ADVERTISEMENT

ರಂಗಭೂಮಿ ಖುಷಿ ಸಿನಿಮಾ ಕೃಷಿ: ‘ಮನದ ಕಡಲು’ ಸಿನಿಮಾದ ನಟ ಸುಮುಖ ಸಂದರ್ಶನ

ಅಭಿಲಾಷ್ ಪಿ.ಎಸ್‌.
Published 14 ಮಾರ್ಚ್ 2025, 0:30 IST
Last Updated 14 ಮಾರ್ಚ್ 2025, 0:30 IST
<div class="paragraphs"><p>ಸುಮುಖ </p></div>

ಸುಮುಖ

   

‘ಮುಂಗಾರು ಮಳೆ’ ಬಿಡುಗಡೆಯಾಗಿ 18 ವರ್ಷ ತುಂಬಿದೆ. ಯೋಗರಾಜ್‌ ಭಟ್‌ ನಿರ್ದೇಶನದ ಹೊಸ ಸಿನಿಮಾ ‘ಮನದ ಕಡಲು’ ಸಿನಿಮಾ ಮಾರ್ಚ್ 28 ರಂದು ಬಿಡುಗಡೆಯಾಗುತ್ತಿದ್ದು, ಮತ್ತೆ ಹೊಸಮುಖಗಳನ್ನು ಅವರು ತೆರೆಗೆ ಪರಿಚಯಿಸುತ್ತಿದ್ದಾರೆ. ಇಂತಹ ಹೊಸಮುಖಗಳಲ್ಲಿ ‘ಸುಮುಖ’ ಒಬ್ಬರಾಗಿದ್ದಾರೆ.

‘ಮನದ ಕಡಲು’ ದೊರೆತಿದ್ದು ಹೇಗೆ?

ADVERTISEMENT

ಯೋಗರಾಜ್‌ ಭಟ್‌ ಅವರಿಗೆ ನನ್ನ ತಂದೆ–ತಾಯಿಯ ಪರಿಚಯವಿತ್ತು. ಹಲವು ವರ್ಷಗಳ ಹಿಂದೆ ನನ್ನನ್ನು ಅವರು ನೋಡಿದ್ದರು. ಈಗ ನಾನು ಇಷ್ಟು ದೊಡ್ಡವನಾಗಿದ್ದೇನೆ ಎಂದು ಅವರಿಗೆ ತಿಳಿದಿರಲಿಲ್ಲ. ಅವರು ‘ಮನದ ಕಡಲು’ ಆಡಿಷನ್‌ ಆರಂಭಿಸಿ ಹೊಸಮುಖ ಸಿಗದೇ ಪ್ರಾಜೆಕ್ಟ್‌ ಕೈಬಿಡುವ ಯೋಚನೆಯಲ್ಲಿದ್ದರು. ‘ಮುಂಗಾರು ಮಳೆ’ ರೀತಿ ಹೊಸಬರನ್ನೇ ಹಾಕಿಕೊಂಡು ಸಿನಿಮಾ ಮಾಡುವ ಇರಾದೆ ಅವರದ್ದು. ಇದೇ ಸಂದರ್ಭದಲ್ಲಿ ನನ್ನ ತಾಯಿ ಯಾವುದೋ ಕಾರಣಕ್ಕೆ ಯೋಗರಾಜ್‌ ಭಟ್‌ ಅವರಿಗೆ ಕರೆ ಮಾಡಿದ್ದರು. ಆಗ ನನ್ನ ನೆನಪು ಅವರಿಗೆ ಆಗಿ ಆಡಿಷನ್‌ಗೆ ಕರೆದಿದ್ದರು. ಹೀಗೆ ಸಿನಿಮಾಗೆ ಆಯ್ಕೆಯಾದೆ. 

‘ಮುಂಗಾರು ಮಳೆ’ ನಿರ್ದೇಶಕ, ನಿರ್ಮಾಪಕರ ಸಿನಿಮಾ ಎಂದಾಗ ನಿರೀಕ್ಷೆ ಹೆಚ್ಚಿರುತ್ತದೆ. ಇದು ಹೊರೆಯಾಗಿತ್ತೇ?

