ADVERTISEMENT

ಪುಷ್ಪ 2 ಕಾಲ್ತುಳಿತ ಪ್ರಕರಣ: ಅಲ್ಲು ಅರ್ಜುನ್‌ಗೆ ಬಂಧನದ ದಿನವೇ ಬಿಡುಗಡೆ ಭಾಗ್ಯ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2024, 12:57 IST
Last Updated 13 ಡಿಸೆಂಬರ್ 2024, 12:57 IST
<div class="paragraphs"><p>ನಟ ಅಲ್ಲು ಅರ್ಜುನ್‌ ಅವರನ್ನು ಪೊಲೀಸರು ಶುಕ್ರವಾರ ಹೈದರಾಬಾದ್‌ನಲ್ಲಿ ಅವರ ನಿವಾಸದಲ್ಲಿ ಬಂಧಿಸಿದರು</p></div>

ನಟ ಅಲ್ಲು ಅರ್ಜುನ್‌ ಅವರನ್ನು ಪೊಲೀಸರು ಶುಕ್ರವಾರ ಹೈದರಾಬಾದ್‌ನಲ್ಲಿ ಅವರ ನಿವಾಸದಲ್ಲಿ ಬಂಧಿಸಿದರು

   

–ಪಿಟಿಐ ಚಿತ್ರ

ಹೈದರಾಬಾದ್‌: ತೆಲುಗು ನಟ, ‘ಪುಷ್ಪ’ ಖ್ಯಾತಿಯ ಅಲ್ಲು ಅರ್ಜುನ್‌ ಅವರನ್ನು ಹೈದರಾಬಾದ್‌ ಪೊಲೀಸರು ಶುಕ್ರವಾರ ಬಂಧಿಸಿದರು. ಇಡೀ ದಿನ ಹಲವು ನಾಟಕೀಯ ಘಟನೆಗಳು ನಡೆಯಿತು. ಅಲ್ಲು ಅರ್ಜುನ್‌ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಬಳಿಕ ಚಿಕ್ಕಡಪಲ್ಲಿ ಠಾಣೆಯ ಪೊಲೀಸರು ಸ್ಥಳೀಯ ಕೋರ್ಟ್‌ಗೆ ಹಾಜರುಪಡಿಸಿದ್ದು, ಕೋರ್ಟ್ ಅವರಿಗೆ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು. ಬಳಿಕ, ತೆಲಂಗಾಣ ಹೈಕೋರ್ಟ್ ಸಂಜೆಯ ಹೊತ್ತಿಗೆ ನಾಲ್ಕು ವಾರಗಳ ಮಧ್ಯಂತರ ಜಾಮೀನನ್ನು ಮಂಜೂರು ಮಾಡಿತು. 

ADVERTISEMENT

ಚಿಕ್ಕಡಪಲ್ಲಿ ಪೊಲೀಸರು ಶುಕ್ರವಾರ ಮಧ್ಯಾಹ್ನ ನಂತರ ಅಲ್ಲು ಅರ್ಜುನ್‌ಅ ವರ ಜುಬಿಲಿ ಹಿಲ್ಸ್‌ನಲ್ಲಿರುವ ಮನೆಗೆ ಹೋಗಿ ಅವರನ್ನು ಬಂಧಿಸಿದರು. ಸಂಧ್ಯಾ ಚಿತ್ರಮಂದಿರದಲ್ಲಿ ‘ಪುಷ್ಪ 2: ದಿ ರೂಲ್‌’ ಸಿನಿಮಾದ ಪ್ರೀಮಿಯರ್‌ ಪ್ರದರ್ಶನ ನಡೆಯುತ್ತಿದ್ದಾಗ ಉಂಟಾದ ನೂಕುನುಗ್ಗಲು ಮತ್ತು ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಮೃತಪಟ್ಟ ಪ್ರಕರಣದಲ್ಲಿ ಅವರನ್ನು ಬಂಧಿಸಲಾಯಿತು. ಅಲ್ಲು ಅರ್ಜುನ್‌ ಅವರು ಆ ಸಂದರ್ಭದಲ್ಲಿ ಚಿತ್ರಮಂದಿರದಲ್ಲಿ ಅಭಿಮಾನಿಗಳ ಜೊತೆಗೂಡಿ ಸಿನಿಮಾ ವೀಕ್ಷಿಸಿದ್ದರು. ತಮ್ಮ ನೆಚ್ಚಿನ ನಟನನ್ನು ನೋಡಲು ಸಾವಿರಾರು ಜನರು  ನುಗ್ಗಿ ಬಂದ ಕಾರಣ ಕಾಲ್ತುಳಿತ ಉಂಟಾಗಿತ್ತು. 

