
ಚಿತ್ರ ಕೃಪೆ: sudhir.mishra
ಲಖನೌ: ಲಾಸ್ ಏಂಜಲೀಸ್‌ನಲ್ಲಿ ನಡೆದ ‘ಲಖನೌ ಕಿರುಚಿತ್ರೋತ್ಸವ'ದಲ್ಲಿ ‘ಘುಸ್ಪೈಥಿಯಾ ಕೌನ್’ ಕಿರುಚಿತ್ರವು ಅತ್ಯುತ್ತಮ ಸ್ಕ್ರಿಪ್ಟ್ ವಿಭಾಗದಲ್ಲಿ ಪ್ರಶಸ್ತಿ ಪಡೆದುಕೊಂಡಿದೆ ಎಂದು ಮಾಹಿತಿ ಮೂಲಗಳು ತಿಳಿಸಿವೆ.
ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಬಾಲಿವುಡ್ ನಟಿ ಹುಮಾ ಖುರೇಷಿ, 'ಕಿರುಚಿತ್ರಗಳು ಯಾವಾಗಲೂ ದೊಡ್ಡ ಸಂದೇಶವನ್ನು ನೀಡುತ್ತವೆ. ಕಲಾ ವಿಭಾಗದಲ್ಲಿ ಪ್ರಗತಿ ಸಾಧಿಸಲು ಬಯಸುವವರಿಗೆ ದೊಡ್ಡ ವೇದಿಕೆಯನ್ನು ಒದಗಿಸುತ್ತವೆ ಎಂದು ಹೇಳಿದ್ದಾರೆ.
ಹೆಚ್ಚಿನ ನಟರು ತಮ್ಮ ಚಲನಚಿತ್ರ ವೃತ್ತಿಜೀವನವನ್ನು ಕಿರುಚಿತ್ರಗಳಿಂದ ಪ್ರಾರಂಭಿಸಿದ್ದಾರೆ. ಪ್ರತಿಭೆ ಇದ್ದರೆ ಕಿರುಚಿತ್ರಗಳ ಮೂಲಕ ಯಶಸ್ಸುಗಳಿಸಬಹುದು. ಸಣ್ಣ ಚಲನಚಿತ್ರಗಳು ದೊಡ್ಡ ಮಾದರಿಯಾಗಲಿದೆ' ಎಂದು ಹುಮಾ ಖುರೇಷಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಸಮೀರ್-ನೇಹಿ ಅಗರ್ವಾಲ್ ನಿರ್ಮಾಣದ ‘ಘುಸ್ಪೈಥಿಯಾ ಕೌನ್’ ಕಿರುಚಿತ್ರವನ್ನು ಹಿರಿಯ ಪತ್ರಕರ್ತ ಸುಧೀರ್ ಮಿಶ್ರಾ ಬರೆದಿದ್ದು, ಧೀರಜ್ ಭಟ್ನಾಗರ್ ನಿರ್ದೇಶಿಸಿದ್ದಾರೆ. ಖ್ಯಾತ ಅನಿಮೇಷನ್ ತಜ್ಞ ರಾಜೀವ್ ದ್ವಿವೇದಿ ಅನಿಮೇಷನ್ ಮಾಡಿದ್ದಾರೆ. ಈ ಚಿತ್ರವು ಮಾನವ-ವನ್ಯಜೀವಿ ಸಂಘರ್ಷವನ್ನು ಆಧರಿಸಿದೆ.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸುಧೀರ್ ಮಿಶ್ರಾ ಅವರು, 'ಲಾಸ್ ಏಂಜಲೀಸ್‌ನಲ್ಲಿ ನಡೆದ ಇಂಡಿಪೆಂಡೆಂಟ್ ಶಾಟ್ಸ್ ಅವಾರ್ಡ್ಸ್ ಫೈನಲ್‌ನಲ್ಲಿ 25 ದೇಶಗಳ ಚಲನಚಿತ್ರಗಳು ಸೇರಿವೆ. ‘ಘುಸ್ಪೈಥಿಯಾ ಕೌನ್’ ಭಾರತವನ್ನು ಪ್ರತಿನಿಧಿಸುವ ಏಕೈಕ ಚಲನಚಿತ್ರವಾಗಿದೆ. ಈ ಚಿತ್ರವು ಗಾಜಿಯಾಬಾದ್ ನ್ಯಾಯಾಲಯಕ್ಕೆ ಚಿರತೆಯೊಂದು ಪ್ರವೇಶಿಸಿದ ನಂತರ ಸಂಭವಿಸಿದ ಗದ್ದಲದ ಸನ್ನಿವೇಶವನ್ನು ಹಿಡಿದಿರುವ ಕಥೆಯಾಗಿದೆ ಎಂದು ಹೇಳಿದ್ದಾರೆ.
ದೇಶದ ಹೆಚ್ಚಿನ ಭಾಗಗಳಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಕಾಡುಗಳನ್ನು ಕಡಿಯುತ್ತಿರುವುದರಿಂದ ಮಾನವ-ವನ್ಯಜೀವಿ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ' ಎಂದಿದ್ದಾರೆ.
ಲಖನೌ ಕಿರುಚಿತ್ರೋತ್ಸವದಲ್ಲಿ, 'ತುನೈ' ಅತ್ಯುತ್ತಮ ಚಿತ್ರ, 'ಗಂಗಾ ಪುತ್ರ' ಅತ್ಯುತ್ತಮ ಸಾಕ್ಷ್ಯಚಿತ್ರ ಮತ್ತು 'ದಡ್ಡು ಜಿಂದಾಬಾದ್' ಚಿತ್ರಕ್ಕಾಗಿ ಸಮರ್ ಜೈನ್ ಅತ್ಯುತ್ತಮ ನಿರ್ದೇಶನಕ್ಕಾಗಿ ಪ್ರಶಸ್ತಿ ಪಡೆದಿದ್ದಾರೆ ಎಂದು ಮಾಹಿತಿ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.