ADVERTISEMENT

ಕೆಜಿಎಫ್‌ಗೆ ಅತ್ಯುತ್ತಮ ಸಾಹಸ ನಿರ್ದೇಶನ ಗರಿ: 5 ಪ್ರಶಸ್ತಿ ಬಾಚಿಕೊಂಡ ನಾತಿಚರಾಮಿ

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ: ಕನ್ನಡ ಸಿನಿಮಾಗಳಿಗೆ 11 ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2019, 12:16 IST
Last Updated 10 ಆಗಸ್ಟ್ 2019, 12:16 IST
   

ನವದೆಹಲಿ: ಪ್ರಸಕ್ತ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟವಾಗಿದ್ದು, ಕನ್ನಡಕ್ಕೆ ಇದೇ ಮೊದಲ ಬಾರಿಗೆ 11 ವಿಭಾಗಗಳಲ್ಲಿ ಪ್ರಶಸ್ತಿಗಳು ದೊರೆತಿದೆ.

ರಿಷಬ್‌ ಶೆಟ್ಟಿ ನಿರ್ದೇಶನದ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಕೊಡುಗೆ– ರಾಮಣ್ಣ ರೈ’ ಅತ್ಯುತ್ತಮ ಮಕ್ಕಳ ಚಿತ್ರ (ಸ್ವರ್ಣ ಕಮಲ), ಡಿ.ಸತ್ಯಪ್ರಕಾಶ್‌ ನಿರ್ದೇಶನದ ‘ಒಂದಲ್ಲ ಎರಡಲ್ಲ’ ರಾಷ್ಟ್ರೀಯ ಭಾವೈಕ್ಯ ಸಾರುವ ಅತ್ಯುತ್ತಮ ಚಿತ್ರ (ರಜತ ಕಮಲ) ಪ್ರಶಸ್ತಿ ಗಳಿಸಿವೆ.

ಮಂಸೋರೆ (ಎಸ್‌.ಮಂಜುನಾಥ್‌) ನಿರ್ದೇಶನದ ‘ನಾತಿಚರಾಮಿ’ ಪ್ರಾದೇಶಿಕ ಭಾಷಾ ವಿಭಾಗದಲ್ಲಿ ಅತ್ಯುತ್ತಮ ಕನ್ನಡ ಚಿತ್ರ ಸೇರಿದಂತೆ ಒಟ್ಟು ಐದು ಪ್ರಶಸ್ತಿಗಳನ್ನುಪಡೆದಿದೆ.

ADVERTISEMENT

ವಿಧವೆಯೊಬ್ಬಳ ಮನೋಕಾಮನೆ ಮತ್ತು ಗೊಂದಲಗಳನ್ನು ಒಳಗೊಂಡ ಕಥೆಯಾಧರಿತ ‘ನಾತಿಚರಾಮಿ’ ಚಿತ್ರದ ಉತ್ತಮ ಅಭಿನಯಕ್ಕಾಗಿ ಶೃತಿ ಹರಿಹರನ್‌ ತೀರ್ಪುಗಾರರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇದೇ ಚಿತ್ರದ ‘ಮಾಯಾವಿ ಮನವೆ’ ಹಾಡಿಗಾಗಿ ಬಿಂದು ಮಾಲಿನಿ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ ಪಡೆದಿದ್ದಾರೆ.

ರಾಜ್ಯದ ಗಡಿಯಲ್ಲಿರುವ ಕೇರಳದ ಕಾಸರಗೋಡಿನ ಕನ್ನಡ ಮಕ್ಕಳು ಸರ್ಕಾರಿ ಶಾಲೆಯನ್ನು ಉಳಿಸಿಕೊಳ್ಳಲು ನಡೆಸುವ ಹೋರಾಟದ ಕಥೆಯ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಕೊಡುಗೆ– ರಾಮಣ್ಣ ರೈ’ ಚಿತ್ರದಲ್ಲಿ ಅನಂತನಾಗ್‌ ನಟಿಸಿದ್ದಾರೆ.

ಪ್ರಶಾಂತ್‌ ನೀಲ್‌ ನಿರ್ದೇಶನದ, ಯಶ್‌ ಅಭಿನಯದ ‘ಕೆಜಿಎಫ್‌’ ಚಿತ್ರಕ್ಕೆ ಸ್ಪೆಷಲ್‌ ಎಫೆಕ್ಟ್ಸ್‌ ಹಾಗೂ ಸಾಹಸ ನಿರ್ದೇಶನ ವಿಭಾಗದಲ್ಲಿ ಪ್ರಶಸ್ತಿಗಳು ಲಭಿಸಿವೆ.

