ADVERTISEMENT

ಸೆ.1ರ ಮಧ್ಯರಾತ್ರಿಯೇ ಜನ್ಮದಿನ ಆಚರಣೆ: ಅಭಿಮಾನಿಗಳಿಗೆ ನಟ ಸುದೀಪ್‌ ಪತ್ರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಆಗಸ್ಟ್ 2025, 13:03 IST
Last Updated 25 ಆಗಸ್ಟ್ 2025, 13:03 IST
Shwetha Kumari
   Shwetha Kumari

ಬೆಂಗಳೂರು: ಸೆಪ್ಟೆಂಬರ್ 2ರ ಬದಲಾಗಿ ಸೆಪ್ಟೆಂಬರ್‌ 1ರ ಮಧ್ಯರಾತ್ರಿಯೇ ಅಭಿಮಾನಿಗಳ ಜೊತೆ ಜನ್ಮ ದಿನಾಚರಣೆ ಆಚರಿಸಿಕೊಳ್ಳಲು ನಟ ಸುದೀಪ್‌ ನಿರ್ಧಾರ ಮಾಡಿದ್ದು, ಸ್ಥಳ ವಿವರವನ್ನು ತಿಳಿಸುವುದಾಗಿ ಹೇಳಿದ್ದಾರೆ.

ಸೆ.2ರಂದು ತಮ್ಮ ಮನೆಯ ಬಳಿ ಬರದಂತೆ ಅಭಿಮಾನಿಗಳಿಗೆ ಮನವಿ ಮಾಡಿರುವ ಅವರು, ‘ಅಮ್ಮನಿಲ್ಲದೆ ಜನ್ಮದಿನದ ಸಂಭ್ರಮವನ್ನು ಊಹಿಸಿಕೊಳ್ಳುವುದು ಕಷ್ಟ. ಅವರಿಲ್ಲದ ಮೊದಲ ವರ್ಷವಾಗಿರುವುದರಿಂದ ಮನೆಯ ಬಳಿ ಶಾಂತಿಯ ವಾತಾವರಣ ಇರಲಿ’ ಎಂದು ಮನವಿ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಸುದೀಪ್‌ ಪತ್ರದ ಮೂಲಕ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ADVERTISEMENT

ಸುದೀಪ್‌ ಪತ್ರದಲ್ಲಿ ಏನಿದೆ?

ಸೆಪ್ಟೆಂಬರ್ 2ರಂದು ನನ್ನನ್ನು ಭೇಟಿ ಮಾಡುವುದಕ್ಕಾಗಿ ನೀವು ಎಷ್ಟು ಕಾಯುವಿರೋ ಅದಕ್ಕಿಂತ ಹೆಚ್ಚಾಗಿ ನಾನು ನಿಮಗಾಗಿ ಕಾಯುತ್ತೇನೆ. ಆ ದಿನ ನೀವು ಪಡುವ ಸಂಭ್ರಮ, ಆಚರಿಸುವ ವಿಡಿಯೊಗಳನ್ನು ನೋಡಿದಾಗ ಪ್ರತಿ ಸಲವೂ ನನಗೆ ಮರುಹುಟ್ಟು ಪಡೆದಂತಾಗುತ್ತದೆ. ನಿಸ್ಸಂದೇಹವಾಗಿ ನನ್ನ ಬದುಕಿಗೆ ಮೌಲ್ಯ ತುಂಬಿದವರು ನೀವು. ನಿಮ್ಮೆದರು ನಿಂತು ವಿನೀತನಾಗುವುದಕ್ಕಿಂತ ಖುಷಿ ಏನಿದೆ? ಆದ್ದರಿಂದಲೇ ದಶಕಗಳಿಂದ ನಿಮ್ಮನ್ನು ಮನೆಯ ಹತ್ತಿರ ಭೇಟಿ ಮಾಡುತ್ತಲೇ ನಾನೂ ಸಂಭ್ರಮಸಿದ್ದೇನೆ. ಆದರೆ ಈ ಸಲ ತುಂಬಾ ಕಷ್ಟವಾಗುತ್ತಿದೆ. ಏಕೆಂದರೆ ಅಮ್ಮನಿಲ್ಲದ ಮೊದಲ ವರ್ಷವಿದು. ಅಮ್ಮನಿಲ್ಲದ ಸಂಭ್ರಮವನ್ನು ಊಹಿಸಿಕೊಳ್ಳುವುದು ನನಗೆ ಕಷ್ಟವಾಗುತ್ತಿದೆ.

