ನಟಿ ರಶ್ಮಿಕಾ ಮಂದಣ್ಣ
ಪಿಟಿಐ ಚಿತ್ರ
'ನಿಮಗೆ ಗೊತ್ತಾ.. ಕೊಡವ ಸಮಾಜದಿಂದ ಯಾರೂ ಸಿನಿಮಾ ಜಗತ್ತಿಗೆ ಪ್ರವೇಶಿಸಿರಲಿಲ್ಲ. ನಮ್ಮ ಇಡೀ ಸಮುದಾಯದಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಮೊದಲಿಗಳು ನಾನೇ ಎಂದು ಭಾವಿಸುತ್ತೇನೆ'
ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಈ ರೀತಿ ಹೇಳಿಕೆ ನೀಡಿರುವ ವಿಡಿಯೊ ತುಣುಕು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ರಶ್ಮಿಕಾ ಹೇಳಿಕೆಯನ್ನು ಟೀಕಿಸಿರುವ ನೆಟ್ಟಿಗರು ವ್ಯಾಪಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
2016ರಲ್ಲಿ ತೆರೆಕಂಡ ಕನ್ನಡದ 'ಕಿರಿಕ್ ಪಾರ್ಟಿ' ಸಿನಿಮಾದಲ್ಲಿ ನಟ ರಕ್ಷಿತ್ ಶೆಟ್ಟಿಯೊಂದಿಗೆ ತೆರೆಹಂಚಿಕೊಳ್ಳುವ ಮೂಲಕ ಹಿರಿತೆರೆಗೆ ಕಾಲಿಟ್ಟ ರಶ್ಮಿಕಾ, 'ಸಾನ್ವಿ' ಪಾತ್ರದ ಮೂಲಕ ಜನಮನ್ನಣೆ ಗಳಿಸಿದವರು. ಈವರೆಗೆ 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಮಿಂಚಿರುವ ಅವರು ಕನ್ನಡದಲ್ಲಿ ಒಟ್ಟು ಐದು ಸಿನಿಮಾಗಳಿಗೆ ಬಣ್ಣ ಹಚ್ಚಿದ್ದಾರೆ.
2017ರಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಜೊತೆ 'ಅಂಜನಿಪುತ್ರ'ದಲ್ಲಿ ನಟಿಸಿ, ಗೋಲ್ಡನ್ ಸ್ಟಾರ್ ಗಣೇಶ್ ಅವರೊಂದಿಗೆ 'ಚಮಕ್' ನೀಡಿದ್ದ ಈ ಚೆಲುವೆ, ನಂತರ ಸಾಲು ಸಾಲು ತೆಲುಗು ಸಿನಿಮಾಗಳಲ್ಲಿ ಅವಕಾಶ ಗಿಟ್ಟಿಸಿಕೊಂಡರು.
2019ರಲ್ಲಿ ಮತ್ತೆ ಚಂದನವನಕ್ಕೆ ಮರಳಿ ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ 'ಯಜಮಾನಿ'ಯಾಗಿ, 2021ರಲ್ಲಿ ಧ್ರುವ ಸರ್ಜಾ ಜೊತೆ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ 'ಪೊಗರು' ತೋರಿದ್ದರು. ಅದಾದ ನಂತರ, ತೆಲಗು, ಹಿಂದಿ ಸಿನಿಮಾಗಳಲ್ಲೇ ಹೆಚ್ಚು ತೊಡಗಿಕೊಂಡಿದ್ದಾರೆ. 'ಗೀತಾ ಗೋವಿಂದಂ', 'ಡಿಯರ್ ಕಾಮ್ರೆಡ್', 'ಪುಷ್ಪ: ದಿ ರೈಸ್' ಹಾಗೂ 'ಪುಷ್ಪ: ದಿ ರೂಲ್' ಸಿನಿಮಾಗಳ ಮೂಲಕ 'ನ್ಯಾಷನಲ್ ಕ್ರಷ್' ಆಗಿರುವ ಈ ನಟಿಯ 'ಕುಬೇರ' ಸಿನಿಮಾ ಮೊನ್ನೆಯಷ್ಟೇ ರಿಲೀಸ್ ಆಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
'ದಿ ಗರ್ಲ್‌ಫ್ರೆಂಡ್' ಬಿಡುಗಡೆಗೆ ಸಜ್ಜಾಗಿದ್ದು, 'ಥಮ' ಚಿತ್ರೀಕರಣದ ಹಂತದಲ್ಲಿದೆ.
