್ ದೇವಗನ್ ಅಭಿನಯದ ದೃಶ್ಯಂ 3 ಸಿನಿಮಾ ಟೀಸರ್ ಬಿಡುಗಡೆಯಾಗಿದ್ದು, ಸಿನಿಮಾ 2026ರ ಅಕ್ಟೋಬರ್ 2ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.
ಅಭಿಷೇಕ್ ಪಾಠಕ್ ನಿರ್ದೇಶನದ ದೃಶ್ಯಂ 3 ಸಿನಿಮಾವನ್ನು ಸ್ಟಾರ್ ಸ್ಟುಡಿಯೋ 18 ಬ್ಯಾನರ್ ನಿರ್ಮಾಣ ಮಾಡಿದೆ. ಸಿನಿಮಾಗೆ ಅಲೋಕ್ ಜೈನ್, ಅಜಿತ್ ಅಂಧಾರೆ, ಕುಮಾರ್ ಮಂಗತ್ ಪಾಠಕ್ ಮತ್ತು ಅಭಿಷೇಕ್ ಕೈ ಜೋಡಿಸಿದ್ದಾರೆ.
ಸಿನಿಮಾದಲ್ಲಿ ಅಜಯ್ ದೇವಗನ್ ಜೊತೆ ತಾರಾ ನಟರಾದ ಟಬು, ಶ್ರಿಯಾ ಸರನ್, ಇಶಿತಾ ದತ್ತಾ, ರಜತ್ ಕಪೂರ್ ಮತ್ತು ಅಕ್ಷಯ್ ಖನ್ನಾ ಅಭಿನಯಿಸಿದ್ದಾರೆ.
ದೃಶ್ಯಂ ಸಿನಿಮಾವು ಕೇಬಲ್ ಆಪರೇಟರ್ ಒಬ್ಬ, ತನ್ನೊಳಗಿನ ಚಲನಚಿತ್ರದ ಜ್ಞಾನವನ್ನು ಬಳಸಿಕೊಂಡು ತನ್ನ ಮಗಳನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ವ್ಯಕ್ತಿಯನ್ನು ಕೊಂದು, ಬಳಿಕ ತನ್ನ ಕುಟುಂಬವನ್ನು ನ್ಯಾಯಾಂಗದಿಂದ ರಕ್ಷಿಸಲು ಏನೆಲ್ಲ ಪ್ರಯತ್ನಗಳನ್ನು ಮಾಡುತ್ತಾನೆ ಎಂಬುದನ್ನು ತೋರಿಸಿದೆ.
ಈ ಸಿನಿಮಾದ ಮೊದಲ ಆವೃತ್ತಿ 2015 ರಲ್ಲಿ ಬಿಡುಗಡೆಯಾಗಿದ್ದು, 2022ರಲ್ಲಿ ಇದರ ಮುಂದುವರೆದ ಭಾಗ ಬಿಡುಗಡೆಯಾಗಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದುಕೊಂಡಿತ್ತು. ಮಲಯಾಳಂ ಭಾಷೆಯ ಮೂಲ ಸಿನಿಮಾವನ್ನು ಜೀತು ಜೋಸೆಫ್ ನಿರ್ದೇಶಿಸಿದ್ದು, ಜಾರ್ಜ್ ಕುಟ್ಟಿ ಪಾತ್ರದಲ್ಲಿ ಮೋಹನ್ ಲಾಲ್ ನಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.