35 ವರ್ಷದ ರೇವತಿ ಎಂಬ ಮಹಿಳೆ ಮೃತಪಟ್ಟರೆ ಅವರ ಮಗ 9 ವರ್ಷದ ಶ್ರೀತೇಜ್‌ ಗಾಯಗೊಂಡಿದ್ದಾನೆ. ಚಿಕ್ಕಡಪಲ್ಲಿ ಪೊಲೀಸರು ಸಂಧ್ಯಾ ಚಿತ್ರಮಂದಿರ, ಅಲ್ಲು ಅರ್ಜುನ್‌ ಮತ್ತು  ಅವರ ಭದ್ರತಾ ಸಿಬ್ಬಂದಿ ಮೇಲೆ ಈ ಕಾಲ್ತುಳಿತದ ಬಳಿಕ ದೂರು ದಾಖಲಿಸಿಕೊಂಡಿದ್ದಾರೆ. 

ಸಾರ್ವಜನಿಕ ಸುರಕ್ಷತೆ ಕಾಯ್ದುಕೊಳ್ಳುವಲ್ಲಿ ವೈಫಲ್ಯ ಮತ್ತು ನಿರ್ಲಕ್ಷ್ಯ ತೋರಲಾಗಿದೆ ಎಂದು ಪ್ರಕರಣ ದಾಖಲಿಸಲಾಗಿದೆ. ಚಿತ್ರಮಂದಿರದ ಆಡಳಿತ ಮಂಡಳಿಯ ಸದಸ್ಯರು ಮತ್ತು ಅಲ್ಲು ಅರ್ಜುನ್‌ ಅವರ ಸಿಬ್ಬಂದಿ ಸೇರಿ ಏಳು ಮಂದಿಯನ್ನು ಈವರೆಗೆ ಬಂಧಿಸಲಾಗಿದೆ. ಅಲ್ಲು ಅರ್ಜುನ್‌ ಅವರು ಮಹಿಳೆಯು ಮೃತಪಟ್ಟ ಮರುದಿನ ಸಂತಾಪ ಸೂಚಿಸಿದ್ದರು. ಜೊತೆಗೆ, ಅವರ ಕುಟುಂಬಕ್ಕೆ ₹25 ಲಕ್ಷ ನೆರವನ್ನೂ ಘೋಷಿಸಿದ್ದರು.  

ಸಂಧ್ಯಾ ಚಿತ್ರಮಂದಿರದಲ್ಲಿ ‘ಪುಷ್ಪ 2: ದಿ ರೂಲ್‌’ ಸಿನಿಮಾದ ಪ್ರೀಮಿಯರ್‌ ಪ್ರದರ್ಶನ ನಡೆಯುತ್ತಿದ್ದಾಗ ಉಂಟಾದ ನೂಕುನುಗ್ಗಲು ಮತ್ತು ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಮೃತಪಟ್ಟ ಪ್ರಕರಣದಲ್ಲಿ ಅವರನ್ನು ಬಂಧಿಸಲಾಯಿತು. ಅಲ್ಲು ಅರ್ಜುನ್‌ ಅವರು ಆ ಸಂದರ್ಭದಲ್ಲಿ ಚಿತ್ರಮಂದಿರದಲ್ಲಿ ಅಭಿಮಾನಿಗಳ ಜೊತೆಗೂಡಿ ಸಿನಿಮಾ ವೀಕ್ಷಿಸಿದ್ದರು. ತಮ್ಮ ನೆಚ್ಚಿನ ನಟನನ್ನು ನೋಡಲು ಸಾವಿರಾರು ಜನರು  ನುಗ್ಗಿ ಬಂದ ಕಾರಣ ಕಾಲ್ತುಳಿತ ಉಂಟಾಗಿತ್ತು. 

