ADVERTISEMENT

ಪುನೀತ್‌ ರಾಜ್‌ಕುಮಾರ್‌ ಅಭಿನಯದ ‘ಜೇಮ್ಸ್‌’ ಪ್ರದರ್ಶನ, ಗಳಿಕೆಯಲ್ಲಿ ಹೊಸ ದಾಖಲೆ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2022, 13:39 IST
Last Updated 18 ಮಾರ್ಚ್ 2022, 13:39 IST
ಚಿತ್ರಮಂದಿರಗಳಲ್ಲಿ ‘ಜೇಮ್ಸ್‌’ ಹಬ್ಬ
ಚಿತ್ರಮಂದಿರಗಳಲ್ಲಿ ‘ಜೇಮ್ಸ್‌’ ಹಬ್ಬ   

ಬೆಂಗಳೂರು: ನಟ ದಿವಂಗತ ಪುನೀತ್‌ ರಾಜ್‌ಕುಮಾರ್‌ ನಟನೆಯ ‘ಜೇಮ್ಸ್‌’ ಸಿನಿಮಾಪ್ರದರ್ಶನ ಹಾಗೂ ಗಳಿಕೆ ವಿಚಾರದಲ್ಲಿ ಚಂದನವನದಲ್ಲಿ ಹೊಸ ದಾಖಲೆ ಬರೆದಿದೆ.

ಶುಕ್ರವಾರವೂ ರಾಜ್ಯದೆಲ್ಲೆಡೆ ‘ಜೇಮ್ಸ್‌’ ಹಬ್ಬ ಜೋರಾಗಿತ್ತು. ಕರ್ನಾಟಕದಲ್ಲೇ 386 ಏಕಪರದೆ ಚಿತ್ರಮಂದಿರ ಹಾಗೂ ಎಲ್ಲ ಮಲ್ಟಿಪ್ಲೆಕ್ಸ್‌ಗಳು, ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶದಲ್ಲಿ 400–500 ಏಕಪರದೆ ಚಿತ್ರಮಂದಿರಗಳು, ತಮಿಳುನಾಡಿನಲ್ಲಿ 150–180 ಚಿತ್ರಮಂದಿರಗಳು, ಕೇರಳದಲ್ಲಿ 80 ಚಿತ್ರಮಂದಿರಗಳಲ್ಲಿ ಹೀಗೆ ವಿಶ್ವವ್ಯಾಪಿ ಒಟ್ಟು 4 ಸಾವಿರಕ್ಕೂ ಅಧಿಕ ತೆರೆಗಳಲ್ಲಿ ‘ಜೇಮ್ಸ್‌’ ಪ್ರದರ್ಶನ ನಡೆದಿದೆ. ಬೆಂಗಳೂರಿನ ಕೆಲ ಮಲ್ಟಿಪ್ಲೆಕ್ಸ್‌ಗಳಲ್ಲಿ ಗುರುವಾರ 22 ಪ್ರದರ್ಶನಗಳು ಇದ್ದವು. ಶುಕ್ರವಾರವೂ ಹಲವು ಮಲ್ಟಿಪ್ಲೆಕ್ಸ್‌ಗಳಲ್ಲಿ ಕನಿಷ್ಠ 10–12 ಪ್ರದರ್ಶನಗಳಿದ್ದವು. ರಾಜ್ಯದ ಹಲವು ಏಕಪರದೆ ಚಿತ್ರಮಂದಿರಗಳಲ್ಲಿ ಭಾನುವಾರದವರೆಗೂ ಟಿಕೆಟ್‌ಗಳು ಬಹುತೇಕ ಮಾರಾಟವಾಗಿದೆ.

