ನಟ ಹಾಗೂ ಸಂಗೀತಗಾರ ಪ್ರಶಾಂತ್ ತಮಾಂಗ್
ಚಿತ್ರ ಕೃಪೆ: @PandeyJaideep
ಹಿಂದಿಯ ಪ್ರಮುಖ ರಿಯಾಲಿಟಿ ಶೋ ಇಂಡಿಯನ್ ಐಡಲ್‌ನ 3ನೇ ಆವೃತಿಯಲ್ಲಿ ಗೆದ್ದು ಮನೆಮಾತಾಗಿದ್ದ ಗಾಯಕ ಹಾಗೂ ನಟ ಪ್ರಶಾಂತ್ ತಮಾಂಗ್ ಭಾನುವಾರ ನವದೆಹಲಿಯ ತಮ್ಮ ನಿವಾಸದಲ್ಲಿ ನಿಧನರಾದರು. 43 ವರ್ಷದ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ನೇಪಾಳ ಮೂಲದ ಪ್ರಶಾಂತ್ ತಮಾಂಗ್ ಅವರು 1983ರ ಜನವರಿ 4ರಂದು ಡಾರ್ಜಿಲಿಂಗ್‌ನಲ್ಲಿ ಜನಿಸಿದರು. ಬಾಲ್ಯದಲ್ಲಿಯೇ ತಮ್ಮ ತಂದೆಯನ್ನು ಕಳೆದುಕೊಂಡ ಅವರು ಕೋಲ್ಕತ್ತದ ಪೊಲೀಸ್ ಇಲಾಖೆಯಲ್ಲಿ ಕಾನ್‌ಸ್ಟೆಬಲ್ ಆಗಿ ಕಾರ್ಯ ನಿರ್ವಹಿಸಿದ್ದರು. ಸಂಗೀತದಲ್ಲಿ ಅತೀವ ಆಸಕ್ತಿ ಇದ್ದಿದ್ದರಿಂದ ತಮ್ಮ ಕೆಲಸದ ಜೊತೆಗೆ ಪೊಲೀಸ್ ಆರ್ಕೆಸ್ಟ್ರಾ ಮೂಲಕ ಸಂಗೀತವನ್ನು ಮೈಗೂಡಿಸಿಕೊಂಡರು.
2007ರಲ್ಲಿ ಇಂಡಿಯನ್ ಐಡಲ್‌ನ 3ನೇ ಆವೃತಿಯಲ್ಲಿ ಗೆಲ್ಲುವ ಮೂಲಕ, ಪ್ರಶಾಂತ್ ತಮ್ಮ ಸಮುದಾಯಕ್ಕೆ ವ್ಯಾಪಕ ಮನ್ನಣೆಯನ್ನು ತಂದುಕೊಟ್ಟರು. ಅವರ ಸಂಗೀತದಲ್ಲಿ ನೇಪಾಳಿ ಹಾಡುಗಳನ್ನು ಹಾಡುವ ಮೂಲಕ ನೇಪಾಳಿ ಸಂಗೀತಕ್ಕೆ ಮನ್ನಣೆ ತಂದುಕೊಟ್ಟ ಕೀರ್ತಿ ಪ್ರಶಾಂತ್ ಅವರಿಗೆ ಸಲ್ಲುತ್ತದೆ.
