ADVERTISEMENT

PV Cine Sammana-3: ಚಿತ್ರೋದ್ಯಮಕ್ಕೆ ದಿಕ್ಸೂಚಿಯಾಗಬಲ್ಲ ಸಿನಿಮಾಗಳು ಇವು

​ಪ್ರಜಾವಾಣಿ ವಾರ್ತೆ
Published 3 ಜುಲೈ 2025, 23:50 IST
Last Updated 3 ಜುಲೈ 2025, 23:50 IST
‘ಹದಿನೇಳೆಂಟು’ ಸಿನಿಮಾಗೆ ‘ಸಾಮಾಜಿಕ ಪರಿಣಾಮ ಬೀರಿದ ಅತ್ಯುತ್ತಮ ಚಿತ್ರ’ ವಿಭಾಗದಲ್ಲಿ ನಿರ್ದೇಶಕ ಪೃಥ್ವಿ ಕೊಣನೂರು ಪ್ರಶಸ್ತಿ ಸ್ವೀಕರಿಸಿದರು. ಹಿರಿಯ ನಿರ್ದೇಶಕ ಭಾರ್ಗವ್ ಹಾಗೂ ಶಿವಧ್ವಜ್ ಪ್ರಶಸ್ತಿ ಪ್ರದಾನ ಮಾಡಿದರು. 
‘ಹದಿನೇಳೆಂಟು’ ಸಿನಿಮಾಗೆ ‘ಸಾಮಾಜಿಕ ಪರಿಣಾಮ ಬೀರಿದ ಅತ್ಯುತ್ತಮ ಚಿತ್ರ’ ವಿಭಾಗದಲ್ಲಿ ನಿರ್ದೇಶಕ ಪೃಥ್ವಿ ಕೊಣನೂರು ಪ್ರಶಸ್ತಿ ಸ್ವೀಕರಿಸಿದರು. ಹಿರಿಯ ನಿರ್ದೇಶಕ ಭಾರ್ಗವ್ ಹಾಗೂ ಶಿವಧ್ವಜ್ ಪ್ರಶಸ್ತಿ ಪ್ರದಾನ ಮಾಡಿದರು.    

ಸಾಮಾಜಿಕ ಪರಿಣಾಮ ಬೀರಿದ ಅತ್ಯುತ್ತಮ ಚಿತ್ರ: ಹದಿನೇಳೆಂಟು

ಜನರನ್ನು ರಂಜಿಸುವುದು ಮಾತ್ರವಲ್ಲ, ಅರಿವು ಮೂಡಿಸುವಂಥ, ಸಮಾಜದ ಮೇಲೆ ಪರಿಣಾಮ ಬೀರುವಂಥ ಕಥೆಗಳನ್ನು ನೀಡುವುದು ಕೂಡ ಸಿನಿಮಾ ಮಾಧ್ಯಮದ ಜವಾಬ್ದಾರಿ ಎಂಬುದನ್ನು ಸಾರಿದ ಸಾಕಷ್ಟು ಸಿನಿಮಾಗಳು ಕನ್ನಡ ಸಿನಿಮಾರಂಗದಲ್ಲಿ ಹೆಸರಾಗಿವೆ. ಹಾಗೆಯೇ 2024ರ ಸಾಲಿನಲ್ಲಿ ತೆರೆಕಂಡಿರುವ ಸಿನಿಮಾಗಳಲ್ಲಿ ಪೃಥ್ವಿ ಕೊಣನೂರು ನಿರ್ದೇಶನದ ‘ಹದಿನೇಳೆಂಟು’ ಸಿನಿಮಾ, ಈ ಬಾರಿ ‘ಸಾಮಾಜಿಕ ಪರಿಣಾಮ ಬೀರಿದ ಅತ್ಯುತ್ತಮ ಚಿತ್ರ’ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

ಕಳೆದ ಬಾರಿಯೂ ಇದೇ ವಿಭಾಗದಲ್ಲಿ ಪೃಥ್ವಿ ಅವರ ‘ಪಿಂಕಿ ಎಲ್ಲಿ’ ಸಿನಿಮಾಗೆ ಪ್ರಶಸ್ತಿ ಲಭಿಸಿದ್ದು, ಈ ಬಾರಿಯೂ ಪ್ರಶಸ್ತಿ ಅವರ ಪಾಲಿಗೆ ಒಲಿದಿದೆ. ಹಿರಿಯ ನಿರ್ದೇಶಕ ಎಚ್‌.ಆರ್‌. ಭಾರ್ಗವ ಹಾಗೂ ನಟ, ನಿರ್ದೇಶಕ ಶಿವಧ್ವಜ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.

