
ಮುಂಬೈ: ಭಾರತದಲ್ಲಿ 2025ರಲ್ಲಿ ಬಿಡುಗಡೆಯಾಗಿರುವ ಪ್ರಮುಖ ಸಿನಿಮಾ ಹಾಗೂ ವೆಬ್ ಸರಣಿಗಳ ವಾರ್ಷಿಕ ರ‍್ಯಾಂಕಿಂಗ್ ಪಟ್ಟಿಯನ್ನು ಐಎಂಡಿಬಿ ಬುಧವಾರ ಬಿಡುಗಡೆ ಮಾಡಿದೆ.
ಐಎಂಡಿಬಿಯು ಸಿನಿಮಾ, ಟೆಲಿವಿಷನ್ ಸರಣಿಗಳ ಕುರಿತಾದ ಮಾಹಿತಿಯುಳ್ಳ ಪ್ರಮುಖ ಅಂತರ್ಜಾಲ ತಾಣವಾಗಿದ್ದು, ಜಾಗತಿಕವಾಗಿ 25 ಕೋಟಿ ಬಳಕೆದಾರರನ್ನು ಹೊಂದಿದೆ.
ಬಳಕೆದಾರರ ಅಭಿಪ್ರಾಯವನ್ನು ಆಧರಿಸಿ ಸಿನಿಮಾ ಹಾಗೂ ವೆಬ್ ಸರಣಿಗಳ ರ‍್ಯಾಂಕಿಂಗ್ ಪಟ್ಟಿಯನ್ನು ತಯಾರಿಸಿದೆ ಎಂದು ಐಎಂಡಿಬಿ ತಿಳಿಸಿದೆ.
ಐಎಂಡಿಬಿ ರ‍್ಯಾಂಕಿಂಗ್ ಪಟ್ಟಿಯಲ್ಲಿ ಹೊಸ ಮುಖಗಳಾದ ಅಹಾನ್ ಪಾಂಡೆ ಮತ್ತು ಅನೀತ್ ಪಡ್ಡಾ ನಟನೆಯ ಬಾಲಿವುಡ್ ಸಿನಿಮಾ ‘ಸೈಯಾರ’ ಮೊದಲ ಸ್ಥಾನದಲ್ಲಿದೆ.
ಗ್ರಾಫಿಕ್ಸ್‌ನಲ್ಲಿ ಮೂಡಿಬಂದಿದ್ದ ‘ಮಹಾವತಾರ ನರಸಿಂಹ’ 2ನೇ ಸ್ಥಾನದಲ್ಲಿದ್ದರೆ, ವಿಕ್ಕಿ ಕೌಶಲ್ ನಟನೆಯ ‘ಛಾವಾ’, ರಿಷಭ್ ನಟನೆಯ ‘ಕಾಂತಾರ’, ರಜನಿಕಾಂತ್ ನಟನೆಯ ‘ಕೂಲಿ’ ಸಿನಿಮಾಗಳು ಕ್ರಮವಾಗಿ ಟಾಪ್–5ನಲ್ಲಿವೆ.
ತಮಿಳಿನ ‘ಡ್ರ್ಯಾಗನ್‘, ಅಮಿರ್ ಖಾನ್ ನಟನೆಯ ‘ಸಿತಾರೆ ಜಮೀನ್ ಪರ್’, ಶಾಹಿದ್ ಕಪೂರ್ ನಟನೆಯ ‘ದೇವಾ’, ಅಜಯ್ ದೇವಗನ್‌ನ ‘ರೈಡ್–2’, ಮಲಯಾಳದ ‘ಲೋಕ ಚಾಪ್ಟರ್ –1: ಚಂದ್ರ’ ಸಿನಿಮಾಗಳು ಪಟ್ಟಿಯಲ್ಲಿವೆ.
ಟಾಪ್–10 ಸಿನಿಮಾಗಳಲ್ಲಿ ಬಾಲಿವುಡ್‌ನ 5 ಸಿನಿಮಾ, ತಮಿಳಿನ 2 ಚಿತ್ರ, ಕನ್ನಡ ಮತ್ತು ಮಲಯಾಳದ ಒಂದು ಚಿತ್ರಗಳು ಪಟ್ಟಿಯಲ್ಲಿ ಇವೆ.
ಶಾರುಕ್ ಖಾನ್ ಮಗ ಆರ್ಯನ್ ಖಾನ್ ನಿರ್ದೇಶನದ ‘ದಿ ಬ್ಯಾ**ಡ್ಸ್ ಆಫ್ ಬಾಲಿವುಡ್’ ಸರಣಿಯು, ಈ ವರ್ಷದ ಟಾಪ್ ವೆಬ್ ಸರಣಿಯಾಗಿದೆ.
‘ಬ್ಲ್ಯಾಕ್ ವಾರೆಂಟ್’, ‘ಪಾತಾಳ ಲೋಕ – 2’, ‘ಪಂಚಾಯತ್ –4’ ‘ಮಂದಾಲ ಮರ್ಡರ್’ ಸರಣಿಗಳು ಕ್ರಮವಾಗಿ ಟಾಪ್–5ನಲ್ಲಿವೆ.
ಟಾಪ್ –10 ವೆಬ್ ಸರಣಿಗಳಲ್ಲಿ 4 ಸರಣಿಗಳು ನೆಟ್‌ಫ್ಲಿಕ್ಸ್ ಹಾಗೂ ಪ್ರೈಮ್ ವಿಡಿಯೊದಲ್ಲಿದ್ದರೆ, 2 ಸರಣಿಗಳು ಜಿಯೋ ಹಾಟ್‌ಸ್ಟಾರ್‌ನಲ್ಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.