
ಪ್ರಭಾಸ್
ಪ್ರಭಾಸ್ ಅಭಿನಯದ ‘ದಿ ರಾಜಾಸಾಬ್’ ತೆಲುಗು ಸಿನಿಮಾ ಪ್ರೀಮಿಯರ್ ಶೋ ಸಂದರ್ಭದಲ್ಲಿ ಅವರ ಅಭಿಮಾನಿಗಳು ತಳ್ಳಾಟ ನಡೆಸಿದ ಸುದ್ದಿಯೊಂದು ಹೈದರಾಬಾದ್ ಕಡೆಯಿಂದ ಬಂದಿದೆ. ಸಾಮಾಜಿಕ ಮಾಧ್ಯಮದ ತುಂಬೆಲ್ಲ ‘ಟಾಕ್ಸಿಕ್’ ಸಿನಿಮಾದ ರಾಯ ಪಾತ್ರದ ಪರಿಚಯ ಮಾಡಿಕೊಡುವ ಟೀಸರ್ ಕುರಿತು ಬಿಸಿ ಚರ್ಚೆ ನಡೆಯುತ್ತಿದೆ. ಹೊಸ ವರ್ಷದಲ್ಲಿ ಭಾರತದ ಚಿತ್ರರಂಗ ಮೈ ಕೊಡವಿಕೊಂಡು ಮೇಲೇಳುವ ಲಕ್ಷಣಗಳಂತೂ ದಟ್ಟವಾಗಿವೆ.
ಕಳೆದ ವರ್ಷದ ಕೊನೆಯಲ್ಲಿ ಕನ್ನಡದ ಸುದೀಪ್, ಶಿವರಾಜಕುಮಾರ್, ಉಪೇಂದ್ರ, ದರ್ಶನ್ ಎಲ್ಲ ಹೊಳೆಯುವ ತಾರೆಗಳ ಚಿತ್ರಗಳೂ ವಿವಾದಗಳನ್ನು ತುಳುಕಿಸುತ್ತಲೇ ನಿರೀಕ್ಷೆಯ ಬಾನಿನ ಎದುರು ಕಾರ್ಮೋಡ ಕವಿಯುವಂತೆ ಮಾಡಿದವು. ಅದೇ ಕಾಲಘಟ್ಟದಲ್ಲಿ ತೆರೆಕಂಡ ಹಿಂದಿಯ ‘ಧುರಂಧರ್’ ಯಶಸ್ಸಿನ ಅಲೆ ಈಗಲೂ ತಣ್ಣಗಾಗಿಲ್ಲ. ಇದುವರೆಗೆ ಯಾವ ಹಿಂದಿ ಚಿತ್ರವೂ ಮಾಡದಷ್ಟು ಗಳಿಕೆಯನ್ನು ಅದು ಮಾಡಿದೆ ಎನ್ನುವುದು ಗಣಿತ. ಅದರ ಎರಡನೇ ಭಾಗವು ಕನ್ನಡದ ಟಾಕ್ಸಿಕ್ ಬಿಡುಗಡೆ ಆಗಲಿರುವ ಮಾರ್ಚ್ 19ರಂದೇ ತೆರೆಕಾಣಲಿದೆ ಎನ್ನುವುದು ಸಂವಾದದ ವಸ್ತು.
ನಯನತಾರಾ
2026ರಲ್ಲಿ ಹಿಂದಿ ಚಿತ್ರರಂಗವು ನಿರೀಕ್ಷೆಗಳ ದೋಣಿಗಳನ್ನು ತೇಲಿ ಬಿಟ್ಟಿರುವಂತೆಯೇ ದಕ್ಷಿಣ ಭಾರತ ಚಿತ್ರರಂಗವೂ ತಾನೇನೂ ಕಡಿಮೆ ಇಲ್ಲ ಎನ್ನುವ ಸೂಚನೆ ಕೊಟ್ಟಿದೆ.
ತಲಪತಿ ವಿಜಯ್ ಕೊನೆಯ ಸಿನಿಮಾ ಎನ್ನುವ ಕಾರಣಕ್ಕೆ ನಿರೀಕ್ಷೆ ಮೂಡಿಸಿರುವ ‘ಜನ ನಾಯಗನ್’ ಚಿತ್ರ ಅಂದುಕೊಂಡಂತೆ ಜನವರಿ 9ರಂದು ತೆರೆ ಕಾಣಲಿಲ್ಲ. ಮದ್ರಾಸ್ ಹೈಕೋರ್ಟ್‌ಗೆ ಮೊರೆ ಹೋದರೂ ಸೆನ್ಸಾರ್ ಪ್ರಮಾಣಪತ್ರ ಸಿಗುವುದು ತಡವಾಯಿತು. ಎರಡು ವಾರ ಮೊದಲೇ ಬುಕಿಂಗ್ ಅವಕಾಶ ಕಲ್ಪಿಸಿ, ಗರಿಷ್ಠ 2 ಸಾವಿರ ರೂಪಾಯಿವರೆಗೆ ಟಿಕೆಟ್ ದರವನ್ನು ಚಿತ್ರತಂಡ ಇಟ್ಟಿತ್ತು. ಹಣ ಕೊಳ್ಳೆ ಹೊಡೆಯುವ ಎಲ್ಲ ಸಾಧ್ಯತೆಗಳಿಗೂ ಇದೇ ಕನ್ನಡಿ ಹಿಡಿಯುತ್ತದೆ.
ಮಾರುತಿ ನಿರ್ದೇಶನದ ‘ದಿ ರಾಜಾಸಾಬ್’ ತೆಲುಗು ಚಿತ್ರದ ಗಳಿಕೆಯು ಹೊಸ ವರ್ಷದಲ್ಲಿ ಶುಭ ಸುದ್ದಿಗೆ ಮುನ್ನುಡಿಯಾದೀತು ಎಂಬ ನಿರೀಕ್ಷೆ ಇದೆ.
ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಲವ್ ಆ್ಯಂಡ್ ವಾರ್’ ಈ ವರ್ಷದ ನಡುಘಟ್ಟದಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ. ರಣಬೀರ್ ಕಪೂರ್, ಆಲಿಯಾ ಭಟ್, ವಿಕ್ಕಿ ಕೌಶಲ್ ಅಭಿನಯ ಇದರಲ್ಲಿ ಇದೆ.
‘ರಾಮಾಯಣ’ ಹಿಂದಿ ಚಿತ್ರದ ಮೊದಲ ಭಾಗವೂ ಈ ವರ್ಷ ತೆರೆಕಾಣಲಿದೆ. ರಣಬೀರ್ ಕಪೂರ್, ಸಾಯಿ ಪಲ್ಲವಿ, ಯಶ್ ಅಭಿನಯದ, ರಾಮಾಯಣದ ಕಥನದ ಈ ಚಿತ್ರವನ್ನು ನಿತೇಶ್ ತಿವಾರಿ ಅದ್ದೂರಿ ಸಿ.ಜಿ. ಬಳಸಿ ನಿರ್ದೇಶಿಸುತ್ತಿದ್ದಾರೆ. ದೀಪಾವಳಿ ಸಂದರ್ಭದಲ್ಲಿ ಇದು ತೆರೆ ಕಾಣಬಹುದು.
ಕಳೆದ ವರ್ಷ ಸಲ್ಮಾನ್ ಖಾನ್ ಹಾಗೂ ಶಾರುಕ್ ಖಾನ್ ನಟಿಸಿದ್ದ ಒಂದೂ ಚಿತ್ರ ಬಿಡುಗಡೆಯಾಗಿರಲಿಲ್ಲ. ಈ ವರ್ಷ ಸಲ್ಮಾನ್ ಅಭಿನಯದ ‘ಬ್ಯಾಟಲ್ ಆಫ್ ಗಾಲ್ವಾನ್’ ಏಪ್ರಿಲ್‌ನಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ಅದರ ಕುರಿತ ವಿವಾದದ ಹೊಗೆ ದಟ್ಟವಾಗುತ್ತಿದೆ. ಶಾರುಕ್ ನಟನೆಯ ‘ಕಿಂಗ್’ ವರ್ಷದ ಎರಡನೇ ಅರ್ಧದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ವಯಸ್ಸಿಗೆ ತಕ್ಕಂತಹ ಪಾತ್ರದಲ್ಲಿ ಅವರು ಅಭಿನಯಿಸುತ್ತಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದ್ದು, ಅದರ ಬಾಕ್ಸಾಫೀಸ್ ಮೇಲೆ ಬಹುತೇಕರ ಕಣ್ಣು ನೆಟ್ಟಿದೆ.
ರಜನೀಕಾಂತ್ ನಟನೆಯ ‘ಜೈಲರ್ 2’ ತಮಿಳು ಚಿತ್ರವು ನಿರ್ದೇಶಕ ನೆಲ್ಸನ್ ವೃತ್ತಿ ಬದುಕಿಗೆ ತುಂಬಾ ಮುಖ್ಯವಾಗಿದೆ.
ಕಮಲ ಹಾಸನ್ ಹಾಗೂ ರಜನಿ ಒಟ್ಟಾಗಿ ನಟಿಸಲಿರುವ ಇನ್ನೊಂದು ತಮಿಳು ಚಿತ್ರ, ಮೋಹನ್ ಲಾಲ್ ಹಾಗೂ ಮಮ್ಮೂಟಿ ತೆರೆ ಹಂಚಿಕೊಳ್ಳಲಿರುವ ಮಲಯಾಳ ಚಿತ್ರ, ರಾಮಚರಣ್ ಅಭಿನಯದ ತೆಲುಗಿನ ‘ಪೆದ್ದಿ’, ಪ್ರದೀಪ್ ರಂಗನಾಥನ್ ನಾಯಕ ಆಗಿರುವ, ತಮಿಳಿನ ‘ಲವ್ ಇನ್ಶೂರೆನ್ಸ್ ಕಂಪನಿ’, ಸೂರ್ಯ ನಾಯಕರಾಗಿರುವ ‘ಕರುಪ್ಪು’... ಈ ವರ್ಷ ಅಭಿಮಾನಿಗಳು ಕಾಯುತ್ತಿರುವ ಚಿತ್ರಗಳು.
ಅನುರಾಗ್ ಕಶ್ಯಪ್ ನಿರ್ದೇಶನದ ‘ಬಂದರ್’ ಹಿಂದಿ ಚಿತ್ರದಲ್ಲಿ ಬಾಬಿ ಡಿಯೋಲ್ ಅಭಿನಯಿಸಿದ್ದಾರೆ. ‘ಅನಿಮಲ್’ ಸಿನಿಮಾದಲ್ಲಿ ಅವರ ಅಭಿನಯ ಜನಪ್ರಿಯವಾಗಿದ್ದರಿಂದ ಇದರಲ್ಲೂ ನಿರೀಕ್ಷೆಯ ಭಾರವಿದೆ. ವಿಶಾಲ್ ಭಾರದ್ವಾಜ್ ರುಜು ಇರುವ ‘ಓ ರೋಮಿಯೋ’ ಚಿತ್ರವು ವರ್ಷದ ಮಹತ್ವಾಕಾಂಕ್ಷಿ ಚಿತ್ರಗಳಲ್ಲಿ ಒಂದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.