ನನಗೆ ಮೊದಲ ಹೆಜ್ಜೆಯಿಂದಲೇ ಬಹಳ ಉತ್ಸಾಹವಿತ್ತು. ನನಗೆ ಸವಾಲುಗಳೆಂದರೆ ಬಹಳ ಇಷ್ಟ. ಹೀರೊ ಆಗುವುದು ಸುಲಭವಲ್ಲ, ಆ ದಾರಿಯಲ್ಲಿ ಹಲವು ಸವಾಲುಗಳಿರುತ್ತವೆ ಎಂಬ ಅರಿವು ನನಗಿತ್ತು. ಜೊತೆಗೆ ‘ಮುಂಗಾರು ಮಳೆ’ಯಂಥ ಹಿಟ್‌ ಸಿನಿಮಾ ನೀಡಿದ್ದ ನಿರ್ದೇಶಕ–ನಿರ್ಮಾಪಕರ ಸಿನಿಮಾ ಎಂದಾಗ ಜವಾಬ್ದಾರಿಯೂ ಹೆಚ್ಚು ಇರುತ್ತದೆ. ಆದರೆ ರಂಗಭೂಮಿಯಿಂದ ಬಂದ ನನಗೆ ಭಯ ಇರಲಿಲ್ಲ. ಭಿನ್ನವಾಗಿ ಪಾತ್ರವನ್ನು ನಿಭಾಯಿಸಬೇಕು ಎನ್ನುವ ತುಡಿತ ನನ್ನಲ್ಲಿತ್ತು. ಸಿನಿಮಾ ಚೌಕಟ್ಟಿನಲ್ಲಿದ್ದುಕೊಂಡೇ ಯೋಗರಾಜ್‌ ಭಟ್‌ ಅವರು ಇಂತಹ ಹೊಸತನವನ್ನು ಪ್ರೋತ್ಸಾಹಿಸುತ್ತಾರೆ. ಅವರ ಈ ಪ್ರೋತ್ಸಾಹ ಪಾತ್ರವನ್ನು ನಿಭಾಯಿಸಲು ಮತ್ತಷ್ಟು ಹುರುಪು ನೀಡಿತು. ಜೊತೆಗೆ ರಂಗಾಯಣ ರಘು, ದತ್ತಣ್ಣ ಅವರಂತಹ ಅನುಭವಿ ಕಲಾವಿದರ ಜೊತೆ ತೆರೆಹಂಚಿಕೊಳ್ಳುವ ಅವಕಾಶ ಸ್ಫೂರ್ತಿಯಾಗಿತ್ತು.   

‘ಫಿಸಿಕ್ಸ್‌ ಟೀಚರ್‌’ ಅನುಭವ ಸಹಕಾರಿಯಾಯಿತೇ?

ಹೌದು. ನಾನು ಕ್ಯಾಮೆರಾ ಮುಂದೆ ನಿಂತಾಗ ಸುತ್ತಮುತ್ತ ಇದ್ದ ವಾತಾವರಣ ಹೊಸದೇನಾಗಿರಲಿಲ್ಲ. ನಿರ್ದೇಶಕರು ನಟನಿಂದ ಏನು ಬಯಸುತ್ತಾರೆ ಎನ್ನುವುದು ನನಗೆ ಮೊದಲೇ ತಿಳಿಯುತ್ತಿತ್ತು. ನಾನು ಈ ಪಯಣದಲ್ಲಿ ಕಲಿಯುತ್ತಾ ಹೆಜ್ಜೆ ಇಡುತ್ತಿದ್ದೇನೆ. ಇದೊಂದು ಕಠಿಣ ಸಂದರ್ಭ. ನಾನು ನಟನಾಗಬೇಕು ಎಂದು ನಿರ್ಧರಿಸಿದ ಸಂದರ್ಭದಲ್ಲಿ ಚಿತ್ರಮಂದಿರಗಳು ಜನರಿಂದ ತುಂಬಿರುತ್ತಿದ್ದವು. ಈಗ ಸ್ಥಿತಿ ಬದಲಾಗಿದೆ. ಜನರು ಚಿತ್ರಮಂದಿರಗಳತ್ತ ಬರುತ್ತಿಲ್ಲ. ಹೀಗಿರುವಾಗ ಎಚ್ಚರಿಕೆಯ ಹೆಜ್ಜೆ ಇಡಬೇಕಿದೆ.    

