ADVERTISEMENT

ಬೆಳ್ಳಿತೆರೆಯಲ್ಲಿ ಕಾರ್ಗಿಲ್ ಮಿಂಚು

​ಪ್ರಜಾವಾಣಿ ವಾರ್ತೆ
Published 25 ಜುಲೈ 2019, 12:08 IST
Last Updated 25 ಜುಲೈ 2019, 12:08 IST
   

ಭಾರತೀಯ ಚಿತ್ರರಂಗದಲ್ಲಿ‌ ಕಪ್ಪು– ಬಿಳುಪಿನ ಕಾಲದಿಂದಲೂ ಯುದ್ಧದ ಕಥೆ ಆಧಾರಿತ ಹಲವು ಸಿನಿಮಾಗಳು ತೆರೆಕಂಡಿವೆ. ಇವುಗಳ ಪೈಕಿ 1997ರಲ್ಲಿ ಬಿಡುಗಡೆಗೊಂಡ ಜೆ.ಪಿ. ದತ್ತಾ ನಿರ್ದೇಶನದ ‘ಬಾರ್ಡರ್’ ಸಿನಿಮಾವು ಚಿತ್ರ ಜಗತ್ತಿನಲ್ಲೊಂದು ಮೈಲುಗಲ್ಲು. 1971ರ ಭಾರತ–ಪಾಕಿಸ್ತಾನ ಯುದ್ಧದ ಕಥೆಯನ್ನು ಆಧಾರವಾಗಿಟ್ಟುಕೊಂಡು ನಿರ್ಮಾಣಗೊಂಡ ಈ ಸಿನಿಮಾ ದೇಶದಾದ್ಯಂತ ಸದ್ದು ಮಾಡಿದ್ದಲ್ಲದೆ ಅನೇಕ ಪ್ರಶಸ್ತಿಗಳನ್ನೂ ಬಾಚಿಕೊಂಡಿತ್ತು. ಆ ಬಳಿಕ, ಭಾರತ- ಪಾಕಿಸ್ತಾನ ಯುದ್ಧ, ಚೀನಾ ಅತಿಕ್ರಮಣ, ಭಯೋತ್ಪಾದಕರ ಜೊತೆ ಭಾರತೀಯ ಸೈನಿಕರ ಕೆಚ್ಚೆದೆಯ ಹೋರಾಟ ಎಲ್ಲವೂ ಬೆಳ್ಳಿತೆರೆಯ ಕಥಾ ವಸ್ತುಗಳಾಗಿ ಪ್ರೇಕ್ಷಕರಿಗೆ ಮೋಡಿ ಮಾಡಿವೆ.

ಕಾರ್ಗಿಲ್‌ ಯುದ್ಧ ನಡೆದಿದ್ದು 1999ರಲ್ಲಿ. ಈ ಯುದ್ಧ ಹಲವು ಸಿನಿಮಾಗಳಿಗೆ ಕಥಾ ವಸ್ತು ಆಗಿದೆ. ಬಾಲಿವುಡ್‌ನಲ್ಲಿ ಕಾರ್ಗಿಲ್ ಕುರಿತು ನಿರ್ಮಾಣಗೊಂಡ ಪ್ರಮುಖ ಸಿನಿಮಾಗಳ ಕಿರುನೋಟ ಇಲ್ಲಿದೆ.

ಎಲ್ಒಸಿ ಕಾರ್ಗಿಲ್

ADVERTISEMENT

ಕಾರ್ಗಿಲ್‌ನಲ್ಲಿ ಭಾರತೀಯ ಪಡೆಗಳು ನಡೆಸಿದ ‘ಆಪರೇಷನ್ ವಿಜಯ್’ ಕಾರ್ಯಾಚರಣೆ ಆಧರಿಸಿ ನಿರ್ಮಾಣವಾಗಿರುವ ಚಿತ್ರ ಇದು. ಇದರ ನಿರ್ದೇಶಕ ಜೆ.ಪಿ. ದತ್ತಾ.

