ADVERTISEMENT

ನಟಸಾರ್ವಭೌಮನಿಗೆ ಪ್ರಶಂಸೆಯ ಸುರಿಮಳೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2019, 7:17 IST
Last Updated 26 ಜನವರಿ 2019, 7:17 IST
   

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ ಅಭಿನಯದ ಬಹುನಿರೀಕ್ಷಿತ ಚಿತ್ರ ‘ನಟಸಾರ್ವಭೌಮ’ದ ಟ್ರೇಲರ್‌ ಬಿಡುಗಡೆ ಆಗಿದೆ. ಈಗಾಗಲೇ 16 ಲಕ್ಷಕ್ಕೂ ಹೆಚ್ಚು ಬಾರಿ ಇದನ್ನು ಯೂಟ್ಯೂಬ್‌ ಮೂಲಕ ವೀಕ್ಷಿಸಲಾಗಿದೆ. ಪುನೀತ್ ಅವರ ಅಭಿಮಾನಿಗಳಿಗೆ ‘ಅಂಜನಿಪುತ್ರ’ ಚಿತ್ರದ ನಂತರ ಸಿಗುತ್ತಿರುವ ರಸದೌತಣ ಈ ಚಿತ್ರ.

ಇದರ ಟ್ರೇಲರ್‌ ಬಗ್ಗೆ ‘ಚಂದನವನ’ದ ಪ್ರಮುಖರು ಹೇಳಿದ್ದೇನು? ‘ಪುನೀತ್ ಅವರು ಹಿಂದೆಂದೂ ಕಾಣದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರತಿ ದೃಶ್ಯದಲ್ಲೂ ಪವನ್ ಒಡೆಯರ್ (ಈ ಚಿತ್ರದ ನಿರ್ದೇಶಕ) ಅವರ ಪರಿಶ್ರಮ ಎದ್ದು ಕಾಣುತ್ತಿದೆ. ಟ್ರೇಲರ್‌ ಬಹಳ ಥ್ರಿಲ್ಲಿಂಗ್ ಆಗಿಯೂ ಎಂಗೇಜಿಂಗ್ ಆಗಿಯೂ ಇದೆ’ ಎಂದು ನಟ ವಸಿಷ್ಠ ಸಿಂಹ ಟ್ವಿಟರ್‌ನಲ್ಲಿ ಬರೆದಿದ್ದಾರೆ.

‘ನಟಸಾರ್ವಭೌಮ ತಂಡಕ್ಕೆ ಒಳ್ಳೆಯದಾಗಲಿ. ಪವರ್ ಸ್ಟಾರ್ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಶೀರ್ಷಿಕೆಯನ್ನು ಸಂಪೂರ್ಣವಾಗಿ ಸಮರ್ಥನೆ ಮಾಡಿಕೊಳ್ಳುವ ರೀತಿಯಲ್ಲಿ ಅವರು ಅಭಿನಯಿಸಿದ್ದಾರೆ ಎಂಬುದು ಟ್ರೇಲರ್ ವೀಕ್ಷಿಸಿದ ನಂತರ ಸುಲಭವಾಗಿ ಗೊತ್ತಾಗುತ್ತದೆ’ ಎಂದು ನಿರ್ದೇಶಕ ಸಂತೋಷ್ ಆನಂದರಾಮ್ ಅವರು ಹೇಳಿದ್ದಾರೆ. ಅಂದಹಾಗೆ, ಸಂತೋಷ್ ಅವರು ಪುನೀತ್ ಅವರ ಮುಂಬರುವ ‘ಯುವರತ್ನ’ ಚಿತ್ರ ನಿರ್ದೇಶಿಸುತ್ತಿದ್ದಾರೆ.

ADVERTISEMENT

‘ಪವನ್ ಒಡೆಯರ್ ಮತ್ತು ರಾಕ್‌ಲೈನ್ ಸಂಸ್ಥೆಗೆ ಒಳ್ಳೆಯದಾಗಲಿ. ಪುನೀತ್ ಅವರ ಪವರ್ ನಮಗೆ ಗೊತ್ತು – ಅವರೇ ನಮ್ಮ ಪವರ್’ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ ಸಂತೋಷ್. ಸುದೀಪ್ ಕೂಡ ಈ ಚಿತ್ರದ ಟ್ರೇಲರ್‌ಗೆ ಶುಭಾಶಯ ಕೋರಿದ್ದಾರೆ.

ಟ್ರೇಲರ್‌ ವೀಕ್ಷಿಸಿದರೆ ಚಿತ್ರದಲ್ಲಿ ಸಾಕಷ್ಟು ಹಾರರ್‌ ಅಂಶಗಳು ಇದ್ದಿರಬಹುದು ಅನಿಸುತ್ತದೆ. ಆ ಹಾರರ್ ಅಂಶಗಳಿಗೆ ಹಾಸ್ಯದ ಲೇಪ ಕೂಡ ಇದ್ದಿರಬಹುದೇ ಎಂಬ ಪ್ರಶ್ನೆ ಮೂಡಿಸುತ್ತವೆ ನಟ ಚಿಕ್ಕಣ್ಣ ಆಡುವ ಮಾತುಗಳು ಮತ್ತು ಸಾಧು ಕೋಕಿಲ ಅವರ ಹಾವಭಾವಗಳು. ಈ ಚಿತ್ರ ಫೆಬ್ರುವರಿ 7ರಂದು ಬಿಡುಗಡೆ ಆಗಲಿದೆ.

ಟ್ರೇಲರ್‌ ಹಿಟ್ ಆದ ನಂತರ ಟ್ವಿಟರ್‌ ಮೂಲಕ ಮಾತನಾಡಿರುವ ಪುನೀತ್, ‘ನೀವು ಟ್ರೇಲರ್‌ಅನ್ನು ಎಷ್ಟು ಇಷ್ಟಪಟ್ಟಿರೋ ಅಷ್ಟೇ ಸಿನಿಮಾವನ್ನೂ ಇಷ್ಟಪಡುವಿರಿ ಎಂದು ಭಾವಿಸಿದ್ದೇನೆ. ಕನ್ನಡ ಚಿತ್ರರಂಗವನ್ನು ಇದೇ ರೀತಿ ಬೆಂಬಲಿಸಿ’ ಎಂದು ಹೇಳಿದ್ದಾರೆ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.