ಚಲನಚಿತ್ರೇತರ ವಿಭಾಗದಲ್ಲಿಯೂ ಕನ್ನಡದ ‘ಸರಳ ವಿರಳ’ (ನಿರ್ದೇಶನ ಈರೇಗೌಡ) ಅತ್ಯುತ್ತಮ ಶೈಕ್ಷಣಿಕ ಚಿತ್ರ ಪ್ರಶಸ್ತಿಗೆ ಭಾಜನವಾಗಿದೆ.

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಇತಿಹಾಸದಲ್ಲೇ ಮೊದಲ ಬಾರಿಗೆ ಕನ್ನಡವು ವಿವಿಧ 11 ವಿಭಾಗಗಳ ಪ್ರಶಸ್ತಿಗೆ ಭಾಜನವಾಗಿದೆ. ಎಲ್ಲ ಭಾರತೀಯ ಭಾಷೆಗಳ ಚಿತ್ರಗಳಲ್ಲಿ ಕನ್ನಡದಿಂದಲೇ ಅತಿ ಹೆಚ್ಚು (66) ಚಿತ್ರಗಳು ಪ್ರಶಸ್ತಿ ಸುತ್ತಿಗಾಗಿ ಆಯ್ಕೆಯಾಗಿವೆ.

ಬಿಂದುಮಾಲಿನಿ

ಪ್ರಶಸ್ತಿ ಪಟ್ಟಿ
ಅತ್ಯುತ್ತಮ ನಿರ್ದೇಶನ: ಆದಿತ್ಯ ಧಾರ್‌ (ಉರಿ –ಹಿಂದಿ)
ಅತ್ಯುತ್ತಮ ಸಿನಿಮಾ: ಹೆಲ್ಲಾರೋ, ನಿರ್ದೇಶನ–ಸಭಿಷೇಕ್‌ ಶಾ (ಗುಜರಾತಿ)
ಅತ್ಯುತ್ತಮ ನಟ: ಆಯುಷ್ಮಾನ್‌ ಖುರಾನಾ (ಅಂದಾದುನ್‌ –ಹಿಂದಿ), ವಿಕ್ಕಿ ಕೌಶಲ್‌(ಉರಿ–ಹಿಂದಿ)
ಅತ್ಯುತ್ತಮ ನಟಿ: ಕೀರ್ತಿ ಸುರೇಶ್‌(ಮಹಾನಟಿ –ತೆಲುಗು)
ಅತ್ಯುತ್ತಮ ಪೋಷಕನಟ: ಸ್ವಾನಂದ್‌ ಕಿರ್ಕಿರೆ (ಚುಂಬಕ್‌)
ಅತ್ಯುತ್ತಮ ಪೋಷಕನಟ: ಸುರೇಖಾ ಸಿಕ್ರಿ (ಬಢಾಯಿ ಹೊ)
ಅತ್ಯುತ್ತಮ ಸಾಹಸ ನಿರ್ದೇಶನ: ಕೆಜಿಎಫ್‌ (ಕನ್ನಡ)
ಅತ್ಯುತ್ತಮ ನೃತ್ಯ ನಿರ್ದೇಶನ: ‘ಗೂಮರ್‌’ ಹಾಡಿನ ನೃತ್ಯ ಸಂಯೋಜನೆಗೆ (ಪದ್ಮಾವತ್‌ –ಹಿಂದಿ)
ರಾಷ್ಟ್ರೀಯ ಏಕತೆ ಸಿನಿಮಾ: ಒಂದಲ್ಲಾಎರಡಲ್ಲಾ (ಕನ್ನಡ)
ಅತ್ಯುತ್ತಮ ಛಾಯಾಗ್ರಹಣ: ಒಳು –ಎಂ.ಜೆ. ರಾಧಾಕೃಷ್ಣನ್‌ (ಮಲಯಾಳಂ)
ಅತ್ಯುತ್ತಮ ಜನಪ್ರಯ ಸಿನಿಮಾ:ಬಢಾಯಿ ಹೊ (ಹಿಂದಿ)
ಅತ್ಯುತ್ತಮ ಪರಿಸರ ಕಾಳಜಿ ಸಿನಿಮಾ: ಪಾಣಿ (ಪಂಜಾಬಿ)
ಮೊದಲ ಸಿನಿಮಾದಲ್ಲಿ ಅತ್ಯುತ್ತಮ ನಿರ್ದೇಶನ: ನಾಲ್‌ (ಮರಾಠಿ)
ಅತ್ಯುತ್ತಮ ಸಾಮಾಜಿಕ ಚಿತ್ರ: ಪ್ಯಾಡ್‌ಮನ್‌ (ಹಿಂದಿ)
ಅತ್ಯುತ್ತಮ ಬಾಲನಟ: ಪಿ.ವಿ. ರೋಹಿತ್‌(ಒಂದಲ್ಲಾ ಎರಡಲ್ಲಾ, ಕನ್ನಡ), ಸಮೀಪ್‌ ಸಿಂಗ್‌(ಪಂಜಾಬಿ), ತಲಾಹ್‌ ಅರ್ಷದ್‌ ರೇಶಿ(ಉರ್ದು) ಹಾಗೂ ಶ್ರೀನಿವಾಸ್‌ ಪೊಕಲೆ(ಮರಾಠಿ)
ಅತ್ಯುತ್ತಮ ಮಕ್ಕಳ ಸಿನಿಮಾ:ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು(ಕನ್ನಡ)
ಅತ್ಯುತ್ತಮ ವಿಎಫ್‌ಎಕ್ಸ್: ಕೆಜಿಎಫ್‌ (ಕನ್ನಡ)
ತೀರ್ಪುಗಾರರ ಆಯ್ಕೆ:ಶ್ರುತಿ ಹರಿಹರನ್‌ (ನಾತಿಚರಾಮಿ), ಜೋಜು ಜಾರ್ಜ್‌(ಜೋಸೆಫ್‌), ಸಾವಿತ್ರಿ(ಸುದಾನಿ ಫ್ರಂ ನೈಜೀರಿಯಾ)
ಅತ್ಯುತ್ತಮ ಸಾಕ್ಷ್ಯಚಿತ್ರ: ಸನ್‌ ರೈಸ್‌ (ವಿಭಾ ಭಕ್ಷಿ, ನಿರ್ದೇಶನ), ದಿ ಸೀಕ್ರೆಟ್‌ ಲೈಫ್‌ ಆಫ್‌ ಫೋರ್ಜ್ಸ್‌ (ಅಜಯ್‌–ವಿಜಯ್‌ ಬೇಡಿ ನಿರ್ದೇಶನ)
ಅತ್ಯುತ್ತಮ ಶೈಕ್ಷಣಿಕ ಚಿತ್ರ:‘ಸರಳ ವಿರಳ’ (ನಿರ್ದೇಶನ –ಈರೇಗೌಡ, ಕನ್ನಡ)

