ADVERTISEMENT

ಸುಶಾಂತ್ ಸಾವು ಪ್ರಕರಣ | ಮಾಧ್ಯಮಗಳು ರಿಯಾಗೆ ಕ್ಷಮೆಯಾಚಿಸಬೇಕು: ದಿಯಾ ಮಿರ್ಜಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಮಾರ್ಚ್ 2025, 8:19 IST
Last Updated 24 ಮಾರ್ಚ್ 2025, 8:19 IST
<div class="paragraphs"><p>ಬಾಲಿವುಡ್‌ ನಟಿ ದಿಯಾ ಮಿರ್ಜಾ ಮತ್ತು&nbsp;ರಿಯಾ ಚಕ್ರವರ್ತಿ</p></div>

ಬಾಲಿವುಡ್‌ ನಟಿ ದಿಯಾ ಮಿರ್ಜಾ ಮತ್ತು ರಿಯಾ ಚಕ್ರವರ್ತಿ

   

Credit: PTI Photo and X/@Tweet2Rhea

ನವದೆಹಲಿ: ಬಾಲಿವುಡ್ ನಟ ಸುಶಾಂತ್ ಸಿಂಗ್‌ ರಜಪೂತ್‌ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳು ರಿಯಾ ಚಕ್ರವರ್ತಿಗೆ ಕ್ಷಮೆಯಾಚಿಸಬೇಕು ಎಂದು ಬಾಲಿವುಡ್‌ ನಟಿ ದಿಯಾ ಮಿರ್ಜಾ ಆಗ್ರಹಿಸಿದ್ದಾರೆ.

ADVERTISEMENT

ಸುಶಾಂತ್ ಸಿಂಗ್ ರಜಪೂತ್ ಪ್ರಕರಣ ಸಂಬಂಧ ಮಾಧ್ಯಮಗಳು ರಿಯಾ ಚಕ್ರವರ್ತಿಗೆ ತೀವ್ರ ನೋವು ಮತ್ತು ಕಿರುಕುಳ ನೀಡಿವೆ ಎಂದು ದಿಯಾ ಮಿರ್ಜಾ ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.

‘ನೀವು (ಮಾಧ್ಯಮದವರು) ಕೇವಲ ಟಿಆರ್‌ಪಿ ಗಳಿಸುವ ಉದ್ದೇಶದಿಂದ ರಿಯಾಗೆ ತೀವ್ರ ನೋವು ಮತ್ತು ಕಿರುಕುಳ ನೀಡಿದ್ದೀರಿ. ನೀವು ಮಾಡಬಹುದಾದ ಕನಿಷ್ಠ ಕೆಲಸ ಎಂದರೆ ರಿಯಾಗೆ ಕ್ಷಮೆಯಾಚಿಸುವುದಾಗಿದೆ’ ಎಂದು ದಿಯಾ ಹೇಳಿದ್ದಾರೆ.

ಬಾಲಿವುಡ್ ನಟ ಸುಶಾಂತ್ ಸಿಂಗ್‌ ರಜಪೂತ್‌ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಎರಡು ಪ್ರತ್ಯೇಕ ಮುಕ್ತಾಯ ವರದಿಗಳನ್ನು ಸಲ್ಲಿಸಿದೆ.

ಆತ್ಮಹತ್ಯೆಗೆ ಪ್ರಚೋದನೆ ನೀಡಲಾಗಿದೆ ಎಂದು ಅರೋಪಿಸಿ ನಟನ ತಂದೆ ಕೆ.ಕೆ.ಸಿಂಗ್‌ ನೀಡಿದ ದೂರು ಮತ್ತು ಸುಶಾಂತ್‌ ಗೆಳತಿ, ನಟಿ ರಿಯಾ ಚಕ್ರವರ್ತಿ ಅವರು ಸುಶಾಂತ್‌ ಸಹೋದರಿಯರ ವಿರುದ್ಧ ದಾಖಲಿಸಿದ್ದ ದೂರಿಗೆ ಸಂಬಂಧಿಸಿದಂತೆ ತನಿಖೆ ನಡೆಸಿರುವ ಸಿಬಿಐ ಶನಿವಾರ ಈ ವರದಿ ಸಲ್ಲಿಸಿದೆ.

