ADVERTISEMENT

'ಹೆಚ್ಚು ಪ್ರೇಕ್ಷಕರನ್ನು ತಲುಪುವ ಗುರಿ': ನಟ ರಿಷಿ ಸಿನಿಪಯಣದ ಕುರಿತು ಮಾತುಕತೆ...

​ಪ್ರಜಾವಾಣಿ ವಾರ್ತೆ
Published 23 ಜನವರಿ 2025, 23:30 IST
Last Updated 23 ಜನವರಿ 2025, 23:30 IST
   
‘ಆಪರೇಷನ್‌ ಅಲಮೇಲಮ್ಮ’, ‘ಕವಲುದಾರಿ’ ಖ್ಯಾತಿಯ ನಟ ರಿಷಿ ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾವೊಂದರ ಮೂಲಕ ಪೊಲೀಸ್‌ ಅಧಿಕಾರಿಯಾಗಿ ತೆರೆ ಮೇಲೆ ಬರುತ್ತಿದ್ದಾರೆ. ರಿಷಿ ನಟನೆಯ ‘ರುದ್ರ ಗರುಡ ಪುರಾಣ’ ಇಂದು(ಜ.24) ರಿಲೀಸ್‌ ಆಗುತ್ತಿದೆ. ತೆಲುಗಿನ ‘ಶೈತಾನ್‌’ ಎಂಬ ವೆಬ್‌ಸಿರೀಸ್‌ನಲ್ಲಿ ರಗಡ್ ಆಗಿ ಕಾಣಿಸಿಕೊಂಡ ಬಳಿಕ ರಿಷಿ ತೆಲುಗಿನಲ್ಲೂ ಹೀರೊ ಆಗಿ ಕಾಣಿಸಿಕೊಳ್ಳಲಿದ್ದಾರೆ. ರಿಷಿ ಸಿನಿಪಯಣದ ಕುರಿತು ಮಾತುಕತೆ...

‘ರುದ್ರ ಗರುಡ ಪುರಾಣ’ ಒಪ್ಪಿಕೊಂಡಿದ್ದಕ್ಕೆ ಕಾರಣ...

ಈ ಸಿನಿಮಾ ಆರಂಭವಾಗಿ ಒಂದು ವರ್ಷ ಉರುಳಿತು. ನಿರ್ದೇಶಕ ನಂದೀಶ್‌ ಒಂದೊಳ್ಳೆ ಸಿನಿಮಾ ಮಾಡುತ್ತಾರೆ ಎನ್ನುವ ನಂಬಿಕೆ ಮೇಲೆಯೇ ಈ ಪ್ರಾಜೆಕ್ಟ್‌ ಒಪ್ಪಿಕೊಂಡಿದ್ದೆ. ಕಥೆಯನ್ನು ಪ್ರಸ್ತುತಪಡಿಸಿದಾಗಲೇ ನಾನು ಈ ಪಾತ್ರ ಮಾಡಬೇಕು ಎಂದು ನಿರ್ಧರಿಸಿದ್ದೆ. ಪ್ರೇಕ್ಷಕನ ದೃಷ್ಟಿಕೋನದಿಂದಲೂ ಇದು ಕುತೂಹಲಕಾರಿ ಕಥೆಯಾಗಿ ಕಂಡಿತು.

‘ಕವಲುದಾರಿ’ಯಲ್ಲಿ ನಾನು ಟ್ರಾಫಿಕ್‌ ಪೊಲೀಸ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದೆ. ಈ ಸಿನಿಮಾದಲ್ಲೂ ಪೊಲೀಸ್‌ ಅಧಿಕಾರಿಯಾಗಿದ್ದೇನೆ. ಈ ಎರಡೂ ಸಿನಿಮಾಗಳ ಸ್ಟೋರಿ ಲೈನ್‌ ಬಹಳ ತೀವ್ರವಾಗಿದೆ. ನೋಡುಗರನ್ನು ತಲ್ಲೀನಗೊಳಿಸುವ ಶಕ್ತಿ ಇವುಗಳಲ್ಲಿ ಇದೆ. ಒಂದು ಕಥೆಯನ್ನು ಹೇಗೆ ಕೊಂಡೊಯ್ಯಬೇಕು ಎನ್ನುವ ದೃಷ್ಟಿಕೋನ ನಿರ್ದೇಶಕನಿಂದ ನಿರ್ದೇಶಕನಿಗೆ ಬದಲಾಗುತ್ತದೆ. ಈ ಸಿನಿಮಾದಿಂದ ಒಂದು ಭಿನ್ನ ಅನುಭವ ಜನರಿಗೆ ಸಿಗುತ್ತದೆ.

