
ಬೆಂಗಳೂರು: ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ 'ಕಾಂತಾರ ಅಧ್ಯಾಯ 1' ಸಿನಿಮಾ ಆಸ್ಕರ್ ಅಂಗಳಕ್ಕೆ ಕಾಲಿಟ್ಟಿದೆ. ಈ ಬಗ್ಗೆ ಸಿನಿಮಾ ಕ್ಷೇತ್ರದವರೂ ಸೇರಿದಂತೆ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದರು.
'ಕಾಂತಾರ ಅಧ್ಯಾಯ 1' ಅಕ್ಟೋಬರ್ 2ರಂದು ಬಿಡುಗಡೆಯಾಗಿ ದೇಶದಾದ್ಯಂತ 7 ಸಾವಿರಕ್ಕೂ ಅಧಿಕ ಪರದೆಗಳಲ್ಲಿ ತೆರೆಕಂಡು ಯಶಸ್ವಿ ಪ್ರದರ್ಶನಗೊಂಡಿತ್ತು. ಇದೀಗ ಈ ಸಿನಿಮಾ ಆಸ್ಕರ್ ಅಂಗಳಕ್ಕೆ ಕಾಲಿಟ್ಟಿದೆ. ಜೊತೆಗೆ ‘ಅತ್ಯುತ್ತಮ ಚಿತ್ರ’ ಸ್ಪರ್ಧೆಯ ರೇಸ್‌ಗೆ ಪ್ರವೇಶ ಪಡೆದಿದೆ.
ಬಾಲಿವುಡ್ ನಟ ವಿವೇಕ್ ಒಬೆರಾಯ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡು 'ಕಾಂತಾರ ಅಧ್ಯಾಯ 1' ಸಿನಿಮಾಕ್ಕೆ ಶುಭಾಶಯ ಕೋರಿದ್ದಾರೆ. ಆದರೆ ಮೆಚ್ಚುಗೆ ವ್ಯಕ್ತಪಡಿಸುವ ಭರದಲ್ಲಿ ಎಡವಟ್ಟು ಮಾಡಿದ್ದಾರೆ.
ತುಳುನಾಡಿನ ಪ್ರಾಚೀನ ಪವಿತ್ರ ಆಚರಣೆಯು ಈಗ ಜಾಗತಿಕವಾಗಿ ಹೊರಹೊಮ್ಮಿದೆ. ಇದೀಗ ಭೂತ ಕೋಲವು ಗಡಿಗಳನ್ನು ಮೀರಿ, ಜಾಗತಿಕವಾಗಿ ಪರಿಚಿತವಾಗಿದೆ. ಆಸ್ಕರ್‌ನ ಅತ್ಯುತ್ತಮ ಚಿತ್ರ ಸ್ಪರ್ಧೆಗೆ ಕಾಂತಾರ ಅರ್ಹತೆ ಪಡೆದಿದ್ದಕ್ಕೆ ನನ್ನ ಸಹೋದರ ರಿಷಬ್ ಶೆಟ್ಟಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು!. ಇದು ಕೇವಲ ನಾಮನಿರ್ದೇಶನವಲ್ಲ; ಇದು ವಿಶ್ವದ ಅತ್ಯಂತ ಪ್ರತಿಷ್ಠಿತ ವೇದಿಕೆಯಲ್ಲಿ ಪ್ರತಿಧ್ವನಿಸಿದ ನಮ್ಮ ಪೂರ್ವಜರ ಘರ್ಜನೆಯಾಗಿದೆ. ಈ ಸಿನಿಮಾ ಇತಿಹಾಸದಲ್ಲಿ ತನ್ನ ಸ್ಥಾನವನ್ನು ಪಡೆದುಕೊಂಡಿದೆ ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಆದರೆ ಕೊನೆಯ ಸಾಲಿನಲ್ಲಿ ಆಸ್ಕರ್ ಪ್ರಶಸ್ತಿಯನ್ನು ಮನೆಗೆ ತೆಗೆದುಕೊಂಡು ಬರುತ್ತೀವಿ ಎಂದು ತೆಲುಗಿನಲ್ಲಿ ಬರೆದುಕೊಂಡಿದ್ದಾರೆ. ಇಷ್ಟು ಸುದೀರ್ಘವಾಗಿ ಬರೆದುಕೊಂಡಿರುವ ಒಬೆರಾಯ್ ಅವರಿಗೆ ಕಾಂತಾರ ಯಾವ ಭಾಷೆಯದ್ದು ಎಂಬುವುದು ತಿಳಿದಿಲ್ಲವೇ, ಕನ್ನಡ ಬದಲು ತೆಲುಗಿನಲ್ಲಿ ಬರೆದುಕೊಂಡಿದ್ದಾರೆ ಎಂದು ನೆಟ್ಟಿಗರು ಸಾಮಾಜಿಕ ಮಾಧ್ಯಮಗಳಲ್ಲಿ ಟೀಕಿಸುತ್ತಿದ್ದಾರೆ.
ಈ ಬಗ್ಗೆ ಕಾಂತಾರ ಸಿನಿಮಾ ಹಾಗೂ ಕನ್ನಡ ಅಭಿಮಾನಿಗಳು ಸಹ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.