
ಗಾನ ಕೋಗಿಲೆ ಎಸ್. ಜಾನಕಿ ಅವರನ್ನು ಸುಧಾರಾಣಿ ಹಾಗೂ ಗಾಯಕಿ ಅರ್ಚನಾ ಉಡುಪ ಅವರು ಭೇಟಿ ಮಾಡಿ, ಅವರ ಎದುರು ಹಾಡಿ ಭೇಷ್ ಎನಿಸಿಕೊಂಡಿದ್ದಾರೆ.
ಎಸ್. ಜಾನಕಿ ಅವರನ್ನು ಭೇಟಿ ಮಾಡಿದ ಅರ್ಚನಾ ಉಡುಪ ಅವರು, ‘ಮಹಾ ಸುದಿನ ಈ ಜನ್ಮದಲ್ಲಿ ಇದಕ್ಕಿಂತ ದೊಡ್ಡ ಭಾಗ್ಯ, ಪ್ರಶಸ್ತಿ, ಪುರಸ್ಕಾರ ಇನ್ನೇನು ಬೇಕಿದೆ? ಸಾಕ್ಷಾತ್ ಸರಸ್ವತಿ, ಎಸ್. ಜಾನಕಿ ಅಮ್ಮನ ಸಮ್ಮುಖದಲ್ಲಿ ಅವರದ್ದೇ ಒಂದು ಅತ್ಯಂತ ಕಷ್ಟಕರವಾದ ಹಾಡನ್ನು ಹೆದರಿ ನಡುಗುತ್ತಾ ಹಾಡಿ ಕೊನೆಗೆ ಅವರಿಂದ ಭೇಷ್ ಎನ್ನಿಸಿಕೊಳ್ಳುವ ಸುವರ್ಣ ಘಳಿಗೆಗಳನ್ನು ಪಡೆದ ನನ್ನ ಜನ್ಮ ಧನ್ಯ, ಸಾರ್ಥಕ‘ ಎಂದು ಬರೆದುಕೊಂಡಿದ್ದಾರೆ.
ಎಸ್. ಜಾನಕಿ ಅವರು ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಹಿನ್ನೆಲೆ ಗಾಯಕಿ ಆಗಿ ಗುರುತಿಸಿಕೊಂಡಿದ್ದಾರೆ.
1957ರಲ್ಲಿ ತೆರೆಕಂಡ ತಮಿಳು ಚಿತ್ರ 'ವಿಧಿಯಿನ್ ವಿಳಯತ್ತು' ಚಿತ್ರದ ಮೂಲಕ ಹಿನ್ನೆಲೆ ಗಾಯಕಿಯಾಗಿ ಚಿತ್ರರಂಗ ಪ್ರವೇಶಿಸಿದ ಜಾನಕಿ ಅವರು ತಮಿಳು, ತೆಲುಗು, ಮಲಯಾಳಂ, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ 48 ಸಾವಿರಕ್ಕೂ ಹೆಚ್ಚು ಗೀತೆಗಳಿಗೆ ದನಿಯಾಗಿದ್ದಾರೆ.
‘ಬಾನಲ್ಲು ನೀನೆ ಭುವಿಯಲ್ಲು’ , ಅಮ್ಮ ಎಂದರೆ ಮೈ ಮನವೆಲ್ಲಾ ’, ‘ಬಿಸಿಲಾದರೇನು ಮಳೆಯಾದರೇನು’, ‘ರಾಜ ಮುದ್ದು ರಾಜ’, ‘ನಗಿಸಲು ನೀನು ನಗುವೆನು ನಾನು’, ‘ಇಂದು ಎನಗೆ ಗೋವಿಂದ ’, ‘ಕೇಳಿದ್ದು ಸುಳ್ಳಾಗಬಹುದು’ ಸೇರಿದಂತೆ ಕನ್ನಡದ ಅನೇಕ ಹಾಡುಗಳಿಗೆ ಎಸ್. ಜಾನಕಿ ಅವರು ಧ್ವನಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.