ADVERTISEMENT

‘ಮರುದನಾಯಗಂ’ ಚಿತ್ರೀಕರಣದಲ್ಲಿ ರಾಣಿ ಎಲಿಜಬೆತ್ ಭಾಗಿಯಾಗಿದ್ದರು: ಕಮಲ್ ಹಾಸನ್

ಪಿಟಿಐ
Published 9 ಸೆಪ್ಟೆಂಬರ್ 2022, 10:00 IST
Last Updated 9 ಸೆಪ್ಟೆಂಬರ್ 2022, 10:00 IST
ಬ್ರಿಟನ್‌ನ ರಾಣಿ 2ನೇ ಎಲಿಜಬೆತ್ ಜತೆ ಕಮಲ್ ಹಾಸನ್ ( ಟ್ವಿಟರ್‌ ಚಿತ್ರ)
ಬ್ರಿಟನ್‌ನ ರಾಣಿ 2ನೇ ಎಲಿಜಬೆತ್ ಜತೆ ಕಮಲ್ ಹಾಸನ್ ( ಟ್ವಿಟರ್‌ ಚಿತ್ರ)   

ಚೆನ್ನೈ: ‘ಮರುದನಾಯಗಂ’ ಚಿತ್ರೀಕರಣದವೇಳೆ ಬ್ರಿಟನ್‌ ರಾಣಿ 2ನೇ ಎಲಿಜಬೆತ್‌ ಸೆಟ್‌ಗೆ ಭೇಟಿ ನೀಡಿದ್ದರು. ಚಿತ್ರತಂಡದೊಂದಿಗೆ ಸಮಯ ಕಳೆದಿದ್ದ ಅವರು ಶುಭ ಹಾರೈಸಿದ್ದರು ಎಂದು ತಮಿಳುನಟ ಕಮಲ್ ಹಾಸನ್ ಹೇಳಿದ್ದಾರೆ.

ಬ್ರಿಟನ್‌ನ ರಾಣಿ, 96 ವರ್ಷ ವಯಸ್ಸಿನ 2ನೇ ಎಲಿಜಬೆತ್ ಗುರುವಾರ ರಾತ್ರಿ ನಿಧನರಾದರು. ಬ್ರಿಟಿಷ್‌ ಇತಿಹಾಸದಲ್ಲಿಯೇ ಸುದೀರ್ಘ ಕಾಲ ರಾಣಿಯಾಗಿದ್ದ ಹಿರಿಮೆ ಅವರದು.

ರಾಣಿ ಎಲಿಜಬೆತ್ ನಿಧನಕ್ಕೆ ಸಂತಾಪ ಸೂಚಿಸಿರುವ ಕಮಲ್ ಹಾಸನ್, ಇಪ್ಪತ್ತೈದು ವರ್ಷಗಳ ಹಿಂದೆ 1997ರಲ್ಲಿ ನಡೆದ ‘ಮರುದನಾಯಗಂ’ ಚಿತ್ರದ ಚಿತ್ರೀಕರಣದ ವೇಳೆ ಸೆಟ್‌ಗೆ ಭೇಟಿ ನೀಡಿದ್ದರು. ಜತೆಗೆ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು ಎಂದು ನೆನಪುಗಳನ್ನು ಮೆಲುಕು ಹಾಕಿದ್ದಾರೆ.

ADVERTISEMENT

ವಸಾಹತುಶಾಹಿ ಆಡಳಿತದ ವಿರುದ್ಧ ಹೇಳಬೇಕಿದ್ದ ಡೈಲಾಗ್‌ಗಳ ಬಗ್ಗೆ ಸಾಕಷ್ಟು ಜಾಗೃತರಾಗಿರುವಂತೆ ಸಲಹೆ ನೀಡುತ್ತಿದ್ದರು. ಎಲಿಜಬೆತ್ ಸಲಹೆಗಳನ್ನು ಚಿತ್ರೀಕರಣದ ವೇಳೆ ಪಾಲಿಸಲಾಗಿತ್ತು. ಎಲಿಜಬೆತ್ ಅವರು ವಿಶ್ವದ ಆಗು–ಹೋಗುಗಳು, ರಾಜಕೀಯ ಬದಲಾವಣೆಗಳ ಬಗ್ಗೆ ಹೆಚ್ಚು ಅರಿವು ಹೊಂದಿದ್ದರು ಎಂದು ಕಮಲ್ ಹಾಸನ್ ಹೇಳಿದ್ದಾರೆ.

ನಾವು ಹೇಳಿದ ಡೈಲಾಗ್‌ಗಳು ವಸಾಹತುಶಾಹಿ ಆಡಳಿತದ ವಿರುದ್ಧವಾಗಿದ್ದವು. ಅದು ತಿಳಿದಿದ್ದರೂ ಎಲಿಜಬೆತ್ ಅವರು ಸೆಟ್‌ಗೆ ಬಂದಿದ್ದರು. ಅವರ ನಡೆ ನನಗೆ ಇಷ್ಟವಾಯಿತು ಎಂದು ಹಾಸನ್ ತಿಳಿಸಿದ್ದಾರೆ.

ಐದು ವರ್ಷಗಳ ಹಿಂದೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನಾನು ಲಂಡನ್‌ಗೆ ಭೇಟಿ ನೀಡಿದ್ದ ವೇಳೆ ಬಕಿಂಗ್‌ಹ್ಯಾಮ್ ಅರಮನೆಯಲ್ಲಿ ಎಲಿಜಬೆತ್ ಅವರನ್ನು ಭೇಟಿಯಾಗಿದ್ದೆ ಎಂದು ಕಮಲ್ ಹಾಸನ್ ಹೇಳಿಕೊಂಡಿದ್ದಾರೆ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.