ಕೆ.ಕೆ. ಸಿಂಗ್ ಅವರ ದೂರಿನ ಕುರಿತ ಮುಕ್ತಾಯ ವರದಿಯನ್ನು ಪಟ್ನಾದ ವಿಶೇಷ ನ್ಯಾಯಾಲಯಕ್ಕೂ, ಎರಡನೇ ಪ್ರಕರಣದ ವರದಿಯನ್ನು ಮುಂಬೈನ ವಿಶೇಷ ನ್ಯಾಯಾಲಯಕ್ಕೂ ಸಲ್ಲಿಸಲಾಗಿದೆ.

ವರದಿಯನ್ನು ಸ್ವೀಕರಿಸಬೇಕೆ ಅಥವಾ ಹೆಚ್ಚಿನ ತನಿಖೆ ನಡೆಸುವಂತೆ ಸಿಬಿಐಗೆ ಆದೇಶಿಸಬೇಕೆ ಎಂಬುದನ್ನು ನ್ಯಾಯಾಲಯಗಳು ನಿರ್ಧರಿಸಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಿಯಾ ವಕೀಲರಾದ ಸತೀಶ್‌ ಮಾನೇಶಿಂದೆ ಅವರು ಮು‌ಕ್ತಾಯ ವರದಿಯನ್ನು ಶ್ಲಾಘಿಸಿದ್ದು, ‘ಪ್ರಕರಣದ ಪ್ರತಿಯೊಂದು ಅಂಶವನ್ನು ಎಲ್ಲ ಆಯಾಮಗಳಿಂದಲೂ ಸಂಪೂರ್ಣವಾಗಿ ತನಿಖೆ ಮಾಡಿದ್ದಕ್ಕೆ‘ ಸಿಬಿಐಗೆ ಧನ್ಯವಾದ ಸಲ್ಲಿಸಿದ್ದಾರೆ.

ಸುಶಾಂತ್‌ ಸಿಂಗ್‌, 2020ರ ಜೂನ್‌ 14ರಂದು ಬಾಂದ್ರಾದ ಉಪನಗರ ದಲ್ಲಿನ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಮುಂಬೈ ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದರು. ನಟ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಕೂಪರ್ ಆಸ್ಪತ್ರೆಯಲ್ಲಿ ನಡೆಸಿದ್ದ ಮರಣೋತ್ತರ ಪರೀಕ್ಷೆಯ ವರದಿ ತಿಳಿಸಿತ್ತು.

ಸುಶಾಂತ್‌ ಆತ್ಮಹತ್ಯೆಗೆ ರಿಯಾ ಪ್ರಚೋದನೆ ನೀಡಿದ್ದಾರೆ ಮತ್ತು ನಟನ ಖಾತೆಯಿಂದ ₹15 ಕೋಟಿ ಮೊತ್ತವನ್ನು ಬೇರೆ ಖಾತೆಗೆ ವರ್ಗಾಯಿಸಲಾಗಿದೆ ಎಂದು ಆರೋಪಿಸಿ ಕೆ.ಕೆ.ಸಿಂಗ್‌ ಪಟ್ನಾ ಪೊಲೀಸರಿಗೆ ದೂರು ನೀಡಿದ್ದರು.

ದೆಹಲಿಯ ವೈದ್ಯರೊಬ್ಬರು ನೀಡಿದ ನಕಲಿ ಪ್ರಿಸ್ಕ್ರಿಪ್ಷನ್ ಆಧಾರದ ಮೇಲೆ ಸುಶಾಂತ್‌ ಅವರ ಸಹೋದರಿಯರು ಅವರಿಗೆ ಔಷಧಿಗಳನ್ನು ನೀಡಿದ್ದಾರೆ ಎಂದು ಆರೋಪಿಸಿ ರಿಯಾ ಅವರು ಬಾಂದ್ರಾದಲ್ಲಿ ದೂರು ಸಲ್ಲಿಸಿದ್ದರು. ಔಷಧಿ ಸೇವಿಸಿದ ಐದು ದಿನಗಳ ಬಳಿಕ ಸುಶಾಂತ್‌ ಮೃತಪಟ್ಟಿದ್ದಾರೆ ಎಂದು ರಿಯಾ ಆರೋಪಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.