‘ಹಿಂದಿನ ಸಿನಿಮಾಗಳಲ್ಲಿ ಏನಾದರೂ ಸಂದೇಶ, ಉಪದೇಶ ಇರುತ್ತಿತ್ತು. ‘ಬಂಗಾರದ ಮನುಷ್ಯ’ ಸಿನಿಮಾ ನೋಡಿದ ಮೇಲೆ ಎಷ್ಟೋ ಜನ ನಗರ ಬಿಟ್ಟು ಹಳ್ಳಿಗಳಿಗೆ ಹೋಗಿ ಅಲ್ಲಿ ಕೃಷಿ ಮಾಡಿಕೊಂಡಿದ್ದರು. ಈಗಿನ ಚಿತ್ರಗಳ ವೈಖರಿ ಬೇರೆ. ಜನಕ್ಕೆ ಈಗ ಬೇಕಿರುವುದು ಮನರಂಜನೆ’ ಎಂದು ನಿರ್ದೇಶಕ ಭಾರ್ಗವ ಹೇಳಿದರು.

ADVERTISEMENT

ನಿರ್ದೇಶಕ ಶಿವಧ್ವಜ್ ಮಾತನಾಡಿ, ‘ಸಿನಿಮಾಗಳಲ್ಲಿ ಕಂಟೆಂಟ್‌ಗೆ ಮಹತ್ವ. ಸಿನಿಮಾ ಗೆಲ್ಲಬೇಕೆಂದರೆ ಕಂಟೆಂಟ್‌ ಗೆಲ್ಲಬೇಕು. ಕಲಾತ್ಮಕ ಸಿನಿಮಾಗಳಲ್ಲಿ ಬಜೆಟ್, ಕಲಾವಿದರು ಎಲ್ಲದರ ಹೊರತಾಗಿ ಕಂಟೆಂಟ್‌ ಅದ್ಭುತವಾಗಿರುತ್ತದೆ. ಅದೇ ಗೆಲ್ಲುವುದು’ ಎಂದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪೃಥ್ವಿ ಕೊಣನೂರು, ‘ನನಗೆ ವೈಯಕ್ತಿಕವಾಗಿ ಸಿನಿಮಾಗಳಲ್ಲಿ ಸಂದೇಶ ಕೊಡುವುದರಲ್ಲಿ ನಂಬಿಕೆ ಇಲ್ಲ. ನನ್ನ ಸಿನಿಮಾಗಳನ್ನು ಹಾಗೆ ರೂಪಿಸಿಯೂ ಇರುವುದಿಲ್ಲ. ಸಣ್ಣ ಕಥೆ ಹೇಳುವ ಪ್ರಯತ್ನ ನಡೆದಿರುತ್ತದೆ ಅಷ್ಟೆ. ನನ್ನ ಮೇಲೆ ಪ್ರೀತಿಯಿಟ್ಟು ಎರಡನೇ ವರ್ಷವೂ ‘ಪ್ರಜಾವಾಣಿ’ ಸಂಸ್ಥೆ ಈ ಪ್ರಶಸ್ತಿ ನೀಡಿದೆ’ ಎಂದು ಸಂತಸ ವ್ಯಕ್ತಪಡಿಸಿದರು.

ನಾಮನಿರ್ದೇಶನಗೊಂಡಿದ್ದ ಚಿತ್ರಗಳು: ಫೋಟೋ, ಹದಿನೇಳೆಂಟು, ಕುಬುಸ, ಸಹಾರಾ, ಚಿಲ್ಲಿ ಚಿಕನ್, ಧೈರ್ಯಂ ಸರ್ವತ್ರ ಸಾಧನಂ