ADVERTISEMENT

ಇದೂ ಪೊಲೀಸ್‌ ಜಗತ್ತಿನಲ್ಲಿ ಸುತ್ತುವ ಕಥೆಯಾಗಿರುವುದರಿಂದ ಸಾಮ್ಯತೆಗಳು ಮೂಡುವುದು ಸಹಜ. ನನ್ನ ‘ಕವಲುದಾರಿ’ ಪಾತ್ರದ ನಡವಳಿಕೆ ಹಾಗೂ ಈ ಸಿನಿಮಾದ ಪಾತ್ರದ ನಡವಳಿಕೆ ಭಿನ್ನವಾಗಿದೆ. ಕಥೆಯೂ ವಿಭಿನ್ನವಾಗಿದೆ.

ಚಿತ್ರದಲ್ಲಿನ ನಿಮ್ಮ ಪಾತ್ರ ಹಾಗೂ ಜಾನರ್‌ ಬಗ್ಗೆ..

‘ರುದ್ರ’ ಎನ್ನುವುದು ನನ್ನ ಪಾತ್ರದ ಹೆಸರು. ಆತನದ್ದು ಹೊಸ ರಕ್ತ. ಅವನೊಳಗೆ ವೈಯಕ್ತಿಕ ಸಂಘರ್ಷಗಳೂ ಇವೆ. ಜೊತೆಗೆ ಒಂದು ರೋಚಕ ಪ್ರಕರಣ ಆತನ ಕೈಗೆ ಸಿಗುತ್ತದೆ. ಮುಂದೆ ಏನಾಗುತ್ತದೆ ಎನ್ನುವ ಕುತೂಹಲ ಹುಟ್ಟುತ್ತದೆ. ಈ ಸಿನಿಮಾ ಒಂದು ಸಸ್ಪೆನ್ಸ್‌ ಆ್ಯಕ್ಷನ್‌ ಡ್ರಾಮಾ. ಡ್ರಾಮಾ ಏತಕ್ಕೆ ಎಂದರೆ ಪ್ರತಿ ಪಾತ್ರವನ್ನು ಸೂಕ್ಷ್ಮವಾಗಿ ಹೆಣೆದಿದ್ದಾರೆ.

ಆ ಪಾತ್ರದ ಜಗತ್ತನ್ನು ತೋರಿಸುತ್ತೇವೆ. ಹಲವು ಪದರಗಳು ಸಿನಿಮಾದೊಳಗಿವೆ. ಈ ರೀತಿ ಮಾಡಿದಾಗ ಪ್ರೇಕ್ಷಕನೂ ಪಾತ್ರದೊಂದಿಗೆ ಹೆಜ್ಜೆ ಹಾಕುತ್ತಾನೆ. ‘ರುದ್ರ’ನ ಕಷ್ಟ, ಆತನಿಗಿರುವ ಕುತೂಹಲ, ಯೋಚನೆಗಳೊಂದಿಗೆ ಪ್ರೇಕ್ಷಕರೂ ಒಂದಾಗುತ್ತಾರೆ.

ತಮಿಳಿನ ಸಿನಿಮಾ ‘ಡೈರಿ’ಯಲ್ಲಿ ಬರುವ ಒಂದು ದೃಶ್ಯಕ್ಕೂ ಈ ಸಿನಿಮಾದ ಒಂದು ದೃಶ್ಯಕ್ಕೆ ಸಾಮ್ಯತೆ ಇದೆ. ಆದರೆ ಇದು ರಿಮೇಕ್‌ ಅಲ್ಲ. ಈಗಿನ ಕಾಲಘಟ್ಟದಲ್ಲಿ ರಿಮೇಕ್‌ ಮಾಡುವ ಆಸಕ್ತಿಯೂ ನನಗೆ ಇಲ್ಲ. ರಿಮೇಕ್‌ನಿಂದ ದೂರ ಉಳಿಯುತ್ತಿದ್ದೇನೆ.