ನಿಮ್ಮ ಪಾತ್ರದ ಬಗ್ಗೆ...

ಚಿತ್ರದಲ್ಲಿ ನಾನು ಈಗಿನ ಜನರೇಷನ್‌ ಯುವಕ. ಅವನಿಗೆ ಒಂದು ನಿರ್ದಿಷ್ಟ ಗುರಿಯಿಲ್ಲ. ಎಂಬಿಬಿಎಸ್‌ ಓದುವ ಹುಡುಗನೀತ. ಆ ವ್ಯವಸ್ಥೆ ಆತನಿಗೆ ಗೊಂದಲಗಳನ್ನು ಉಂಟುಮಾಡಿದಾಗ ಆತ ಓದು ತೊರೆದು ಹೊಸ ಪಯಣಕ್ಕೆ ಸಜ್ಜಾಗುತ್ತಾನೆ. ಅದುವೇ ಸಿನಿಮಾ ಕಥೆ. ಭಾವನಾತ್ಮಕ ಪ್ರೇಮಕಥೆಯ ಜೊತೆಗೆ ಇದರಲ್ಲಿ ಹಾಸ್ಯವೂ ತುಂಬಿಕೊಂಡಿದೆ. ಟ್ರಾವೆಲ್‌ ಅಡ್ವೆಂಚರ್‌ ಲವ್‌ಸ್ಟೋರಿ ಜಾನರ್‌ನಲ್ಲಿ ಸಿನಿಮಾವಿದೆ. ತಾಂತ್ರಿಕವಾಗಿ ಸಿನಿಮಾ ಅದ್ಭುತವಾಗಿ ಮೂಡಿಬಂದಿದೆ. ಮಹಾರಾಷ್ಟ್ರದ ಮುರುಡ್‍ ಜಂಜೀರ ಎಂಬ ಸಮುದ್ರದ ಮಧ್ಯದ ಕೋಟೆಯಲ್ಲಿ ಶೂಟಿಂಗ್‌ ಮಾಡಿದ ಅನುಭವ ವರ್ಣಿಸಲು ಸಾಧ್ಯವಿಲ್ಲ. ಈ ಪ್ರದೇಶವನ್ನು ಸಂತೋಷ್‍ ರೈ ಪಾತಾಜೆ ಕ್ಯಾಮೆರಾ ಮೂಲಕ ಕಾವ್ಯದಂತೆ ಸೆರೆಹಿಡಿದಿದ್ದಾರೆ. ಅದ್ಭುತವಾದ ಸಿನಿಮ್ಯಾಟಿಕ್‌ ಅನುಭವವನ್ನು ಈ ಸಿನಿಮಾ ನೀಡಲಿದೆ. 

ಮುಂದಿನ ಹೆಜ್ಜೆ...

ರಂಗಭೂಮಿ ನನಗೆ ಖುಷಿ ಕೊಡುವ ಜಾಗ. ಅಲ್ಲಿ ಕಿವಿಗೆ ನೇರವಾಗಿ ಕೇಳುವ ಚಪ್ಪಾಳೆಯ ಸದ್ದು ನೇರವಾಗಿ ಹೃದಯಕ್ಕೆ ತಲುಪುತ್ತದೆ. ರಂಗಭೂಮಿಯ ನಂಟು ಇದ್ದೇ ಇರುತ್ತದೆ. ಜೊತೆಗೆ ಸಿನಿಮಾಗಳನ್ನೂ ಮಾಡುತ್ತೇನೆ. ಒಂದು ಹೊಸ ಸಿನಿಮಾ ಒಪ್ಪಿಕೊಂಡಿದ್ದೇನೆ. ಅದು ‘ಮನದ ಕಡಲು’ ಸಿನಿಮಾ ಬಿಡುಗಡೆಯಾದ ಬೆನ್ನಲ್ಲೇ ಘೋಷಣೆಯಾಗಲಿದೆ. 