35 ವರ್ಷದ ರೇವತಿ ಎಂಬ ಮಹಿಳೆ ಮೃತಪಟ್ಟರೆ ಅವರ ಮಗ 9 ವರ್ಷದ ಶ್ರೀತೇಜ್‌ ಗಾಯಗೊಂಡಿದ್ದಾನೆ. ಚಿಕ್ಕಡಪಲ್ಲಿ ಪೊಲೀಸರು ಸಂಧ್ಯಾ ಚಿತ್ರಮಂದಿರ, ಅಲ್ಲು ಅರ್ಜುನ್‌ ಮತ್ತು  ಅವರ ಭದ್ರತಾ ಸಿಬ್ಬಂದಿ ಮೇಲೆ ಈ ಕಾಲ್ತುಳಿತದ ಬಳಿಕ ದೂರು ದಾಖಲಿಸಿಕೊಂಡಿದ್ದಾರೆ. 

ಸಾರ್ವಜನಿಕ ಸುರಕ್ಷತೆ ಕಾಯ್ದುಕೊಳ್ಳುವಲ್ಲಿ ವೈಫಲ್ಯ ಮತ್ತು ನಿರ್ಲಕ್ಷ್ಯ ತೋರಲಾಗಿದೆ ಎಂದು ಪ್ರಕರಣ ದಾಖಲಿಸಲಾಗಿದೆ. ಚಿತ್ರಮಂದಿರದ ಆಡಳಿತ ಮಂಡಳಿಯ ಸದಸ್ಯರು ಮತ್ತು ಅಲ್ಲು ಅರ್ಜುನ್‌ ಅವರ ಸಿಬ್ಬಂದಿ ಸೇರಿ ಏಳು ಮಂದಿಯನ್ನು ಈವರೆಗೆ ಬಂಧಿಸಲಾಗಿದೆ. ಅಲ್ಲು ಅರ್ಜುನ್‌ ಅವರು ಮಹಿಳೆಯು ಮೃತಪಟ್ಟ ಮರುದಿನ ಸಂತಾಪ ಸೂಚಿಸಿದ್ದರು. ಜೊತೆಗೆ, ಅವರ ಕುಟುಂಬಕ್ಕೆ ₹25 ಲಕ್ಷ ನೆರವನ್ನೂ ಘೋಷಿಸಿದ್ದರು.  

‘ಬೇಜವಾಬ್ದಾರಿಯುತ ಮತ್ತು ಅನಗತ್ಯ ನಡೆ’

ಅಲ್ಲು ಅರ್ಜುನ್‌ ಬಂಧನದ ರಾಜಕೀಯ ಮುಖಂಡರ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಬಿ‌ಆರ್‌ಎಸ್ ಮತ್ತು ಬಿಜೆಪಿ ನಾಯಕರು ‘ಈ ಬಂಧನ ಅನಗತ್ಯ, ಬೇಜವಾಬ್ದಾರಿಯುತ ನಡೆ’ ಎಂದು ಟೀಕಿಸಿದ್ದಾರೆ.

ಬಂಧನ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಎ.ರೇವಂತ ರೆಡ್ಡಿ ಅವರು, ‘ನಾನು ಈ ವಿಷಯದಲ್ಲಿ ಮಧ್ಯ ಪ್ರವೇಶಿಸುವುದಿಲ್ಲ. ಕಾನೂನು ತನ್ನ ಕ್ರಮಕೈಗೊಳ್ಳಲಿದೆ’ ಎಂದು ಹೇಳಿದ್ದಾರೆ. 

‘ಪುಷ್ಪ–2’ ಚಿತ್ರದ ಯಶಸ್ಸಿಗೆ ಕೃತಜ್ಞತೆ ಸಲ್ಲಿಸಲು ಇತ್ತೀಚೆಗೆ ನಡೆದಿದ್ದ ಸಮಾರಂಭದಲ್ಲಿ ಅಲ್ಲು ಅರ್ಜುನ್‌ ಅವರು, ಮುಖ್ಯಮಂತ್ರಿ ರೇವಂತರೆಡ್ಡಿ ಹೆಸರು ಉಲ್ಲೇಖಿಸಿಲು ಮರೆತಿದ್ದರು. ಈ ವಿಡಿಯೊ ವ್ಯಾಪಕವಾಗಿ ಹಂಚಿಕೆಯಾಗಿತ್ತು. 

ನಟನ ಬಂಧನವನ್ನು ಕೇಂದ್ರ ಸಚಿವರಾದ ಜಿ.ಕಿಶನ್ ರೆಡ್ಡಿ ಮತ್ತು ಬಂಡಿ ಸಂಜಯ್ ಕುಮಾರ್ ಕಟುವಾಗಿ ಖಂಡಿಸಿದ್ದಾರೆ.