ಸಂಜಯ್ ದತ್, ಸುನಿಲ್ ಶೆಟ್ಟಿ, ಅಕ್ಷಯ್ ಖನ್ನಾ, ಅಜಯ್ ದೇವಗನ್, ಅಭಿಷೇಕ್ ಬಚ್ಚನ್ ಮತ್ತು ಸೈಫ್ ಅಲಿಖಾನ್ ಮುಖ್ಯಭೂಮಿಕೆಯಲ್ಲಿದ್ದ ಈ ಚಿತ್ರ 2003ರಲ್ಲಿ ಬಿಡುಗಡೆಗೊಂಡಿತು. ಈ ಸಿನಿಮಾ ಆರಂಭವಾಗುವುದು ಹಿಮಪರ್ವತಗಳ ಮೇಲೆ ನುಸುಳಿ ಕುಳಿತಿದ್ದ ಉಗ್ರರ ಗುಂಡೇಟಿಗೆ ಬಲಿಯಾಗಿರುವ ಸೈನಿಕರ ದೃಶ್ಯಾವಳಿಯ ಮೂಲಕ. ಈ ಸೈನಿಕರನ್ನು ಹುಡುಕಿಕೊಂಡು ಹೋಗುವ ಯೋಧರಿಗೆ ಪರ್ವತಗಳ ಮೇಲೆ ಪಾಕ್ ಸೈನಿಕರು ಬೀಡುಬಿಟ್ಟಿರುವುದು ಅರಿವಾಗುತ್ತದೆ. ಅವರನ್ನು ಸೆದೆ ಬಡಿಯಲು ಭಾರತೀಯ ಯೋಧರು ನಡೆಸುವ ಪ್ರತಿ ಕಾರ್ಯಾಚರಣೆಯನ್ನು ಪ್ರೇಕ್ಷಕರ ಕಣ್ಣಿಗೆ ಕಟ್ಟುವಂತೆ ಚಿತ್ರಿಸಲಾಗಿದೆ.

ಹಂತ ಹಂತವಾಗಿ ಇಡೀ ಕಾರ್ಗಿಲ್ ಯುದ್ಧದ ಕಥನ ಕಟ್ಟಿಕೊಡುವಲ್ಲಿ ನಿರ್ದೇಶಕರು ಸಫಲರಾಗುತ್ತಾರೆ. ಯೋಧರ ಧೈರ್ಯ, ಕೆಚ್ಚನ್ನು ಮನಮುಟ್ಟುವಂತೆ ಚಿತ್ರಿಸಲಾಗಿದೆ.

ಸಿನಿಮಾ ನೋಡಲು ಈ ಲಿಂಕ್ ಬಳಸಿ:https://www.youtube.com/watch?v=dWuSoWOO7fw

ಧೂಪ್

ಈ ಚಿತ್ರ ಬಿಡುಗಡೆಯಾಗಿದ್ದು 2003ರಲ್ಲಿ. ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ‘ಟೈಗರ್ ಹಿಲ್’ ವಶಕ್ಕೆ ಪಡೆಯಲು ಭಾರತೀಯ ಸೇನೆ ಕಾರ್ಯಾಚರಣೆ ನಡೆಸುತ್ತದೆ. ಆಗ ಕ್ಯಾಪ್ಟನ್ ಅನುಜ್ ನಯ್ಯರ್ ಹುತಾತ್ಮರಾಗುತ್ತಾರೆ. ಅವರ ಜೀವನಗಾಥೆಯೇ ಈ ಚಿತ್ರದ ತಿರುಳು.

ಅನುಜ್ ನಯ್ಯರ್ ಹುತಾತ್ಮರಾದ ಬಳಿಕ ಅವರ ಕುಟುಂಬಕ್ಕೆ ಆಗುವ ಆಘಾತ, ಮಗನನ್ನು ಕಳೆದುಕೊಂಡ ತಂದೆ– ತಾಯಿಯ ನೋವು ಚಿತ್ರದಲ್ಲಿ ಎಳೆ ಎಳೆಯಾಗಿ ತೆರೆದುಕೊಳ್ಳುತ್ತದೆ. ಜೊತೆಗೆ, ಹುತಾತ್ಮ ಯೋಧರ ಕುಟುಂಬದವರಿಗೆ ಸರ್ಕಾರ ನೀಡುವ ಸೌಲಭ್ಯ ಕಸಿಯಲು ಹವಣಿಸುವ ಭ್ರಷ್ಟ ಅಧಿಕಾರಿಗಳ ಇನ್ನೊಂದು ಮುಖವಾಡವನ್ನು ನಿರ್ದೇಶಕರು ಪ್ರೇಕ್ಷಕರ ಮುಂದೆ ತೆರೆದಿಡುತ್ತಾರೆ. ಈ ಚಿತ್ರ ಅಧಿಕಾರಶಾಹಿಯ ಆತ್ಮಾವಲೋಕನಕ್ಕೆ ಕನ್ನಡಿ ಹಿಡಿಯುತ್ತದೆ. ಓಂಪುರಿ, ರೇವತಿ, ಗುಲ್ ಪನಾಗ್, ಸಂಜಯ್ ಸೂರಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.ಅಶ್ವಿನಿ ಚೌಧರಿ ಈ ಸಿನಿಮಾ ನಿರ್ದೇಶಿಸಿದ್ದಾರೆ.