’ಇಂಡಿಯನ್ ಐಡಲ್ ಖ್ಯಾತಿಯ ಜನಪ್ರಿಯ ಗಾಯಕ ಮತ್ತು ಕಲಾವಿದ ಪ್ರಶಾಂತ್ ತಮಾಂಗ್ ಅವರ ಹಠಾತ್ ಮತ್ತು ಅಕಾಲಿಕ ನಿಧನದಿಂದ ದುಃಖಿತನಾಗಿದ್ದೇನೆ. ನಮ್ಮ ಡಾರ್ಜಿಲಿಂಗ್ ಬೆಟ್ಟಗಳಲ್ಲಿ ಅವರ ಬೇರುಗಳಿವೆ. ಒಂದು ಕಾಲದಲ್ಲಿ ಕೋಲ್ಕತ್ತ ಪೊಲೀಸರೊಂದಿಗಿನ ಅವರ ಒಡನಾಟ ಬಂಗಾಳಕ್ಕೂ ಇದೆ. ಅವರ ಕುಟುಂಬ, ಸ್ನೇಹಿತರು ಮತ್ತು ಅಸಂಖ್ಯಾತ ಅನುಯಾಯಿಗಳಿಗೆ ನನ್ನ ಸಂತಾಪ ಸೂಚಿಸುತ್ತೇನೆ" ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಾಮಾಜಿಕ ಜಾಲತಾದಲ್ಲಿ ಸಂತಾಪ ಸೂಚಿಸಿದ್ದಾರೆ.
ಡಾರ್ಜಿಲಿಂಗ್‌ನ ಸಂಸತ್ ಸದಸ್ಯ ಮತ್ತು ಬಿಜೆಪಿಯ ರಾಷ್ಟ್ರೀಯ ವಕ್ತಾರ ರಾಜು ಬಿಸ್ತಾ ಅವರು ಪ್ರಶಾಂತ್ ತಮಾಂಗ್ ಅವರ ನಿಧನದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ. ’ಜನಪ್ರಿಯ ಗಾಯಕ ಮತ್ತು ನಟ ಪ್ರಶಾಂತ್ ತಮಾಂಗ್ ಅವರ ಅಕಾಲಿಕ ನಿಧನ, ಗೂರ್ಖಾ ಸಮುದಾಯ ಹಾಗೂ ಸಂಗೀತದ ಜಗತ್ತನ್ನು ದಿಗ್ಭ್ರಮೆಗೊಳಿಸಿದೆ. ಇದು ಹೃದಯ ವಿದ್ರಾವಕ ಘಟನೆಯಾಗಿದೆ. ಚಿಕ್ಕ ವಯಸ್ಸಿನಲ್ಲಿಯೇ ಇಂತಹ ಪ್ರತಿಭಾನ್ವಿತರ ನಿಧನವು ಭಾರತೀಯ ಸಂಗೀತ, ಸಿನಿಮಾ ಹಾಗೂ ಗೂರ್ಖಾಲಿ ಸಮುದಾಯಕ್ಕೆ ತುಂಬಲಾಗದ ನಷ್ಟ ಉಂಟುಮಾಡಿದೆ’. ಎಂದು ಹೇಳಿದ್ದಾರೆ.
ಪ್ರಶಾಂತ್ ತಮಾಂಗ್ ಸಿನಿ ಪಯಣ
2007ರಲ್ಲಿ ಇಂಡಿಯನ್ ಐಡಲ್ ಸೀಸನ್ 3 ಗೆದ್ದ ನಂತರ ತಮಾಂಗ್ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದರು. 2010ರಲ್ಲಿ ನೇಪಾಳಿ ಭಾಷೆಯ ಹಿಟ್ ಸಿನಿಮಾ ‘ಗೂರ್ಖಾ ಪಲ್ಟಾನ್’ ಮೂಲಕ ಸಿನಿಮಾಗೆ ಪದಾರ್ಪಣೆ ಮಾಡಿದರು. ‘ಅಂಗಲೋ ಯೋ ಮಾಯಾ ಕೋ’, ‘ಕಿನಾ ಮಾಯಾ ಮಾ’, ‘ನಿಶಾನಿ’ ಹಾಗೂ ‘ಪರ್ದೇಸಿ ಮತ್ತು ಕಿನಾ’ ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಪಾತಾಳ್ ಲೋಕ್ ಸೀಸನ್ 2’ ವೆಬ್ ಸಿರೀಸ್‌ನಲ್ಲಿ ಸ್ನೈಪರ್ ಡ್ಯಾನಿಯಲ್ ಎಂಬ ಪಾತ್ರದಲ್ಲಿ ಉತ್ತಮ ಅಭಿನಯದಿಂದ ಹೆಸರು ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.