ಈ ನಡುವೆ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ ರಶ್ಮಿಕಾ.
ವಿವಾದವೇನು ಹೊಸದಲ್ಲ
'ನಾನೇ ಮೊದಲಿಗಳು' ಎನ್ನುವ ಮೂಲಕ ಸಿನಿ ರಸಿಕರ ಕೆಂಗಣ್ಣಿಗೆ ಗುರಿಯಾಗಿರುವ ರಶ್ಮಿಕಾಗೆ ವಿವಾದಗಳೇನು ಹೊಸದಲ್ಲ.
ಕನ್ನಡದಲ್ಲಿ ಡಬಿಂಗ್ ಮಾಡುವುದು ಕಷ್ಟ ಎನ್ನುವ ಮೂಲಕ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದ್ದ ಅವರು, ತಮಗೆ ಬಣ್ಣದ ಲೋಕದಲ್ಲಿ ಅವಕಾಶಗಳ ಬಾಗಿಲು ತೆರೆದ 'ಕಿರಿಕ್ ಪಾರ್ಟಿ' ಸಿನಿಮಾ ಹಾಗೂ ಅದರ ನಿರ್ಮಾಣ ಸಂಸ್ಥೆ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ ಎಂಬ ಆರೋಪಕ್ಕೂ ಗುರಿಯಾಗಿದ್ದರು.
ಇತ್ತೀಚೆಗೆ, 'ಛಾವಾ' ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ತೆಲುಗು ಅಭಿಮಾನಿಗಳನ್ನು ಮೆಚ್ಚಿಸಲು ತಾವು ಹೈದರಾಬಾದ್‌ನವರು ಎಂದು ಹೇಳಿಕೊಂಡಿದ್ದಕ್ಕೂ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
2022ರಲ್ಲಿ ಬೆಂಗಳೂರಿನಲ್ಲಿ ಆಯೋಜನೆಗೊಂಡಿದ್ದ ದಕ್ಷಿಣ ಭಾರತ ಚಿತ್ರರಂಗದ ಪ್ರತಿಷ್ಠಿತ 'ಸೈಮಾ' ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಹಾಜರಾಗಲಿಲ್ಲ ಎಂಬ ಕಾರಣಕ್ಕೂ ಟೀಕೆ ಎದುರಿಸಿದ್ದರು.
ಇಂತಹ ಹಲವು ವಿವಾದಗಳನ್ನು ಸುತ್ತಿಕೊಂಡಿರುವ ಅವರು, ಇದೀಗ 'ಕೊಡವ ಸಮಾಜದ ಮೊದಲ ನಟಿ' ಎನ್ನುವ ಮೂಲಕ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸಾಮಾಜಿಕ ಮಾದ್ಯಮಗಳಲ್ಲಿ ವಿಡಿಯೊ ಹಂಚಿಕೊಂಡಿರುವ ಹಲವರು ಟೀಕಾಪ್ರಹಾರ ನಡೆಸಿದ್ದಾರೆ. ಕೆಲವರು, ರಶ್ಮಿಕಾ ಮಂದಣ್ಣ ಅವರು ಬಾಯಿ ತಪ್ಪಿ ಆ ರೀತಿ ಹೇಳಿರಬಹುದು, ಆ ಸಂದರ್ಭದಲ್ಲಿ ಅಂತಹ ಹೇಳಿಕೆ ನೀಡಿರಬಹುದು ಎನ್ನುವ ಮೂಲಕ ವಿವಾದ ತಣ್ಣಗಾಗಿಸುವ ಪ್ರಯತ್ನ ಮಾಡಿದ್ದಾರೆ.
