ಬಾಲಿವುಡ್ ನಟಿ ಹೀನಾ ಖಾನ್
ಚಿತ್ರಕೃಪೆ: ಹೀನಾ ಖಾನ್ ಇನ್‌ಸ್ಟಾಗ್ರಾಮ್
ನವದೆಹಲಿ: ಹಲವು ಬಾಲಿವುಡ್ ಚಿತ್ರಗಳಲ್ಲಿ ನಟಿಸಿ ಮಿಂಚಿದ್ದ ನಟಿ ಹೀನಾ ಖಾನ್ ಅವರಿಗೆ ಸ್ತನ ಕ್ಯಾನ್ಸರ್ ಕಾಣಿಸಿಕೊಂಡಿದೆ.
ಹೌದು, ಈ ವಿಷಯವನ್ನು ಸ್ವತಃ ಅವರೇ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೊ ಮೂಲಕ ಹಂಚಿಕೊಂಡಿದ್ದು, ತಾವು ಮೂರನೇ ಹಂತದ ಸ್ತನ ಕ್ಯಾನ್ಸರ್ ವಿರುದ್ಧ ಧೈರ್ಯದಿಂದ ಹೋರಾಟ ನಡೆಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಜತೆಗೆ, ತಲೆ ಕೂದಲನ್ನು ಬೋಳಿಸಿಕೊಂಡಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.
‘ನೀವು ನಿಮ್ಮನ್ನು ಅಪ್ಪಿಕೊಂಡರೆ ಮಾತ್ರ ನೀವು ಇದನ್ನು (ಸ್ತನ ಕ್ಯಾನ್ಸರ್) ಗೆಲ್ಲಬಹುದು. ಜತೆಗೆ ನಿಮ್ಮ ಕಡೆಗೆ ಒಂದು ಹೆಜ್ಜೆ ಹತ್ತಿರವಾಗುತ್ತೀರಿ. ಇದರಿಂದ ಕ್ಯಾನ್ಸರ್ ಎಂಬ ಯುದ್ಧದಲ್ಲಿ ಜಯ ಸಾಧಿಸುತ್ತೀರಿ ಎಂದು ನಾನು ನಂಬುತ್ತೇನೆ’ ಎಂದಿದ್ದಾರೆ.
‘ನಾನು ಪ್ರತಿ ಬಾರಿ ನನ್ನ ಕೂದಲಿಗೆ ಕೈ ಹಾಕಿದಾಗ, ಕೂದಲು ಉದುರುವುದನ್ನು ಸಹಿಸಿಕೊಳ್ಳಲು ಕಷ್ಟವಾಗುತ್ತದೆ. ಇದು ತುಂಬಾ ಒತ್ತಡದಿಂದ ಕೂಡಿದ್ದು, ಖಿನ್ನತೆಗೆ ಒಳಗಾಗುವಂತೆ ಮಾಡುತ್ತದೆ. ನಮ್ಮ ಮಾನಸಿಕ ಆರೋಗ್ಯವು ಸರಿಯಾಗಿದ್ದರೆ ನಮ್ಮ ದೈಹಿಕ ಆರೋಗ್ಯವು 10 ಪಟ್ಟು ಉತ್ತಮವಾಗಿರುತ್ತದೆ’ ಎಂದು ಅವರು ವಿವರಿಸಿದ್ದಾರೆ.
‘ನಾನು ಸದಾಕಾಲ ಸಕರಾತ್ಮಕವಾಗಿ ಮತ್ತು ಸಂತೋಷದಿಂದ ಇರಲು ಬಯಸುತ್ತೇನೆ. ನನ್ನ ಬದುಕಿನಲ್ಲಿ ನಾನು ಯಾವುದೇ ಮಾನಸಿಕ ಒತ್ತಡಕ್ಕೆ ಒಳಗಾಗದಂತೆ ಸಾಧ್ಯವಿರುವ ಎಲ್ಲ ಕೆಲಸಗಳನ್ನು ಮಾಡಲು ಬಯಸುತ್ತೇನೆ’ ಎಂದು ಹೇಳಿದ್ದಾರೆ.
‘ಈ ಕಠಿಣ ಸಮಯವನ್ನು ಎದುರಿಸುತ್ತಿರುವ ಎಲ್ಲ ಜನರಿಗೂ, ವಿಶೇಷವಾಗಿ ಮಹಿಳೆಯರಿಗೆ ಇದು ಎಷ್ಟು ಕಷ್ಟ ಎಂದು ನನಗೆ ತಿಳಿದಿದೆ. ಇದು ತುಂಬಾ ನೋವಿನಿಂದ, ಒತ್ತಡದಿಂದ ಕೂಡಿದೆ. ಇದರಿಂದ ಹೊರಬರಲು ಪ್ರಯತ್ನಿಸಬೇಕೇ ಹೊರತು ಸುಮ್ಮನೆ ಕೂರಬಾರದು’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.