‘ಬಂಧನವು ಬೇಜವಬ್ದಾರಿ ಹಾಗೂ ಅನಗತ್ಯವಾಗಿದ್ದ ನಡೆ. ಬಹುಶಃ ನಿರ್ದಿಷ್ಟ ವ್ಯಕ್ತಿಯನ್ನು ಗುರಿಯಾಗಿಸಿ ಈ ಬಂಧನ ಕಾರ್ಯ ನಡೆಸಲಾಗಿದೆ’ ಎಂದು ವಾಗ್ದಾಳಿ ನಡೆಸಿದ್ದಾರೆ. 

ವೈಎಸ್‌ಆರ್‌‌ಸಿಪಿ ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ  ವೈ.ಎಸ್.ಜಗನ್‌ಮೋಹನ್ ರೆಡ್ಡಿ ಅವರು ನಟ ಅಲ್ಲು ಅರ್ಜುನ್ ಬಂಧನವನ್ನು ಖಂಡಿಸಿದ್ದಾರೆ. 

ನಟನ ನಡೆಯೇ ನೂಕುನುಗ್ಗಲಿಗೆ ಕಾರಣ –ಪೊಲೀಸ್‌

‘ನೂಕುನುಗ್ಗಲು ನಡೆದ ಡಿ. 4ರಂದು ಸಂಧ್ಯಾ ಚಿತ್ರಮಂದಿರ ಬಳಿ ಅಗತ್ಯ ಭದ್ರತೆ ಇತ್ತು. ಆದರೆ, ನಟನ ದಿಢೀರ್ ಭೇಟಿ ಅವಘಡಕ್ಕೆ ಕಾರಣವಾಯಿತು’ ಎಂದು ಡಿಸಿಪಿ (ಕೇಂದ್ರ) ಅಕ್ಷಾಂಶ್‌ ಯಾದವ್ ಹೇಳಿದ್ದಾರೆ.

ನೂಕುನುಗ್ಗಲಿನಲ್ಲಿ ಮಹಿಳೆ ಮೃತಪಟ್ಟರು. ಆಕೆಯ ಪುತ್ರ 9 ದಿನದ ನಂತರವೂ ಇನ್ನೂ ಪ್ರಜ್ಞಾಹೀನರಾಗಿದ್ದು, ವೆಂಟಿಲೇಟರ್‌ ನೆರವಿನಲ್ಲಿ ಇದ್ದಾರೆ ಎಂದು ಹೇಳಿದರು.

ರಾಜಕಾರಣಿಗಳು, ಚಿತ್ರನಟರ ಭೇಟಿ ಸಂದರ್ಭದಲ್ಲಿ ಬಿಗಿ ಭದ್ರತೆ ಮನವಿಗಳು ಬರುತ್ತವೆ. ಈ ಪ್ರಕರಣದಲ್ಲಿ ಸಂಘಟಕರು ಯಾವುದೇ ಅಧಿಕಾರಿಯನ್ನು ಭೇಟಿಯಾಗಿಲ್ಲ. ಸಹಜವಾಗಿ ಸಂಬಂಧಿಸಿದ ವಿಭಾಗಕ್ಕೆ ಮನವಿ ಸಲ್ಲಿಸಿದ್ದಾರೆ. ಯಾವುದೇ ಹೆಚ್ಚಿನ ವಿವರವನ್ನು ನೀಡಿಲ್ಲ ಎಂದರು.

‘ವಶಕ್ಕೆ ಪಡೆಯುವಾಗ ಪೊಲೀಸರು ಅಲ್ಲು ಅರ್ಜುನ್‌ ಅವರೊಂದಿಗೆ ಅನುಚಿತವಾಗಿ ನಡೆದುಕೊಂಡಿಲ್ಲ. ಪತ್ನಿ ಜೊತೆ ಚರ್ಚಿಸಲು ಅಗತ್ಯ ಸಮಯ ನೀಡಲಾಗಿತ್ತು’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.  

‘ನಟನದು ತಪ್ಪಿಲ್ಲ, ದೂರು ಹಿಂಪಡೆಯಲು ಸಿದ್ಧ’

ಹೈದರಾಬಾದ್: ‘ನೂಕುನುಗ್ಗಲು ಅವಘಡಕ್ಕೆ ನಟ ಅಲ್ಲು ಅರ್ಜುನ್‌ ನೇರ ಕಾರಣರಲ್ಲ. ಈ ಕುರಿತ ದೂರು ಹಿಂಪಡೆಯಲು ಸಿದ್ಧನಿದ್ದೇನೆ’ ಎಂದು ಮೃತ ಮಹಿಳೆಯ ಪತಿ ಭಾಸ್ಕರ್ ಶುಕ್ರವಾರ ಪ್ರತಿಕ್ರಿಯಿಸಿದ್ದಾರೆ.