ಪಾತ್ರಗಳ ಆಯ್ಕೆಯಲ್ಲಿ ರಿಷಿ ಒಂದು ಚೌಕಟ್ಟಿನಲ್ಲಿ ಇದ್ದಾರೆಯೇ?

ನಾನು ಒಂದೊಂದೇ ಹೆಜ್ಜೆ ಇಡುತ್ತಿದ್ದೇನೆ. ಕನ್ನಡದಲ್ಲಿ ಜನರು ನನ್ನನ್ನು ನಾಯಕನನ್ನಾಗಿ ಒಪ್ಪಿದ್ದಾರೆ. ಹೀಗಿರುವಾಗ ಅದಕ್ಕಿಂತ ಚಿಕ್ಕಪಾತ್ರಗಳನ್ನು ಮಾಡುವ ಆಸಕ್ತಿ ನನಗಿಲ್ಲ. ಜನರು ಒಬ್ಬನನ್ನು ಹೀರೊ ಆಗಿ ಒಪ್ಪುತ್ತಾರೆ ಇಲ್ಲವೇ ಒಪ್ಪುವುದಿಲ್ಲ. ಹೀಗಿರುವಾಗ ಪಾತ್ರಗಳ ಆಯ್ಕೆ ಬಗ್ಗೆ ಬಹಳ ಜಾಗರೂಕತೆಯಿಂದ ಇರಬೇಕು. ಬೇರೆ ಪಾತ್ರಗಳಲ್ಲಿ ಕಾಣಿಸಿಕೊಂಡರೆ ಜನರಿಗೆ ಗೊಂದಲ ಉಂಟಾಗುತ್ತದೆ. ಹೀಗೆ ಹೇಳಿದರೂ ನಾನು ಭಿನ್ನವಾದ ಯಾವುದೇ ಪಾತ್ರಗಳನ್ನು ತಿರಸ್ಕರಿಸಿಲ್ಲ. ಕನ್ನಡದ ನಿರ್ದೇಶಕರಿಂದ ಆ ರೀತಿಯ ಆಫರ್‌ಗಳು ಬಂದಿಲ್ಲ.

‘ಶೈತಾನ್‌’ ಬಳಿಕ ತೆಲುಗಿನಲ್ಲಿ ಇಂತಹ ಆಫರ್‌ಗಳು ಬರುತ್ತಿವೆ. ನನ್ನ ಕನ್ನಡದ ಇಮೇಜ್‌ ನೋಡದೆ ಅವರು ಪಾತ್ರಗಳನ್ನು ಬರೆಯುತ್ತಿದ್ದಾರೆ. ನನ್ನನ್ನು ಓರ್ವ ನಟನಾಗಿ ನೋಡಿಯೇ ಕರೆಗಳು ಬರುತ್ತಿವೆ. ಒಂದೊಂದು ಇಂಡಸ್ಟ್ರಿಯಲ್ಲಿ ಒಬ್ಬೊಬ್ಬ ನಟನನ್ನು ನೋಡುವ ರೀತಿ ಬೇರೆ ಬೇರೆ ಇರುತ್ತದೆ. ನನ್ನ ಗುರಿ ಇರುವುದು ಒಂದೇ. ನಮ್ಮ ನಾಡಿನ ಸಿನಿಮಾಗಳನ್ನು ಅಲ್ಲಿಗೆ ಕೊಂಡೊಯ್ಯಬೇಕು, ಹೆಚ್ಚು ಪ್ರೇಕ್ಷಕರಿಗೆ ತಲುಪಿಸಬೇಕು ಎನ್ನುವುದು.

