ರಿಷಬ್ ಶೆಟ್ಟಿ ಹಾಗೂ ಅಮಿತಾಭ್ ಬಚ್ಚನ್
ಸ್ಯಾಂಡಲ್‌ವುಡ್ ನಟ ರಿಷಬ್ ಶೆಟ್ಟಿ 'ಕೌನ್ ಬನೇಗಾ ಕರೋಡ್‌ಪತಿ' ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರ ಜೊತೆಗೆ ಕಾಣಿಸಿಕೊಂಡಿದ್ದಾರೆ. ಕಳೆದ ಶನಿವಾರ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರ ಹುಟ್ಟುಹಬ್ಬ ಇತ್ತು. ಹೀಗಾಗಿ ನಟ ರಿಷಬ್ ಶೆಟ್ಟಿ ಬಾಲಿವುಡ್ ಬಿಗ್ ಬಿ ಜೊತೆಗಿರುವ ಫೋಟೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಮೂಲಕ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದರು.
ನಟ ರಿಷಬ್ ಶೆಟ್ಟಿ ಹಾಗೂ ಅಮಿತಾಭ್ ಬಚ್ಚನ್
ಇದೀಗ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ನಡೆಸಿಕೊಡುವ ‘ಕೌನ್ ಬನೇಗಾ ಕರೋಡ್‌ಪತಿ' ಕಾರ್ಯಕ್ರಮದಲ್ಲಿ ನಟ ರಿಷಬ್ ಶೆಟ್ಟಿ ಭಾಗವಹಿಸಿದ್ದಾರೆ. ಸೋನಿ ಟಿವಿ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪ್ರೊಮೋ ಒಂದನ್ನು ಬಿಡುಗಡೆ ಮಾಡಿದೆ. ಆ ಪ್ರೊಮೋದಲ್ಲಿ ರಿಷಬ್ ಶೆಟ್ಟಿ ಅವರನ್ನ ನಟ ಅಮಿತಾಭ್ ಬಚ್ಚನ್ ಕೌನ್ ಬನೇಗಾ ಕರೋಡ್‌ಪತಿ ವೇದಿಕೆಗೆ ಬರಮಾಡಿಕೊಂಡಿದ್ದಾರೆ. ಈ ವೇಳೆ ರಿಷಬ್ ಶೆಟ್ಟಿ ಲುಂಗಿ ಕಟ್ಟಿ, ಅಮಿತಾಭ್ ಬಚ್ಚನ್ ಮುಂದೆಯೇ ಖಡಕ್ ಡೈಲಾಗ್ ಹೇಳಿದ್ದಾರೆ. ಆಗ ರಿಷಬ್ ಅವರು ಅಮಿತಾಭ್ ಬಚ್ಚನ್ ಅವರಿಗೆ ವಿಶೇಷ ಉಡುಗೊರೆಯನ್ನು ಕೂಡ ನೀಡಿದ್ದಾರೆ.
ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ 'ಕಾಂತಾರ ಚಾಪ್ಟರ್ 1' ಅ. 2ರಂದು ಅದ್ದೂರಿಯಾಗಿ ತೆರೆಕಂಡಿತ್ತು. ಬಿಡುಗಡೆಯಾದ ಮೊದಲ ವಾರದಲ್ಲಿ ವಿಶ್ವದಾದ್ಯಂತ ₹509.25 ಕೋಟಿ ಗಳಿಸಿದ ಕಾಂತಾರ ಸಿನಿಮಾ ಇಲ್ಲಿಯವರೆಗೂ ಸುಮಾರು ₹650 ಕೋಟಿ ಬಾಚಿದೆ. ಕರ್ನಾಟಕದಲ್ಲೇ ಸಿನಿಮಾ ಸುಮಾರು ₹190 ಕೋಟಿಯಷ್ಟು ಗಳಿಸಿದೆ ಎಂದಿವೆ ಮೂಲಗಳು. ರಾಜಧಾನಿ ಬೆಂಗಳೂರಿನ ಏಕಪರದೆ ಚಿತ್ರಮಂದಿರಗಳಲ್ಲಿ ಮೊದಲ ವಾರ ಸುಮಾರು ₹80 ಲಕ್ಷದಿಂದ ₹1 ಕೋಟಿವರೆಗೆ ಗಳಿಕೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.