ರಂಗಭೂಮಿ ಮತ್ತು ನಿಮ್ಮ ನಂಟು ಕುರಿತು...

ರಂಗಭೂಮಿಯಲ್ಲಿ ಗುರುತಿಸಿಕೊಂಡಿರುವ ಶಶಿಕುಮಾರ್‌ ಹಾಗೂ ನಂದಿತಾ ಅವರ ಮಗ ನಾನು. ಬೆಂಗಳೂರಿನಲ್ಲೇ ಜನಿಸಿದ ನಾನು ಐದನೇ ವಯಸ್ಸಿಗೆ ರಂಗಭೂಮಿ ವೇದಿಕೆ ಏರಿದೆ. ಅಭಿನಯ ತರಂಗ ಸೇರಿದಂತೆ ಹಲವು ತಂಡಗಳಲ್ಲಿ ನಾಟಕಗಳನ್ನು ಮಾಡಿದೆ. ನಟನಾಗಬೇಕು ಎಂಬ ಇಚ್ಛೆ ಮೊದಲೇ ಇದ್ದ ಕಾರಣ ದ್ವಿತೀಯ ಪಿ.ಯು.ಸಿ ಪೂರ್ಣಗೊಳಿಸಿದ ಬೆನ್ನಲ್ಲೇ ನಟನೆಯ ತರಬೇತಿಗಾಗಿ ಮುಂಬೈಗೆ ತೆರಳಿದೆ. ಅಲ್ಲಿ ಪೃಥ್ವಿ ಥಿಯೇಟರ್‌ನಲ್ಲಿ ಹಲವು ಖ್ಯಾತ ರಂಗಕರ್ಮಿಗಳ ನಾಟಕಗಳಲ್ಲಿ ಬಣ್ಣಹಚ್ಚಿದೆ. ಬಳಿಕ ನ್ಯಾಷನಲ್‌ ಸ್ಕೂಲ್‌ ಆಫ್‌ ಡ್ರಾಮಾದ (ಎನ್‌ಎಸ್‌ಡಿ) ಶಿಕ್ಷಕರು ಮಾಡಿಸುತ್ತಿದ್ದ ನಾಟಕಗಳಲ್ಲಿ ನಟಿಸಿದೆ. ಜೀ ಚಾನೆಲ್‌ನವರು ಆರಂಭಿಸಿದ ಜೀ ಥಿಯೇಟರ್‌ನಲ್ಲಿ ಸ್ಟೇಜ್‌ ಮ್ಯಾನೇಜರ್‌ ಆಗಿ ಕಾರ್ಯನಿರ್ವಹಿಸಿದೆ. ಇದಾದ ಬಳಿಕ ನಾನೇ ‘ಫಿಸಿಕ್ಸ್‌ ಟೀಚರ್’ ಎಂಬ ಸಿನಿಮಾ ನಿರ್ದೇಶಿಸಿ, ನಟಿಸಿದೆ. ಕೋವಿಡ್‌ ಸಂದರ್ಭದಲ್ಲಿ ಇದು ಬಿಡುಗಡೆಯಾಗಿತ್ತು. ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಸೇರಿದಂತೆ ಹಲವು ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿತು. ಇದಾದ ಬಳಿಕ ಸಿನಿಮಾಗಳಲ್ಲಿ ನಟನೆಯ ಹುಡುಕಾಟ ಮುಂದುವರಿದಿತ್ತು. ಎರಡು ಸಿನಿಮಾ ಮಾತುಕತೆಗಳು ನಡೆದರೂ ಅದು ಮುಂದುವರಿಯಲಿಲ್ಲ. 

ಸುಮುಖ ಮತ್ತು ರಾಶಿಕಾ ಶೆಟ್ಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.