ನನ್ನ ನಟನೆಯ ಸಾಮರ್ಥ್ಯದ ರುಚಿಯನ್ನು ಅಲ್ಲಿಯವರಿಗೆ ನೀಡುತ್ತಿದ್ದೇನೆ. ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದೇನೆ. ಹೀಗಾಗಿ ಬಾಲಯ್ಯ ಅವರ ‘ಡಾಕು ಮಹಾರಾಜ್‌’ ಸಿನಿಮಾದಲ್ಲಿ ಖಳನಟನಾಗಿ ನಟಿಸಿದೆ. ಈ ಸಿನಿಮಾಗೆ ಸಿಕ್ಕಿರುವ ಪ್ರತಿಕ್ರಿಯೆಯಿಂದ ಖುಷಿ ಇದೆ. ನೆಗಟಿವ್‌ ಶೇಡ್‌ ಮಾಡಬೇಕೋ ಬೇಡವೋ ಎಂಬ ಹಿಂಜರಿಕೆ ಮೊದಲು ಬಹಳ ಇತ್ತು. ನಂದಮೂರಿ ಬಾಲಕೃಷ್ಣ ಅವರೊಂದಿಗೆ ತೆರೆಹಂಚಿಕೊಳ್ಳುವ ಅವಕಾಶ ಖುಷಿ ನೀಡಿತು.

ಹೀರೊ ಆಗಿಯೇ ಇರಬೇಕು ಅಥವಾ ಖಳನಟನಾಗಿ ನಟಿಸಬೇಕು ಎಂಬ ಚೌಕಟ್ಟು ನನಗಿಲ್ಲ. ಜಾಸ್ತಿ ಪ್ರೇಕ್ಷಕರನ್ನು ತಲುಪಬೇಕು ಎನ್ನುವುದು ಗುರಿ. ನಮ್ಮ ಮಣ್ಣಿನಲ್ಲಿ ಮಾಡಿದ ಸಿನಿಮಾವನ್ನು ದೇಶದಾದ್ಯಂತ ಕೊಂಡೊಯ್ಯಬೇಕು ಎನ್ನುವ ಕಿಚ್ಚು ಇದೆ. ನಟನಾಗಿ ಗುರುತಿಸಿಕೊಂಡು ಸಿನಿಮಾ ಮಾಡಿದಾಗ ಸಿನಿಮಾಗಳು ತಾನಾಗಿಯೇ ಪ್ಯಾನ್‌ ಇಂಡಿಯಾ ಆಗುತ್ತವೆ.

ರಿಷಿ ಮುಂದಿನ ಪ್ರಾಜೆಕ್ಟ್‌ಗಳು..

ಸದ್ಯ ಕನ್ನಡದ ಮತ್ತೊಂದು ಸಿನಿಮಾದ ಶೂಟಿಂಗ್‌ ಶೇ 90ರಷ್ಟು ಪೂರ್ಣಗೊಂಡಿದೆ. ಇದು ಇನ್ನಷ್ಟೇ ಘೋಷಣೆಯಾಗಬೇಕಿದೆ. ಇದು ಮುಗಿದ ಬಳಿಕ ತೆಲುಗಿನಲ್ಲಿ ಎರಡು ಸಿನಿಮಾಗಳನ್ನು ಮಾಡುತ್ತಿದ್ದೇನೆ. ಇದರಲ್ಲಿ ಒಂದು ಸಿನಿಮಾದಲ್ಲಿ ಇಬ್ಬರು ಹೀರೊಗಳಿದ್ದು ಅದರಲ್ಲಿ ನಾನು ಒಬ್ಬ. ಈ ಎರಡೂ ಪ್ರಾಜೆಕ್ಟ್‌ ಪೂರ್ಣಗೊಳ್ಳುವುದಕ್ಕೆ ಏಪ್ರಿಲ್‌ ಆಗಬಹುದು. ಕಥೆಗಳನ್ನು ಕೇಳುತ್ತಿದ್ದು ಮೇ ಬಳಿಕ ಹೊಸ ಸಿನಿಮಾಗಳನ್ನು ಕೈಗೆತ್ತಿಕೊಳ್ಳಲಿದ್ದೇನೆ.   


ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.