ಕನ್ನಡ ಸಿನಿಮಾ ನಿರ್ದೇಶಕಿ ಸುಮನ್ ಕಿತ್ತೂರು ಅವರು, ರಶ್ಮಿಕಾ ಅವರಿಗಿಂತಲೂ ಮೊದಲೇ ಸಿನಿಮಾ ರಂಗದಲ್ಲಿ ಸೂಪರ್ ಸ್ಟಾರ್ ಆದವರು ಹಲವರಿದ್ದಾರೆ ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.
'ಕಲಾವಿದೆ ರಶ್ಮಿಕಾ ಮಂದಣ್ಣ ಸಂದರ್ಶನ ಒಂದರಲ್ಲಿ, ಕೊಡವ ಜನಾಂಗದ ಮೊದಲ ನಟಿ ತಾವೇ ಎಂದು ಹೇಳಿಕೆ ನೀಡಿದ್ದಾರೆ. ರಶ್ಮಿಕಾ ಅವರ ಯಶಸ್ಸಿಗೆ ಮತ್ತು ಖ್ಯಾತಿಗೆ ಭಾರಿ ಪ್ರಶಂಸೆ ಸಲ್ಲಿದರೂ, ಆಗಿನ ಶಶಿಕಲಾ ಎನ್ನುವ ಕಲಾವಿದೆಯಿಂದ ಹಿಡಿದು, ಈಗಿನ ಕೊಡವ ಮಹಿಳಾ ನಟಿಯರ ತನಕದ ಚಿತ್ರರಂಗದ ನಂಟಿನ ಇತಿಹಾಸವು ಬಹಳ ದೊಡ್ಡದಿದೆ' ಎಂದಿದ್ದಾರೆ.
'ರಶ್ಮಿಕಾ ಅವರಿಗಿಂತಲೂ ಮುಂಚೆ ತೆಲುಗು ನಾಡಲ್ಲಿ ನಟಿಸಿ, ಸೂಪರ್ ಸ್ಟಾರ್ ಆಗಿದ್ದವರು ನಮ್ಮ ಕ್ರೀಡಾಪಟು ಕೊಡಗಿನ ಅಶ್ವಿನಿ ನಾಚಪ್ಪ. ಇವರು ಕೆಲವು ತೆಲುಗು ಚಲನಚಿತ್ರಗಳಲ್ಲಿ ನಟಿಸಿದ್ದು ಮಾತ್ರವಲ್ಲ, ಅವರ ಸ್ವಂತ ಜೀವನಚರಿತ್ರೆಯನ್ನು ಆಧರಿಸಿದ ಚಿತ್ರ 'ಅಶ್ವಿನಿ' ತೆಲುಗು ಚಿತ್ರಕ್ಕಾಗಿ ಅತ್ಯುತ್ತಮ ಚೊಚ್ಚಲ ನಟಿ ರಾಜ್ಯ ನಂದಿ ಪ್ರಶಸ್ತಿಯನ್ನು ಕೂಡ ಪಡೆದುಕೊಂಡಿದ್ದಾರೆ' ಎಂದು ತಿಳಿಸಿದ್ದಾರೆ.
'ಇನ್ನು, ಒಂದು ಕಾಲದಲ್ಲಿ ಕನ್ನಡ ಚಿತ್ರರಂಗವನ್ನು ಆಳಿದ ಪ್ರೇಮಾ, ಕೊಡಗಿನ ಮುರ್ನಾಡುವಿನ ನೆರವಂಡ ಕುಟುಂಬದ ಹುಡುಗಿ! ಆ ಕಾಲದಲ್ಲೆ, ಕನ್ನಡ, ತೆಲುಗು, ಮಲಯಾಳಂ ಮತ್ತು ತಮಿಳು ಭಾಷೆಗಳಲ್ಲಿ ನಟಿಸಿದ ದಕ್ಷಿಣ ಭಾರತದ ನಟಿ. 'ಓಂ' ಚಿತ್ರದ ನಟನೆಗೆ ಕರ್ನಾಟಕ ರಾಜ್ಯ ಸರ್ಕಾರ ನೀಡುವ ಅತ್ತ್ಯುತ್ತಮ ನಟಿ ರಾಜ್ಯ ಪ್ರಶಸ್ತಿ ಕೂಡ ಪಡೆದಿದ್ದಾರೆ' ಎಂದು ಮಾಹಿತಿ ನೀಡಿದ್ದಾರೆ.
