
ಬಾಡಿ ಶೇಮಿಂಗ್ ಪ್ರಶ್ನೆ ಕೇಳಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಗೌರಿ ಕಿಶನ್
ದಕ್ಷಿಣ ಭಾರತದ ನಟಿ ಗೌರಿ ಕಿಶನ್ ಅವರು ಸಿನಿಮಾದ ಕುರಿತು ನಡೆಸುತ್ತಿದ್ದ ಸುದ್ದಿಗೋಷ್ಠಿಯ ಸಂದರ್ಭದಲ್ಲಿ ಪರ್ತಕರ್ತರೊಬ್ಬರು ಕೇಳಿದ ದೇಹಾಕೃತಿ ಹೀಯಾಳಿಸುವ ಪ್ರಶ್ನೆಗೆ ನಟಿ ಖಡಕ್ ತಿರುಗೇಟು ನೀಡಿದ್ದಾರೆ. ಸದ್ಯ ನಟಿಯ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ಹರಿದಾಡುತ್ತಿದೆ.
ನಟಿ ಗೌರಿ ಕಿಶನ್ ಅವರಿಗೆ ಪತ್ರಕರ್ತರೊಬ್ಬರು ‘ನಿಮ್ಮ ತೂಕ ಎಷ್ಟು? ಎಂದು ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ನಟಿ, ‘ನನ್ನ ತೂಕ ತಿಳಿದುಕೊಂಡು ನೀವೇನು ಮಾಡುತ್ತೀರಿ? ಇದು ಯಾರನ್ನಾದರೂ ದೈಹಿಕವಾಗಿ ಅವಮಾನಿಸುವುದಲ್ಲವೆ ಎಂದು ಕಿಡಿಕಾರಿದ್ದಾರೆ. ‘ನೀವು ನನ್ನ ಸಿನಿಮಾ ಕುರಿತು ಪ್ರಶ್ನೆ ಕೇಳಿ, ನನ್ನ ದೇಹದ ಬಗ್ಗೆ ಅಲ್ಲ’ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ನಟಿಯ ಈ ಧೈರ್ಯಕ್ಕೆ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.
ಆರಂಭದಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಏನು ಉತ್ತರಿಸದೆ ಸುಮ್ಮನಿದ್ದರು. ಆದರೆ, ಅವರು ಮತ್ತೆ ಮತ್ತೆ ಅದೇ ಪ್ರಶ್ನೆ ಕೇಳಿದಾಗ ನಟಿ ಸಿಟ್ಟಾಗುತ್ತಾರೆ.
‘ನನ್ನ ಪಾತ್ರದ ಬಗ್ಗೆ ಅಥವಾ ಪಾತ್ರದ ಸಿದ್ಧತೆ ಬಗ್ಗೆ ಒಂದೇ ಒಂದು ಪ್ರಶ್ನೆಯನ್ನು ಕೇಳಿಲ್ಲ. ಆದರೆ ಎಲ್ಲರೂ ನನ್ನ ತೂಕದ ಬಗ್ಗೆ ತಿಳಿದುಕೊಳ್ಳಲು ಬಯಸುತ್ತೀರಾ’. ನಿಮ್ಮ ಪ್ರಶ್ನೆಗಳು ‘ಮೂರ್ಖತನ’ದ್ದಾಗಿದೆ ಎಂದು ಕಿಡಿಕಾರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಹಾಜರಿರುವ ಏಕೈಕ ಮಹಿಳಾ ಸದಸ್ಯೆಯನ್ನು ನೀವು ಅವಮಾನಿಸುತ್ತಿದ್ದೀರಿ. ನಟರ ಬಳಿಯೂ ನೀವು ಅವರ ತೂಕದ ಬಗ್ಗೆ ಕೇಳುತ್ತೀರಾ? ಎಂದು ಪ್ರಶ್ನಿಸಿದರು. ‘ನೀವು ನಟಿಯೊಬ್ಬಳನ್ನು ಕೇವಲವಾಗಿ ನೋಡುತ್ತಿದ್ದೀರಿ. ಇದು ಪತ್ರಕರ್ತರ ಕೆಲಸವಲ್ಲ’ ಎಂದು ಕಿಡಿಕಾರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.