ಧನುಷ್ ಮತ್ತು ನಯನತಾರಾ
ಚೆನ್ನೈ: ಬಹುಭಾಷಾ ನಟಿ ನಯನತಾರಾ ವಿರುದ್ಧ ನಟ ಧನುಷ್ ಅವರು ದಾಖಲಿಸಿರುವ ಹಕ್ಕುಸ್ವಾಮ್ಯ ಉಲ್ಲಂಘನೆಯ ಮೊಕದ್ದಮೆಯನ್ನು ಕೈಬಿಡುವಂತೆ ಕೋರಿ ನೆಟ್‌ಫ್ಲಿಕ್ಸ್ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ಮಂಗಳವಾರ ತಿರಸ್ಕರಿಸಿದೆ.
ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗುತ್ತಿರುವ ನಟಿ ನಯನತಾರಾ ಬದುಕು ಆಧರಿಸಿದ ಸಾಕ್ಷ್ಯಚಿತ್ರ ‘ನಯನತಾರಾ: ಬಿಯಾಂಡ್ ದಿ ಫೇರಿಟೇಲ್’ನಲ್ಲಿ ತಮ್ಮ ‘ನಾನುಮ್ ರೌಡಿ ಧಾನ್ʼ ಚಿತ್ರದ ದೃಶ್ಯವನ್ನು ಒಪ್ಪಿಗೆ ಪಡೆಯದೇ ಬಳಸಿದ್ದಾರೆ ಎಂದು ಆರೋಪಿಸಿ ನಟ ಧನುಷ್, ನಯನತಾರಾ ಮತ್ತು ಅವರ ಪತಿ, ನಿರ್ದೇಶಕ ವಿಘ್ನೇಶ್ ಶಿವನ್ ವಿರುದ್ಧ ಮದ್ರಾಸ್ ಹೈಕೋರ್ಟ್ ಮೆಟ್ಟಿಲು ಏರಿದ್ದಾರೆ.
ಈ ಕುರಿತು ಮದ್ರಾಸ್ ಹೈಕೋರ್ಟ್ ಫೆಬ್ರುವರಿ 5ರಂದು ಅರ್ಜಿ ವಿಚಾರಣೆ ನಡೆಸಲಿದೆ ಎಂದು ವರದಿಯಾಗಿದೆ.
ಮೊಕದ್ದಮೆಯಲ್ಲಿ, ಧನುಷ್ ಅವರು ನಯನತಾರಾ ಮತ್ತು ಇತರರು ಚಿತ್ರದ ತುಣುಕನ್ನು ಒಳಗೊಂಡಂತೆ ಚಿತ್ರದ ಮೇಲೆ ನಿರ್ಮಾಣ ಸಂಸ್ಥೆಯ ಹಕ್ಕುಸ್ವಾಮ್ಯವನ್ನು ಉಲ್ಲಂಘಿಸದಂತೆ ಶಾಶ್ವತ ತಡೆಯಾಜ್ಞೆಯನ್ನು ಕೋರಿದ್ದಾರೆ.
‘ನಾನುಮ್ ರೌಡಿ ಧಾನ್ʼ ಚಿತ್ರವನ್ನು ವಂಡರ್ ಬಾರ್ ಫಿಲ್ಮ್ ಸಂಸ್ಥೆಯ ಬ್ಯಾನರ್ ಅಡಿಯಲ್ಲಿ ಧನುಷ್ 2015ರಲ್ಲಿ ನಿರ್ಮಿಸಿದ್ದರು. ಚಿತ್ರದಲ್ಲಿ ನಯನತಾರಾ ನಾಯಕಿಯಾಗಿದ್ದಾರೆ. ನಯನತಾರಾ ಕುರಿತಾದ ನೆಟ್‌ಫ್ಲಿಕ್ಸ್ ಸಾಕ್ಷ್ಯಚಿತ್ರದಲ್ಲಿ ಅನುಮತಿ ಪಡೆಯದೆ ತಮ್ಮ ಚಿತ್ರದ ತುಣುಕನ್ನು ಬಳಸಲಾಗಿದೆ ಎಂಬುದು ಧನುಷ್ ಅವರ ಆರೋಪ.
ಇದೇ ಪ್ರಕರಣ ಸಂಬಂಧ ಕೆಲವು ದಿನಗಳ ಹಿಂದೆ ₹10 ಕೋಟಿ ಪರಿಹಾರ ನೀಡುವಂತೆ ನಯನತಾರಾ ಅವರಿಗೆ ಧನುಷ್ ನೋಟಿಸ್ ಕಳುಹಿಸಿದ್ದರು. ಇದಕ್ಕೆ ನಯನತಾರಾ ಕಿಡಿಕಾರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.