'ಪ್ರೇಮಾ ಅವರ ನಂತರ ಹಲವಾರು ಕೊಡಗಿನ ಹುಡುಗಿಯರು ಚಿತ್ರರಂಗ ಪ್ರವೇಶಿಸಿದ್ದಿದೆ' ಎಂದಿರುವ ಸುಮನ್, 'ಕನ್ನಡ ಮತ್ತು ಹಿಂದಿ ಭಾಷೆಯ ಚಿತ್ರಗಳಲ್ಲೂ ನಟಿಸಿರುವ ನಿಧಿ ಸುಬ್ಬಯ್ಯ, ಹರ್ಷಿಕಾ ಪೂಣಚ್ಚ, ಡೈಸಿ ಬೋಪಣ್ಣ, ಸಣ್ಣುವಂಡ ನಯನಾ ಕಾವೇರಪ್ಪ, ರೀಷ್ಮಾ ನಾಣಯ್ಯ, ವರ್ಷಾ ಬೊಳ್ಳಮ್ಮ, ಶ್ವೇತಾ ಚೆಂಗಪ್ಪ, ತಸ್ವಿನಿ ಕರುಂಬಯ್ಯ... ಸದ್ಯ, ನನಗೆ ನೆನಪಾದ ಹೆಸರುಗಳಿವು. ಆದರೆ ಪಟ್ಟಿ ದೊಡ್ಡದಿದೆ, ಬೆಳೆಯುತ್ತಲೇ ಹೋಗುತ್ತದೆ. ಈಗಂತೂ ಕಿರುತೆರೆಯಲ್ಲೂ ಕೊಡಗಿನ ಕಲಾವಿದೆಯರು ಮಾತ್ರವಲ್ಲ, ಕಲಾವಿದರ ಸಂಖ್ಯೆಯೂ ಹೆಚ್ಚಿದೆ' ಎನ್ನುವ ಮೂಲಕ ರಶ್ಮಿಕಾರ ಕಿವಿ ಹಿಂಡಿದ್ದಾರೆ.
'ರಶ್ಮಿಕಾ ಮಂದಣ್ಣ ಇಂದು ರಾಷ್ಟ್ರಮಟ್ಟದಲ್ಲಿ ಖ್ಯಾತಿಯನ್ನು ಗಳಿಸಿರುವುದು ಹೆಮ್ಮೆಯ ವಿಷಯ. ಆದರೆ 'ಮೊದಲ ಕೊಡವ ನಟಿ' ಎಂಬ ಗೌರವ ಅವರ ಹಿರಿಯರಿಗೂ ಸಲ್ಲುತ್ತದೆ ಎಂಬುದು ಅಂಶವಷ್ಟೆ!' ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದೇ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ನಟಿ ಪ್ರೇಮಾ, ಈ ರೀತಿ ಹೇಳಿರುವುದೇಕೆ ಎಂಬುದನ್ನು ಅವರನ್ನೇ ಕೇಳಬೇಕು. ಆದರೆ, ಸಮುದಾಯವನ್ನು ಮಧ್ಯ ತರಬಾರದು ಎಂದು ಸಲಹೆ ನೀಡಿದ್ದಾರೆ.
ನಟಿ ಭಾವನಾ ಅವರು, 'ರಶ್ಮಿಕಾ ನಮ್ಮ ಹುಡುಗಿ. ಕನ್ನಡದವರು ಎಂಬ ಹೆಮ್ಮೆ ಇದೆ' ಎನ್ನುವ ಮೂಲಕ ವಿವಾದದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.
'ನಾವು ಎಷ್ಟೇ ಬೆಳೆದರೂ ಕಾಲು ನೆಲದ ಮೇಲೆಯೇ ಇರಬೇಕು. ಮೂಲವನ್ನು ಮರೆಯಬಾರದು' ಎಂದಿರುವ ನಟಿ ಹರ್ಷಿಕಾ ಪೂಣಚ್ಚ, ರಶ್ಮಿಕಾ ಯಾವ ಅರ್ಥದಲ್ಲಿ ಹೇಳಿದ್ದಾರೆಂಬುದು ಗೊತ್ತಿಲ್ಲ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.