
ಕಿಚ್ಚ ಸುದೀಪ್
ಚಿತ್ರ: ಎಕ್ಸ್ ಖಾತೆ
ಸುದೀಪ್ ನಟನೆಯ ಹಾಗೂ ವಿಜಯ್ ಕಾರ್ತಿಕೇಯನ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಮಾರ್ಕ್’ ಸಿನಿಮಾ ಇದೇ ಡಿಸೆಂಬರ್ 25ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಇದಕ್ಕೂ ಮೊದಲೇ ಚಿತ್ರತಂಡ ದೊಡ್ಡ ಮಟ್ಟದ ಪ್ರೀ ರಿಲೀಸ್ ಈವೆಂಟ್ ನಡೆಸಲು ಸಿದ್ಧತೆ ಮಾಡಿಕೊಂಡಿದೆ.
ವಿಶೇಷವೆಂದರೆ ಹುಬ್ಬಳ್ಳಿಯಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಮಾರ್ಕ್ ಚಿತ್ರತಂಡ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ಆಯೋಜಿಸಿದೆ. ಈ ಕಾರ್ಯಕ್ರಮ ಇದೇ ಡಿಸೆಂಬರ್ 20ರಂದು ನಡೆಯಲಿದ್ದು, ಹುಬ್ಬಳ್ಳಿಯ ಸುದೀಪ್ ಅಭಿಮಾನಿಗಳು ಭಾರೀ ನಿರೀಕ್ಷೆಯಲ್ಲಿದ್ದಾರೆ.
ಇನ್ನು, ಈ ಬಗ್ಗೆ ಸತ್ಯ ಜ್ಯೋತಿ ಫಿಲ್ಮ್ಸ್ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದೆ. ಅದರ ಜೊತೆಗೆ ‘ಊರಿಗೆ ಗೊತ್ತು.. ಮಾರ್ಕ್ ಗತ್ತು. ಸಿದ್ಧರಾಗಿ ಹುಬ್ಬಳ್ಳಿಯ ಬಾದ್‌ಶಾ ಅಭಿಮಾನಿಗಳೇ. ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ಡಿಸೆಂಬರ್ 20ರಂದು ನೆಹರು ಕ್ರೀಡಾಂಗಣದಲ್ಲಿ, ಸಂಜೆ 6 ಗಂಟೆಗೆ ಮಾರ್ಕ್ ಪ್ರೀ ರಿಲೀಸ್ ಈವೆಂಟ್ ನಡೆಯಲಿದೆ’ ಎಂದು ಬರೆದುಕೊಂಡಿದೆ.
‘ಸತ್ಯಜ್ಯೋತಿ ಫಿಲ್ಮ್ಸ್’ ಮತ್ತು ‘ಕಿಚ್ಚ ಕ್ರಿಯೇಷನ್ಸ್’ ಮೂಲಕ ‘ಮಾರ್ಕ್’ ಸಿನಿಮಾ ನಿರ್ಮಾಣಗೊಂಡಿದೆ. ಇದೇ ತಂಡದಿಂದ ‘ಮ್ಯಾಕ್ಸ್’ ಸಿನಿಮಾ ಕೂಡ 2024ರ ಡಿಸೆಂಬರ್ 25ರಂದು ಬಿಡುಗಡೆಯಾಗಿ ಯಶಸ್ವಿಯಾಗಿತ್ತು. ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ, ಶೇಖರ್ ಚಂದ್ರ ಅವರ ಛಾಯಾಗ್ರಹಣವಿದೆ. ತಮಿಳು ಚಿತ್ರರಂಗದ ಖ್ಯಾತ ನಟ ಯೋಗಿಬಾಬು, ಮಲಯಾಳದ ಶೈನ್ ಟಾಮ್ ಚಾಕೋ ಸೇರಿದಂತೆ ಹಲವು ಪ್ರಮುಖ ಕಲಾವಿದರು ಚಿತ್ರದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.