ಮೊದಲ ದಿನದ ಗಳಿಕೆ, ₹40 ಕೋಟಿಗೆ ಡಿಜಿಟಲ್‌ ಹಕ್ಕು ಮಾರಾಟ, ಸುಮಾರು ₹10–15 ಕೋಟಿಗೆ ಸ್ಯಾಟಲೈಟ್‌ ಹಕ್ಕು ಹಾಗೂ ವಾಹಿನಿಗೆ ಸಿನಿಮಾ ಮಾರಾಟ, ಹಿಂದಿ ಡಬ್ಬಿಂಗ್‌ ಹಕ್ಕು ಸೇರಿ ಈಗಾಗಲೇ ‘ಜೇಮ್ಸ್‌’ ಗಳಿಕೆ ₹100 ಕೋಟಿ ದಾಟಿದೆ. ಕರ್ನಾಟಕದಲ್ಲೇ ಮೊದಲ ದಿನ ‘ಜೇಮ್ಸ್‌’ ಸುಮಾರು ₹30–₹35 ಕೋಟಿ ಗಳಿಸಿದೆ ಎನ್ನಲಾಗಿದೆ. ಐದು ಭಾಷೆಗಳಲ್ಲಿ ಬಿಡುಗಡೆಯಾದ ಈ ಸಿನಿಮಾದ ಗಳಿಕೆ ತುಂಬಾ ಜೋರಾಗಿದೆ. ಈ ಕುರಿತು ಚಿತ್ರತಂಡವು ಅಧಿಕೃತವಾಗಿ ಇನ್ನಷ್ಟೇ ಮಾಹಿತಿ ನೀಡಬೇಕಿದೆ. ಈ ಹಿಂದೆ ನಟ ಯಶ್‌ ನಟನೆಯ ಕೆ.ಜಿ.ಎಫ್‌ ಪ್ರದರ್ಶನ ಹಾಗೂ ಗಳಿಕೆಯಲ್ಲಿ ದಾಖಲೆಯನ್ನು ಹೊಂದಿತ್ತು.

ADVERTISEMENT

ಹೊಸಪೇಟೆಯಲ್ಲಿ 25ನೇ ದಿನದ ಸಂಭ್ರಮ: ಚಿತ್ರತಂಡವು ಹೊಸಪೇಟೆಯಲ್ಲಿ ಬಿಡುಗಡೆಪೂರ್ವ ಕಾರ್ಯಕ್ರಮ ಆಯೋಜಿಸಲು ಸಿದ್ಧತೆ ನಡೆಸಿತ್ತು. ಆದರೆ ಕೊನೆಯ ಕ್ಷಣದಲ್ಲಿ ಬೆಂಗಳೂರಿನಲ್ಲೇ ಈ ಕಾರ್ಯಕ್ರಮ ಆಯೋಜಿಸಿತ್ತು. ಇದೀಗ 25ನೇ ದಿನದ ಸಂಭ್ರಮವನ್ನು ಹೊಸಪೇಟೆಯಲ್ಲಿ ಅದ್ಧೂರಿಯಾಗಿ ಆಯೋಜಿಸಲು ಚಿತ್ರತಂಡ ನಿರ್ಧರಿಸಿದೆ. ‘ಚಿತ್ರ ಬಿಡುಗಡೆಗೆ ಮೊದಲೇ ಡಿಜಿಟಲ್‌ ಹಕ್ಕು ಸೋನಿ ಲಿವ್‌ಗೆ ಮಾರಾಟವಾಗಿದೆ. ಈ ಒಟಿಟಿ ವೇದಿಕೆಯಲ್ಲಿ ಬರುತ್ತಿರುವ ಮೊದಲ ಕನ್ನಡ ಸಿನಿಮಾ ‘ಜೇಮ್ಸ್‌’. ಪ್ರಸ್ತುತ ಆಗಿರುವ ದಾಖಲೆ ಅಪ್ಪು ಅವರಿಗೆ ಜನರು ನೀಡಿದ ಕೊಡುಗೆ. ಇದು ಅಭಿಮಾನಿಗಳು ಬರೆದಿರುವ ದಾಖಲೆ’ ಎಂದಿದ್ದಾರೆ ನಿರ್ದೇಶಕ ಚೇತನ್‌ ಕುಮಾರ್‌.

ಇವನ್ನೂ ಓದಿ:













ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.