ADVERTISEMENT

ಹಿಂದಿಯಲ್ಲೇ ಹೆಚ್ಚು ಗಳಿಸಿದ ಕೆಜಿಎಫ್‌–2: ರಾಷ್ಟ್ರಭಾಷೆ ವಿವಾದದ ನಡುವೆ ದಾಖಲೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಏಪ್ರಿಲ್ 2022, 7:28 IST
Last Updated 28 ಏಪ್ರಿಲ್ 2022, 7:28 IST
ಕೆಜಿಎಫ್‌–2 ಚಿತ್ರದಲ್ಲಿ ಯಶ್‌
ಕೆಜಿಎಫ್‌–2 ಚಿತ್ರದಲ್ಲಿ ಯಶ್‌   

ಪ್ರಶಾಂತ್‌ ನೀಲ್‌ ನಿರ್ದೇಶನದಲ್ಲಿ ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯಿಸಿರುವ 'ಕೆಜಿಎಫ್‌–2' ಸಿನಿಮಾ ಬಾಕ್ಸ್‌ಆಫೀಸ್‌ ಲೆಕ್ಕಾಚಾರದಲ್ಲಿ ಮತ್ತೊಂದು ದಾಖಲೆ ಬರೆದಿದೆ. ಈ ಸಿನಿಮಾದ ಹಿಂದಿ ಅವತರಣಿಕೆ ಬರೋಬ್ಬರಿ ₹ 343.13 ಕೋಟಿ ಗಳಿಕೆ ಮಾಡಿದೆ ಎಂದು ವರದಿಯಾಗಿದೆ. ಇದರೊಂದಿಗೆ ಹಿಂದಿ ಭಾಷೆಯಲ್ಲಿ ಅತಿಹೆಚ್ಚು ಸಂಪಾದನೆ ಕಂಡ ಮೂರನೇ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಈ ಕುರಿತು ಸಿನಿಮಾ ಉದ್ಯಮ ವಿಶ್ಲೇಷಕ ತಾರಕ್‌ ಆದರ್ಶ್‌ ಎನ್ನುವವರು ಟ್ವೀಟ್‌ ಮಾಡಿದ್ದಾರೆ. 'ಟೈಗರ್ ಜಿಂದಾ ಹೈ, ಪಿಕೆ, ಸಂಜು ಸಿನಿಮಾಗಳನ್ನು ಕೆಜಿಎಫ್‌–2 ಹಿಂದಿಕ್ಕಿದೆ. ಇದೀಗ ಅತಿಹೆಚ್ಚು ಗಳಿಕೆ ಕಂಡ ಹಿಂದಿಯಮೂರನೇ ಸಿನಿಮಾ ಎನಿಸಿದೆ. ಒಟ್ಟು ₹ 343.13 ಕೋಟಿ ಗಳಿಸಿದೆ' ಎಂದು ಅವರು ಬರೆದುಕೊಂಡಿದ್ದಾರೆ.

ಸಲ್ಮಾನ್‌ ಖಾನ್‌ ಅಭಿನಯದ 'ಟೈಗರ್ ಜಿಂದಾ ಹೈ' ₹ 339.16 ಕೋಟಿ, ಅಮೀರ್‌ ಖಾನ್‌ ನಟನೆಯ 'ಪಿಕೆ' ₹ 340.8,ರಣಬೀರ್‌ ಕಪೂರ್‌ ಬಣ್ಣ ಹಚ್ಚಿದ್ದ 'ಸಂಜು' ₹ 342.53 ಕೋಟಿ ಗಳಿಕೆ ಮಾಡಿದ್ದವು. ಈ ಪಟ್ಟಿಯಲ್ಲಿ ರಾಜಮೌಳಿ ನಿರ್ದೇಶನದ 'ಬಾಹುಬಲಿ-2' ಸಿನಿಮಾ ಮೊದಲ ಸ್ಥಾನದಲ್ಲಿದೆ. ಈ ಚಿತ್ರ₹510.99 ಗಳಿಸಿದೆ ಎನ್ನಲಾಗಿದೆ. ಅಮೀರ್‌ ಖಾನ್‌ ಅಭಿನಯದ 'ದಂಗಲ್‌' ಸಿನಿಮಾ ₹ 387.38 ಕೋಟಿ ಸಂಪಾದಿಸಿ ನಂತರದ ಸ್ಥಾನದಲ್ಲಿದೆ.

ಕನ್ನಡದ ನಟ ಕಿಚ್ಚ ಸುದೀಪ್ ಅವರು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ 'ಹಿಂದಿ ರಾಷ್ಟ್ರಭಾಷೆ ಅಲ್ಲ' ಎಂದು ಹೇಳಿದ್ದರು. ಅದಕ್ಕೆ ಟ್ವಿಟರ್‌ನಲ್ಲಿ ಬುಧವಾರ ಪ್ರತಿಕ್ರಿಯಿಸಿದ್ದ ಬಾಲಿವುಡ್‌ ನಟ ಅಜಯ್ ದೇವಗನ್, 'ಹಿಂದಿ ರಾಷ್ಟ್ರ ಭಾಷೆ' ಎಂದು ಪ್ರತಿಪಾದಿಸಿದ್ದರು. ಅದಾದ ಬಳಿಕ, 'ರಾಷ್ಟ್ರಭಾಷೆ' ವಿಚಾರದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ. ಕನ್ನಡಿಗರು ಅಜಯ್ ದೇವಗನ್ ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.ಇದರ ನಡುವೆಯೇ ಕೆಜಿಎಫ್‌–2 ಸಾಧನೆ ಮಾಡಿದೆ.

ಒಟ್ಟಾರೆ ಗಳಿಕೆ ₹ 900 ಕೋಟಿ
ಕೆಜಿಎಫ್‌–2 ಸಿನಿಮಾ ಬಿಡುಗಡೆಯಾದಾಗಿನಿಂದ ಇಲ್ಲಿಯವರೆಗೆ ವಿಶ್ವದಾದ್ಯಂತ ಒಟ್ಟಾರೆ ₹ 926.67 ಕೋಟಿ ಗಳಿಕೆ ಮಾಡಿದೆ ಎಂದು ಚಿತ್ರೋದ್ಯಮದ ವಿಶ್ಲೇಷಕ ಮನೋಬಲ ವಿಜಯಬಾಲನ್‌ ಅವರು ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.