
ಡಾರ್ಲಿಂಗ್ ಕೃಷ್ಣ ನಟನೆಯ ‘ಲವ್ ಮಾಕ್ಟೇಲ್–3’ ಚಿತ್ರದ ‘ಒಬ್ಬಂಟಿಯಾದೆ ನಾ’ ಹಾಡು ಆನಂದ್ ಆಡಿಯೊ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ. ಈ ಹಾಡು ಪ್ರೇಕ್ಷಕರ ಗಮನ ಸೆಳೆದಿದ್ದು ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡ್ ಸೃಷ್ಟಿಸಿದೆ.
ಈ ಹಾಡಿಗೆ ಸಂಗೀತ ನಿರ್ದೇಶಕ ನಕುಲ್ ಅಭ್ಯಂಕರ್ ಧ್ವನಿ ನೀಡಿದ್ದಾರೆ. ರಾಘವೇಂದ್ರ ಕಾಮತ್ ಅವರು ಸಾಹಿತ್ಯ ಬರೆದಿದ್ದಾರೆ. ಈ ಚಿತ್ರವನ್ನು ಡಾರ್ಲಿಂಗ್ ಕೃಷ್ಣ ಅವರು ನಿರ್ದೇಶನ ಮಾಡಿ, ಪತ್ನಿ ಮಿಲನಾ ಜೊತೆ ನಿರ್ಮಾಣ ಮಾಡಿದ್ದಾರೆ.
ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಜೋಡಿಯಾಗಿನಟಿಸಿದ್ದ ‘ಲವ್ ಮಾಕ್ಟೇಲ್’ ಚಿತ್ರವು 2020ರಲ್ಲಿ ಬಿಡುಗಡೆಯಾಗಿ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. 2022ರಲ್ಲಿ ತೆರೆಕಂಡ ಸಿನಿಮಾದ ಸೀಕ್ವೆಲ್ ‘ಲವ್ ಮಾಕ್ಟೇಲ್-2‘ ಕೂಡಾ ಜನಪ್ರಿಯತೆ ಗಳಿಸಿತ್ತು. ಈ ಚಿತ್ರದ ಮೂರನೇ ಭಾಗವು ಏ. 10ರಂದು ತೆರೆ ಕಾಣಲಿದೆ.
‘ಲವ್ ಮಾಕ್ಟೇಲ್–3’ ಅಪ್ಪ ಮಗಳ ಭಾವನಾತ್ಮಕ ಸನ್ನಿವೇಶದ ಕಥೆಯನ್ನು ಹೊಂದಿದೆ. ಈ ಚಿತ್ರವು ಬೆಂಗಳೂರು, ಮೈಸೂರು, ಕಛ್, ಜೋಧಪುರ್, ಜೈಸಲ್ಮೇರ್, ಅಂಡಮಾನ್‌ನಲ್ಲಿ ಚಿತ್ರೀಕರಣ ನಡೆದಿದೆ ಎಂದು ಚಿತ್ರತಂಡ ತಿಳಿಸಿದೆ.
‘ಲವ್ ಮಾಕ್ಟೇಲ್‘ ಹಾಗೂ ‘ಲವ್ ಮಾಕ್ಟೇಲ್-2‘ ಚಿತ್ರದ ‘ದೂರ ಹೋದರು ನನ್ನೊಲವೇ‘, 'ಲವ್ ಯೂ ಚಿನ್ನಾ‘ ಮತ್ತು 'ಜನುಮಗಳೇ ಕಾಯುವೆ‘ ಹಾಡುಗಳು ಪ್ರೇಕ್ಷಕರನ್ನು ಸೆಳೆದಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.