ಅತ್ಯುತ್ತಮ ನಿರ್ಮಾಣ ವಿನ್ಯಾಸ: ಮ್ಯಾಕ್ಸ್

ಅತ್ಯುತ್ತಮ ನಿರ್ಮಾಣ ವಿನ್ಯಾಸ ಪ್ರಶಸ್ತಿ ಪಡೆದ ಮ್ಯಾಕ್ಸ್ ಚಿತ್ರ

ಯಾವುದೇ ಸಿನಿಮಾದ ಯಶಸ್ಸಿನಲ್ಲಿ ಅದರ ನಿರ್ಮಾಣ ವಿನ್ಯಾಸದ ಪಾಲು ಹೆಚ್ಚೇ ಇರುತ್ತದೆ. 2024ರಲ್ಲಿ ಬಿಡುಗಡೆಯಾದ ಸಿನಿಮಾಗಳಲ್ಲಿ ‘ಅತ್ಯುತ್ತಮ ನಿರ್ಮಾಣ ವಿನ್ಯಾಸ’ ಪ್ರಶಸ್ತಿಯನ್ನು ಸುದೀಪ್ ಅಭಿನಯದ ‘ಮ್ಯಾಕ್ಸ್‌’ ಸಿನಿಮಾ ಪಡೆದುಕೊಂಡಿತು. ಕನ್ನಡ ಚಿತ್ರರಂಗಕ್ಕೆ ಸಾಲು ಸಾಲು ಪ್ರಶಸ್ತಿಗಳನ್ನು ತಂದುಕೊಟ್ಟಿರುವ ಚಿತ್ರ ನಿರ್ದೇಶಕ ಪಿ. ಶೇಷಾದ್ರಿ ಹಾಗೂ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಅವರು ಈ ಪ್ರಶಸ್ತಿ ಪ್ರದಾನ ಮಾಡಿದರು.

‘ಸಲಾರ್’ ‘ವಿಕ್ರಾಂತ್‌ ರೋಣ’ ‘ಮ್ಯಾಕ್ಸ್’ ಸಿನಿಮಾಗಳ ಕಲಾ ನಿರ್ದೇಶಕ ಶಿವಕುಮಾರ್ ಪ್ರಶಸ್ತಿ ಸ್ವೀಕರಿಸಿದರು. ಬಳಿಕ ಮಾತನಾಡಿದ ಶಿವಕುಮಾರ್ ‘ಸಿನಿಮಾದಲ್ಲಿ ಕೆಲವು ಕೆಲಸಗಳು ಕಾಣುವುದಿಲ್ಲ. ಆದರೆ ಅವು ಬಹಳ ಮುಖ್ಯವಾಗಿರುತ್ತವೆ. ಎಲ್ಲ ಸಿನಿಮಾದಲ್ಲಿಯೂ ಶ್ರಮ ಇರುತ್ತದೆ. ಮ್ಯಾಕ್ಸ್‌ನಲ್ಲಿಯೂ ಶ್ರಮ ಇದೆ. ಅದನ್ನು ಗುರುತಿಸಿ ಪ್ರಶಸ್ತಿ ನೀಡಿದ್ದಾರೆ’ ಎಂದು ಸಂತಸ ವ್ಯಕ್ತಪಡಿಸಿದರು.

ಪ್ರಶಸ್ತಿ ನೀಡಿ ಮಾತನಾಡಿದ ಪಿ. ಶೇಷಾದ್ರಿ ‘ಕಮರ್ಷಿಯಲ್ ಕಲಾ ಸಿನಿಮಾ ಎಂದು ವಿಭಜಿಸುತ್ತಾರೆ. ನನ್ನ ಪ್ರಕಾರ ಇರುವುದು ಎರಡೇ ಸಿನಿಮಾ. ಒಳ್ಳೆಯ ಸಿನಿಮಾ ಹಾಗೂ ಕೆಟ್ಟ ಸಿನಿಮಾ. ಒಂದು ಕಮರ್ಷಿಯಲ್ ಸಿನಿಮಾದಲ್ಲಿ ಒಳ್ಳೆಯ ಸಿನಿಮಾ ಇರಲು ಸಾಧ್ಯ. ಹಾಗೇ ಕಲಾ ಸಿನಿಮಾದಲ್ಲಿ ಕೆಟ್ಟ ಸಿನಿಮಾ ಇರಲು ಸಾಧ್ಯ. ಮುಖ್ಯವಾಹಿನಿಗೆ ಬೇಕಾದಂಥ ಒಳ್ಳೆಯ ತಂತ್ರಜ್ಞಾನ ಸೌಲಭ್ಯ ಕಥೆ ತಂತ್ರಜ್ಞರು ಸಿಕ್ಕರೆ ನಾನು ಕಮರ್ಷಿಯಲ್ ಸಿನಿಮಾ ಮಾಡಲು ಸಿದ್ಧ’ ಎಂದರು.