ಮಾಸ್ಟರ್‌ ಪಿ.ವಿ. ರೋಹಿತ್‌

ಅತ್ಯುತ್ತಮ ಪ್ರದೇಶಿಕ ಸಿನಿಮಾಗಳು
ಅತ್ಯುತ್ತಮ ಪ್ರಾದೇಶಿಕ ಚಿತ್ರ: ನಾತಿಚರಾಮಿ (ಕನ್ನಡ)
ಅತ್ಯುತ್ತಮ ರಾಜಸ್ಥಾನಿ ಸಿನಿಮಾ: ತುರ್ಟ‌್ಲೆ
ಅತ್ಯುತ್ತಮ ತಮಿಳು ಸಿನಿಮಾ: ಬಾರಂ
ಅತ್ಯುತ್ತಮ ಮರಾಠಿ ಸಿನಿಮಾ: ಭೋಂಗಾ
ಅತ್ಯುತ್ತಮ ಹಿಂದಿ ಸಿನಿಮಾ: ಅಂದಾದುನ್‌
ಅತ್ಯುತ್ತಮ ಉರ್ದು ಸಿನಿಮಾ: ಹಮಿದ್
ಅತ್ಯುತ್ತಮ ತೆಲುಗು ಸಿನಿಮಾ: ಮಹಾನಟಿ
ಅತ್ಯುತ್ತಮ ಅಸ್ಸಾಮಿ ಸಿನಿಮಾ: ಬುಲ್‌ಬುಲ್‌ ಖಾನ್‌ ಸಿಂಗ್‌
ಅತ್ಯುತ್ತಮ ಪಂಜಾಬಿಸಿನಿಮಾ: ಹರ್ಜೀತಾ

ಮೂಕಜ್ಜಿಯ ಕನಸುಗಳು ಚಿತ್ರದ ಒಂದು ದೃಶ್ಯ

ಚಿತ್ರಕತೆ
ಅತ್ಯುತ್ತಮ ಮೂಲ ಚಿತ್ರಕತೆ: ಚಿ ಲಾ ಸೋ (ತೆಲುಗು)
ಅತ್ಯುತ್ತಮ ರಿಮೇಕ್‌ ಚಿತ್ರಕಥೆ: ಅಂದಾದುನ್ (ಹಿಂದಿ)
ಅತ್ಯುತ್ತಮ ಸಂಭಾಷಣೆ: ತಾರಿಖ್‌