ಸಿನಿಮಾ ನೋಡಲು ಈ ಲಿಂಕ್ ಬಳಸಿ: https://www.youtube.com/watch?v=e-63iwoqmhg

ಲಕ್ಷ್ಯ್

ಇದು ಕಾರ್ಗಿಲ್ ಯುದ್ಧ ಮತ್ತು ಪ್ರೇಮ ಕಥೆ ಆಧಾರಿತ ಚಿತ್ರ. ಬದುಕಿನಲ್ಲಿ ನಿರ್ದಿಷ್ಟ ಗುರಿಯನ್ನೇ ಹೊಂದಿರದ ಕರಣ್ ಶೆರ್ಗಿಲ್ (ಹೃತಿಕ್ ರೋಶನ್) ಎಂಬ ಯುವಕ ಸೇನೆ ಸೇರಿ ಕಾರ್ಗಿಲ್‌ ಕಾರ್ಯಾಚರಣೆಯಲ್ಲಿ ಭಾಗವಹಿಸುವ ಸನ್ನಿವೇಶವನ್ನೊಳಗೊಂಡಿದೆ.

ಕರಣ್ ಶೆರ್ಗಿಲ್‌ನ ತಂದೆ ಉದ್ಯಮಿಯಾಗಿದ್ದು, ಸಹೋದರ ಅಮೆರಿಕ ನಿವಾಸಿ. ಈತನ ಪ್ರಿಯತಮೆ ರೊಮಿಲಾ ದತ್ತಾ (ಪ್ರೀತಿ ಝಿಂಟಾ) ವಿದ್ಯಾರ್ಥಿನಿ ಮತ್ತು ಪತ್ರಕರ್ತೆ. ಬದುಕಿಗೊಂದು ಗುರಿ ನಿಗದಿಪಡಿಸುವ ಮೂಲಕ ಜೀವನಕ್ಕೊಂದು ಅರ್ಥ ಕಲ್ಪಿಸಿಕೊಳ್ಳುವಂತೆ ಕರಣ್‌ಗೆ ಸೂಚಿಸುತ್ತಾಳೆ. ಬಳಿಕ, ಆತ ಭಾರತೀಯ ಸೇನಾ ಅಕಾಡೆಮಿಗೆ (ಐಎಂಎ) ತರಬೇತಿಗಾಗಿ ಅರ್ಜಿ ಸಲ್ಲಿಸುತ್ತಾನೆ. ತಂದೆ–ತಾಯಿಯ ವಿರೋಧವನ್ನೂ ಲೆಕ್ಕಿಸದೆ ತರಬೇತಿಗೆ ಸೇರ್ಪಡೆಯಾಗುತ್ತಾನೆ.

