ADVERTISEMENT

ರಾಮನ ವಿಗ್ರಹ ಪ್ರತಿಷ್ಠಾಪನೆ: ಯಶ್, ಪ್ರಭಾಸ್‌ ಸೇರಿ ಸಿನಿ ರಂಗದ ಗಣ್ಯರಿಗೆ ಆಹ್ವಾನ

ಪಿಟಿಐ
Published 26 ಡಿಸೆಂಬರ್ 2023, 3:05 IST
Last Updated 26 ಡಿಸೆಂಬರ್ 2023, 3:05 IST
ಯಶ್
ಯಶ್    

ಮುಂಬೈ: ಜನವರಿ 22ರಂದು ಅಯೋಧ್ಯೆಯ ರಾಮಮಂದಿರದಲ್ಲಿ ರಾಮನ ಮೂರ್ತಿಯ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ. ಈ ನಡುವೆ ರಣಬೀರ್ ಕಪೂರ್, ಅಲಿಯಾ ಭಟ್, ಅಜಯ್ ದೇವಗನ್, ಸನ್ನಿ ಡಿಯೋಲ್, ಪ್ರಭಾಸ್ ಹಾಗೂ ಯಶ್ ಸೇರಿದಂತೆ ಚಿತ್ರರಂಗದ ಅನೇಕರಿಗೆ ಆಹ್ವಾನ ನೀಡಲಾಗಿದೆ.

ಬಾಲಿವುಡ್‌ ನಟ ಟೈಗರ್ ಶ್ರಾಫ್ ಮತ್ತು ಆಯುಷ್ಮಾನ್ ಖುರಾನಾ ಅವರಿಗೆ ಸಹ ಆಹ್ವಾನ ನೀಡುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.

ಬಾಲಿವುಡ್ ಬಾದ್‌ಷಾ ಅಮಿತಾಭ್ ಬಚ್ಚನ್, ನಟಿ ಮಾಧುರಿ ದೀಕ್ಷಿತ್, ನಟ ಅನುಪಮ್ ಖೇರ್, ಅಕ್ಷಯ್ ಕುಮಾರ್, ತಮಿಳು ಸೂಪರ್‌ ಸ್ಟಾರ್ ರಜನಿಕಾಂತ್, ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ, ತೆಲುಗು ನಟ ಚಿರಂಜೀವಿ, ಮೋಹನ್ ಲಾಲ್, ಧನುಷ್ ಮತ್ತು ಕನ್ನಡದ ರಿಷಬ್ ಶೆಟ್ಟಿ ಅವರನ್ನು ಈ ಹಿಂದೆಯೇ ಸಮಾರಂಭಕ್ಕೆ ಆಹ್ವಾನಿಸಲಾಗಿದೆ.

ADVERTISEMENT

ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಉದ್ಯಮಿಗಳಾದ ಮುಕೇಶ್ ಅಂಬಾನಿ, ರತನ್ ಟಾಟಾ ಮತ್ತು ಗೌತಮ್ ಅದಾನಿ ಸೇರಿದಂತೆ 7,000 ಗಣ್ಯರನ್ನು ದೇವಾಲಯದ ಟ್ರಸ್ಟ್ ಆಹ್ವಾನಿಸಿದೆ ಎಂದು ಮೂಲಗಳು ತಿಳಿಸಿವೆ.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈಗಾಗಲೇ ಆಹ್ವಾನ ನೀಡಲಾಗಿದೆ.

2024 ಜನವರಿ 22ರಂದು ಶ್ರೀರಾಮನ ವಿಗ್ರಹ ಪ್ರತಿಷ್ಠಾಪನೆ ಸಮಾರಂಭ ನಡೆಯಲಿದೆ. ಪ್ರಸಿದ್ಧ ಟಿ.ವಿ ಧಾರಾವಾಹಿ ರಾಮಾಯಣದಲ್ಲಿ ರಾಮನ ಪಾತ್ರಧಾರಿ ನಟ ಅರುಣ್ ಗೋವಿಲ್ ಮತ್ತು ಸೀತೆಯ ಪಾತ್ರ ನಿರ್ವಹಿಸಿದ್ದ ದೀಪಿಕಾ ಚಿಖ್ಲಿಯಾ ಅವರಿಗೂ ಆಹ್ವಾನ ನೀಡಲಾಗಿದೆ.

3,000 ವಿವಿಐಪಿಗಳು ಸೇರಿದಂತೆ 7,000 ಮಂದಿಗೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಆಹ್ವಾನ ಪತ್ರಿಕೆಯನ್ನು ನೀಡಿದೆ. ಅಯೋಧ್ಯೆಯಲ್ಲಿ ಪೊಲೀಸರ ಗುಂಡಿಗೆ ಬಲಿಯಾದ 50 ಕರಸೇವಕರ ಕುಟುಂಬಗಳಿಗೂ ಆಹ್ವಾನ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.