ಸಂಗೀತ
ಅತ್ಯುತ್ತಮ ಸಾಹಿತ್ಯ:‘ಮಾಯಾವಿ ಮನವೆ’ ಹಾಡು (ಮಂಸೋರೆ–ನಾತಿಚರಾಮಿ, ಕನ್ನಡ)
ಅತ್ಯುತ್ತಮ ಸಂಗೀತ ನಿರ್ದೇಶನ: ಸಂಜಯ್‌ ಲೀಲಾ ಬನ್ಸಾಲಿ –ಪದ್ಮಾವತ್‌ (ಹಿಂದಿ)
ಅತ್ಯುತ್ತಮ ಹಿನ್ನಲೆ ಸಂಗೀತ ನಿರ್ದೇಶನ: ಉರಿ(ಹಿಂದಿ)
ಅತ್ಯುತ್ತಮ ಶಬ್ದ ವಿನ್ಯಾಸ(ಸೌಂಡ್‌ ಡಿಸೈನ್‌): ಉರಿ(ಹಿಂದಿ)
ಅತ್ಯುತ್ತಮ ಹಿನ್ನಲೆ ಗಾಯಕಿ: ಬಿಂದು ಮಾಲಿನಿ (‘ಮಾಯಾವಿ ಮನವೆ’ ಹಾಡು –ನಾತಿಚರಾಮಿ, ಕನ್ನಡ)
ಅತ್ಯುತ್ತಮ ಹಿನ್ನಲೆ ಗಾಯಕ: ಅರ್ಜಿತ್‌ ಸಿಂಗ್‌ (‘ಭಿಂಟೆ ದಿಲ್‌’ ಹಾಡು –ಪದ್ಮಾವತ್‌)

ಡಿ. ಸತ್ಯಪ್ರಕಾಶ್‌

ನಿರ್ಮಾಣ
ಅತ್ಯುತ್ತಮ ಪ್ರಸಾದನ ಕಲಾವಿದ: ಅವೆ(Awe) (ತೆಲುಗು)
ಅತ್ಯುತ್ತಮ ‘ಪ್ರೊಡಕ್ಷನ್‌ ಡಿಸೈನ್‌’: ಕಮ್ಮಾರ ಸಂಭವಂ (ಮಲಯಾಳಂ)
ರಾಷ್ಟ್ರೀಯ ಆರ್ಕೈವ್ಸ್‌ ಗೌರವ: ಮೂಕಜ್ಜಿ ಕನಸುಗಳು (ಕನ್ನಡ)
ಅತ್ಯುತ್ತಮ ಸಂಕಲನ: ನಾತಿಚರಾಮಿ(ಕನ್ನಡ)

ನಾತಿಚರಾಮಿ ಸಿನಿಮಾದಲ್ಲಿ ಶ್ರುತಿ ಹರಿಹರನ್‌, ಸಂಚಾರಿ ವಿಜಯ್

**

ಈ ಪ್ರಶಸ್ತಿಯು ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಎಲ್ಲ ಮಕ್ಕಳಿಗೆ ಅರ್ಪಣೆ. ನಮಗೆ ಸಿಕ್ಕಿರುವುದು ಅತ್ಯುನ್ನತ ಸಿನಿಮಾ ಪ್ರಶಸ್ತಿ.
- ರಿಷಬ್ ಶೆಟ್ಟಿ, ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಚಿತ್ರದ ನಿರ್ದೇಶಕ

**

ಅತ್ಯುತ್ತಮ ಬಾಲನಟ ಪ್ರಶಸ್ತಿಗೆ ರೋಹಿತ್‌ ಆಯ್ಕೆಯಾಗಿದ್ದು ಇಡೀ ತಂಡಕ್ಕೆ ಸಂತಸ ತಂದಿದೆ. ರಾಷ್ಟ್ರೀಯ ಭಾವೈಕ್ಯ ತರುವ ಅತ್ಯುತ್ತಮ ಚಿತ್ರ ಎಂಬ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಡಬಲ್ ಖುಷಿ ಕೊಟ್ಟಿದೆ.
- ಡಿ. ಸತ್ಯಪ್ರಕಾಶ್, ‘ಒಂದಲ್ಲಾ ಎರಡಲ್ಲಾ’ ಚಿತ್ರದ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.