‘ಮಲಯಾಳಂನಲ್ಲಿ ಮಮ್ಮುಟಿ ಮೋಹನ್‌ಲಾಲ್‌ನಂಥ ಸ್ಟಾರ್‌ ನಟರೂ ಎಲ್ಲ ಥರದ ಸಿನಿಮಾಗಳಲ್ಲಿ ನಟಿಸುತ್ತಾರೆ. ದುರದೃಷ್ಟವಶಾತ್ ಕನ್ನಡದ ಮಟ್ಟಿಗೆ ಆ ಪ್ರಯೋಗ ಯಶಸ್ವಿಯಾಗಿಲ್ಲ’ ಎಂದರು. ಇದೇ ಸಂದರ್ಭದಲ್ಲಿ ನಿರ್ದೇಶಕ ಪುಟ್ಟಣ್ಣ ಕಣಗಾಲ್ ನೆನಪು ಮಾಡಿಕೊಂಡ ಅವರು ‘ಪುಟ್ಟಣ್ಣ ಕಣಗಾಲ್ ಒಂದು ಕಾಲಘಟ್ಟದಲ್ಲಿ ಒಳ್ಳೆಯ ಪ್ರೇಕ್ಷಕರನ್ನು ಬೆಳೆಸುವುದರ ಜೊತೆಗೆ ಸಿನಿಮಾರಂಗಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಈಗ ಸಿನಿಮಾಗಳ ಸಂಖ್ಯೆ ಜಾಸ್ತಿಯಾಗುತ್ತಿದೆ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗುತ್ತಿದೆ. ನಾವು ರಿವರ್ಸ್ ಕೆಲಸ ಮಾಡಬೇಕಿದೆ’ ಎಂದರು.

ನಾಮನಿರ್ದೇಶನಗೊಂಡಿದ್ದ ಸಿನಿಮಾಗಳು: ಯುಐ, ಲವ್‌ಲಿ, ಮ್ಯಾಕ್ಸ್, ಇಬ್ಬನಿ ತಬ್ಬಿದ ಇಳೆಯಲಿ,ಅಬ್ಬಬ್ಬಾ ಶಾಖಾಹಾರಿ, ಕೆರೆಬೇಟೆ

ಅತ್ಯುತ್ತಮ ವಿಎಫ್‌ಎಕ್ಸ್ ಪೋಸ್ಟ್ ಪ್ರೊಡಕ್ಷನ್ ಹಾಗೂ ಆ್ಯನಿಮೇಷನ್: ಯುಐ ಸಿನಿಮಾ

ಬೆಂಗಳೂರಿನಲ್ಲಿ ಜೂನ್‌27ರಂದು ನಡೆದ ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನದ ಮೂರನೇ ಆವೃತ್ತಿಯ ಕಾರ್ಯಕ್ರಮದಲ್ಲಿ ಅತ್ಯುತ್ತಮ ವಿಎಫ್‌ಎಕ್ಸ್ ಪ್ರಶಸ್ತಿ ಪಡೆದ ಯುಐ

ಕಥೆಯ ಜೊತೆಗೆ ಆ ಕಥೆಯನ್ನು ಪ್ರಸ್ತುತಪಡಿಸುವಲ್ಲಿ ತಂತ್ರಜ್ಞಾನವೂ ಅಷ್ಟೇ ಮುಖ್ಯ. ಈ ತಂತ್ರಜ್ಞಾನದ ಬಳಕೆ ಮಾಡಿಕೊಂಡು 2024ರಲ್ಲಿ ತೆರೆಕಂಡ ಸಿನಿಮಾಗಳಲ್ಲಿ ‘ಯುಐ’ ಸಿನಿಮಾಗೆ ‘ಅತ್ಯುತ್ತಮ ವಿಎಫ್‌ಎಕ್ಸ್ ಪೋಸ್ಟ್ ಪ್ರೊಡಕ್ಷನ್ ಹಾಗೂ ಆ್ಯನಿಮೇಷನ್’ ಪ್ರಶಸ್ತಿಗೆ ಭಾಜನವಾಯಿತು. ‘ಯುಐ’ ಸಿನಿಮಾ ನಿರ್ಮಾಪಕ ನವೀನ್ ಅವರು ಈ ಪ್ರಶಸ್ತಿ ಸ್ವೀಕರಿಸಿದರು.