‘ಆದರೆ, ನಿಮ್ಮನ್ನು ನಿರಾಸೆಗೊಳಿಸುವುದು ನನಗಿಷ್ಟವಿಲ್ಲ. ನಿಮ್ಮ ಮೂಲಕವೇ ನನ್ನ ಹುಟ್ಟಹಬ್ಬ ಹುಟ್ಟಬೇಕು. ಗಡಿಯಾರ ಹನ್ನೆರಡು ಗಂಟೆ ಎಂದು ಸದ್ದು ಮಾಡುವಾಗ ನನಗೆ ನಿಮ್ಮ ಶುಭಾಶಯಗಳೇ ಕಿವಿಗೆ ಕೇಳಬೇಕು. ಅವುಗಳೇ ಎದೆಗೆ ಇಳಿಯಬೇಕು. ಆದ್ದರಿಂದ ಸೆಪ್ಟೆಂಬರ್ ಒಂದರ ರಾತ್ರಿ ನಾವೆಲ್ಲರೂ ಒಂದು ಕಡೆ ಸೇರೋಣ. ಎಲ್ಲಿ, ಹೇಗೆ? ಅನ್ನೋದನ್ನು ತಿಳಿಸುತ್ತೇನೆ. ಆದರೆ ಮಾರನೇ ದಿನ ಅಂದರೆ ಸೆಪ್ಟೆಂಬರ್ 2 ರಂದು ದಯವಿಟ್ಟು ಯಾರೂ ಮನೆ ಹತ್ತಿರ ಬರಬೇಡಿ. ನಾನು ಆ ದಿನ ಮನೆಯಲ್ಲಿ ಇರುವುದಿಲ್ಲ’

‘ನಾನಿರುವುದಿಲ್ಲವೆಂದು ಹೇಳಿದ ಮೇಲೂ ನೀವು ಮನೆ ಬಳಿ ಬಂದು ಕಾದರೆ ನನ್ನ ಮನಸಿಗೆ ನೋವಾಗುತ್ತದೆ. ಜೊತೆಗೆ ಈ ಸಲ ಅಮ್ಮನಿಲ್ಲದ ಮೊದಲ ವರ್ಷವಾಗಿರುವುದರಿಂದ ಮನೆ ಬಳಿ ಚೂರು ಶಾಂತಿ ವಾತಾವರಣ ಇರಲೆಂದು ಬಯಸುತ್ತಿದ್ದೇನೆ. ನನಗೆ ನಂಬಿಕೆ ಇದೆ ನೀವು ನನ್ನನ್ನು ಅರ್ಥಮಾಡಿಕೊಳ್ಳುವಿರೆಂದು ಮತ್ತು ನಿರಾಸೆಗೊಳಿಸುವುದಿಲ್ಲವೆಂದು. ಅದು ಬಿಟ್ಟರೆ ಪ್ರತಿವರ್ಷದಂತೆ ಈ ವರ್ಷವೂ ಸಾಮಾಜಿಕ ಸೇವಾ ಕಾರ್ಯಗಳು ಯಥಾಪ್ರಕಾರ ನಡೆಯಲಿವೆ. ನಿಮ್ಮ ಹಾರೈಕೆ, ಅಭಿಮಾನ ಮತ್ತು ಸಾಂಗತ್ಯವೇ ನನ್ನ ಬಹುದೊಡ್ಡ ಆಸ್ತಿ’ ಎಂದು ಪತ್ರದಲ್ಲಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.