ಆದರೆ, ಅಲ್ಲಿನ ಶಿಸ್ತಿನ ಜೀವನಕ್ಕೆ ಒಗ್ಗಿಕೊಳ್ಳದೆ ಶಿಕ್ಷೆಗೆ ಗುರಿಯಾಗುತ್ತಿರುತ್ತಾನೆ. ಇದರಿಂದ ಬೇಸತ್ತು ಶಿಬಿರದಿಂದ ಪಲಾಯನ ಮಾಡುತ್ತಾನೆ. ಇದರಿಂದಾಗಿ ರೊಮಿಲಾ ಜತೆ ಪ್ರೀತಿ ಮುರಿದುಬೀಳುತ್ತದೆ. ನಂತರ ದೃಢ ನಿರ್ಧಾರ ಮಾಡಿದ ಆತ ಐಎಂಎಗೆ ಮರಳುತ್ತಾನೆ. ಶಿಕ್ಷೆಗಳನ್ನೆಲ್ಲ ಅನುಭವಿಸಿ ಶಿಸ್ತಿನ ಅಧಿಕಾರಿಯಾಗಿ ಸೇನೆ ಸೇರುತ್ತಾನೆ. ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್‌ನಲ್ಲಿ ಕರ್ತವ್ಯಕ್ಕೆ ನಿಯೋಜನೆಯಾಗುತ್ತಾನೆ.

ಈ ಮಧ್ಯೆ, ರಜೆಯಲ್ಲಿ ಊರಿಗೆ ಬಂದ ಕರಣ್‌ಗೆ ರೊಮಿಲಾ ನಿಶ್ಚಿತಾರ್ಥ ಮಾಡಿಕೊಂಡಿರುವ ವಿಚಾರ ತಿಳಿಯುತ್ತದೆ. ಬಳಿಕ ಆತ ಕರ್ತವ್ಯಕ್ಕೆ ವಾಪಸಾಗುತ್ತಾನೆ. ಈ ವೇಳೆ ಕಾರ್ಗಿಲ್‌ನಲ್ಲಿ ನುಸುಳುಕೋರರು ಅತಿಕ್ರಮಣ ಮಾಡಿರುವ ವಿಷಯ ತಿಳಿಯುತ್ತದೆ. ಕರಣ್‌ನನ್ನು ಹಂಗಾಮಿ ಕ್ಯಾಪ್ಟನ್ ಆಗಿ ಬಡ್ತಿ ನೀಡಿ ಕಾರ್ಗಿಲ್‌ನ ‘ಪಾಯಿಂಟ್ 5179’ ಅನ್ನು ಮರುವಶಪಡಿಸಿಕೊಳ್ಳುವ ಜವಾಬ್ದಾರಿ ವಹಿಸಲಾಗುತ್ತದೆ. ಇದರಲ್ಲಿ ಆತ ಯಶಸ್ವಿಯಾಗುತ್ತಾನೆ. ಈ ವೇಳೆ, ವರದಿಗಾರ್ತಿಯಾಗಿ ಕಾರ್ಗಿಲ್‌ಗೆ ತೆರಳಲು ರೊಮಿಲಾ ಮುಂದಾಗುತ್ತಾಳೆ. ಆದರೆ, ಆಕೆಯ ಭಾವಿ ಪತಿ ನಿರಾಕರಿಸುತ್ತಾನೆ. ಇದರಿಂದಾಗಿ ಆತನ ಜತೆಗಿನ ನಿಶ್ಚಿತಾರ್ಥ ಮುರಿದುಬೀಳುತ್ತದೆ. ನಂತರ ಕಾರ್ಗಿಲ್‌ಗೆ ತೆರಳಿದ ರೊಮಿಲಾಗೆ ಮತ್ತೆ ಕರಣ್‌ ಭೇಟಿಯಾಗುತ್ತದೆ.

ಹೀಗೆ ಯುದ್ಧ ಮತ್ತು ಪ್ರೇಮ ಸನ್ನಿವೇಶಗಳನ್ನು ಜತೆಯಾಗಿ ಹೆಣೆದು ಚಿತ್ರಿಸಿರುವ ಈ ಸಿನಿಮಾವನ್ನು ಫರಾನ್ ಅಖ್ತರ್ ನಿರ್ದೇಶಿಸಿದ್ದಾರೆ. ಹೃತಿಕ್ ರೋಷನ್, ಅಮಿತಾಭ್ ಬಚ್ಚನ್ ಮತ್ತು ಪ್ರೀತಿ ಝಿಂಟಾ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರ 2004ರಲ್ಲಿ ಬಿಡುಗಡೆಗೊಂಡಿತ್ತು.

ಸಿನಿಮಾ ನೋಡಲು ಈ ಲಿಂಕ್ ಬಳಸಿ:https://www.youtube.com/watch?v=rG2XdGodaBA

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.