ADVERTISEMENT

ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಕಾಂತಾರ ಆರ್ಭಟ: ಎರಡನೇ ವಾರ ಗಳಿಸಿದ್ದೆಷ್ಟು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಅಕ್ಟೋಬರ್ 2025, 9:13 IST
Last Updated 17 ಅಕ್ಟೋಬರ್ 2025, 9:13 IST
<div class="paragraphs"><p>ಕಾಂತಾರ ಚಾಪ್ಟರ್–1</p></div>

ಕಾಂತಾರ ಚಾಪ್ಟರ್–1

   

ಅಕ್ಟೋಬರ್ 2ರಂದು ತೆರೆಕಂಡಿದ್ದ ನಟ ರಿಷಬ್‌ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಕಾಂತಾರ ಒಂದು ದಂತಕಥೆ ಚಾಪ್ಟರ್‌–1’ ಸಿನಿಮಾ ಎರಡು ವಾರದಲ್ಲಿ ವಿಶ್ವದಾದ್ಯಂತ ₹717.50 ಕೋಟಿ ಗಳಿಸಿದೆ ಎಂದು ಹೊಂಬಾಳೆ ಫಿಲ್ಮ್ಸ್‌ ತಿಳಿಸಿದೆ.

ಕಾಂತಾರ ಚಾಪ್ಟರ್–1 ಸಿನಿಮಾ ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ತೆರೆಕಂಡು ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಂಡಿದೆ. ಈ ನಡುವೆ ಸಿನಿಮಾ 2 ವಾರಗಳನ್ನು ಪೂರ್ಣಗೊಳಿಸಿದ್ದು, ಬರೋಬ್ಬರಿ ₹717.50 ಕೋಟಿಗೂ ಅಧಿಕ ಆದಾಯ ಗಳಿಸಿ ಮುನ್ನುಗ್ಗುತ್ತಿದೆ.

ADVERTISEMENT

ಈ ವಿಷಯವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಹೊಂಬಾಳೆ ಫಿಲ್ಮ್ಸ್‌, ‘ಬಾಕ್ಸ್ ಆಫೀಸ್‌ನಲ್ಲಿ ಕಾಂತಾರ ಚಾಪ್ಟರ್–1 ಬಿರುಗಾಳಿ ಎಬ್ಬಿಸಿದೆ. 2 ವಾರಗಳಲ್ಲಿ ವಿಶ್ವದಾದ್ಯಂತ ₹717.50 ಕೋಟಿ ಗಳಿಕೆ ದಾಟಿದೆ. ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಸಿನಿಮಾ ಯಶಸ್ವಿ ಪ್ರದರ್ಶನಗೊಳ್ಳುತ್ತಿದ್ದು, ಕಾಂತಾರ ಜೊತೆಗೆ ದೀಪಾವಳಿ ಆಚರಿಸಿ‘ ಎಂದು ಬರೆದುಕೊಂಡಿದ್ದಾರೆ.

ರುಕ್ಮಿಣಿ ವಸಂತ್‌ ನಾಯಕಿಯಾಗಿ ನಟಿಸಿರುವ ಈ ಸಿನಿಮಾ ಬಿಡುಗಡೆಯಾದ ಮೊದಲ ವಾರದಲ್ಲಿ ₹509.25 ಕೋಟಿ ಗಳಿಸಿತ್ತು. ಕರ್ನಾಟಕದಲ್ಲೇ ಇಲ್ಲಿಯವರೆಗೆ ₹200 ಕೋಟಿಗಿಂತ ಹೆಚ್ಚಿನ ಹಣವನ್ನು ಸಿನಿಮಾ ಬಾಚಿದೆ. ದೇಶದಾದ್ಯಂತ ಏಳು ಸಾವಿರಕ್ಕೂ ಅಧಿಕ ತೆರೆಗಳಲ್ಲಿ ಬಿಡುಗಡೆಯಾಗಿದ್ದ ಈ ಸಿನಿಮಾದ ಓಟ ಇನ್ನೂ ನಿಂತಿಲ್ಲ. ಕನ್ನಡದಲ್ಲಿ ಅಕ್ಟೋಬರ್ 31ರವರೆಗೂ ದೊಡ್ಡ ಸಿನಿಮಾಗಳಿಲ್ಲ. ಹೀಗಾಗಿ ರಾಜ್ಯದ ಬಹುತೇಕ ಚಿತ್ರಮಂದಿರಗಳಲ್ಲಿ ಇನ್ನೆರಡು ವಾರ ಈ ಸಿನಿಮಾದ ಪ್ರದರ್ಶನ ಮುಂದುವರಿಯಲಿದೆ.

ಹಿಂದಿಯಲ್ಲಿ ಆಯುಷ್ಮಾನ್‌ ಖುರಾನ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ‘ಥಮ್ಮ’ ಸಿನಿಮಾ ಅಕ್ಟೋವರ್ 21ರಂದು ಬಿಡುಗಡೆಯಾಗುತ್ತಿದೆ. ಅತ್ತ ತೆಲುಗು, ತಮಿಳಿನಲ್ಲೂ ದೊಡ್ಡ ಚಿತ್ರಗಳು ಸದ್ಯಕ್ಕಿಲ್ಲ. ಹೀಗಾಗಿ ‘ಕಾಂತಾರ’ದ ಗಳಿಕೆ ಇನ್ನೆರಡು ವಾರಗಳಲ್ಲಿ ₹1000 ಕೋಟಿ ತಲುಪುವ ನಿರೀಕ್ಷೆಯಿದೆ.

ಚಿತ್ರದಲ್ಲಿ ಕನಕವತಿಯಾಗಿ ರುಕ್ಮಿಣಿ ವಸಂತ್‌, ಬಾಂಗ್ರಾ ರಾಜ ಮನೆತನದ ಅರಸರಾಗಿ ಜಯರಾಮ್ ಮತ್ತು ಅವರ ಮಗ ಕುಲಶೇಖರನಾಗಿ ಗುಲ್ಶನ್ ದೇವಯ್ಯ ಕಾಣಿಸಿಕೊಂಡಿದ್ದಾರೆ. ಸೈನಿಕನಾಗಿ ಪ್ರಕಾಶ್‌ ತೂಮಿನಾಡು ಹಾಗೂ ದೀಪಕ್‌ ರೈ, ಅಜನೀಶ್‌ ಲೋಕನಾಥ್‌ ಹಿನ್ನೆಲೆ ಸಂಗೀತ. ಅರವಿಂದ್‌ ಕಶ್ಯಪ್‌ ಛಾಯಾಚಿತ್ರಗ್ರಹಣ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.