ಕನ್ನಡದ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು ಅವರು ಪ್ರಶಸ್ತಿ ಪ್ರದಾನ ಮಾಡಿದರು. ‘ಆವತ್ತಿನ ಕಾಲಘಟ್ಟದಲ್ಲಿ ಸಿನಿಮಾ ತಂತ್ರಜ್ಞಾನ ಇಷ್ಟು ಮುಂದುವರೆದಿರಲಿಲ್ಲ. ಇವತ್ತಿನದು ವೇಗದ ತಂತ್ರಜ್ಞಾನ. ಈಗ ಮ್ಯಾಜಿಕ್ ಅನ್ನೇ ಸೃಷ್ಟಿಸಬಹುದು’ ಎಂದು ಅಚ್ಚರಿ ವ್ಯಕ್ತಪಡಿಸಿದರು ನಟ ಮುಖ್ಯಮಂತ್ರಿ ಚಂದ್ರು.

ಇದೇ ಸಂದರ್ಭದಲ್ಲಿ ‘ಪ್ರಜಾವಾಣಿ’ ಪತ್ರಿಕೆ ಕುರಿತು ತಮ್ಮ ಮಾತು ಹಂಚಿಕೊಂಡ ಅವರು ‘ಸುದ್ದಿ ಮಾಧ್ಯಮಗಳು ಸುದ್ದಿಯನ್ನು ವೈಭವೀಕರಿಸುತ್ತಿವೆ. ವೈಯಕ್ತಿಕ ಅಭಿಪ್ರಾಯಗಳಾಗುತ್ತಿವೆ. ಆದರೆ ಇಂದಿಗೂ ತನ್ನ ವಿಶ್ವಾಸಾರ್ಹತೆಯನ್ನು ‘ಪ್ರಜಾವಾಣಿ’ ಉಳಿಸಿಕೊಂಡಿದೆ. ಪ್ರಶಸ್ತಿಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿರುವ ಈ ಹೊತ್ತಿನಲ್ಲಿ ‘ಪ್ರಜಾವಾಣಿ’ ನೀಡುವ ಪ್ರಶಸ್ತಿ ಅರ್ಹವಾಗಿಯೇ ಇರುತ್ತದೆಂಬುದು ನನ್ನ ನಂಬಿಕೆ’ ಎಂದರು.

ನಿರ್ಮಾಪಕ ನವೀನ್ ಮಾತನಾಡಿ ‘ನನಗೂ ಪ್ರಜಾವಾಣಿಗೂ ಸುಮಾರು 40 ವರ್ಷಗಳ ನಂಟು. ಇದೇ ಪತ್ರಿಕೆಯಿಂದ ಪ್ರಶಸ್ತಿ ಪಡೆದುಕೊಳ್ಳುತ್ತಿರುವುದು ತುಂಬಾ ವಿಶೇಷ. ಸಿನಿಮಾಗಳಿಗೆ ಹಲವು ಪ್ರಶಸ್ತಿಗಳು ಬರುತ್ತವೆ. ಆದರೆ ‘ವಿಎಫ್‌ಎಕ್ಸ್‌’ ಎಂಬ ಪ್ರತ್ಯೇಕ ವಿಭಾಗದಲ್ಲಿ ಪ್ರಶಸ್ತಿ ನೀಡುವುದು ವಿರಳ. ಇದನ್ನು ಗುರುತಿಸಿ ಪ್ರಶಸ್ತಿ ಕೊಟ್ಟಿರುವುದು ಸಂತಸ ತಂದಿದೆ’ ಎಂದು ಖುಷಿ ಹಂಚಿಕೊಂಡರು.

ನಾಮನಿರ್ದೇಶನಗೊಂಡಿದ್ದ ಚಿತ್ರಗಳು: ಯುಐ, ಬಘೀರ, ಮಾರ್ಟಿನ್, ಇಬ್ಬನಿ ತಬ್ಬಿದ ಇಳೆಯಲಿ, ಕೆರೆಬೇಟೆ, ಬ್ಲಿಂಕ್

ಅತ್ಯುತ್ತಮ ಧ್ವನಿಗ್ರಹಣ ಶಬ್ದವಿನ್ಯಾಸ: ಕೆರೆಬೇಟೆ

ಬೆಂಗಳೂರಿನಲ್ಲಿ ಜೂನ್‌27ರಂದು ನಡೆದ ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನದ ಮೂರನೇ ಆವೃತ್ತಿಯ ಕಾರ್ಯಕ್ರಮದಲ್ಲಿ ಅತ್ಯುತ್ತಮ ಧ್ವನಿಗ್ರಹಣ ಮತ್ತು ಶಬ್ದ ವಿನ್ಯಾಸ ಪ್ರಶಸ್ತಿ ಪಡೆದ ಚಿತ್ರ ಕೆರೆಬೇಟೆ