ಸಂಧ್ಯಾ ಚಿತ್ರಮಂದಿರಕ್ಕೆ ಡಿಸೆಂಬರ್‌ 4ರಂದು ‘ಪುಷ್ಪ–2’ ಪ್ರದರ್ಶನದ ವೇಳೆ ನಟ ಅಲ್ಲು ಅರ್ಜುನ್ ಭೇಟಿ ನೀಡಿದ್ದರು. ಆಗ ಸಂಭವಿಸಿದ್ದ ನೂಕುನುಗ್ಗಲಿನಲ್ಲಿ ಭಾಸ್ಕರ್ ಪತ್ನಿ ರೇವತಿ ಮೃತಪಟ್ಟಿದ್ದರು. 

‘ಚಿತ್ರಮಂದಿರಕ್ಕೆ ಬಂದಿದ್ದರಲ್ಲಿ ಅಲ್ಲು ಅರ್ಜುನ್‌ ಅವರ ತಪ್ಪೇನು ಅಲ್ಲ. ಘಟನೆಗೆ ಅವರನ್ನು ಹೊಣೆ ಮಾಡಲು ಬಯಸುವುದಿಲ್ಲ. ದೂರು ಹಿಂಪಡೆಯಲು ಸಿದ್ಧ’ ಎಂದು ಸುದ್ದಿಗಾರರಿಗೆ ಅವರು ಪ್ರತಿಕ್ರಿಯಿಸಿದರು.

ನಟನ ಬಂಧನ ಆಗಿರುವುದು ಸುದ್ದಿ ಮಾಧ್ಯಮಗಳಿಂದ ಗೊತ್ತಾಗಿದೆ ಎಂದು ಪ್ರತಿಕ್ರಿಯಿಸಿದರು.

ನನಗೆ ಇದನ್ನು ನಂಬಲಾಗುತ್ತಿಲ್ಲ. ಮಹಿಳೆ ಸಾವು ಘಟನೆ ದುರದೃಷ್ಟಕರ. ಆದರೆ, ಅದಕ್ಕೆ ಒಬ್ಬ ವ್ಯಕ್ತಿಯನ್ನು ಹೊಣೆ ಮಾಡುವುದು ನಂಬಲಾಗದ ಮತ್ತು ನೋವಿನ ಸಂಗತಿ
–ರಶ್ಮಿಕಾ ಮಂದಣ್ಣ, ‘ಪುಷ್ಪ–2’ ನಾಯಕಿ
ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟನನ್ನು ಮನೆಯ ಬೆಡ್‌ರೂಂನಿಂದಲೇ ಪೊಲೀಸರು ಬಂಧಿಸಿದ್ದಾರೆ. ಸಮಯ ನೀಡದೇ ಹೀಗೆ ನಡೆಸಿಕೊಳ್ಳಬಾರದಿತ್ತು. ಪೊಲೀಸರ ಈ ನಡೆ ಅಗೌರವಕರ, ಅಮಾನವೀಯ
–ಬಂಡಿ ಸಂಜಯಕುಮಾರ್, ಕೇಂದ್ರ ಸಚಿವ, ಬಿಜೆಪಿ ನಾಯಕ
ಜನಪ್ರಿಯ ನಟನನ್ನು ಸಾಮಾನ್ಯ ಕ್ರಿಮಿನಲ್‌ನಂತೆ ನಡೆಸಿಕೊಳ್ಳಲಾಗಿದೆ. ಆ ನಟ ಗೌರವಕ್ಕೆ ಅರ್ಹರು. ಹೆಚ್ಚಿನ ಜನಸೇರುವ ಕಾರ್ಯಕ್ರಮಕ್ಕೆ ಸೂಕ್ತ ಭದ್ರತೆ ನೀಡದ ಸರ್ಕಾರರದ್ದೇ ನಿಜವಾದ ಲೋಪ. ಈ ಬಂಧನ ಅನಗತ್ಯವಾಗಿತ್ತು.
–ಕೆ.ಟಿ.ರಾಮರಾವ್, ಬಿಆರ್‌ಎಸ್‌ ಪಕ್ಷದ ಕಾರ್ಯಾಧ್ಯಕ್ಷ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.