
ಯಶ್ ‘ಟಾಕ್ಸಿಕ್’ ಸಿನಿಮಾದ ನಾಯಕಿಯರು
ರಾಕಿಂಗ್ ಸ್ಟಾರ್ ಯಶ್ ನಟನೆಯ 19ನೇ ಸಿನಿಮಾ ‘ಟಾಕ್ಸಿಕ್’ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಸಿನಿಮಾ ಬಿಡುಗಡೆಗೆ ಇನ್ನು 74 ದಿನಗಳು ಬಾಕಿ ಇದ್ದು, 2026ರ ಮಾರ್ಚ್ 19ರಂದು ತೆರೆಗೆ ಬರಲಿದೆ. ಸಿನಿಮಾದ ಕುರಿತು ಚಿತ್ರತಂಡ ಒಂದೊಂದೆ ಮಾಹಿತಿಗಳನ್ನು ನೀಡುತ್ತಿದೆ.
ಗೀತು ಮೋಹನ್‌ದಾಸ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಟಾಕ್ಸಿಕ್ ಸಿನಿಮಾದಲ್ಲಿ ಸ್ಟಾರ್ ನಟಿಯರ ದೊಡ್ಡ ಸಮೂಹವೇ ಇದೆ. ಸ್ಟಾರ್ ನಟಿಯರ ಪಾತ್ರದ ಹೊಸ ಫೋಟೊಗಳನ್ನು ನಟ ಯಶ್ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುವ ಮೂಲಕ ರಿವೀಲ್ ಮಾಡುತ್ತಿದ್ದಾರೆ.
ಬಾಲಿವುಡ್ನ ಖ್ಯಾತ ನಟಿ ಕಿಯಾರಾ ಅಡ್ವಾನಿ ಅವರು ಯಶ್ ಅವರ ಟಾಕ್ಸಿಕ್ ತಂಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅವರ ಪೋಸ್ಟರ್ ಅನ್ನು ಯಶ್ ಅವರು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದಾರೆ. ಕಿಯಾರಾ ಅವರು ನೇರಳೆ ಬಣ್ಣದ ಬ್ಯಾಗ್ರೌಂಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಬ್ಲಾಕ್ ಡ್ರೆಸ್ ಧರಿಸಿಕೊಂಡು ಕಂಗೊಳಿಸಿದ್ದಾರೆ. ಈ ಸಿನಿಮಾದಲ್ಲಿ ‘ನಾದಿಯಾ’ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ಇನ್ನು, ನಟಿ ಹುಮಾ ಖುರೇಷಿ ಟಾಕ್ಸಿಕ್ ಸಿನಿಮಾದಲ್ಲಿ ‘ಎಲಿಜಬೆತ್’ ಪಾತ್ರದಲ್ಲಿ ನಟಿಸಿದ್ದಾರೆ. ಹುಮಾ ಖುರೇಷಿ ಅವರ ಪೋಸ್ಟರ್ ಅನ್ನು ಯಶ್ ಬಿಡುಗಡೆ ಮಾಡಿದ್ದರು. ಪೋಸ್ಟರ್‌ನಲ್ಲಿ ಖುರೇಷಿ ಕಪ್ಪು ಬಣ್ಣದ ಬಟ್ಟೆ ಧರಿಸಿದ ದೇವತೆಯಂತೆ ಸ್ಮಶಾನದ ಸ್ಥಳದಲ್ಲಿ ನಿಂತಿರುವಂತೆ ತೋರಿಸಲಾಗಿದೆ.
ಇತ್ತೀಚೆಗಷ್ಟೇ ಮಲಯಾಳಂ ಹಾಗೂ ತಮಿಳು ಸಿನಿಮಾಗಳಲ್ಲಿ ಮಿಂಚಿರುವ ನಯನತಾರಾ ಅವರ ಫಸ್ಟ್‌ಲುಕ್ ಬಿಡುಗಡೆಯಾಗಿತ್ತು. ಕೈಯಲ್ಲಿ ಬಂದೂಕು ಹಿಡಿದು ಕಪ್ಪು ಉಡುಪಿನಲ್ಲಿ ನಯನತಾರಾ ಮಿಂಚಿದ್ದಾರೆ. ಉಪೇಂದ್ರ ನಟನೆಯ ‘ಸೂಪರ್’ನಲ್ಲಿ ನಟಿಸಿದ್ದು ನಯನ್‌ತಾರಾ ‘ಟಾಕ್ಸಿಕ್’ ಮೂಲಕ ಕನ್ನಡಕ್ಕೆ ಮರಳಿದ್ದಾರೆ.
ನಟ ಯಶ್ ಅವರು ಮತ್ತೊಂದು ನಟಿಯನ್ನು ಪರಿಚಯಿಸಿದ್ದಾರೆ. ತಾರಾ ಸುತಾರಿಯಾ ಈ ಚಿತ್ರದಲ್ಲಿ ‘ರೆಬೆಕಾ’ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಪೋಸ್ಟರ್‌ನಲ್ಲಿ ನಟಿ ತಾರಾ ಕೈಯಲ್ಲಿ ಗನ್ ಹಿಡಿದು ಎಂಟ್ರಿ ಕೊಟ್ಟಿದ್ದಾರೆ. ಇದೇ ಪೋಸ್ಟರ್ ಸಾಮಾಜಿಕ ಮಾಧ್ಯಮದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ.
ಈ ಸಿನಿಮಾವು ಹಿಂದಿ, ತಮಿಳು, ತೆಲುಗು, ಮಲಯಾಳಂ ಸೇರಿದಂತೆ ಹಲವು ಭಾರತೀಯ ಹಾಗೂ ವಿದೇಶಿ ಭಾಷೆಗಳಲ್ಲಿ ಡಬ್ ಆಗಿ ರಿಲೀಸ್ ಆಗಲಿದೆ. ಹಾಲಿವುಡ್‌ನ ‘ಜಾನ್ ವಿಕ್’, ‘ಫಾಸ್ಟ್ ಆ್ಯಂಡ್ ಫ್ಯೂರಿಯಸ್’, ‘ವಾರಿಯರ್’ ಮುಂತಾದ ಸಿನಿಮಾಗಳಿಗೆ ಸಾಹಸ ನಿರ್ದೇಶಕರಾಗಿ ಕೆಲಸ ಮಾಡಿದ್ದ ಜೆ.ಜೆ.ಪೆರ್‍ರಿ ‘ಟಾಕ್ಸಿಕ್’ನ ಸಾಹಸ ದೃಶ್ಯಗಳ ಸಂಯೋಜನೆ ಮಾಡಿದ್ದಾರೆ. ‘ಕೆ.ಜಿ.ಎಫ್’ ಖ್ಯಾತಿಯ ರವಿ ಬಸ್ರೂರು ಅವರೇ ಸಂಗೀತ ನಿರ್ದೇಶನ ಮಾಡಲಿದ್ದಾರೆ. ರಾಜೀವ್ ರವಿ ಛಾಯಾಚಿತ್ರಗ್ರಹಣ, ಉಜ್ವಲ್ ಕುಲಕರ್ಣಿ ಸಂಕಲನ, ಟಿಪಿ ಅಬಿದ್ ನಿರ್ಮಾಣ ವಿನ್ಯಾಸ ಚಿತ್ರಕ್ಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.