ವಿಶಿಷ್ಟ ಕಥೆಯೊಂದಿಗೆ ಮಲೆನಾಡಿನ ಆಚರಣೆ ಸಂಗೀತ ಶಬ್ದವಿನ್ಯಾಸ ಕಥೆಯ ನಿರೂಪಣಾ ಶೈಲಿಯಿಂದಾಗಿ ಗಮನಸೆಳೆದಿದ್ದ ‘ಕೆರೆಬೇಟೆ’ ಸಿನಿಮಾ 2024ರಲ್ಲಿ ಬಿಡುಗಡೆಗೊಂಡ ಸಿನಿಮಾಗಳ ಪೈಕಿ ‘ಅತ್ಯುತ್ತಮ ಧ್ವನಿಗ್ರಹಣ ಶಬ್ದವಿನ್ಯಾಸ’ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ರಾಜ್‌ಗುರು ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾಗೆ ಸಂಗೀತ ನಿರ್ದೇಶಕ ವಿ. ಮನೋಹರ್ ಹಾಗೂ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ಎನ್ನಾರ್‌ ಕೆ. ವಿಶ್ವನಾಥ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಈ ಸಂದರ್ಭ ತಂತ್ರಜ್ಞಾನ ಶಬ್ದವಿನ್ಯಾಸದ ಕುರಿತು ಮಾತನಾಡಿದ ವಿ. ಮನೋಹರ್ ‘ಸುಸಜ್ಜಿತ ಶಬ್ದ ವಿನ್ಯಾಸ ಸಿನಿಮಾದ ಬಹುಮುಖ್ಯ ಭಾಗ. ಸಿನಿಮಾದಲ್ಲಿ ಯಾವುದೇ ಶಬ್ದವಿರಲಿ ಸಂಗೀತವಿರಲಿ ಒಂದಕ್ಕೊಂದು ಸಿಂಕ್ ಆದರೆ ಸಿನಿಮಾ ಚೆನ್ನಾಗಿ ಮೂಡಲು ಸಾಧ್ಯ’ ಎಂದರು.

‘ಕೆರೆಬೇಟೆ’ ಸಿನಿಮಾದ ಗೌರಿಶಂಕರ್ ಅವರು ಈ ಪ್ರಶಸ್ತಿ ಸ್ವೀಕರಿಸಿದರು. ‘ಕೆರೆಬೇಟೆ ಸಿನಿಮಾ ಹಲವು ವಿಭಾಗಗಳಲ್ಲಿ ಆಯ್ಕೆಯಾಗಿದ್ದು ತುಂಬಾ ಖುಷಿಯಾದ ಸಂಗತಿ. ನಿರ್ಮಾಪಕನಾಗಿ ನಾಯಕನಾಗಿ ಬರಹಗಾರನಾಗಿ ಕೆಲಸ ಮಾಡಿದ್ದೇನೆ. ಕನ್ನಡ ಸಿನಿಮಾರಂಗದಲ್ಲಿ ಸಹಾಯಕ ನಿರ್ದೇಶಕನಾಗಿ ಹೀರೊ ಆಗಿ ‘ಜೋಕಾಲಿ’ ಮಾಡಿದ ನಂತರ ಕೆರೆಬೇಟೆ ಸಿನಿಮಾ ಒಂದು ಗುರುತು ನೀಡಿದೆ. ಸಿನಿಮೋತ್ಸವಗಳಲ್ಲಿ ಸಿನಿಮಾ ತೆರೆಕಂಡಿದೆ. ಬಿಸಿನೆಸ್‌ನಲ್ಲಿಯೂ ರೀಚ್ ಆಗುತ್ತಿದೆ’ ಎಂದು ಸಂತಸ ವ್ಯಕ್ತಪಡಿಸಿದರು.

ನಾಮನಿರ್ದೇಶನಗೊಂಡಿದ್ದ ಚಿತ್ರಗಳು: ಶಿವಮ್ಮ ಯರೇಹಂಚಿನಾಳ, ಮ್ಯಾಕ್ಸ್, ಕೆರೆಬೇಟೆ, ಯುಐ, ಪರಜ್ಯಾ, ಶಾಖಾಹಾರಿ, ಇಬ್ಬನಿ ತಬ್ಬಿದ ಇಳೆಯಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.